*
ಅಂಕಿತ: |
ಚನ್ನಬಸವಣ್ಣ ಪ್ರಿಯ ಭೋಗ ಮಲ್ಲಿಕಾರ್ಜುನ |
೩೩
ಒಂದೆಂದಡೆ ಬೆಸ, ಎರಡೆಂದಡೆ ಸರಿ ಎಂಬ ಭೇದದಂತೆ
ದ್ವೈತ ಅದ್ವೈತಗಳ ವಿವರ :
ಎಷ್ಟು ಲೆಖ್ಖದಲ್ಲಿ ಸಮಗಂಡು ಬಪ್ಪಲ್ಲಿ ದ್ವೈತ.
ಹೆಚ್ಚುಗೆಯಲ್ಲಿ ಬಪ್ಪಲ್ಲಿ ಅದ್ವೈತ.
ಇಂತೀ ಉಭಯದ ಸಂದನಳಿದಲ್ಲಿ ಸ್ವಯ ಸ್ವಯಂಭು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
ಈತನ ಜೀವನ ವಿವರ ತಿಳಿದಿಲ್ಲ ಕಾಲ ೧೧೬೦ ಅಂಕಿತ ಚೆನ್ನಬಸವಣ್ಣಪ್ರಿಯ ಭೋಗ ಮಲ್ಲಿಕಾರ್ಜುನಲಿಂಗ. ೧0೩ ವಚನಗಳು ದೊರೆತಿವೆ. ತತ್ವಭೋದೆ ಪ್ರಧಾನವಾಗಿದೆ. ಶರಣಸ್ತುತಿ, ಭಕ್ತನ ಲಕ್ಷಣ, ಲಿಂಗಾಂಗ ಸಾಮರಸ್ಯದ ಸ್ವರೂಪ, ವೇದ ಆಗಮಶಾಸ್ತ್ರ ಪುರಾಣಗಳ ನಿರಾಕರಣೆ ಇತ್ಯಾದಿಗಳ ವಿವರ ಬಂದಿದೆ. ಕೆಲವು ವಚನಗಳು ದೀರ್ಘವಾಗಿದ್ದು, ಗದ್ಯದ ಗುಣವನ್ನು ಹೊಂದಿವೆ.
೩೧
ಐಕ್ಯಸ್ಥಲದ ಲೇಪಜ್ಞಾನ ವಿವರ :
ಅಪ್ಪು ಆವಾವ ಪಾಕಕ್ಕೂ ತಪ್ಪದೆ ಸಾರವ ಕೊಡುವಂತೆ
ತಥ್ಯಮಿಥ್ಯವಾದ ದ್ರವ್ಯಕ್ಕೆ ಹೆಚ್ಚುಕುಂದನರಿಯದಿಪ್ಪಂತೆ
ವಾಯು ಸುಗುಣ ದುರ್ಗುಣವೆನ್ನದೆ
ತನ್ನಯ ಸಹಜದಿಂದ ಸಂಚರಿಸುವಂತೆ
ಅಗ್ನಿಗೆ ಕಾಷ್ಠ ಸರಿಸ ಡೊಂಕೆನ್ನದೆ ಮಲಿನ ಅಮಲಿನವೆನ್ನದೆ
ಆವ ದ್ರವ್ಯ ದೃಷ್ಟದಲ್ಲಿ ಸಿಕ್ಕಿದಡೂ
ಭೇದಿಸಿ ವೇಧಿಸಿ ಸುಡುವುದಾಗಿ.
ಇಂತಿವು ತ್ರಿವಿಧಸ್ಥಲದಂತೆ ಇಪ್ಪುದು ಐಕ್ಯನ ಅರ್ಪಿತ ಸ್ಥಲಭೇದ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
ಬಸವಣ್ಣ, ಚನ್ನಬಸವಣ್ಣ, ಸಿದ್ಧರಾಮ, ಮಡಿವಾಳ ಮಾಚಯ್ಯ, ಪ್ರಭು - ಇವರನ್ನು ಪೂಜಿಸಿ ಧನ್ಯನಾದೆ ಎನ್ನುವನು. ಏಕೊತ್ತರ ಶತಸ್ಥಲದ ಉಲ್ಲೇಖ ಮಾಡಿರುವನು. ದೀಕ್ಷೆಯ ಬಗೆಗೆ ಹಲವು ವಚನಗಳಲ್ಲಿ ಹೇಳಿರುವನು. ದ್ವೈತಾದ್ವೈಗಳನ್ನು ನಿನ್ನಲ್ಲಿಯೇ ನೀನು ತಿಳಿಯುವ ಪ್ರಯತ್ನ ಮಾಡು ಎನ್ನುವನು . ಕುಂದಣಕ್ಕೆ ಗಂಧ ಕೂಡಿದಂತೆ ನುಡಿನಡೆ ಏಕವಾಗಲು ನೀನೇ ಪರಮಾತ್ಮನಾಗುವೆ ಎನ್ನುವನು. ವೇದ ಶಾಸ್ತ್ರ ಪುರಾಣ ಆಗಮಗಳಿಂದ ಹಾದಿಯನ್ನು ಕಂಡುಕೊಳ್ಳುತ್ತೇನೆಂದರೆ, ಅವು ಸಂದೇಹದ ಸಂದು ಎನ್ನುವನು. ಚತುರಾಚಾರ್ಯರ ಉಲ್ಲೇಖವನ್ನು ವಚನವೊಂದರಲ್ಲಿ ಮಾಡಿರುವನು. ಚಾತುರ್ವರ್ಣ್ಯಗಳ ಉಗಮದ ಪ್ರಸ್ತಾಪವನ್ನು ಒಂದು ವಚನದಲ್ಲಿ ಮಾಡಿರುವನು.
೨೮
ಎನ್ನ ಹೃದಯಕಮಲವೆ ಬಸವಣ್ಣನಯ್ಯಾ.
ಎನ್ನ ಕಂಠವೆ ಚನ್ನಬಸವಣ್ಣನಯ್ಯಾ.
ಎನ್ನ ನಯನದ ದೃಕ್ಕೆ ಸಿದ್ಭರಾಮನಯ್ಯಾ.
ಎನ್ನ ಲಲಾಟವೆ ಮಡಿವಾಳಯ್ಯನಯ್ಯಾ.
ಎನ್ನ ಶಿರವೆ ಪ್ರಭುದೇವರಯ್ಯಾ.
ಇಂತೀ ಐವರ ಶ್ರೀಪಾದವನು
ತ್ರಿಕಾಲದಲ್ಲಿ ಅರ್ಚಿಸಿ ಪೂಜಿಸಿ ನಿಶ್ಚಿಂತನಾದೆನಯ್ಯಾ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ.
೯೫
ವೇದದ ಉತ್ತರವ ವಿಚಾರಿಸಿ, ಶಾಸ್ತ್ರದ ಸಂದೇಹವ ನಿಬದ್ಧಿಸಿ
ಪುರಾಣದ ಅಭಿಸಂಧಿಯ ತಿಳಿದು
ಇಂತಿವು ಮೊದಲಾದ ಆಗಮಂಗಳಲ್ಲಿ ಚಿಂತಿಸಿಯೆ ನೋಡಿ
ಸಕಲಯುಕ್ತಿ ಶಬ್ದಸೂತ್ರಂಗಳಲ್ಲಿ ಪ್ರಮಾಣಿಸಿಯೆ ಕಂಡು
ಮಾತುಗಂಟಿತನದಲ್ಲಿ ತರ್ಕಶಾಸ್ತ್ರಂಗಳಿಗೆ ಹೋಗದೆ
ಪಂಚವಿಂಶತಿತತ್ವದೊಳಗಾದ ಆಧ್ಯಾತ್ಮ ಆದಿಭೌತಿಕವ ತಿಳಿದು
ಪಂಚಭೂತಿಕದ ಸಂಚಿತ ಪ್ರಾರಬ್ಧ ಆಗಾಮಿಗಳ ಸಂಚಿನ ಸಂಕಲ್ಪವ ತಿಳಿದು
ಪೃಥ್ವಿತತ್ವದ ಮಲ, ಅಪ್ಪುತತ್ವದ ಸಂಗ, ತೇಜತತ್ವದ ದಗ್ಧ,
ವಾಯುತತ್ವದ ಸಂಚಲ, ಆಕಾಶತತ್ವದ ಬಹುವರ್ಣಕೃತಿ.
ಇಂತೀ ಪಂಚಭೂತಿಕಂಗಳಲ್ಲಿ ತಿಳುವಳವಂ ಕಂಡು
ಕರಂಡದಲ್ಲಿ ನಿಂದ ಗಂಧದಂತೆ ತನ್ನಂಗವಿಲ್ಲದೆ
ಗಂಧ ತಲೆದೋರುವಂತೆ ವಸ್ತುಘಟಭೇದವಾದ ಸಂಬಂಧ.
ಇಂತೀ ತೆರನ ತಿಳಿದು ವಾಗ್ವಾದಂಗಳಲ್ಲಿ ಹೋರಿಹೆನೆಂದಡೆ
ಮಹಾನದಿಯ ವಾಳುಕದ ಮರೆಯ ನೀರಿನಂತೆ ಚೆಲ್ಲಿ ಕಂಡೆಹೆನೆಂದಡೆ
ಆ ನದಿವುಳ್ಳನ್ನಕ್ಕ ಕಡೆಗಣಿಸಬಾರದು.
ನಿಂದಲ್ಲಿ ಪ್ರಮಾಣುವಿಂದಲ್ಲದೆ ಮೀರಿ ತುಂಬದಾಗಿ
ಇಂತೀ ಶ್ರುತ್ಯರ್ಥವಿಚಾರದಿಂದ ಹಾಕಿದ ಮುಂಡಿಗೆ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾಯೆಂದು.
೯೭
ವೇದವೆಂಬುದು ವಾದ, ವೈದಿಕತ್ವ ಮಾಯಾಭೇದ.
ದೇವತಾ ದೇವತೆ ಕುಲ ಋಷಿ ಪ್ರಯೋಗಯಾಗಕ್ರಮ
ದಿಗ್ವಳಯ ಬಂಧನ, ಗ್ರಹಸಂಬಂಧಯೋಗ.
ಇಂತಿವು ಮೊದಲಾದ ಕರ್ಮಂಗಳಲ್ಲಿ ವ[ತಿರ್]ಸಿ ನಿಂದ ಸ್ವಯವಾವುದು ?
ಧರ್ಮಶಾಸ್ತ್ರವ ತಿಳಿದು, ಶಿಲ್ಪ ವೈದಿಕ ಜೋಯಿಸ
ಇವು ಮುಂತಾದ ನಾನಾ ಭೇದಂಗಳ ಹೇಳಿ
ತನ್ನ ಅಳಿವು ಉಳಿವು ಕಂಡುದಿಲ್ಲ.
ಪುರಾಣವನೋದಿ ಕೆಲರ್ಗೆ ಹೇಳಿ
ಪೂರ್ವಯಾಕಥನ ಮುಂತಾದ ರಾಮರಾವಣಾದಿಗಳು
ಚಕ್ರವರ್ತಿಗಳು ಮುಂತಾದ ಧರ್ಮಕರ್ಮಂಗಳನೋದಿ
ಬೋಧಿಸಿದಲ್ಲಿಯೂ ಸಫಲವಾದುದಿಲ್ಲ.
ಇಂತಿವನ್ನೆಲ್ಲವನರಿತು, ಉಭಯಸಂಧಿಯ ಉಪೇಕ್ಷಿಸಿದಲ್ಲಿ
ಬಿಡುಮುಡಿ ಉಭಯದ ಭೇದವ ತಾನರಿತು
ಮಲತ್ರಯಕ್ಕೆ ದೂರಸ್ಥನಾಗಿ
ತ್ರಿವಿಧಾತ್ಮಕ್ಕೆ ಅಳಿವು ಉಳಿವನರಿತು
ಆರಾರ ಮನ ಧರ್ಮಂಗಳಲ್ಲಿ ಭೇದವಿಲ್ಲದೆ ನುಡಿದು
ಅಭೇದ್ಯಮೂರ್ತಿಯ ತೋರಿ, ವಿಭೇದವ ಬಿಡಿಸಿ
ತರಣಿಯ ಕಿರಣದಂತೆ, ವಾರಿಯ ಸಾರದಂತೆ
'ಖಲ್ವಿದಂ ಬ್ರಹ್ಮವಸ್ತು'ವೆಂದಲ್ಲಿ, ಏಕಮೇವನದ್ವಿತೀಯನೆಂದಲ್ಲಿ
'ಓಂ ಭರ್ಗೋ ದೇವಸ್ಯ ಧೀಮಹಿ' ಯೆಂದಲ್ಲಿ
ಆದಿ ಪರಮೇಶ್ವರನೆಂದಲ್ಲಿ, ಆದಿ ಪುರುಷೋತ್ತಮನೆಂದಲ್ಲಿ
ಆರಾರ ಭೇದಕ್ಕೆ ಭೇದ.
ತ್ರಿಮೂರ್ತಿಗಳ ಜಗಹಿತಾರ್ಥವಾಗಿ
ಸಂಶಯಸಿದ್ಧಿಯಿಂದ ತಿಳಿವುದು.
ಸರ್ವಶಾಸ್ತ್ರದಿಂದ ಈ ಗುಣವಾಚಕರಿಗೆ
ದೂಷಣದಿಂದ ನುಡಿವರಿಗೆ ಹಾಕಿದ ಮುಂಡಿಗೆ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾ ಎಂಬೆನು.
*