*
ಅಂಕಿತ:
|
ನಿರ್ಲಜ್ಜೇಶ್ವರಾ
|
ಕಾಯಕ:
|
ಕೊಟ್ಟಣ ಕುಟ್ಟುವುದು
|
೭೫೨
ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ.
ವ್ರತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ.
ಅರಿಯದುದು ಹೋಗಲಿ, ಅರಿದು ಬೆರೆದೆನಾದಡೆ,
ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರಯ್ಯಾ.
ಒಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.
ಕಾಲ-೧೧೬೦. ಕಾಯಕ-ಕೊಟ್ಟಣ, ಅಂದರೆ ಭಕ್ತರ ಮನೆಯ ಭತ್ತವನ್ನು ಕುಟ್ಟುವುದು ಅದರಿಂದ ಬಂದ ಧನದಿಂದ ಗುರುಲಿಂಗಜಂಗಮ
ಸೇವೆ ಮಾಡುವುದು. ಈಕೆಯ ಒಂದು ವಚನ ಮಾತ್ರ ದೊರೆತಿದೆ. ಅಂಕಿತ 'ನಿರ್ಲಜ್ಜೇಶ್ವರ'. ನಿರ್ಲಜ್ಜ ಶಾಂತೇಶ್ವರ
ಈಕೆಯ ಗುರುವಾಗಿರಬೇಕು. ವ್ರತಾಚಾರ ಶುದ್ಧಿ ಈಕೆಯ ವಚನದ ಆಶಯ. ಅದನ್ನು ತನ್ನ ವೃತ್ತಿಪರಿಭಾಷೆಯನ್ನು
ಬಳಸಿ ತುಂಬ ಸಮರ್ಥವಾಗಿ ಪ್ರತಿಪಾದಿಸಿದ್ದಾಳೆ.
*