Previous ಅಗ್ಘವಣಿ ಹೊನ್ನಯ್ಯ ಅಜಗಣ್ಣ Next

ಆಗ್ಘವಣಿ ಹಂಪಯ್ಯ

*
ಅಂಕಿತ: ಹಂಪೆಯ ವಿರುಪ
ಕಾಯಕ: ಆಗ್ಘವಣಿಯನ್ನು (ಶುದ್ಧ ನೀರನ್ನು) ತಂದು ಭಕ್ತರಿಗೆ ಪೊರೈಸುವುದು.

ಹುಸಿಯ ನುಡಿಯನು ಭಕ್ತ, ವ್ಯಸನಕ್ಕೆಳಸನು ಭಕ್ತ,
ವಿಷಯಂಗಳಾತಂಗೆ ತೃಣವು ನೋಡಾ, ಬಯಸುವವನಲ್ಲ ಭಕ್ತ.
ದಯೆಯೆಂಬುದು ತನ್ನ ಕೈಯಲ್ಲಿ, ಸ್ಮರಣೆಯೆಂಬುದು ತನಗೆ
ತೊತ್ತಾಗಿಪ್ಪುದು.
ಕೋಪವೆಂಥದೆಂದರಿಯ, ತಾಪತ್ರಯಂಗಳು ಮುಟ್ಟಲಮ್ಮವು,
ವ್ಯಾಪ್ತಿಗಳಡಗಿದವು.
ಲಿಂಗವನೊಳಕೊಂಡ ಪರಿಣಾಮಿ.
ಆತನ ಪಥ ಲೋಕಕ್ಕೆ ಹೊಸತು, ಲೋಕದ ಪಥವಾತನಿಗೆ ಹೊಸತು.
ತನಗೊಮ್ಮೆಯು ಲಿಂಗಧ್ಯಾನ, ಲಿಂಗಕೊಮ್ಮೆಯು ತನ್ನ ಧ್ಯಾನ.
ಘನಘನಮಹಿಮೆಯ ಹೊಗಳಲೆನ್ನಳವಲ್ಲ.
ಪನ್ನಗಧರ ಕೇಳಯ್ಯಾ, ಚೆನ್ನ ಹಂಪೆಯ ವಿರುಪಯ್ಯಾ,
ನಿಮ್ಮ ನಂಬಿದ ಸತ್ಯಶರಣ ಪರಿಣಾಮಿ.

ಈತ ಕುಂತಳದೇಶದ ಮುಕುಂದಪುರ ನಿವಾಸಿ. ಕಾಯಕ - ಆಗ್ಘವಣಿಯನ್ನು (ಶುದ್ಧ ನೀರನ್ನು) ತಂದು ಭಕ್ತರಿಗೆ ಪೊರೈಸುವುದು. 'ಹಂಪೆಯ ವಿರುಪ' ಅಂಕಿತದಲ್ಲಿ ಬರೆದ ನಾಲ್ಕು ವಚನಗಳು ದೊರೆತಿವೆ. ಅವುಗಳಲ್ಲಿ ಪಂಚಾಕ್ಷರಿಮಂತ್ರದ ಮಹಿಮೆ, ಸದ್ಭಕತನ ಸ್ಥಿತಿ ನಿರೂಪಿತವಾಗಿವೆ.

ಹಂಸಪತಿ ಗರುಡಪತಿ ವೃಷಭಪತಿ
ಮೊದಲಾದ ಸರ್ವಜೀವಾಧಿಪತಿ
ದೇವರಾಯ ಮಹಾರಾಯನ ಅರಸುತನ ಹೊಸತು:
ಓಲಗಕ್ಕೆ ಬಾರ, ಸಿಂಹಾಸನದಲ್ಲಿ ಕುಳ್ಳಿರ,
ಸ್ತ್ರೀಲಂಪಟನಾಗಿ ಅಂತಃಪುರವ ಬಿಟ್ಟು ಹೊರವಂಡ.
ಕಪ್ಪಕಾಣಿಕೆಯನೊಪ್ಪಿಸಿಕೊಂಬವರಿಲ್ಲ,
ಗುರುವೆಂಬ ತಳವಾರನ ಆಜ್ಞೆ ಕೆಟ್ಟಿತ್ತು,
ತೆರೆದ ಬಾಗಿಲ ಮುಚ್ಚುವರಿಲ್ಲ,
ಮುಚ್ಚಿದ ಬಾಗಿಲ ತೆರೆವವರಿಲ್ಲ.
ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು,
ಭಕ್ತರೆಂಬವರಿನ್ನು ಬದುಕಲೇ ಬಾರದು.

ಪರಿವಿಡಿ (index)
*
Previous ಅಗ್ಘವಣಿ ಹೊನ್ನಯ್ಯ ಅಜಗಣ್ಣ Next