*
೩೮೩
ಅವಿಚಾರತೆಯಿಂ ಲೋಕದ ಜಡಮಾನವರಿಗೆ
ಎರಗದಿಹುದುಳ್ಳೊಡೆ,
ಶಿವಲಿಂಗದ ಮಸ್ತಕದಲ್ಲಿ ಧರಿಸುವದೀ ಕ್ರಮವರಿದು.
ಧರಿಸಿದವರು ಶಿವತತ್ತ್ವದ ಮೂಲಜ್ಞಾನದ
ಸಂಭವಸಂಧಿಗಳೆನಿಸುವರಾ
ನಿಜಮಹಿಮರ ಚರಣಕೆ ಶರಣೆಂಬೆನು
ಸದ್ಗುರುವೆ, ಪುರದ ಮಲ್ಲಯ್ಯಾ.
ತನ್ನ ಹೆಸರನ್ನೇ ಅಂಕಿತವಾಗಿ ಬಳಸಿಕೊಂಡ ಈತನ ಜೀವನ ಕುರಿತು ಯಾವುದೇ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ.
ಕಾಲ ೧೪೦೦. ನಾಲ್ಕು ವಚನಗಳು ದೊರೆತಿವೆ. ಮನದ ಚಂಚಲತ, ಶಿವಭಕ್ತಿಯ ನಿಲುವು ಅವುಗಳಲ್ಲಿ ವ್ಯಕ್ತವಾಗಿವೆ.
೩೮೪
ಎನ್ನ ಪಾದವೆ ಪದಶಿಲೆಯಾಗಿ
ಎನ್ನ ಕಲೆ ಕಡಹದ ಕಂಬಂಗಳಾಗಿ
ಎನ್ನ ತೋಳೆ ನಾಗವೇದಿಕೆಯಾಗಿ
ಎನ್ನ ಅಸ್ಥಿಯೆ ಸುತ್ತಳ ಜಂತಿಯಾಗಿ
ಎನ್ನ ಅಧರವೆ ಒಳಬಾಗಿಲಾಗಿ
ಎನ್ನ ಗುರುಕರುಣವೆ ಲಿಂಗವಾಗಿ
ಎನ್ನ ಅಂಗವೆ ರಂಗಮಧ್ಯವಾಗಿ
ಎನ್ನ ಹೃದಯಕಮಲವೆ ಪೂಜೆಯಾಗಿ
ಎನ್ನ ಕಿವಿಗಳೆ ಕೀರ್ತಿಮುಖವಾಗಿ
ಎನ್ನ ನೆನವ ನಾಲಗೆಯ ಘಂಟೆಯಾಗಿ
ಎನ್ನ ಶಿರವೆ ಸುವರ್ಣದ ಕಳಸವಾಗಿ
ಎನ್ನ ನಯನವೆ ಕುಂದದ ಜ್ಯೋತಿಯಾಗಿ
ಎನ್ನ ಚರ್ಮವೆ ನಿರ್ಮಲ ಹೊದಕೆಯಾಗಿ
ಎನ್ನ ನೆನಹೆ ನಿಮಗೆ ಉಪಾಹಾರವಾಗಿ
ಗುರುಪುರದ ಮಲ್ಲಯ್ಯನಿದ್ದನಾಗಿ!
೩೮೫
ಗುರು ಭಕ್ತನಲ್ಲ, ವಿರಕ್ತನಲ್ಲ,
ನಿಶ್ಚಿಂತೆಯಲ್ಲ, ದುಶ್ಚಿಂತೆಯಲ್ಲ,
ದಿಟವೆಂಬುದಿಲ್ಲ, ಡಂಬುಳದೆಲ್ಲಾ
ಏನೆಂಬೆ! ಎನ್ನ ಮನವೆಯ್ದೆ ಹೊಲ್ಲ.
ಎನಗೊಡೆಯರಿಲ್ಲ, ನಿಮ್ಮ ಬಿಡುವುದಿಲ್ಲ,
ಸದ್ಗುರುವೆ ನೀ ಕರುಣಿಸು ಪುರದ ಮಲ್ಲಯ್ಯಾ.
೩೮೬
ಹೊತ್ತಿಂಗೊಂದು ಪರಿಯಹ ಮನವ ಕಂಡು
ದಿನಕ್ಕೊಂದು ಪರಿಯಹ ತನುವ ಕಂಡು
ಅಂದಂದಿಗೆ ಭಯದೋರುತ್ತಿದೆ.
ಒಂದು ನಿಮಿಷಕ್ಕನಂತವನೆ ನೆನೆವ ಮನವ ಕಂಡು
ಅಂದಂದಿಂಗೆ ಭಯವಾಗುತ್ತಿದೆ.
ಈ ಮನ ನಿಮ್ಮ ನೆನೆಯಲೀಯದು,
ಮನ ಹಗೆಯಾದುದಯ್ಯಾ
ಸದ್ಗುರುವೆ ಪುರದ ಮಲ್ಲಯ್ಯಾ!
*