Previous ಶರಣ ಡೋಹರ ಕಕ್ಕಯ್ಯ ಚೆನ್ನಯ್ಯ Next

ಮಾದಾರ ಚೆನ್ನಯ್ಯ

*

ಮಾದಾರ ಚೆನ್ನಯ್ಯ

ವಚನಾಂಕಿತ: ಅರಿ ನಿಜಾ[ತ್ಮಾ] ರಾಮ ರಾಮನಾ
ಕಾಯಕ: ಚರ್ಮದ ಕಾಯಕ

ನಡೆನುಡಿ ಸಿದ್ಧಾಂತವಾದಲ್ಲಿ, ಕುಲ ಹೊಲೆ ಸೂತಕವಿಲ್ಲ.
ನುಡಿ ಲೇಸು, ನಡೆಯಧಮವಾದಲ್ಲಿ,
ಅದು ಬಿಡುಗಡೆಯಿಲ್ಲದ ಹೊಲೆ.
ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ,
ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ ?
ಆಚಾರವೆ ಕುಲ, ಅನಾಚಾರವೆ ಹೊಲೆ.
ಇಂತೀ ಉಭಯವ ತಿಳಿದರಿಯಬೇಕು.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ. -1157 [1]

ಹನ್ನೇರಡನೆಯ ಶತಮಾನದ ಶರಣರಲ್ಲಿ ಮಾದಾರ ಚೆನ್ನಯ್ಯ ಬಹು ಮುಖ್ಯನಾದ ವ್ಯಕ್ತಿ. ಸತ್ಯಶುದ್ಧ ಕಾಯಕಕ್ಕೆ ಹೆಸರಾದವನು. ಜಾತಿಯಿಂದ ಆತ ಅಂತ್ಯಜ: ಅಂದರೆ ಮಾದಿಗ ಜಾತಿಯವನು. ತಮಿಳುನಾಡಿನ ಚೋಳರಾಜನ ಅರಮನೆಯ ಲಾಯಕ್ಕೆ ಹುಲ್ಲುತರುವ ಕೆಲಸಮಾಡುತ್ತಿದ್ದ ಅನಂತರ ಆತ ಬಸವಾದಿ ಶರಣರ ಆಚಾರ ವಿಚಾರಗಳಿಂದ ಪ್ರಭಾವಿತನಾಗಿ ಕಲ್ಯಾಣಕ್ಕೆ ಬಂದನು. ಅಲ್ಲಿ ತನ್ನ ಕುಲದ ಕಾಯಕವಾದ ಚರ್ಮಗಾರಿಕೆಯನ್ನು ಮುಂದುವರಿಸಿದರು. ದೇವನಿಗೆ ಅಂಬಲಿ ಉಣಿಸಿದ ಪ್ರಸಂಗ ಅವನ ಉಜ್ವಲ ಭಕ್ತಿಗೆ ಉದಾಹರಣೆ. ಬಸವಣ್ಣನವರು ಮಾದಾರ ಚೆನ್ನಯ್ಯನನ್ನು ಹೃದಯಾಂತರಾಳದಿಂದ ಸ್ತುತಿಸಿದ್ದಾರೆ. ಮಾದಾರ ಚೆನ್ನಯ್ಯ ಶ್ರೇಷ್ಟವಚನಕಾರ. ಚೆನ್ನಯ್ಯನು ತನ್ನ ವಚನಗಳಲ್ಲಿ ಯಾವುದೇ ಅಂಕಿತವನ್ನು ಬಳಸಿಕೊಂಡಿಲ್ಲ. ತನ್ನ ಕಾಯಕದಲ್ಲಿ ಬಳಸುವ ಕೈ ಉಳಿ ಅಡಿಗೂಟ ಮೊದಲಾದವನ್ನೇ ಬಳಸಿ "ಅರಿ ನಿಜಾತ್ಮರಾಮನ ರಾಮನ" ಎಂದಿದ್ದಾನೆ, ಅವನ ೧೦ ವಚನಗಳು ದೊರಕಿವೆ. ನಡೆದಂತೆ ನುಡಿಯುವುದು ನುಡಿದಂತೆ ನಡೆಯುವುದು ಎಂಬ ಶರಣರ ಧ್ಯೇಯ ವಾಕ್ಯಕ್ಕೆ ಒಳ್ಳೆಯ ಉದಾಹರಣೆ ಮಾದಾರ ಚೆನ್ನಯ್ಯ. ಅವನ ವಚನವೊಂದರಲ್ಲಿ ಈ ರೀತಿ ಹೇಳಿದ್ದಾನೆ:

ವೇದ ಶಾಸ್ತ್ರಕ್ಕೆ ಹಾರುವನಾಗಿ, ವೀರ ವಿತರಣಕ್ಕೆ ಕ್ಷತ್ರಿಯನಾಗಿ
ಸರ್ವವನಾರೈದು ನೋಡುವಲ್ಲಿ ವೈಶ್ಯನಾಗಿ ವ್ಯಾಪಾರದೊಳಗಾಗಿ
ಕೃಷಿಯ ಮಾಡುವುದಕ್ಕೆ ಶೂದ್ರನಾಗಿ ಇಂತೀ ಜಾತಿ ಗೋತ್ರದೊಳಗಾಗಿ
ನೀಚ, ಶ್ರೇಷ್ಠವೆಂಬ ಎರಡು ಕುಲವಲ್ಲದೆ ಹೊಲೆ ಹದಿನೆಂಟು
ಜಾತಿಯೆಂಬ ಕುಲವಿಲ್ಲ. ಬ್ರಹ್ಮವನರಿದಲ್ಲಿ ಬ್ರಾಹ್ಮಣ
ಸರ್ವ ಜೀವಹತ ಕರ್ಮಕ್ಕೊಳಗಾಗಿದ್ದಲ್ಲಿ ಸಮಗಾರ, ಈ ಉಭಯವ
ನರಿದು ಮರೆಯಲಿಲ್ಲ ಕೈಯುಳಿಗತ್ತಿ ಆಡಿಗೂಂಟಕ್ಕಡಿಯಾಗಬೇಡ
ಅರಿ ನಿಜಾತ್ಮರಾಮ ರಾಮನಾ.

ಶ್ರೇಣಿಕೃತ ಸಮಾಜವ್ಯವಸ್ಥೆಯನ್ನು ವಿಡಂಬಿಸಿ ಮತ್ತೊಂದು ವಚನದಲ್ಲಿ ಹಿಗೆಂದಿದ್ದಾನೆ:

ನಡೆನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ
ನುಡಿ ಲೇಸು ನಡೆಯಧರ್ಮ
ಅದು ಬಿಡುಗದೆಯಿಲ್ಲದ ಹೊಲೆ
ಕಳವು ಪಾರದ್ವಾರಗಳಲ್ಲಿ ಹೊಲಬನರಿಯದೆ
ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ?
ಆಚಾರವೇ ಕುಲ, ಅನಾಚಾರವೆ ಹೊಲೆ, ಇಂತೀ ಉಭಯವ
ತಿಳಿದರಿಯಬೇಕು ಕೈಯುಳಿಗತ್ತಿ, ಅಡಿಗೂಂಟಕ್ಕಡಿಯಾಗಬೇಡ ಅರಿ ನಿಜಾತ್ಮರಾಮ ರಾಮನಾ.

ಮಾದಾರ ಚೆನ್ನಯನ ವಚನಗಳಲ್ಲಿ `ಕುಲ' ಕೇಂದ್ರವಾಗಿದೆ. ಆಚಾರವೆಕುಲ ಅನಾಚಾರವೆ ಹೊಲೆ ಆವ ಕುಲವಾದರೂ ಅರಿದಲ್ಲಿಯೆ ಪರತತ್ವಭಾವಿ ಮರೆದಲ್ಲಿಯೆ ಮಲಮ ಬಂಧ ಸಾಂಖ್ಯ ಶ್ವಪಚ, ಅಗಸ್ತ್ಯ ಕಬ್ಬಿಲ ದೂರ್ವಾಸ ಮಚ್ಚಿಗ, ದಧೀಚಿ ಕೀಲಿಗ, ಕಶ್ಯಪ ಕಮ್ಮಾರ, ರೋಮಜ ಕಂಚುಗಾರ, ಕೌಂಡಿಲ್ಯ ನಾವಿದ ನೆಂಬುದನರಿದು ಮತ್ತೆ ಕುಲವುಂಟೆಂದು ಛಲಕ್ಕೆ ಹೋರಲೇತಕ್ಕೆ? ಎಂಬ ಇವನ ವಿಚಾರಧಾರೆಗಳು ಬಸವಾದಿ ಶರಣರ ಕ್ರಾಂತಿಗೆ ಮೂಲಬೀಜಗಳು.

ವೇದ ಶಾಸ್ತ್ರಕ್ಕೆ ಹಾರುವನಾಗಿ,
ವೀರ ವಿತರಣಕ್ಕೆ ಕ್ಷತ್ರಿಯನಾಗಿ,
ಸರ್ವವನಾರೈದು ನೋಡುವಲ್ಲಿ,
ವೈಶ್ಯನಾಗಿ ವ್ಯಾಪಾರದೊಳಗಾಗಿ,
ಕೃಷಿಯ ಮಾಡುವುದಕ್ಕೆ ಶೂದ್ರನಾಗಿ.
ಇಂತೀ ಜಾತಿಗೋತ್ರದೊಳಗಾದ ನೀಚ ಶ್ರೇಷ್ಠವೆಂಬ
ಎರಡು ಕುಲವಲ್ಲದೆ,
ಹೊಲೆ ಹದಿನೆಂಟುಜಾತಿಯೆಂಬ ಕುಲವಿಲ್ಲ.
ಬ್ರಹ್ಮವನರಿದಲ್ಲಿ ಬ್ರಾಹ್ಮಣ.
ಸರ್ವಜೀವಹತ ಕರ್ಮಕ್ಕೊಳಗಾಗಿದ್ದಲ್ಲಿ ಸಮಗಾರ.
ಈ ಉಭಯವನರಿದು ಮರೆಯಲಿಲ್ಲ.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ. -1161 [1]

ನರಕುಲ ಹಲವಾದಲ್ಲಿ,
ಯೋನಿಯ ಉತ್ಪತ್ಯ ಒಂದೇ ಭೇದ.
ಮಾತಿನ ರಚನೆ ಎಷ್ಟಾದಡೇನು ?
ನಿಹಿತವರಿವುದು ಒಂದು ಭೇದ.
ವಸ್ತು ಜಾತಿ ಗೋತ್ರ ವಿಶೇಷವೆಂಬಲ್ಲಿ,
ದಿನರಾತ್ರಿಯೆಂಬ ಉಭಯವನಳಿವುದಕ್ಕೆ
ತಮ ಬೆಳಗೆರಡೆಂಬವಲ್ಲದಿಲ್ಲ.
ಕುಲ ಉಭಯಶಕ್ತಿ ಪುರುಷತ್ವವಲ್ಲದಿಲ್ಲ.
ಬೇರೆ ಹಲವು ತೆರನುಂಟೆಂದಡೆ,
ಮೀರಿ ಕಾಬ ಶ್ರುತ ದೃಷ್ಟ ಇನ್ನಾವುದು ?
ಎಲ್ಲಕ್ಕೂ ನೀರು ನೆಲ ಸೂರ್ಯ ಸೋಮ
ಆರೈದು ನೋಡುವ ದೃಷ್ಟಿಯೊಂದೆ ಬೊಂಬೆ.
ಬೊಂಬೆ ಹಲವ ನೋಡಿಹೆ,
ಬೊಂಬೆ ಹಲವಂದ ಕಾಣ್ಬಂತೆ,
ಅದರಂಗವ ತಿಳಿದು ನಿಂದಲ್ಲಿ,
ಹಲವು ಕುಲದ ಹೊಲೆಯೆಂದೂ ಇಲ್ಲವೆಂದೆ.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ -1158 [1]

ಸಾಂಖ್ಯ ಶ್ವಪಚ, ಅಗಸ್ತ್ಯ ಕಬ್ಬಿಲ,
ದೂರ್ವಾಸ ಮಚ್ಚಿಗ, ದಧೀಚಿ ಕೀಲಿಗ,
ಕಶ್ಯಪ ಕಮ್ಮಾರ, ರೋಮಜ ಕಂಚುಗಾರ,
ಕೌಂಡಿಲ್ಯ ನಾವಿದನೆಂಬುದನರಿದು,
ಮತ್ತೆ ಕುಲವುಂಟೆಂದು ಛಲಕ್ಕೆ ಹೋರಲೇತಕ್ಕೆ ?
ಇಂತೀ ಸಪ್ತಋಷಿಯರುಗಳೆಲ್ಲರೂ
ಸತ್ಯದಿಂದ ಮುಕ್ತರಾದುದನರಿಯದೆ,
ಅಸತ್ಯದಲ್ಲಿ ನಡೆದು, ವಿಪ್ರರು ನಾವು ಘನವೆಂದು
ಹೋರುವ ಹೊತ್ತುಹೋಕರ ಮಾತೇತಕ್ಕೆ ?
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ. -1164 [1]


*

References

[1] ಈ ತರಹದ ಸಂಖ್ಯೆಯ ವಿವರ: ಸಮಗ್ರ ವಚನ ಸಂಪುಟದ, ವಚನ ಸಂಖ್ಯೆ,(೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
Previous ಶರಣ ಡೋಹರ ಕಕ್ಕಯ್ಯ ಚೆನ್ನಯ್ಯ Next