Previous ಆಯ್ಕಕ್ಕಿ ಮಾರಯ್ಯ ಕದಿರ ರೆಮ್ಮವ್ವೆ Next

ಒಕ್ಕಲಿಗ ಮುದ್ದಣ್ಣ

*
ಅಂಕಿತ: ಕಾಮಭೀಮ ಜೀವಧನದೊಡೆಯ
ಕಾಯಕ: ಬೇಸಾಯ

೧೭೪೪
ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ,
ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ,
ವ್ಯವಹರಿಸುವುದಕ್ಕೆ ವೈಶ್ಯನಲ್ಲ.
ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ,
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.

ಜೋಳದಹಾಳೆಂಬ ಗ್ರಾಮಕ್ಕೆ ಸೇರಿದವನಾದ ಈತ ಬೇಸಾಯ ವೃತ್ತಿಯನ್ನು ಕೈಕೊಂಡು ಬದುಕು ಸಾಗಿಸಿದವನು. ಕಾಲ = ೧೧೬೦. ಜಂಗಮ ದಾಸೋಹ ನಡೆಸುವುದು ಈತನ ನಿತ್ಯವ್ರತ. ರಾಜನು ಕೇಳಿದ ಹೆಚ್ಚಿನ ತೆರಿಗೆಯನ್ನು ಕೊಡದೆ ಆ ಹಣವನ್ನು ದಾಸೋಹಕ್ಕಾಗಿ ವಿನಿಯೋಗಿಸುತ್ತಾನೆ. 'ಕಾಮಭೀಮ ಜೀವಧನದೊಡೆಯ' ಅಂಕಿತದಲ್ಲಿ ರಚಿಸಿದ ೧೨ ವಚನಗಳು ದೊರೆತಿವೆ. ಒಕ್ಕಲುತನ ವೃತ್ತಿಯ ಪರಿಭಾಷೆ, ಮುಗ್ಧ ಭಕ್ತಿ, ಸರಳ-ಪ್ರಾಸಾದಿಕ ಶೈಲಿಯಿಂದ ಅವು ಕಳಕಳಿಸುತ್ತವೆ.

೧೭೩೪
ಆವ ವರ್ಣವ ಕೂಡಿದಡೂ ಅಪ್ಪುಮಯ ತಪ್ಪದಂತೆ,
ಸರ್ವಗುಣಸಂಪನ್ನನಾದಲ್ಲಿ ಭಕ್ತನೆಂದಡೂ ತಾನಾಗಿ,
ಮಹೇಶ್ವರ[ನೆಂ]ದಡೂ ತಾನಾಗಿ,
ಪ್ರಸಾದಿಯೆಂದಡೂ ತಾನಾಗಿ, ಪ್ರಾಣಲಿಂಗಿಯೆಂದಡೂ ತಾನಾಗಿ,
ಶರಣನೆಂದಡೂ ತಾನಾಗಿ, ಐಕ್ಯನೆಂದಡೂ ತಾನಾಗಿ,
ಒಂದನಹುದು ಒಂದನಲ್ಲಾ ಎನ್ನದೆ
ಕತ್ತಲೆಯಲ್ಲಿ ಹಾಲಕೊಂಡಡೆ ಸಿಹಿ ತಪ್ಪುವುದೆ?
ಸತ್ತು ಚಿತ್ತು ಆನಂದವೆಂಬ ಗೊತ್ತ ಹರಿದವಂಗೆ
ತಟ್ಟು ಮುಟ್ಟು ಹತ್ತುವ ಭಾವ ಒಂದೂ ಇಲ್ಲ
ಕಾಮಭೀಮ ಜೀವಧನದೊಡೆಯ ತಾನು ತಾನೆ.

ಬೇಸಾಯದ ಪರಿಭಾಷೆಯಲ್ಲಿ ಆಧ್ಯಾತ್ಮಿಕ ವಿಷಯಗಳನ್ನು ಪ್ರಸ್ತಾಪಿಸುವನು. ಚಾತುರ್ವಣ್ರ್ಯಗಳಲ್ಲಿ ಮೊದಲ ಮೂರನ್ನು ಹೇಳಿ, ಕೊನೆಯದಾದ ಶೂದ್ರನನ್ನು ಹೇಳುವಾಗ ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ ಎಂದು ತನ್ನ ಇಷ್ಟದೈವದಲ್ಲಿ ಪ್ರಾರ್ಥಿಸುವನು

೧೭೩೯
ಪೂರ್ವಕ್ಕೆ ತಾಳಾಗಿ ಉತ್ತರಕ್ಕೆ ತಲಹಾ ಬಿದ್ದ ಮರನ ತಂದು,
ನಿಬದ್ಧಿಯ ಕಾರುಕನ ಕೈಯಲ್ಲಿ ಸುಬದ್ಧಿಸಿ, ಶುದ್ಧೈಸಿ
ಅನಾದಿಯೆಂಬ ಹುಗಿಲುದೆಗೆದು,
ಆದಿಯೆಂಬ ಈಯವನಿಕ್ಕಿ,
ಇಷ್ಟವೆಂಬ ವಿಶ್ವಾಸದ ಮೇಳಿಯಂ ಬೆಟ್ಟಿ,
ಭಾವವೆಂಬ ಜಿಗುಳಿಯನಿಕ್ಕಿ,
ಸದ್ಭಾವವೆಂಬ ಗುಳುವ ತೊಡಿಸಿ,
ಸತ್ಕ್ರಿಯೆಯೆಂಬ ಕಣ್ಣಿಯಲ್ಲಿ ನೇಗಿಲ ತೊಡಚಿ,
ಜ್ಞಾನಚಕ್ಷುವೆಂಬ ನೊಗದ ಉಭಯದ ಕೊನೆಯಲ್ಲಿ
ಎಡಗೋಲಿನಲ್ಲಿ ಕಾರಿಯ ಹೂಡಿ,
ಬಲಗೋಲಿನಲ್ಲಿ ಬೆಳ್ಳಿಯ ಹೂಡಿ,
ಅಡಿ ಕೆತ್ತುವಂತೆ ಧಾಯೆಂದು ಹೊಡೆಯಲಾಗಿ,
ಭೂಮಿಯೊಡಗೂಡಿ ಸವೆಯಿತ್ತು.
ಬಿತ್ತವಟ್ಟಕ್ಕೆ ದಿಕ್ಕಿಲ್ಲ,
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.

Previous ಆಯ್ಕಕ್ಕಿ ಮಾರಯ್ಯ ಕದಿರ ರೆಮ್ಮವ್ವೆ Next