*
ಅಂಕಿತ:
|
ಐಘಟದೂರ ರಾಮೇಶ್ವರಲಿಂಗ
|
1367
ಮನ ಮುಟ್ಟದ ಪೂಜೆ,
ಮಣ್ಣುಗೋಡೆಯ ತೊಳೆದು, ನಿರ್ಮಲವನರಸುವನಂತೆ.
ವಸ್ತುವ ಮುಟ್ಟದ ಅರ್ಪಿತ,
ಕುಕ್ಕರ ಅಸ್ಥಿಯ ಕಡಿದು, ತನ್ನಯ ಶೋಣಿತಕ್ಕೆ ಚಪ್ಪರಿವಂತೆ,
ಇದು ನಿಶ್ಚಯದ ಮುಟ್ಟಲ್ಲ,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
ತಮಿಳುನಾಡಿನ 63 ಪುರಾತನರಲ್ಲಿ ಒಬ್ಬನಾದ 'ಮೆರೆಮಿಂಡದೇವ'ನಿಂದ ಭಿನ್ನವಾದ ಈತ, ಬಸವ ಸಮಕಾಲೀನ ಶರಣ.
ಕಾಲ-1160. "ಐಘಟದೂರ ರಾಮೇಶ್ವರಲಿಂಗ' ಅಂಕಿತದಲ್ಲಿ ಬರೆದ 110 ವಚನಗಳು ದೊರೆತಿವೆ. ಅಷ್ಟಾವರಣ, ಲಿಂಗಾಂಗ
ಸಾಮರಸ್ಯ ಮೊದಲಾದ ತಾತ್ವಿಕ ವಿಷಯ, ಸಾಮಾಜಿಕ ವಿಡಂಬನೆಗಳು ಸರಳ ಶೈಲಿಯಲ್ಲಿ ನಿರೂಪಿತವಾಗಿವೆ. ಅನೇಕ
ಶರಣರನ್ನು ಗೌರವದಿಂದ ಸ್ಮರಿಸಿದ್ದಾನೆ.
ಯಾವುದೇ ಕಾಯಕವಿರಲಿ, ಅದನ್ನು ಮಾಡುವಾಗ ಹುಸಿಯಿಲ್ಲದಿರಬೇಕು, ಅದು ಶಿವನ ವರ, ಪಶುಪತಿಯ ವಾಸಸ್ಥಾನ,
ಅದು ಪ್ರತ್ಯಕ್ಷ ಪರಮೇಶ್ವರ ಎಂದು ಕಾಯಕದ ಬಗ್ಗೆ ತುಂಬುಗೌರವದಿಂದ ಮಾತನಾಡಿರುವನು. ತನ್ನ ಸಮಕಾಲೀನ
ಶರಣರನ್ನು ಒಂದು ವಚನದಲ್ಲಿ ನೆನೆದಿರುವನು. ಭಕ್ತನ ಆರ್ತತೆ, ಹಠಮಾರಿತನ ಅವನ ವಚನಗಳಲ್ಲಿ ಹೆಪ್ಪುಗಟ್ಟಿದೆ.
ಅಶನ, ವ್ಯಸನಗಳಲ್ಲಿ ಲೌಕಿಕದಲ್ಲಿ ಮುಳುಗಿರುವವರ ಟೀಕೆ ಮಾಡಿರುವನು. ಇರುಳಿಗೆ ಮೊಲೆ, ಯೋನಿ, ಅಧರ,
ಹಗಲಿಗೆ ಗ್ರಂಥ, ಲೇಖನಿ - ಇಂಥವರದು ಮಾತಿನ ಮಾಲೆಯ ಸರಕು, ವೇಷದ ಪುಣ್ಯ, ಭ್ರಾಂತಿನ ಮಾತು ಇವರ ಮಾತು
ಸಾಕು ಎನ್ನುವನು.ಏಕೋರಾಮಾರಾಧ್ಯರು, ಪಂಡಿತಾರಾಧ್ಯರು, ರೇವಣಸಿದ್ಧೇಶ್ವರರು, ಮರುಳಸಿದ್ಧೇಶ್ವರರು
- ಈ ಚಮರಾಚಾರ್ಯರನ್ನು ನೆನೆದಿರುವನು. ಗುರುವಾಗಿ ದೀಕ್ಷೆಯನ್ನು ಅನುಗ್ರಹಿಸಿ ಆ ಭಕ್ತರ ಮನೆಯಲ್ಲಿ
ಉಣ್ಣಲೊಲ್ಲದೆ ಅಕ್ಕಿ ತುಪ್ಪವನ್ನು ಪಡೆದು, ಪ್ರತ್ಯೇಕವಾಗಿ ಅಡುಗೆ ಮಾಡಿ ಉಣ್ಣುವ ಗುರುವನ್ನು ತೀವ್ರವಾಗಿ
ಟೀಕಿಸಿರುವನು
1369
ಮನೆಯ ಹೊರಗಿದ್ದವನ, ಮನೆಯ ಒಳಗಿದ್ದವ ಕರೆದಡೆ
ವಿರೋಧವುಂಟೆ ಅಯ್ಯಾ ?
ಕ್ರೀ ಹೊರಗಾಗಿ ಆತ್ಮನೊಳಗಾದಲ್ಲಿ, ನಾನೆಂಬನ್ನಕ್ಕ ಕ್ರೀ ಶೂನ್ಯವಿಲ್ಲದಿರಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
ಕೈ ಕಾಲಿನಲ್ಲಿ ಕೊಂಡಡೇನು,
ಬಾಯಿಗೆ ಬಂದಲ್ಲದೆ ಒಡಲೆಡೆಯಿಲ್ಲ.
ಮಾತಿನಲ್ಲಿ ಆಡಿದಡೇನು, ಮನದಲ್ಲಿ ಅರಿದಡೇನು,
ಆ ಇರವು, ಆತನ ಮುಟ್ಟಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
*