Previous ಗಜೇಶ ಮಸಣಯ್ಯಗಳ ಪುಣ್ಯಸ್ಥ್ರೀ ಮಸಣಮ್ಮ ಗಾವುದಿ ಮಾಚಯ್ಯ Next

ಗಣದಾಸಿ ವೀರಣ್ಣ

*
ಅಂಕಿತ: ಶಾಂತಕೂಡಲಸಂಗಮದೇವ

೬೩೨
ಅಂದಿನವರಿಗೆ ಅಷ್ಟಾವರಣವು ಸಾಧ್ಯವಪ್ಪುದಲ್ಲದೆ
ಇಂದಿನವರಿಗೆ ಅಷ್ಟಾವರಣವು ಸಾಧ್ಯವಾಗದೆಂಬರು.
ಅದೇನು ಕಾರಣ ಸಾಧ್ಯವಿಲ್ಲ ಶ್ರೀಗುರುವೆ ?
ಅಂದಿನ ಸೂರ್ಯ ಚಂದ್ರ ಆತ್ಮ ಆಕಾಶ ವಾಯು
ಅಗ್ನಿ ಅಪ್ಪು ಪೃಥ್ವಿ ಎಂಬ ಅಷ್ಟತನುಮೂರ್ತಿಗಳು
ಅಂದುಂಟು ಇಂದುಂಟು.
ಅಂದು ಬೆಳೆವ ಹದಿನೆಂಟು ಜೀನಸಿನ ಧಾನ್ಯಗಳು
ಇಂದು ಬಿತ್ತಿದರೆ ಬೆಳೆವವು.
ಅಂದು ವಾರ ತಿಥಿ ನಕ್ಷತ್ರ ಸಂವತ್ಸರಗಳು ನಡೆದುದುಂಟು.
ಇಂದು ವಾರ ತಿಥಿ ನಕ್ಷತ್ರ ಸಂವತ್ಸರಗಳು ನಡೆವುದುಂಟು.
ಅಂದಿನ ಅಷ್ಟಾವರಣಸ್ವರೂಪ ಇಂದುಂಟು.
ಅಂದು ಇಂದೆಂಬ ಸಂದೇಹದ ಕೀಲವ ಕಳೆದು ನಿಂದರೆ ಸಾಕು
ದಯಮಾಡು ಸದ್ಗುರುವೆ.
ಕೇಳೈ ಮಗನೆ :
ದೃಢವಿಡಿದು ಏಕಚಿತ್ತದಲ್ಲಿ ನಂಬಿಗೆಯುಳ್ಳ
ಶಿವಭಕ್ತಂಗೆ ಅಂದೇನು, ಇಂದೇನು ?
ಗುರುಲಿಂಗಜಂಗಮದಲ್ಲಿ ಪ್ರೇಮ ಭಕ್ತಿ ಇದ್ದವರಿಗೆ,
ವಿಭೂತಿ ರುದ್ರಾಕ್ಷಿಯಲ್ಲಿ ವಿಶ್ವಾಸ ಇದ್ದವರಿಗೆ,
ಶಿವಮಂತ್ರವಲ್ಲದೆ ಎನಗೆ ಬೇರೆ ಮಂತ್ರವಿಲ್ಲವೆಂಬವರಿಗೆ
ಅಂದೇನೊ, ಇಂದೇನೊ ?
ಗುರುಲಿಂಗಜಂಗಮಕ್ಕೋಸ್ಕರವಾಗಿ ಕಾಯಕ ಮಾಡುವವರಿಗೆ
ಪಂಚಾಚಾರವೇ ಪ್ರಾಣವಾಗಿ, ಅಷ್ಟಾವರಣವೇ ಅಂಗವಾಗಿಪ್ಪವರಿಗೆ
ಅಂದೇನೊ, ಇಂದೇನೊ ?
ಪುರಾತರ ವಚನವಿಡಿದು ಆರಾಧಿಸುವವರಿಗೆ,
ಆದಿ ಮಧ್ಯ ಅವಸಾನ ತಿಳಿದವರಿಗೆ,
ಅಂದು ಇಂದೆಂಬ ಸಂದೇಹವಿಲ್ಲವೆಂದು ಹೇಳಿದಿರಿ ಸ್ವಾಮಿ
ಎನ್ನಲ್ಲಿ ನೋಡಿದರೆ ಹುರಿಳಿಲ್ಲ, ಹುರುಳಿಲ್ಲ.
ಎನ್ನ ತಪ್ಪಿಂಗೇನೂ ಎಣೆಯಿಲ್ಲ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ.
ಮೇರುಗುಣವನರಸುವುದೆ ಕಾಗೆಯಲ್ಲಿ?
ಪರುಷಗುಣವನರಸುವುದೆ ಕಬ್ಬುನದಲ್ಲಿ?
ನೀವು ಎನ್ನ ಗುಣವನರಸಿದರೆ ಎಂತು ಜೀವಿಸುವೆನಯ್ಯಾ,
ಶಾಂತಕೂಡಲಸಂಗಮದೇವ,
ನಿಮ್ಮ ಧರ್ಮ, ನಿಮ್ಮ ಧರ್ಮ.

ಈತನ ಜೀವನ ವಿವರಗಳು ದೊರೆಯುವುದಿಲ್ಲ. ಕಾಲ-೧೭ನೇಯ ಶತಮಾನ ಶಿವಗನರ ಭೃತ್ಯನೆಂದು ತನ್ನನ್ನು ಕರಿದುಕೊಂಡಿರುವುದರಿಂದ 'ಗಣದಾಸಿ' ಎಂಬ ವಿಶೇಷಣ ಅನ್ವರ್ಥಕವೆನಿಸಿದೆ. ಈತನ ೪೦ ವಚನಗಳು ದೊರೆತಿವೆ. 'ಶಾಂತಕೂಡಲಸಂಗಮದೇವ' ಎಂಬುದು ವಚನಾಂಕಿತ. 'ಜ್ಞಾನಸಾರಾಯದ ವಚನ "ಮಹಾಜ್ಞಾನದನುಭಾವದ ವಚನ" ಎಂಬ ಶೀರ್ಷಿಕೆಯ ಈ ವಚನಗಳಲ್ಲಿ ಜ್ಞಾನ-ಅನುಭಾವ ಪ್ರಧಾನವಾಗಿವೆ. 'ಅಷ್ಟಾವರಣವೆ ಅಂಗ, ಪಂಚಾಚಾರವೇ ಪ್ರಾಣ' ಎಂದು ನಂಬಿದ್ದ ಈತನ ವಚನಗಳಲ್ಲಿ ಈ ಎರಡೂ ತತ್ವಗಳ ವ್ಯವಸ್ಥಿತ ವಿವೇಚನೆಗೆ ಹೆಚ್ಚಿನ ಸ್ಥಾನ ಸಂದಿದೆ. ಬಸವಾದಿ ಶರಣರ ವಚನಗಳ ಪ್ರಭಾವ ಈತನ ರಚನೆಗಳ ಮೇಲೆ ವಿಶೇಷವಾಗಿ ಆಗಿದೆ.

೬೩೭
ಲಿಂಗವ ಪೂಜಿಸಿ ಅಂಗವ ಬೇಡಬಾರದಯ್ಯಾ.
ಅದೇಕೆಂದಡೆ ಶಿವನು ದೀನನು.
ಅದು ಹೇಗೆಂದಡೆ:
ದ್ರವ್ಯವೆಲ್ಲವು ಕುಬೇರನ ವಾಸಮಾಡಿ ದೀನವಾಯಿತು.
ಹದಿನಾಲ್ಕು ಲೋಕಗೋಸ್ಕರವಾಗಿ ಆ ದ್ರವ್ಯವಿದ್ದು,
ಹದಿನಾಲ್ಕು ಲೋಕಕ್ಕೆ ಹೇಗೆ ಮಾಡಲಿ ಎಂದು ಚಿಂತಿಸಿ
ಒಂದು ಕೌಪವ ತಂದು ನಮ್ಮ ಗಣಂಗಳ ಮನೆಯಲಿಟ್ಟು
ಮಾಯವಾಗಿ, ನ್ಯಾಯಕಿಕ್ಕಿ, ಅಮರನೀತಿಗಳ ಮನೆಯ
ಭಂಡಾರವೆಲ್ಲವ ಅವರು ಸಹಜವಾಗಿ ಒಯ್ದರು.
ಅದು ಸಾಲದೆ, ನಮ್ಮ ಗಜಪತಿರಾಯನ ಮನೆಯ
ಕನ್ನವನಿಕ್ಕಿ ಒಯ್ದು,
ಈರೇಳು ಲೋಕವನೆ ಪ್ರತಿಪಾಲನೆಯ ಮಾಡಿ,
ಅವರೆಲ್ಲ ಉಂಡ ಮೇಲೆ ನೀವು ಉಂಬಿರಿ.
ದಿನದಿನಕ್ಕೆ ಇದೇ ಚಿಂತೆ ನಿಮಗೆ.
ನಮ್ಮ ಗಣಂಗಳು ನಿಶ್ಚಿಂತೆಯಲ್ಲಿಪ್ಪರು.
ಅದು ಹೇಗೆಂದಡೆ:
ದಿನದಿನದ ಈ ಕಾಯಕವ ದಿನದಿನಕೆ ಸರಿಮಾಡಿ
ಇಂದಿನ ಕಾಸು ಉದಯಕ್ಕೆ ತಂಗಳೆಂಬರು.
ನಾಳಿನ ಚಿಂತೆ ನನಗೇಕೆಂಬರು.
ನೀವು ನಾಳಿಗೆ ಬೇಕೆಂದು ಇಟ್ಟುಕೊಂಡು,
ನಮ್ಮ ಕರಿಕಾಲಚೋಳನ ಮನೆಯಲ್ಲಿ
ಅಡಿಗೆಯ ಮಾಡಿಸಿ ಉಂಡು, ಅದು ಸಾಲದೆ ?
ನಮ್ಮ ಮಾದಾರ ಚೆನ್ನಯ್ಯನ ಮನೆಯಲ್ಲಿ ಅಂಬಲಿಯನುಂಡಿರಿ,
ಆಗ ಈರೇಳು ಲೋಕಕ್ಕೆ ತೃಪ್ತಿಯಾಯಿತ್ತು.
ಇಂತಪ್ಪ ನಮ್ಮ ಗಣಂಗಳ ಉದಾರತ್ವ ಹೇಳಲಿಕ್ಕೆ ಅಸಾಧ್ಯವು.
ಇದ ನೀವು ಬಲ್ಲಿರಿಯಾಗಿ,
ನಮ್ಮ ಗಣಂಗಳ ಹೃದಯದಲ್ಲಿ ಮನೆಯ ಮಾಡಿಕೊಂಡಿಪ್ಪಿರಿ
ಎಂದಾತ ನಮ್ಮ ಶಾಂತಕೂಡಲಸಂಗಮದೇವ.


*
Previous ಗಜೇಶ ಮಸಣಯ್ಯಗಳ ಪುಣ್ಯಸ್ಥ್ರೀ ಮಸಣಮ್ಮ ಗಾವುದಿ ಮಾಚಯ್ಯ Next