ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ | |
*
೭೮೦
ಅಯ್ಯಾ, ದುರುಳಕಾಮಿನಿಯರಿಗೆ ಎರಗುವ ಹೊಲೆಮನಸೆ,
ಗುರುವಿಂಗೆ ಎರಗಿ ಎರಕಡರ್ದಡಾತನ ಗುರುಕರಜಾತನೆಂಬೆ.
ಉದರದ ನೆಲೆಯನರಿದಾತನ ಉದಾಸಿಯೆಂಬೆ.
ಜನನದ ನೆಲೆಯನರಿದಾತನ ಜಂಗಮವೆಂಬೆ.
ಮರಣದ ನೆಲೆಯನರಿದಾತನ ಮಹಾಂತಿನೊಳಗಣ ಹಿರಿಯನೆಂಬೆ.
ಸಕಲದ ಹಸಿಗೆಯ ನೆಲೆಯನರಿದಾತನ ಹಂಚು ಕಂತೆಯೆಂಬೆ.
ಅತ್ಯತಿಷ್ಠದ್ದಶದಿಂದತ್ತತ್ತ ಬೆಳಗುವ ಮಹಾಬೆಳಗನರಿದಾತನ ಅತೀತನೆಂಬೆ.
ಅರುಹು ಅರತು, ಮರಹು ನಷ್ಟವಾಗಿ ಅರುಹು ಕರಿಗೊಂಡಾತನ
ಮಂಕು ಮರುಳು ಎಂಬೆ.
ತನುಧರ್ಮ ತರಹರಿಸಿ, ಮನದ ಸಂಚಲವಳಿದು ಒಳಗೆ ನುಣ್ಣಗಾಗಬಲ್ಲಡೆ
ಬೋಳಕಾಕಾರ, ಬೋಳನಿರ್ವಾಣಿಗಳೆಂಬೆ.
ಹೀಂಗಲ್ಲದೆ ತಾಯಿಸತ್ತ ತಬ್ಬಲಿಯಂತೆ,
ಹಲಬರಿಗೆ ಹಲ್ಲದೆರೆದು, ಹಲಬರಿಗೆ ಬೋದಿಸಿ
ತನ್ನ ಉದರವ ಹೊರೆವ ಸಂದೇಹಿಗಳ ಕಂಡು ಎನ್ನ ಮನ
ಸಂದೇಹಿಸಿತ್ತು ಕಾಣಾ ಮಹಾಗುರು ಶಾಂತೇಶ್ವರಪ್ರಭುವೆ.
ಈಕೆ ಶರಣ ದಸರಯ್ಯನ ಪತ್ನಿ. ಕಾಲ-೧೧೬೦. 'ಗುರು ಶಾಂತೇಶ್ವರ' ಅಂಕಿತದಲ್ಲಿ ಐದು ವಚನಗಳು ದೊರೆತಿವೆ. ಮನದ ಚಂಚಲತೆ, ಶರಣನ ನಿಲುವು, ವ್ರತನಿಷ್ಠೆ, ಪಾದೋದಕ-ಪ್ರಸಾದ ಮಹತ್ವ ಈ ವಚನಗಳಲ್ಲಿ ಪ್ರತಿಪಾದಿತವಾಗಿದೆ.
೭೮೩
ಪರಿಪೂರ್ಣನಲ್ಲ, ಪ್ರದೇಶಿಕನಲ್ಲ,
ನಿರತಿಶಯದೊಳತಿಶಯ ತಾ ಮುನ್ನಲ್ಲ.
ಶರಣನಲ್ಲ, ಐಕ್ಯನಲ್ಲ, ಪರಮನಲ್ಲ, ಜೀವನಲ್ಲ,
ನಿರವಯನಲ್ಲ, ಸಾವಯನಲ್ಲ;
ಪರವಿಹವೆಂಬುಭಯದೊಳಿಲ್ಲದವನು.
ನಿರಾಲಯ ನಿಜಗುರು ಶಾಂತೇಶ್ವರನ ಶರಣನ ನಿಲವು
ಉಪಮೆಗೆ ತಾನನುಪಮ.
೭೮೧
ಗುರುಮುಖದಿಂದ ಬಂದುದೇ ಗುರುಪ್ರಸಾದ
ಆ ಪ್ರಸಾದವನು ಲಿಂಗಕ್ಕೆ ಅರ್ಪಿಸಿದಲ್ಲಿ ಲಿಂಗಪ್ರಸಾದ.
ಭೋಜ್ಯ ಕಟ್ಟಿ ಲಿಂಗಕ್ಕೆ ಕೊಟ್ಟು ಸಲಿಸುವುದೇ ಜಂಗಮಪ್ರಸಾದ.
ತತ್ತಸಾದಿಗಳಲ್ಲಿ ಯಾಚಿಸಿ,
ಅವರ ಪ್ರಸಾದವ ಕೊಂಬುದೆ ಪ್ರಸಾದಿಯ ಪ್ರಸಾದ.
ಅಪೇಕ್ಷೆಯಿಂದ ಸಲಿಸುವುದೇ ಆಪ್ಯಾಯನಪ್ರಸಾದ.
ಗುರುಲಿಂಗಜಂಗಮವ ಕಂಡು,
ಆ ಸಮಯದಲ್ಲಿ ತೆಗೆದು ಕೊಂಬುವುದೇ ಸಮಯಪ್ರಸಾದ.
ಪಂಚೇಂದ್ರಿಯಂಗಳಲ್ಲಿ ಪಂಚವಿಷಯ ಪದಾ ರ್ಥಂಗಳನು
ಪಂಚವಿಧಲಿಂಗಕ್ಕೆ ಸಮರ್ಪಣ ಮಾಡುವುದೇ
ಪಂಚೇಂದ್ರಿಯವಿರಹಿತಪ್ರಸಾದ.
ಮನವೇ ಲಿಂಗ, ಬುದ್ಭಿಯೇ ಶಿವಜ್ಞಾನ, ಚಿತ್ತವೇ ಶಿವದಾಸೋಹ,
ಅಹಂಕಾರದಲ್ಲಿ ಶಿವಚಿಂತನೆಯುಳ್ಳವನಾಗಿ
ಸಲಿಸಿದ್ದೇ ಅಂತಃಕರಣವಿರಹಿತಪ್ರಸಾದ.
ತ್ರಿವಿಧಾಂಗದಲ್ಲಿ ತ್ರಿವಿಧಲಿಂಗವ ಸಂಬಂದಿಸಿ
ಆ ಚಿದ್ಘನಲಿಂಗ ತಾನೆಂದರಿದು,
ಆ ತ್ರಿವಿಧಲಿಂಗಕ್ಕೆ ಕೊಡುವುದೇ ಸದ್ಭಾವಪ್ರಸಾದ.
ಬಹಿರಂಗದ ಪ್ರಪಂಚವ ನಷ್ಟಮಾಡಿ,
ಅರಿವುವಿಡಿದು ಸಲಿಸುವುದೇ ಸಮತಾಪ್ರಸಾದ.
ಶ್ರೀಗುರುವಿನ ಪ್ರಸನ್ನತ್ವವೆ ಜ್ಞಾನಪ್ರಸಾದ.
ಇಂತೀ ಏಕದಶ ಪ್ರಸಾದವನು ಒಳಹೊರಗೆ
ಪರಿಪೂರ್ಣಮಾಗಿ ತಿಳಿಯುವುದೆ ಶಿವತಂತ್ರ,
ಗುರುಶಾಂತೇಶ್ವರಾ.
*