Previous ಹೊಡೆಹುಲ್ಲ ಬಂಕಣ್ಣ ವೇದಮೂರ್ತಿ ಸಂಗಣ್ಣ Next

ಸಗರದ ಬೊಮ್ಮಣ್ಣ

*
ಅಂಕಿತ: ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರ

ಹೂವ ಕೊಯ್ಯುವರಲ್ಲದೆ, ಹೂವಿನ ಗಂಧವ ಕೊಯ್ದವರುಂಟೆ ಅಯ್ಯಾ?
ಮಾತನಾಡುವರಲ್ಲದೆ, ಮಾತಿನ ಭೇದದ ವಾಸನೆಯ ಕಂಡವರುಂಟೆ ಅಯ್ಯಾ?
ಇದು ನೀತಿಯ ಒದಗು,
ಕ್ರೀಯ ನಿಹಿತವಾಗಿ ಮಾಡುವಲ್ಲಿ ಭಾವಶುದ್ಧವಾಗಿರಬೇಕು.
ಮಾತನರಿದಾಡುವಲ್ಲಿ, ಮಾತಿನ ರೀತಿಗೆ ತಾ ಒದಗು ನಿಹಿತವಾಗಿರಬೇಕು.
ಅದು ಕೂಟಸ್ಥ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ. /೫೯೨

ಗುಲಬರ್ಗಾ ಜಿಲ್ಲೆಯ ಸಗರ ಗ್ರಾಮಕ್ಕೆ ಸೇರಿದ ಈತ ಗಣಾಚಾರ ಪ್ರವೃತ್ತಿಯ ಶರಣ. ಹೆಂಡತಿ ಶಿವದೇವಿ. ಕಾಲ-1160. ಈತ ಜೈನರೊಡನೆ ಹೋರಾಡಿ ಶಿವಪಾರಮ್ಯವನ್ನು ಮೆರೆಯುತ್ತಾನೆ. 'ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರ' ಅಂಕಿತದಲ್ಲಿ ೯೧ ವಚನಗಳು ದೊರಕಿವೆ. ಬೆಡಗು ಪ್ರಧಾನವಾದ ಅವುಗಳಲ್ಲಿ ತಾತ್ವಿಕತೆಗೆ ಆದ್ಯತೆ ದೊರೆತಿದೆ.

ವಿಷ ಕೊಲುವಲ್ಲಿ, ಹಾವೇನ ಮಾಡುವುದು ?
ಉಂಬ ಅಶನ ನಂಜಾಗಿಹಲ್ಲಿ, ಇಕ್ಕಿದವಳಿಗೆ ಅಂಜಿಕೆಯುಂಟೆ ?
ತನ್ನ ಇಂದ್ರಿಯ ತನ್ನ ತಿಂಬಲ್ಲಿ,
ವಸ್ತುವಿನ ಮೇಲೆ ಹಂಗ ಹಾಕುವ ಭಂಡರಿಗೆ ಇಲ್ಲಾಯೆಂದೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು. /೫೭೮

ಶಕ್ತಿಯಂಗದ ಯೋನಿಯಲ್ಲಿ ಶುಕ್ಲ ಸೋರಿ,
ಬೆಚ್ಚು ಪುತ್ತಳಿಯಾದ ಠಾವಾವುದು ?
ಕೂಡಿದನಪ್ಪ, ಕೂಡಿಸಿಕೊಂಡಳವ್ವೆ.
ಉಭಯದ ಯೋಗದಿಂದಾದ ಮತ್ತೆ ಬ್ರಹ್ಮನ ಅಗಡವೇಕೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ? /೫೭೯

ಶಿವನಲ್ಲದೆ ಅನ್ಯದೈವವಿಲ್ಲವೆನ್ನುವ ವೀರನಿಷ್ಠೆ. ಜೈನರೊಡನೆ ಹೋರಾಡಿ ಶಿವಪಾರಮ್ಯ ಮೆರೆಯುವನು. ಕಾವ್ಯಮಯವಾದ ಬೆಡಗಿನ ವಚನಗಳಿವೆ. ಭಕ್ತಿಯ ಮಹತ್ವ, ದೈವಾನುಗ್ರಹ, ಮಾನವ ಜನ್ಮದ ಹಿರಿಮೆ ಹೇಳಿರುವನು.

ಕಂಗಳಸೂತಕ ಹೋಯಿತ್ತು, ನಿಮ್ಮಂಗದ ದರ್ಶನದಿಂದ.
ಮನದ ಸೂತಕ ಹೋಯಿತ್ತು, ನಿಮ್ಮ ನೆನಹು ವೇಧಿಸಿ.
ಸಕಲಸೋಂಕಿನ ಭ್ರಾಂತು ಬಿಟ್ಟಿತ್ತು, ನಿಮ್ಮ ಹಿಂಗದ ಅರಿಕೆಯಲ್ಲಿ.
ಇಂತೀ ನಾನಾವಿಧದ ಭೇದೋಪಭೇದಂಗಳೆಲ್ಲವು,
ನಿಮ್ಮ ಕಾರುಣ್ಯದಲ್ಲಿಯೆ ಲಯ,
ಸಗರದಬೊಮ್ಮನೊಡೆಯ ತನುಮನ ಸಂಗಮೇಶ್ವರಾ. /೫೧೮

ಅಡುವಳ ಕೈ ಉಳಿದು, ಅಡದವಳ ಕೈ ಬೆಂದಿತ್ತು.
ಮನೆಯೊಡೆಯ ನೆರವಿಗನಾಗಿ, ಪರವನೊಡೆಯನಾದ.
ಅನ್ನಿಗ ತನ್ನವನಾದ, ತನ್ನ ತಾನರಿತ ಕಾರಣ.
ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರ ಲಿಂಗವನರಿತ ಕಾರಣ. /೫೦೪

ಪರಿವಿಡಿ (index)
*
Previous ಹೊಡೆಹುಲ್ಲ ಬಂಕಣ್ಣ ವೇದಮೂರ್ತಿ ಸಂಗಣ್ಣ Next