ಚನ್ನಬಸವಣ್ಣ | ಅಂಬಿಗರ ಚೌಡಯ್ಯ |
ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ |
ಅಂಕಿತ: | ಚೆನ್ನಮಲ್ಲಿಕಾರ್ಜುನ |
ಗೋಮುಖ ವ್ಯಾಘ್ರಂಗಳಂದದ
ಕಾಮ ಮೊದಲಾದಖಿಳ ವಿಷಯ
ಸ್ತೋಮವನು ಮುರಿದಿಕ್ಕಿ ಮುಂಬರಿದಂತರಂಗದಲಿ
ಆ ಮಹಾ ಶಿವಲಿಂಗ ಸಂಗ
ಪ್ರೇಮಿಯಾಗಿ ಶಿವೈಕ್ಯ ಪದವನು
ನೇಮಿಸಿದ ಮಹಾದೆವಿಯಕ್ಕಂಗೆ ಶರಣು ಶರಣಾರ್ತಿ.
ಚಾಮರಸ ಕವಿಯ ಈ ಸಾಲುಗಳು ಮಹಾದೇವಿಯಕ್ಕ ಅದೆಷ್ಟು ಘನ ಶರಣೆ ಯಾಗಿದ್ದರು ಎಂಬುದಕ್ಕೆ ಕೈಗನ್ನಡಿಯಾಗಿದೆ. ಶರಣ ಸಮುದಾಯದಲ್ಲಿ ಅಕ್ಕ ಪದವೇ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಮಹಾದೇವಿಯಕ್ಕನು ಮನುಕುಲಕ್ಕೆ ಅಕ್ಕನಾಗಿ, ಜನ್ಮತಾಳಿದ್ದು ಶಿವಮೊಗ್ಗ ಜಿಲ್ಲೆಯ ಉಡುತಡಿ (ಉಡುಗಣಿ). ಶರಣರ ಕಾಲ ಜ್ಞಾನ ವಚನಗಳಲ್ಲಿ ಹೇಳಿರುವಂತೆ ಅಕ್ಕನ ಜನನ ದವನ ಹುಣ್ಣಿಮೆಯೆಂದು ಆಯಿತು. ಅಕ್ಕನ ತಂದೆ ತಾಯಿಯ ಹೆಸರು ಓಂಕಾರ ಶಟ್ಟಿ ಮತ್ತು ಲಿಂಗಮ್ಮ. ಆಣಿಮುತ್ತಾಗಿ ಜನಿಸಿದ ಮಗುವಿಗೆ ಮಹಾದೇವಿ ಎಂಬ ನಾಮಕರಣವಾಯಿತು.
ಕಾವ್ಯಗಳು ಒದಗಿಸುವ ಆಧಾರಗಳ ಮೇರೆಗೆ ಅಕ್ಕಮಹಾದೇವಿಯ ಜನ್ಮಗ್ರಾಮ ಉಡುತಡಿ. ಇದನ್ನು ಇಂದಿನ ಉಡುಗಣಿಯೊಂದಿಗೆ ವಿದ್ವಾಂಸರು ಸಮೀಕರಿಸುತ್ತಾರೆ.ಬೇರೆ ಗ್ರಾಮಗಳ ಉಲ್ಲೇಖ ಒಂದೆರಡು ಕಡೆ ಬಂದರೂ ಅವು ಉಪೇಕ್ಷಗೆ ಯೋಗ್ಯವಾದವುಗಳೆಂದು ಹೇಳಬಹುದು. ಅಕ್ಕಮಹಾದೇವಿಯ ತಂದೆ ನಿರ್ಮಲಶೆಟ್ಟಿ, ತಾಯಿ ಸುಮತಿ ಎಂದು ಕಾವ್ಯಗಳು ಹೇಳುತ್ತಲಿದ್ದರೂ ಇವು ಆ ಕಾಲದ, ಆ ಪರಿಸರದ ವ್ಯಕ್ತಿನಾಮಗಳಾಗಿ ತೋರುವುದಿಲ್ಲವಾದ್ದರಿಂದ, ಇವುಗಳನ್ನು ಕಲ್ಪಿತ ಹೆಸರುಗಳೆಂದೇ ಇಟ್ಟುಕೊಳ್ಳಬಹುದೇನೋ.
ವಚನ ಸಾಹಿತ್ಯವೆಂದಾಕ್ಷಣ ಪುರುಷರಲ್ಲಿ ಮೊದಲು ನೆನಪಾಗುವ ಹೆಸರು ಬಸವಣ್ಣನವರದ್ದು, ಸ್ತ್ರೀಯರಲ್ಲಿ ಮೊದಲು ನೆನಪಾಗುವ ಹೆಸರು ಅಕ್ಕಮಹಾದೇವಿಯದು. ಶರಣರ ಚರತ್ರೆಗೆ ಸಂಬಂಧಪಟ್ಟಂತೆ ಅನೇಕ ಅಸ್ಪಷ್ಟತೆಗಳು ಅಲ್ಲಲ್ಲಿ ಉಳಿದುಕೊಂಡಿದ್ದು, ಇದಕ್ಕೆ ಮಹಾದೇವಿಯಕ್ಕ ಹೊರತಲ್ಲ. 15ನೆಯ ಶತಮಾನದ ಪೂರ್ವದಲ್ಲಿ ಕಂಡು ಬರುವ ಅವಳ ಚರಿತ್ರೆ, ಆ ಬಳಿಕ ಪ್ರಭುದೇವರಂತೆ ವ್ಯತ್ಯಾಸಕ್ಕೆ ಗುರಿಯಾದಂತೆ ಕಾಣುತ್ತದೆ. ಈ ಕಾಲದಲ್ಲಿ ಮಹತ್ವ ಪಡೆದ ವಿರಕ್ತ ಸಂಪ್ರದಾಯ ವೈರಾಗ್ಯಕ್ಕೆ ಒಂದು ಕಡೆ ಪ್ರಭುವನ್ನು, ಇನ್ನೊಂದು ಕಡೆ ಅಕ್ಕಮಹಾದೇವಿಯನ್ನು ಚಿತ್ರಿಸಲು ತೊಡಗಿದುದೆ ಇದಕ್ಕೆ ಕಾರಣವೆಂದು ತೋರುತ್ತದೆ. ಹೀಗಾಗಿ ಹರಿಹರನಲ್ಲಿ ಬರುವ ಇವಳ ಚರತ್ರೆ ಪ್ರಭುಲಿಂಗ ಲೀಲೆ ಮತ್ತು ಈ ಪರೊಪರೆಯ ಸಾಹಿತ್ಯ ಕೃತಿಗಳಲ್ಲಿ ವ್ಯತ್ಯಾಸ ರೂಪವನ್ನು ಪಡೆದಿದೆ.
ಬಾಲ್ಯದಲ್ಲಿ ಮಹಾದೇವಿಗೆ ಸಂಸಾರದ ಮೇಲೆ ಇಷ್ಟವಿಲ್ಲ ಅವಳ ಆಟಗಳೆಲ್ಲ ಧಾರ್ಮಿಕವಾದ ಆಟಗಳು. ಶರಣಸತಿ ಲಿಂಗಪತಿ ಎಂಬ ಭಾವವು ಅರಳಿ ಅಧ್ಯಾತ್ಮಸಂಸ್ಕಾರ ಆತ್ಮದಲ್ಲಿ ಬೆರೆತು ಸಂಸಾರ ಬೇಡವಾಯಿತು. ಹರನನ್ನೇ ವರನನ್ನಾಗಿಸಿಕೊಂಡಳು. ಲೌಕಿಕ ಗಂಡನಾಗಿ ಬದುಕಿಗೆ ಬರಲು ಇಚ್ಛಿಸಿದ ಕೌಶಿಕನನ್ನು ಮೂರು ಕರಾರುಗಳನ್ನು ವಿಧಿಸಿ ಅದರಲ್ಲಿ ಅವನು ಸೋಲಲು, ಅವನಿಂದ ಬಿಡುಗಡೆ ಹೊಂದಿ ದಿಗಂಬರವನ್ನೇ ದಿವ್ಯಾಂಬರವನ್ನಾಗಿ ಮಾಡಿಕೊಂಡು ಸಾವಿಲ್ಲದ, ರೂಹಿಲ್ಲದ, ಕೇಡಿಲ್ಲದ ಚೆಲುವನಾದ ಚೆನ್ನಮಲ್ಲಿಕಾರ್ಜುನನ್ನು ಕೂಡಲು ಹೊರಟಳು.
ಅಕ್ಕಮಹಾದೇವಿಯ ಜೀವನದ ಮುಖ್ಯ ಘಟನೆಯೆಂದರೆ ರಾಜನಾದ ಕೌಶಿಕನ ವ್ಯಾಮೋಹಕ್ಕೆ ಆಕೆ ಗುರಿಯಾದುದು. ಈ ಕೌಶಿಕ ಯಾರು? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗೆಯ ಹೆಸರು ಅಂದು ಪ್ರಚಾರದಲ್ಲಿರಲಿಲ್ಲವಾಗಿ ಇದನ್ನೂ ನಾವು ಕಲ್ಪಿತ ನಾಮವೆಂದು ಇಟ್ಟು ಕೊಳ್ಳಬಹುದು. ಇಂಥ ಒಂದು ಘಟನೆ ಅವಳ ಜೀವನದಲ್ಲಿ ಸಂಭವಿಸಿದುದು ಸತ್ಯವೆಂದು ತೋರುತ್ತದೆ. ಇದನ್ನು ಪೋಷಿಸುವ ಧ್ವನಿಗಳು ಅವಳ ವಚನದಲ್ಲಿ ಕೇಳಿಸುತ್ತವೆ. ವಿದ್ವಾಂಸರು ಈ ಕೌಶಿಕನನ್ನು ಬಳ್ಳೆಗಾವಿ ಪರಿಸರದಲ್ಲಿ ಆಳುತ್ತಿದ್ದ ಕಸಪಯ್ಯನೊಂದಿಗೆ ಸಮೀಕರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅಕ್ಕಮಹಾದೇವಿಯ ಉಜ್ವಲ ಲಾವಣ್ಯಕ್ಕೆ ಮೋಹಿತನಾದ ಕೌಶಿಕ ಒತ್ತಾಯದಿಂದ ಅವಳನ್ನು ಅರಮನೆ ತುಂಬಿಸಿಕೊಂಡನೆಂದೂ, ತನ್ನ ಭಾಕ್ತಿಕಜೀವನಕ್ಕೆ ಅಡ್ಡಬರದಂತೆ ವರ್ತಿಸಬೇಕೆಂದು ಅಕ್ಕಮಹಾದೇವಿ ಶರತ್ತು ಹಾಕಿದಳೆಂದೂ, ಆ ಶರತ್ತಗೆ ಕೌಶಿಕ ವ್ಯತಿರಿಕ್ತವಾಗಿ ನಡೆದುಕೊಂಡ ಕಾರಣ ಅವಳು ಅರಮನೆಯನ್ನು ತೊರೆದು ಮಲ್ಲಿಕಾರ್ಜುನ ಮೋಹಿತೆಯಾಗಿ ಹೊರಟಳೆಂದೂ ತಿಳಿದು ಬರುತ್ತದೆ. ಈ ಸಂಧರ್ಭದಲ್ಲಿ ಅವಳು ದಿಗಂಬರೆ ಯಾಗಿ ಹೊರಬಿದ್ದಳೆಂದು ಕಾವ್ಯಗಳು ಹೇಳುತ್ತವೆ.
ಇದು ಅಕ್ಕಮಹಾದೇವಿಯ ಜೀವನದಲ್ಲಿ ಒಂದು ಅಗ್ನಿದಿವ್ಯಘಟನೆ. ಆಕೆ ವಿಚಾರಸ್ವಾತಂತ್ರ್ಯದ ಮಹಿಳೆ. ಗಂಡ ಮತ್ತು ವಿಚಾರಸ್ವಾತಂತ್ರ್ಯ ಈ ಎರಡು ಆಯ್ಕೆಗಳು ಆಹ್ವಾನವಾದಾಗ ಗಂಡನನ್ನು ಧಿಕ್ಕರಿಸಿ ವಿಚಾರಸ್ವಾತಂತ್ರ್ಯವನ್ನು ಆಯ್ದುಕೊಂಡುದು ಲೋಕದ ಇತಿಹಾಸದಲ್ಲಿಯೇ ಅಪರೂಪದ ಘಟನೆಯಾಗಿದೆ.
ಅರಮನೆಯಿಂದ ಹೊರಬಿದ್ದ ಅಕ್ಕಮಹಾದೇವಿ ಮುಂದೆ ಬೇರೆ ಬೇರೆ ಒರೆಗಲ್ಲುಗಳಿಗೆ ವಸ್ತುವಾಗಿ ನಿಲ್ಲಬೇಕಾಯಿತು. ಅವಳ ಅನೇಕ ವಚನಗಲ್ಲಿ ಈ ಮಾತಿಗೆ ನಿದರ್ಶನಗಳು ದೊರೆಯುತ್ತವೆ.
"ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಗಂಜಿದಡೆಂತಯ್ಯಾ",
"ಚೆಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪು ಬಿಟ್ಟಿತ್ತೆ?",
"ಮನೆಮನೆ ತಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ",
ಹಸಿವಾದೊಡೆ ಭಿಕ್ಷಾನ್ನಗಳುಂಟು, ತೃಷೆಯಾದರೆ ಕೆರೆ ಹಳ್ಳ ಬಾವಿಗಳುಂಟು",
ಮೊದಲಾದ ವಚನಗಲ್ಲಿ ಈ ಅಂಶಗಳನ್ನು ಗುರುತಿಸಬಹುದಾಗಿದೆ. ತನ್ನ ಜೀವನದ ಉತ್ತರಾರ್ಧದಲ್ಲಿ ಆವಳು ಮಲ್ಲಿಕಾರ್ಜುನ ವಶವರ್ತಿಯಾಗಿ ಲೋಕವನೆಲ್ಲ ಸುತ್ತಿ,ಕಲ್ಯಾಣವೆಂಬ ಕೈಲಾಸದ ಕೀರ್ತಿ ಕೇಳಿ ಅಲ್ಲಿಗೆ ಪಯಣ ಬೆಳೆಸಿದಳು. ಹಾದಿಯುದ್ದಕ್ಕೂ ಕೀಡಿಗೇಡಿಗಳ ಹಿಂಸೆಯನ್ನು ಸಹಿಸುತ್ತಾ ಹಸಿವೆ, ತೃಷೆ, ಗಾಳಿ , ಮಳೆ. ಬಿಸಿಲು ಚಳಿಗಳನ್ನು ಭಂಗಿಸುತ್ತ ನಡೆದಳು. ಕಲ್ಯಾಣವನ್ನು ಪ್ರವೇಶಿಸಿದ್ದು ಮತ್ತೊಂದು ಮುಖ್ಯ ಘಟನೆ. ಅಲ್ಲಿ ಕಿನ್ನರಯ್ಯನ ಕಠೋರ ಪರೀಕ್ಷೆಗೊಳಗಾಗಿ ಉತ್ತೀರ್ಣಳಾದಳು.
ಅನುಭವ ಮಂಟಪದಲ್ಲಿ ಅವಳು ಎದುರಿಸಿದ ಪ್ರಶ್ನೆ, ಕೊಟ್ಟ ಉತ್ತರಗಳು ಅವಳ ಚಿಂತನೆಯ ಔನತ್ಯವನ್ನು ಸಾರುತ್ತವೆ. ಅಲ್ಲಿ ಪ್ರಭುದೇವ, ಬಸವಣ್ಣ, ಚೆನ್ನಬಸವಣ್ಣ ಮೊದಲಾದ ಮಹಾತ್ಮರ ಮಧ್ಯ ಎದ್ದುಕಾಣುವಂತೆ ಬದುಕಿದ ಅಕ್ಕಮಹಾದೇವಿ, ಅವಳೇ ಹೇಳುವಂತೆ
"ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು ಭಾವಿಸಲು ಗಂಡುರೂಪ"
ಎಂಬಂತೆ ವ್ಯಕ್ತಿತ್ವವನ್ನು ರೂಪಸಿಕೊಂಡಳು. ಅಲ್ಲಮಪ್ರಭುಗಳ ಪರೀಕ್ಷೆಯಲ್ಲಿ ಜಯ ಗಳಿಸಿ ಅಧ್ಯಾತ್ಮಸಾಗರದ ಅನರ್ಘ್ಯರತ್ನವಾಗಿ ಹೊರಹೊಮ್ಮಿದಳು. ಅಕ್ಕ ಚೆನ್ನಬಸವಣ್ಣ, ಸಿದ್ಧರಾಮರ ಪ್ರಶ್ನೆಗಳಿಗೆ ಉತ್ತರಿಸಿ ಅವರನ್ನೇ ಬೆರಗುಗೊಳಿಸಿದಳು.
ಅಲ್ಲಮ ಪ್ರಭುಗಳು ಸಾಕಷ್ಟು ಪ್ರಶ್ನೆಗಳನ್ನ ಒಡ್ಡಿದರು ಅಕ್ಕ ವಿಚಲಿತಳಾಗದೆ ದಿಟ್ಟ ನಿಲುವಿನಿಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಪರಿಶುದ್ದ ಅಪರಂಜಿಯಾಗಿ ಬೆಳಗುತ್ತಾರೆ. ಅಲ್ಲಮ ಪ್ರಭು ಗಳು ಈ ವಚನ ಹೇಳುತ್ತಾರೆ.
ಅಂಗ ಅಂಗನೆಯ ರೂಪವಲ್ಲದೆ,
ಮನವಸ್ತು ಭಾವದಲ್ಲಿ ಬೆಚ್ಚಂತಿರ್ಪುದು;
ಬಂದ ಕಥನದಲ್ಲಿ ಬಂದು ಹಿಂಗಿದೆಯಲ್ಲಾ ಅಕ್ಕ !
ಗುಹೇಶ್ವರ ಲಿಂಗದಲ್ಲಿ ಉಭಯನಾಮವಳಿದ ಎನ್ನಕ್ಕಾ ! --ಅಲ್ಲಮಪ್ರಭು
ಇದರ ಅರ್ಥ: ದೇಹ ಹೆಣ್ಣು ರೂಪದಿಂದಿರುವುದೇ ವಿನಾ ಹೆಣ್ಣುತನ ಆಕೆಯ ಅಂತರಂಗದಲ್ಲಿ ಇಲ್ಲವಾಗಿದೆ, ಜೀವನದ ಕೊನೆಯ ಗುರಿಯಾದ ಮುಕ್ತಿಯನ್ನು ಹೊಂದಬೇಕೆಂದು ಸಾಧನಾ ಪಧವನ್ನ ಹಿಡಿದು, ಭಾವವನ್ನು ಗೆದ್ದು ಗುಹೇಶ್ವರ ಲಿಂಗದಲ್ಲಿ ನಾನು ನೀನೆಂಬ ಭೇದವಡಗಿ ಸಮರಸಳಾದ ಕಾರಣ, ನನಗೆ ಸಹ "ಅಕ್ಕ" ಅದರೆಂದು ಪ್ರಭುದೇವರು ಅಕ್ಕ ಮಹಾದೆವಿಯವನ್ನ ಹೊಗಳುತ್ತಾರೆ. ಯಾವಾಗ ಸ್ವತಃ ಅಲ್ಲಮರೆ "ಅಕ್ಕ" ನೆಂದೇ ಕರೆದರೋ ಇವರೆಗೆ ಮಹಾದೇವಿಯಗಿದ್ದವರು ಈಡೀ ಜಗತ್ತಿಗೆ "ಅಕ್ಕ" ಆದರು. ಜ್ಞಾನ ವೈರಾಗ್ಯ ದಿಂದ ಅಕ್ಕ ಮಹಾದೇವಿಯದರು, ಅಕ್ಕನಾದರು, ವೀರ ವಿರಾಗಿಣಿಯಾದರು. ಜಗನ್ಮಾತೆಯಾದರು.
ತಾನು ನಿಜನೈದುವ ಠಾವನ್ನು ತಿಳಿಸಲು ಅಲ್ಲಮಪ್ರಭುವಿಗೆ ಬಿನ್ನವಿಸಿದಾಗ ಅಲ್ಲಮಪ್ರಭುವು ಶ್ರೀ ಶೈಲ, ತ್ರಿಕೂಟ, ಕದಳಿಗಳನ್ನು ಸೂಚಿಸುತ್ತಾರೆ. ಈ ಮಾತುಗಳನ್ನಾಲಿಸಿದ ಅಕ್ಕನಿಗೆ ಮೈ ರೊಮಾಂಚನವಾಗಿ ಅಲ್ಲಿಗೆ ತೆರಳಲು ಸಿದ್ಧಳಾದಾಗ ಇಡೀ ಶರಣ ಸಂಕುಲವೇ ಅವಳನ್ನು ಹೃದಯ ತುಂಬಿ ಬೀಳ್ಕೊಡುತ್ತಾರೆ.
ಅಲ್ಲಮರು:
ಸತಿ ಎಂದರೆ ಮುನಿವರು ನಮ್ಮ ಶರಣರು;
ನಿನ್ನ ಪತಿಯ ಕುರುಹ ಹೇಳಿದರೆ ಬಂದು ಕುಳ್ಳಿರು
ಅಲ್ಲದಿರೆ ತೊಲಗು ತಾಯೆ ನಮ್ಮ ಗುಹೇಶ್ವರನ
ಶರಣರಲ್ಲಿ ಸಂಗಸುಖಸನ್ನಿಹಿತವ ಬಯಸುವರೆ,
ನಿನ್ನ ಪತಿ ಯಾರೆಂಬುದು ಹೇಳಾ ಎಲೆ ಅವ್ವಾ ?
ಅಕ್ಕ :
"ಹರನೆ, ನೀನೆನಗೆ ಗಂಡನಾಗಬೇಕೆಂದು
ಅನಂತಕಾಲ ತಪಿಸಿದ್ದೆ ನೋಡಾ !
ಹಸೆಯ ಮೇಲಣಮಾತ ಬೆಸಗೊಳ್ಳ ಲಟ್ಟಿದರೆ,
ಶಶಿಧರನ ಹತ್ತಿರಕ್ಕೆ ಕಳುಹಿದರೆಮ್ಮವರು
ಭಸ್ಮವನೆ ಹೂಸಿ, ಕಂಕಣವನೆ ಕಟ್ಟಿ,
ಚೆನ್ನ ಮಲ್ಲಿಕಾರ್ಜುನ ತನಗೆ ನಾನಾಗಬೇಕೆಂದು."
"ಪಚ್ಚೆಯ ನೆಲಗಟ್ಟು, ಕನಕದ ತೋರಣ,
ವಜ್ರದ ಕಂಭ, ಪವಳದ ಚಪ್ಪರವನಿಕ್ಕಿ
ಮದುವೆಯ ಮಾಡಿದರು; ನಮ್ಮರೆನ್ನ ಮದುವೆಯ ಮಾಡಿದರು.
ಕಂಕಣದ ಕ್ಯೆ ದಾರ ಸ್ಥಿರಸೇಸೆಯನಿಕ್ಕಿ ಚೆನ್ನಮಲ್ಲಿಕಾರ್ಜುನನೆಂಬ
ಗಂಡಗೆನ್ನ ಮದುವೆಯ ಮಾಡಿದರು."
"ಗುರುವೆ ತೆತ್ತಿಗನಾದ. ಲಿಂಗವೆ ಮದುವಳಿಗನಾದ.
ನಾನೆ ಮದುವಳಿಗೆಯಾದೆನು, ಈ ಭುವನವೆಲ್ಲವರಿಯಲು
ಅಸಂಖ್ಯಾತರೆನಗೆ ತಾಯಿ ತಂದೆಗಳು,
ಕೊಟ್ಟರು ಪ್ರಭುವಿನ ಮನೆಗೆ ಸಾದ್ರುಶ್ಯವಪ್ಪ ವರನ ನೋಡಿ.
ಇದು ಕಾರಣ ಚೆನ್ನಮಲ್ಲಿಕಾರ್ಜುನ ಗಂಡನೆನಗೆ
ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧವಿಲ್ಲವಯ್ಯಾ ಪ್ರಭುವೇ"
ಚನ್ನಬಸವಣ್ಣ | ಅಂಬಿಗರ ಚೌಡಯ್ಯ |