ಪ್ರಥಮ ಶೂನ್ಯ ಪೀಠಾಧ್ಯಕ್ಷ ಅಲ್ಲಮಪ್ರಭು

*

ಅಲ್ಲಮಪ್ರಭು ದೇವ

ಅಂಕಿತ: ಗುಹೇಶ್ವರ
ಕಾಯಕ: ಶೂನ್ಯ ಪೀಠಾಧ್ಯಕ್ಷ ,ಜಂಗಮ

ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,
ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ !
ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು.
ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ ?
ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ ?
ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು
ಬದುಕಿದೆನು ಕಾಣಾ ಸಿದ್ಧರಾಮಯ್ಯಾ.

ಆಯಿತ್ತು ಬಸವಾ ನಿನ್ನಿಂದ ಗುರುಸ್ವಾಯತವೆನಗೆ.
ಆಯಿತ್ತು ಬಸವಾ ನಿನ್ನಿಂದ ಲಿಂಗಸ್ವಾಯತವೆನಗೆ.
ಆಯಿತ್ತು ಬಸವಾ ನಿನ್ನಿಂದ ಜಂಗಮಸ್ವಾಯತವೆನಗೆ.
ಆಯಿತ್ತು ಬಸವಾ ನಿನ್ನಿಂದ ಪ್ರಸಾದಸ್ವಾಯತವೆನಗೆ.
ಇಂತೀ ಚತುರ್ವಿಧ ಸ್ವಾಯತವನು ನೀನೆ ಮಾಡಿದೆಯಾಗಿ
ನಮ್ಮ ಗುಹೇಶ್ವರಲಿಂಗಕ್ಕೆ ವಿಳಾಸವಾದೆಯಲ್ಲಾ ಸಂಗನಬಸವಣ್ಣಾ.

ಅಲ್ಲಮಪ್ರಭುವಿನ ಮೇರುಸದೃಶ ವ್ಯಕ್ತಿತ್ವಕ್ಕೆ ಮಾರು ಹೋದ ಕನ್ನಡ ಕವಿಗಳು ಅವನ ಚರಿತ್ರೆಯನ್ನು ತಮ್ಮ ದೃಷ್ಟಿ-ದ್ಯೇಯತಳಿಗನುಗುಣವಾಗಿ ಬೇರೆ ಬೇರೆಯಾಗಿ ನಿರೂಪಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಎರಡು ಸಂಪ್ರದಾಯಗಳನ್ನು ಗುರುತಿಸಬಹುದಾಗಿದೆ. ಒಂದು ಹರಿಹರನ ಸಂಪ್ರದಾಯ ಇನ್ನೊಂದು ಚಾಮರಸನ ಸಂಪ್ರದಾಯ.

ಅಲ್ಲಮ ಹುಟ್ಟಿದ್ದು ಈಗಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಒಂದು ಚಿಕ್ಕ ಹಳ್ಳಿಯಾಗಿರುವ ಬಳ್ಳಿಗಾವಿಯಲ್ಲಿ. ಹನ್ನೆರಡನೆಯ ಶತಮಾನದಲ್ಲಿ ಇದು ಬನವಾಸೆಯ ಹನ್ನೆರಡುಸಾವಿರ ಎಂಬ ದೊಡ್ಡ ಆಡಳಿತ ವಿಭಾಗದ ಮುಖ್ಯ ಸ್ಥಳವಾಗಿತ್ತು, ಕಾಳಾಮುಖ ಶೈವರ ಕೇಂದ್ರಸ್ಥಾನವಾಗಿತ್ತು. ಅಲ್ಲಮನ ತಂದೆಯ ಹೆಸರನ್ನು ಹರಿಹರ ಹೇಳಿಲ್ಲ, ಆದರೆ ಅವನು ನಾಗವಾಸಾಧಿಪತಿಯಾಗಿದ್ದನೆಂಬ ಸೂಚನೆಯನ್ನು ಕೊಡುತ್ತಾನೆ. ಚಾಮರಸನ ಪ್ರಕಾರ ಅಲ್ಲಮಪ್ರಭುವಿನ ತಂದೆ-ತಾಯಿಗಳ ಹೆಸರು ನಿರಹಂಕಾರ-ಸುಜ್ಞಾನಿ. ಅಲ್ಲಮನ ಬಾಲ್ಯಜೀವನದ ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬರುವುದಿಲ್ಲ. ದೇವಸ್ಥಾನದಲ್ಲಿ ಮದ್ದಳೆ ಸೇವೆ ಸಲ್ಲಿಸುತ್ತಿದ್ದ ಅವನು ಪ್ರಾಯಕ್ಕೆ ಬಂದಾಗ ಮದ್ದಳೆ ನುಡಿಸುವ ಕಲೆಯಲ್ಲಿ ತುಂಬಾ ಪ್ರಾವೀಣ್ಯ ಪಡೆದುದನ್ನು ಎರಡೂ ಸಂಪ್ರದಾಯಗಳು ಒಪ್ಪಕೊಳ್ಳುತ್ತವೆ. ಆ ಕಲಾಪ್ರದರ್ಶನದಿಂದಾಗಿಯೇ ಅವನ ಜೀವನದಲ್ಲಿ ಹೆಣ್ಣೊಂದರ ಪ್ರವೇಶವಾಗುತ್ತದೆ. ಹರಿಹರನ ಪ್ರಕಾರ ಆ ಹೆಣ್ಣು ಕಾಲಮತೆಯಾದರೆ, ಚಾಮರಸನ ಪ್ರಕಾರ ಅವಳು ಮಾಯಾದೇವಿ. ತನ್ನನ್ನು ಕೂಡಿಕೊಳ್ಳಲು ಹಲವಂದದಿಂದ ಪ್ರಯತ್ನಿಸುತ್ತಿದ್ದ ಮಾಯಾದೇವಿಯನ್ನು ತಿರಸ್ಕರಿಸಿ ಮಾಯಾಕೋಲಾಹಲನಾದಾಗ ಅಲ್ಲಮನ ಜೀವನ ಹೊಸ ದಿಕ್ಕನ್ನು ಹಿಡಿಯಿತೆಂದು ಚಾಮರಸ ಪ್ರತಿಪಾದಿಸಿದ್ದಾನೆ.

ಅನಿಮಿಷದೇವ ಅಲ್ಲಮನ ಗುರು, ಹರಿಹರ, ಚಾಮರಸ, ಶೂನ್ಯಸಂಪಾದನಾಕಾರರು ಇದನ್ನು ಒಪ್ಪಿಕೊಳ್ಳುತ್ತಾರೆ. ಸ್ವತಃ ಅಲ್ಲಮನ ವಚನಗಳು ಇದಕ್ಕೆ ಆಧಾರ ಒದಗಿಸುತ್ತವೆ. ಅಲ್ಲಮನ ಜೀವನದಲ್ಲಿ ಅನಿಮಿಷ ಗುರುವಿನ ಸಂದರ್ಶನ ಒಂದು ತುಂಬಾ ಪ್ರಮುಖವಾದ ಘಟ್ಟ. ಇಲ್ಲಿಂದ ಮುಂದೆ ಅವನು ನಡೆಸಿದ ಸಾಧನೆ ಅವನನ್ನು ಒಬ್ಬ ದೊಡ್ಡ ಅನುಭಾವಿಯನ್ನಾಗಿ ಮಾಡುವ ಜೊತೆಗೆ, ಬಸವಣ್ಣನವರು ಕೈಗೆತ್ತಿಕೊಂಡ ಸರ್ವವ್ಯಾಪಿ ಕ್ರಾಂತಿಯ ವುವುಧ ಹಂತಗಳಲ್ಲಿ ಮುಖ್ಯವಾಗಿ ಆಧ್ಯಾತ್ಮಕ್ಕೆ ಸಂಬಂದಿಸಿದಂತೆ ಮಾರ್ಗದರ್ಶನ ನೀಡಿದ ಕ್ಷಮತೆಯುಳ್ಳದಾಗಿದೆ.

ಕುಂಡಲಿಗನ ಕೀಟದಂತೆ, ಮೈ ಮಣ್ಣಾಗದಂತೆ
ಇದ್ದೆಯಲ್ಲಾ ಬಸವಣ್ಣಾ..
ಜಲದೊಳಗಣ ತಾವರೆಯಂತೆ ಹೊದ್ದಿಯೂ ಹೊದ್ದದಂತೆ
ಇದ್ದೆಯಲ್ಲಾ ಬಸವಣ್ಣಾ..
ಜಲದಿಂದಲಾದ ಮೌಕ್ತಿಕದಂತೆ,
ಜಲವು ತಾನಾಗದಂತೆ ಇದ್ದೆಯಲ್ಲಾ ಬಸವಣ್ಣಾ..
ಗುಹೇಶ್ವರಲಿಂಗದ ಆಣತಿವಿಡಿದು,
ತನುಗುಣ ಮತ್ತರಾಗಿದ್ದ ಐಶ್ವರ್ಯಾಂಧಕರ
ಮತವನೇನ ಮಾಡಬಂದೆಯಯ್ಯಾ, ಸಂಗನ ಬಸವಣ್ಣಾ ?

ಅಪ್ರತಿಮ ಅನುಭಾವಿಯಾಗಿದ್ದ ಪ್ರಭುದೇವ ತನ್ನಷ್ಟಕ್ಕೆ ತಾನು ಎಲ್ಲಿಯೋ ಗುಹಾವಾಸಿಯಾಗಿದ್ದು, ತನ್ನೊಬ್ಬನ ಉದ್ದಾರವನ್ನು ಮಾತ್ರ ಬಯಸದೆ, ಲೋಕದ ಇತರ ಸಾಧಕರ ಹಾಗೂ ಜನಸಾಮಾನ್ಯರ ಬಗ್ಗೆ ಕಾಳಜಿವಹಿಸಿ, ಅವರತ್ತ ಗಮನ ಹರಿಸಿದುದು ಆ ಕಾಲದ ಉಳಿದ ಯೋಗಸಿದ್ದರಿಂದ ಅವನನ್ನು ವಿಶಿಷ್ಟವಾಗಿಸುತ್ತದೆ. ಪ್ರಭುದೇವನಲ್ಲಿ ಕಂಡುಬರುವ ಇನ್ನೊಂದು ವಿಶೇಷತೆಯೆಂದರೆ ಸ್ವತಃ ತಾನೇ ಸಾಧಕರನ್ನು ಹುಡುಕಿಕೊಂಡು ಹೋಗಿ ಅವರಲ್ಲಿದ್ದ ಓರೆ ಕೋರೆಗಳನ್ನು ತಿದ್ದಿ, ಕುಂದು ಕೊರತೆಗಳನ್ನು ನೀಗಿಸಿ, ಅವರ ಸಾಧನೆ ಸಿದ್ಧಿಗಳನ್ನು ಪ್ರಶಂಸಿಸಿ ಮಾರ್ಗದರ್ಶನ ನೀಡಿದುದು. ವೀರಶೈವ(ಲಿಂಗಾಯತ) ನಿರಂಜನ ಜಂಗಮತ್ವಕ್ಕೆ ಪ್ರಭುದೇವನ ಜೀವನವೆ ಆದರ್ಶವೆಂಬುದರಲ್ಲಿ ಸಂದೇಹವಿಲ್ಲ.

ದೀನದಲಿತರನ್ನು ಸಂತೈಸುವ, ಅಜ್ಞಾನಿಗಳನ್ನು ಎಚ್ಚರಿಸುವ, ಆಧ್ಯಾತ್ಮ ಸಾಧನೆಯಲ್ಲಿ ತೊಡಗಿರುವ ಸಾಧಕರಿಗೆ ಸರಿಯಾದ ಮಾರ್ಗ ತೋರಿಸುವ ಲೋಕೊಪಕಾರದ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಲೋಕಸಂಚಾರಿಯಾದ ಪ್ರಭುದೇವನಿಂದ ಉಪಕೃತರಾದವರು ಹಲವಾರು ಜನ. ಅವರಲ್ಲಿ ಗೊಗ್ಗಯ್ಯ, ಮುಕ್ತಾಯಕ್ಕ, ಸಿದ್ಧರಾಮ, ಗೋರಕ್ಷ ಮೊದಲಾದ ಕೇಲವೆ ಜನ ಪ್ರಮುಖರ ವಿಷಯ ಕಾವ್ಯಾದಿಗಳಲ್ಲಿ ಬರುತ್ತದೆ.

ಬಸವಣ್ಣನವರು ಕೈಗೆತ್ತಿಕೊಂಡ ಮಹಾ ಆಂದೋಲನದ ಬಗ್ಗೆ ಪ್ರಭುದೇವನಿಗೆ ತುಂಬಾ ಕುತೂಹಲ. ಮನಸ್ಸು ತಡೆಯದೆ ಸಿದ್ಧರಾಮನೊಡಗೂಡಿ ಕಲ್ಯಾಣಕ್ಕೆ ಬಂದು ಅಲ್ಲಿ ಕೆಲಕಾಲವಿದ್ಧ. ವೀರಶೈವ(ಲಿಂಗಾಯತ) ತತ್ವದ ಬಗ್ಗೆ, ತತ್ವ-ತತ್ವಗಳಲ್ಲಿ ಸಮನ್ವಯ ಸಾದಿಸುವ ಬಗ್ಗೆ ಹಾಗೂ ಆದರ್ಶಸಮಾಜರಚನೆಯ ಬಗ್ಗೆ ಅನುಭವಮಂಟಪದಲ್ಲಿ ನಡೆಯತ್ತಿದ್ದ ಗೋಷ್ಠಿಗಳಲ್ಲಿ ಕೇಂದ್ರವ್ಯಕ್ತಿಯಾಗಿದ್ದು ಮಾರ್ಗದರ್ಶನ ನೀಡಿದ. ಬಸವಣ್ಣನವರು ಯೋಜಿಸಿದ ಆಂದೋಲನಕ್ಕೆ ತನ್ನ ಪೂರ್ಣ ಬೆಂಬಲವಿತ್ತ. ಕಲ್ಯಾಂಕ್ಕೆ ತನ್ನನ್ನು ಹುಡುಕಿಕೊಂಡು ಬಂದ ಮಹಾದೇವಿಯಕ್ಕನನ್ನು ವಿವಿಧ ಬಗೆಯ ಪ್ರಶ್ನೆ ಹಾಕುವ ಮೂಲಕ ಪರೀಕ್ಷಿಸಿ, ಅವಳ ವ್ಯಕ್ತಿತ್ವದ ಹಿರಿಮೆ-ಗರಿಮೆಗಳನ್ನು ಶಿವಶರಣರಿಗೆ ಪರಿಚಯಿಸಿದ. ಪ್ರಭುದೇವನಿಂದಾಗಿ ಸಿದ್ಧರಾಮನಂತಹ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಬಸವಣ್ಣನವರ ಕಾರ್ಯಕ್ಷೇತ್ರವನ್ನು ಪ್ರವೇಶಿಸುವಂತಾಗಿ ಬಸವಣ್ಣನವರ ಆಂದೋಲನಕ್ಕೆ ಒಂದು ಬಗೆಯ ಹೊಸಶಕ್ತಿ, ಹೊಸಚೇತನ ಬಂದಿತೆಂಬುದನ್ನು ಮರೆಯಲಾಗದು.

ಬಸವಣ್ಣನವರ ಕ್ರಾಂತಿಕಾರಕ ವಿಚಾರಗಳನ್ನು ಸಂಪ್ರದಾಯಬದ್ದ ಸಮಾಜ ಹಾಗೂ ರಾಜಸತ್ತೆ ಅರಗಿಸಿಕೊಳ್ಳಲಾರದೆ ಹೋಯಿತು. ನಡೆಯಬಾರದುದು ನಡೆದುಹೋಯಿತು. ಶರಣರೆಲ್ಲ ಕಲ್ಯಾಣವನ್ನು ಬಿಟ್ಟು ಚದುರಬೇಕಾಯಿತು. ಆ ಸಂದರ್ಭದಲ್ಲಿ ಪ್ರಭುದೇವ ಕಲ್ಯಾಣದಲ್ಲಿದ್ದ ಬಗ್ಗೆ ತಿಳಿಯದು. ಪ್ರಾಯಶಃ ಮುಂದಣ ಭೀಕರ ಪರಿಣಾಮವನ್ನರಿತ ಪ್ರಭುದೇವ ಶರಣರಿಗೆ ಎಚ್ಚರಿಕೆಯನ್ನಿತ್ತು, ತಾನೂ ಕಲ್ಯಾಣವನ್ನು ಬಿಟ್ಟಂತೆ ತೋರುತ್ತದೆ.

ಪ್ರಭುದೇವ ತನ್ನ ಕೊನೆಯ ದಿನಗಳನ್ನು ಶ್ರೀಶೈಲದಲ್ಲಿ ಕಳೆದನೆಂದು ಸಾಮಾನ್ಯವಾಗಿ ಎಲ್ಲ ಕೃತಿಗಳು ಒಂದಿಲ್ಲ ಒಂದು ರೀತಿಯಲ್ಲಿ ಸೂಚಿಸುತ್ತವೆ. ಇದು ಅಲ್ಲಮನು ಅಲ್ಲಮಪ್ರಭುವಾದ ಪ್ರಭುಲಿಂಗವಾದ ಸ್ಥೂಲಕಥೆ.

'ಬ' ಎಂಬಲ್ಲಿ ಎನ್ನ ಭವ ಹರಿಯಿತ್ತು.
'ಸ' ಎಂಬಲ್ಲಿ ಸರ್ವಜ್ಞನಾದೆನು.
'ವ' ಎಂಬಲ್ಲಿ ವಚಿಸುವಡೆ ಚೈತನ್ಯಾತ್ಮಕನಾದೆನು.
ಇಂತೀ ಬಸವಾಕ್ಷರತ್ರಯವೆನ್ನ ಸರ್ವಾಂಗದಲ್ಲಿ
ತೊಳಗಿ ಬೆಳಗುವ ಭೇದವನರಿದು
ಆನೂ ನೀನೂ 'ಬಸವಾ' 'ಬಸವಾ' 'ಬಸವಾ'
ಎನುತಿರ್ದೆವಯ್ಯಾ ಗುಹೇಶ್ವರಾ.

ಗ್ರಂಥ ಋಣ ಸಮಗ್ರ ವಚನ ಸಂಪುಟ
*
ಪರಿವಿಡಿ (index)
Previousಶರಣ ಶರಣೆಯರುಚನ್ನಬಸವಣ್ಣNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.