*
ಅಂಕಿತ: |
ನಿರುಪಮ ನಿರಾಳ ಮಹತ್ಪ್ರಭು ಮಹಾಂತ ಯೋಗಿ |
ಕಾಯಕ: |
ಅನುಭಾವಿ |
ಒಂದು ಮರವ ಕೊರೆದು ನೂರೆಂಟು ಬೊಂಬೆಯ ಮಾಡಿ
ಮರವೇ ಬೊಂಬೆಯಲ್ಲದೆ ಮರ ಬ್ಯಾರೆ ತಾನಿಲ್ಲಾ.
ಇದರಂತೆ ತಾನೇ ಹಲವು ಆಗಲು ತಾನೇ
ಹಲವಲ್ಲದೆ ತಾ ಬ್ಯಾರೆಲ್ಲಿಹನೋ ಇದೇ ಅನುಭವ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ. /೯೫೩ [1]
'ಕಡಕೊಳದ ಮಡಿವಾಳಪ್ಪ' ಎಂದು ಪ್ರಸಿದ್ಧವಾಗಿರುವ ಈತ ೧೮ನೆಯ ಶತಮಾನದ ಸುಪ್ರಸಿದ್ಧ ಅನುಭಾವಿ. ಸ್ಥಳ-ಗುಲಬರ್ಗಾ ಜಿಲ್ಲೆಯ ಅಫಜಲ್ಪುರ ತಾಲೂಕಿನ ಬಿದನೂರು. ತಂದೆ-ವಿರೂಪಾಕ್ಷಸ್ವಾಮಿ, ತಾಯಿ-ಗಂಗಮ್ಮ. ದೀಕ್ಷಾಗುರು-ಕಲಕೇರಿ ಮರುಳಾರಾಧ್ಯ. ಕಡಕೊಳ ಗ್ರಾಮ ಮಡಿವಾಳಪ್ಪನ ಕರ್ಮಭೂಮಿ. ಅಲ್ಲಿಯೇ ಆತ ಜೀವಂತ ಸಮಾಧಿ ಹೊಂದಿದ.
ಮಡಿವಾಳಪ್ಪ ರಚಿಸಿದ ಸಾಹಿತ್ಯ ಸ್ವರವಚನ (ತತ್ವಪದ) ಮತ್ತು ವಚನ ಎಂಬ ಎರಡು ರೂಪದಲ್ಲಿ ದೊರೆಯುತ್ತದೆ. ಸುಮಾರು ೫೦೦ಕ್ಕೂ ಹೆಚ್ಚು ಸ್ವರವಚನ ಮತ್ತು ೨೩ ವಚನಗಳು ದೊರೆತಿವೆ. ಸ್ವರವಚನಗಳಲ್ಲಿ 'ಗುರುಮಹಾಂತ' ಎಂಬ ಅಂಕಿತವಿದ್ದರೆ ವಚನಗಳಲ್ಲಿ ಅದು 'ನಿರುಪಮನಿರಾಳ ಮತ್ಪ್ರಭು ಮಹಾಂತಯೋಗಿ' ಎಂದಿದೆ.
ಸ್ವರವಚನಗಳು (ಹಾಡುಗಳು-ತತ್ವಪದಗಳು) ಬಿಡಿಬಿಡಿಯಾಗಿ ದೊರೆತರೆ, ವಚನಗಳು 'ನಿಜಲೀಲಾಮೃತ ವಚನ' ಎಂಬ ಶೀರ್ಷೆಕೆಯ ಕೃತಿರೂಪದಲ್ಲಿ ದೊರೆಯುತ್ತವೆ. ಇದು ಒಂದು ಸ್ಥಲಕಟ್ಟಿನ ಕೃತಿ. ೨೦ ಸ್ಥಲಗಳಿವೆ. ೨೩ ವಚನಗಳ ಜೊತೆ ೫ ಸ್ವರವಚನಗಳನ್ನೂ ಸೇರಿಸಲಾಗಿದೆ. ಲಿಂಗಾಯತ ಷಟ್ಸ್ಥಲ ತತ್ವನಿರೂಪಣೆಯೇ ಈ ಕೃತಿಯ ಮುಖ್ಯ ಗುರಿ. ಜೊತೆಗೆ ಸಮಾಜ ವಿಮಶರ್ೆಯೂ ಅಲ್ಲಲ್ಲಿ ಕಂಡುಬರುತ್ತದೆ.
ತಂದೆಯ ವಿಕಾರದಿಂದ ತಾಯಿಯ ಬಸುರಲ್ಲಿ ಬಂದು,
ತಂದೆಯದು ಒಂದು ದಿನದ ಶುಕ್ಲ,
ತಾಯಿಯದು ಒಂಬತ್ತು ತಿಂಗಳದ ಶೋಣಿತವು ಕೂಡಿ,
ಗಟ್ಟಿಗೊಂಡು ಪಿಂಡವಾದ ಈ ಶರೀರದ ಕಷ್ಟ ಎಷ್ಟಂತ್ಹೇಳಲಿ,
ಆ ತಾಯಿಯ ಉದರದಲ್ಲಿರ್ದ ಆ ಪರಿಯೆಂತೆಂದರೆ :
ಕದ್ದ ಕಳ್ಳನ ಹೆಡಗುಡಿಯಕಟ್ಟಿ ಹೊಗಸಿದ ಸೆರೆಮನೆಗಿಂತ
ಸಹಸ್ರ ಇಮ್ಮಡಿ ಉಪದ್ರವಾಯಿತು.
ಎಡಬಲ ಮೂತ್ರದ ಹಡಕಿಯ ಬಾಧೆ,
ನಡುವೆ ಕಡಿವ ಜಂತುಗಳ ಬಾಧೆ,
ಕುದಿವ ಜಠರಾಗ್ನಿಯ ಬಾಧೆ, ಏರಿಳಿವ ಶ್ವಾಸಮಾರುತನ ಬಾಧೆ,
ಹೆತ್ತವ್ವ ನುಂಗಿದ ತುತ್ತು ಅಳನೆತ್ತಿಗೆ ತಗಲಲು
ಹತ್ತುಸಾವಿರ ಸಿಡಿಲು ಹೊಡೆದಂತಾಯಿತು.
ಮೇಲೆ ಕುಡಿವ ನೀರಿನಿಂದಾದ ಸಂಕಟ ಹೇಳಲಳವಲ್ಲ.
ಆ ತಾಯಿ ನಡಿವ ನುಡಿವ ಆಡುವ ಹಾಡುವ ಓಡುವ
ಕೂಡ್ರುವ ಆಕಳಿಸುವ ಮಲಗುವ ಏಳುವ ಬೀಳುವ
ಮೈಮುರಿಯುವ ಇಂತು ಅನಂತ ಬಾಧೆಯೊಳಗೆ
ಸಾಯದ ಕಾರಣವೇನು ? ಕರ್ಮನಿವೃತ್ತಿ ಇಲ್ಲದಾಗಿ.
ಇಂತು ದುಃಖದಲ್ಲಿ ಒಂಬತ್ತುತಿಂಗಳು ತುಂಬಿ
ಸರ್ವ ಅವಯವಂಗಳ ಬಲಿದು ಎಚ್ಚರಹುಟ್ಟಿ ಜಾತಿಸ್ಮರತ್ವವ ತಿಳಿದು,
ಕೆಟ್ಟೆ ಕೆಟ್ಟೆನೆಂದು ತನ್ನ ಮುನ್ನಿನ ಕರ್ಮಕ್ಕೆ ನಡುನಡುಗಿ
ಕಡೆಗಾಣುವ ಪರಿಯೆಂತೆಂದು ಚಿಂತಿಸಿ,
ಸರ್ವರಿಗೆ ಶಿವನೇ ದೈವವೆಂದು ಸರ್ವರ ಪಾಪಪೊರೆವಾತನೆಂದು ತಿಳಿದು,
ಈ ಭವಬಾಧೆ ಬಿಡಿಸಿಕೊಳ್ಳುವುದಕ್ಕೆ
ಶಿವಧೋ ಶಿವಧೋ ಶಿವಧೋ ಎಂದು ಮೊರೆಯಿಡುವ ಸಮಯಕ್ಕೆ
ವಿಷ್ಣು ಪ್ರಸೂತಿಯ ಗಾಳಿಬೀಸಲು ತಲೆಮೇಲಾಗಿದ್ದ ಶಿಶುವು,
ಅಗಸ ಅರವಿಯ ಹಿಂಡಿದಂತೆ, ಹೆಡಕ್ಹಿಡಿದು ಮುರಿದೊತ್ತಿ
ತಲೆಕೆಳಗೆ ಮಾಡಿ ಯೋನಿದ್ವಾರದಾ ಹೊರಯಕ್ಕೆ ನೂಕಲು,
ಅಕ್ಕಸಾಲಿಗನು ಕಂಬೆಚ್ಚಿನಲ್ಲಿಕ್ಕಿ ತೆಗೆದ ಚಿನ್ನದ ಸಲಾಕೆಯಂತಾಯಿತಲ್ಲಾ.
ಮುಂದೆ ಭೂಸ್ಪರ್ಶನದಿಂದೆ ಹಿಂದಿನ ಜಾತಿಸ್ಮರತ್ವವ ಮರೆತು,
ತನ್ನ ಮಲಮೂತ್ರದಲ್ಲಿ ತಾನೆ ಹೊರಳ್ಯಾಡಿ, ಅನಂತದುಃಖವಂ ಬಡೆದು,
ಬಾಲತ್ವನೀಗಿ ಯವ್ವನಬರಲು, ತಾನು ಹ್ಯಾಂಗಾದೆನೆಂದು ತಿಳಿಯದೆ
ತಾ ಹಿಂದೆ ಬಂದ ಮೂತ್ರದ ಕುಣಿಗೆ ಮನವಿಟ್ಟು ಬಾಯಿದೆರೆದು
ಕುದಿಕುದಿದು ಕಿಸುಕುಳದ ಕೀವು ರಕ್ತವೊಸರುವ
ಹಸಿ ಘಾಯಿ ಹಳದೊಗಲಿಗೆ ಸೋತು
ಮುಪ್ಪಾಗಿ ಕೆಮ್ಮು ಕ್ಯಾಕರಿಕೆ ವಾತ ಪಿತ್ಥ ಶ್ಲೇಷ್ಮಾದಿ
ಅನಂತ ರೋಗಾದಿಗಳಿಂದ ಸತ್ತು ಸತ್ತು ಹೋಯಿತು
ಅನಂತಕಾಲ ಅನಂತಜನ್ಮ,
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ. /೯೩೬ [1]
ಲಿಂಗಾಯತ ತತ್ತ್ವ ನಿರೂಪಣೆಯೇ ವಚನಗಳ ಮುಖ್ಯ ಗುರಿ. ತನ್ನದೇ ಆದ ನೂತನ ಸ್ಥಲಪರಿಕಲ್ಪನೆಯನ್ನು ಮಡಿವಾಳಪ್ಪ ಮಾಡಿರುವನು. ತತ್ತ್ವ ನಿರೂಪಣೆಯ ಜೊತೆಗೆ ಸಾಮಾಜಿಕ ವಿಡಂಬನೆಯೂ ಅಲ್ಲಲ್ಲಿ ಕಂಡುಬರುತ್ತದೆ. ದೇಶಿಭಾಷೆಯನ್ನು ಸೊಗಸಾಗಿ ಮಡಿವಾಳಪ್ಪ ಬಳಸಿಕೊಂಡಿರುವುದು ಒಂದು ವಿಶೇಷ. ಅವನ ಲೋಕಾನುಭವ ವಚನಗಳಲ್ಲಿ ಸ್ಫುಟವಾಗಿಮೂಡಿದೆ. ತನ್ನನ್ನು ತಾನೇ ವಿಡಂಬಿಸಿಕೊಂಡಿರುವುದು ಇನ್ನೊಂದು ವಿಶೇಷ.
ಕಸ್ತೂರಿಮೃಗವು, ಕಸ್ತೂರಿಯ ಹುಡುಕುತ್ತ ಹೋದರೆ
ಕಸ್ತೂರಿಮೃಗವು ತಾನಲ್ಲದೆ ಕಸ್ತೂರಿಯು ಸಿಗಲುಂಟೆ ?
ಕನ್ನಡಿಯ ಮಹಲಿನೊಳಗೆ ಕುನ್ನಿ ತಾ ಕೂತು
ಸುತ್ತಲಿರ್ದ ಕನ್ನಡಿಯೊಳಗೆ ಕುನ್ನಿಗಳ ಕಂಡು
ತನ್ನ ರೂಹೆಂದು ಅರಿಯದೆ ಅನ್ಯವೆಂದು ಕೂಗಲು
ಆ ಕೂಗು ಎಂದಿಗೆ ಮಾಣ್ಬುದೋ ತನ್ನ ತಾ ತಿಳಿದಂದಿಗಲ್ಲದೆ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./ ೯೫೪ [1]
[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
*