*
1414
ಎನಗೆ ನೀ ಕಟ್ಟಿದೊರೆಯೆಂಬಲ್ಲಿಗೆ ಕೇಳು, ಭಂಡಾರಿ ಬಸವಣ್ಣನೆ.
ಎನಗೆ ನೀ ಕಟ್ಟಿದೊರೆಯೆಂಬಲ್ಲಿಗೆ ಕೇಳು, ನಂಬಿಯಣ್ಣನೆ.
ಎನಗೆ ನೀ ಕಟ್ಟಿದೊರೆಯೆಂಬಲ್ಲಿಗೆ ಕೇಳು, ಜಗದೇವನೆ.
ಎನಗೆ ನೀ ಕಟ್ಟಿದೊರೆಯೆಂಬಲ್ಲಿಗೆ ಕೇಳು, ಚೆನ್ನಬಸವಣ್ಣನೆ.
ಆನೆ ಮುರಿದಲ್ಲಿ ಸುಂಡಾಳವೆ ಹೇಳಾ?
ನಾನಿಲ್ಲದಿರ್ದಡೆ ನೀನಿಲ್ಲ, ನೀನಿಲ್ಲದಿರ್ದಡೆ ನಾನಿಲ್ಲ.
ನಾನು ನೀನೆಂಬುದಂತಿರಲಿ.
ಹಿಡಿಯೊ, ಮುಡಿಯೊ ಮಾಡಿದಂತೆಯಪ್ಪೆನು.
ನಗುವುದು ಕೆಲಕಡೆ ನೋಡಾ.
ಸಾತ್ವಿಕ ಸಜ್ಜನ ಸದ್ಗುರುವಿನಿಂದ ಬದುಕಿದೆ ನಾನು,
ನಿನಗಂಜೆ ಮಹಾಲಿಂಗ ಚೆನ್ನರಾಮಾ.
ಈತ ಆಂಧ್ರ ಪ್ರದೇಶದ ಭೀಮಾವತಿ ಎಂಬ ಊರಿನ ಸೋಮನಾಥ ಮತ್ತು ಮಹಾದೇವಿ ಅವರ ಮಗ. ಸ್ವಭಾವತ: ಮುಗ್ಧ. ಕಲ್ಯಾಣಕ್ಕೆ
ಬಂದು ಶರಣರೊಂದಿಗೆ ಬೆರೆತು. ತನ್ನ ಮುಗ್ಧಭಕ್ತಿಯಿಂದ ಎಲ್ಲರ ಗಮನ ಸೆಳೆಯುತ್ತಾನೆ. ಇವನು ಶಿವ ಪಾರ್ವತಿಯರನ್ನೇ
ಅಕ್ಕ ಭಾವಂದಿರನ್ನಾಗಿ ಭಾವಿಸಿಕೊಂಡು 'ಮೈದುನ ರಾಮಯ್ಯ'ನೆನಿಸಿದನೆಂದು ಕಾವ್ಯ-ಪುರಾಣಗಳಿಂದ ತಿಳಿದುಬರುತ್ತದೆ.
ಕಾಲ-೧೧೬0.
1415
ಮಳಲಲ್ಲಿ ರಸ ಉಂಟೆ? ನೆಳಲಿಗೆ ತಡೆ ಉಂಟೆ?
ರಣದಲ್ಲಿ ತಪ ಉಂಟೆ?
ನೇಹ ತಪ್ಪಿದಲ್ಲಿ ಮೋಹವನರಸಲುಂಟೆ?
ಮಹಾಲಿಂಗ ಚೆನ್ನರಾಮ,
ಮನ ಮುರಿದ ಬಳಿಕ, ಕಂಗಳಿಗೆ ವಿಷವಯ್ಯಾ.
ನೇಹ=ಸ್ನೇಹ, ಗೆಳೆತನ, ಪ್ರೀತಿ
'ಮಹಾಲಿಂಗ ಚೆನ್ನರಾಮ' ಅಂಕಿತದಲ್ಲಿ ಆರು ವಚನಗಳು ದೊರೆತಿವೆ. ಸದ್ಗುರುವಿನ ಕರುಣೆ, ನಿಜಲಿಂಗೈಕ್ಯನ
ಸ್ಥತಿ ಮನದ ಸ್ವಭಾವ, ಶರಣರ ಸ್ತುತಿ ಇವು ಆತ್ಮೀಯ ಶೈಲಿಯಲ್ಲಿ ನಿರೂಪಿತವಾಗಿವೆ. ಈತನ ಶಿವಭಕ್ತಿ ಅಪೂರ್ವವಾದುದು.
ನಾನಿಲ್ಲದಿದ್ದರೆ ನೀನಿಲ್ಲ. ನೀನಲ್ಲದಿದ್ದರೆ ನಾನಿಲ್ಲ. ನಾನು ನೀನೆಂಬುದಂತಿರಲಿ. ಹಿಡಿಯೊ ಮುಡಿಯೊ
ಮಾಡಿದಂತೆಯಪ್ಪೆನು. ನಗುವುದು ಕೆಲಕಡೆ ನೋಡಾ ಸಾತ್ವಿಕ ಸಜ್ಜನ ಸದ್ಗುರುವಿನಿಂದ ಬದುಕಿದೆ ನಾನು ನಿನಗಂಜಿ
ಎಂದು ದೇವರಿಗೆ ಸವಾಲು ಹಾಕುವನು ತನ್ನ ಮನದ ಚಾಂಚಲ್ಯವನ್ನು ನೋಡಿ ಆಳ್ದರೆಂದು ನಂಬಿಯೂ ನಂಬಲೊಲ್ಲದಾಗಿ
ಮಹಾಲಿಂಗ ಚೆನ್ನರಾಮೇಶ್ವರನೆನ್ನ ಕಡೆಗೆ ನೋಡಿ ನಗುತ್ತಲಿದ್ದಾನೆ" ಎನ್ನುವನು.
1416
ಶಿವಶರಣರ ಬರವ ಕಂಡು
ಶಿರಬಾಗಿ, ಕರ ಮುಗಿದಂಜಲೇಬೇಕು.
ಶರಣೆನ್ನಲೊಲ್ಲದೀ ಮನವು.
ಆಗಿನ ಸಧ್ಯಃಫಲದ ಲಾಭದ ಭಕ್ತಿಯನರಿಯದಾಗಿ,
ಶರಣೆನ್ನಲೊಲ್ಲದೀ ಮನವು.
ಆಳ್ದರೆಂದು ನಂಬಿಯೂ ನಂಬಲೊಲ್ಲದಾಗಿ,
ಮಹಾಲಿಂಗ ಚೆನ್ನರಾಮೇಶ್ವರನೆನ್ನ ಕಡೆಗೆ ನೋಡಿ, ನಗು[ತ್ತಲೈದಾನೆ]
*