ಗುರುವರದ ವಿರೂಪಾಕ್ಷ | ನಂಜುಂಡ ಶಿವ |
ಜಂಗಮಲಿಂಗ ಪ್ರಭುವೆ |
ಈ ಅಂಕಿತದಲ್ಲಿ ಈಗ 10 ವಚನ ದೊರೆತಿವೆ. ಕರ್ತೃ ಅಜ್ಙಾತ ಸು. 1700ರಲ್ಲಿ ಇದ್ದಿರಬೇಕು ವಚನಗಳು ಹೆಚ್ಚು ತಾತ್ವಿಕವಾಗಿದೆ. ಎರಡು ವಚನಗಳು ಬೆಡಗಿನ ಪರಿಭಾಷೆಯಲ್ಲಿವೆ. ಶಿವಪಾರಮ್ಯವನ್ನು ತಿಳಿಸುತ್ತವೆ.
ಹಾಡಿ ಹೊಗಳುವ ಜಂಗಮವೆಲ್ಲ ಬ್ರಹ್ಮನ ಸಂತತಿ.
ಕಾಡಿ ಬೇಡುವ ಜಂಗಮವೆಲ್ಲ ವಿಷ್ಣುವಿನ ಸಂತತಿ.
ಹಾಗವರಿಯದೆ ಹೊಕ್ಕು ಉಂಬುವ ಜಂಗಮವೆಲ್ಲ [ರುದ್ರನ ಸಂತತಿ].
ವ್ಯಾಪಾರವ ಮಾಡುವ ಜಂಗಮವೆಲ್ಲ ಈಶ್ವರನ ಸಂತತಿ.
ಇಂತೀ ಅನುಭಾವ ಮಾಡುವ ಜಂಗಮವೆಲ್ಲ ಪರಶಿವನ ಸಂತತಿ.
ಮುಕ್ತಿ ಕುಸ್ತಿಯ ಮಾಡುವ ಜಂಗಮವೆಲ್ಲ ಮಹಾಲಿಂಗವೆನಿಸುವದು.
ಹಾಡದೆ ಹೊಗಳದೆ ಕಾಡದೆ ಬೇಡದೆ,
ಹಾಗವನರಿಯದೆ ಹೊಗದೆ ವ್ಯಾಪಾರ ಮಾಡದೆ,
ಭಕ್ತಿಗೆ ತೊಲಗಿ ವ್ಯರ್ಥದಿ ಮುಕ್ತಿ ಕುಸ್ತಿಯನಾಡದೆ,
ಭಿಕ್ಷವೆಂಬ ಶಬ್ದದಲ್ಲಿ ಇದಿರಿಟ್ಟು,
ಪದಾರ್ಥವ ಲಿಂಗಕರ್ಪಿತವ ಮಾಡುವುದೆ ನಿಜಮುಕ್ತಿ.
ಮಹದಾಕಾಶ ಮಹಿಮಾಪತಿಯೆಂಬ ಘನಲಿಂಗಕ್ಕೆ
ಅರ್ಪಿತ ಮಾಡುವ ಗುರು.
ಅದಾವುದೆಂದಡೆ :
ಅದು ಅನಾದಿ ಸಂಜ್ಞೆಯೆಂಬ ಜಂಗಮವು.
ಅಂಥ ಜಂಗಮದ ಶ್ರೀಚರಣ ನೆರೆನಂಬಿ,
ನೆಟ್ಟನಳಿವಸ್ಥಿರಕಾಯರ ಎನಗೊಮ್ಮೆ ತೋರಿಸಯ್ಯಾ,
ಜಂಗಮಲಿಂಗಪ್ರಭುವೆ. /೧೨೫೨ [1]
ಚತುರ್ವೇದನುಭಾವ ಜಂಗಮವೆಲ್ಲ ಬ್ರಹ್ಮನ ಸಂತತಿ.
ಹದಿನೆಂಟು ಪುರಾಣದ ಅನುಭಾವ ಮಾಡುವ ಜಂಗಮವೆಲ್ಲ ವಿಷ್ಣುವಿನ ಸಂತತಿ.
ಮೂವತ್ತೆರಡು ದಿವ್ಯ ಆಗಮ[ದ ಅನುಭಾವ] ಮಾಡುವ
ಜಂಗಮವೆಲ್ಲ ಈಶ್ವರನ ಸಂತತಿ.
ಆರು ಶಾಸ್ತ್ರದನುಭಾವ ಮಾಡುವ ಜಂಗಮವೆಲ್ಲ ಸದಾಶಿವನ ಸಂತತಿ.
ಇಂತೀ ಎಲ್ಲ ಶಬ್ದವನು ಮುಟ್ಟಿ ಲಿಂಗದನುಭಾವ ಮಾಡುವ ಜಂಗಮವೆಲ್ಲ
ಘನನಿತ್ಯ ಕಾಣಾ, ಜಂಗಮಲಿಂಗಪ್ರಭುವೆ. /೧೨೫೦[1]
ಹರಹರಯೆಂದು ನೆನೆದಡೆ ಜನನ ಮರಣ ಹಿಂಗುವದೆ ?
ಹಾಂಗೆ ಲೋಕದ ಮಾತ ಕೇಳಲಾಗದು.
ಅದು ಹೇಂಗೆಯೆಂದಡೆ :
ಜ್ಯೋತಿಯ ನೆನೆದಡೆ ತಿಮಿರ ಹೋಹುದೇನಯ್ಯಾ ?
ಪಂಚಾಮೃತವ ನೆನೆದಡೆ ಹಸಿವು ತೃಷೆ ಅಡಗುವುದೇನಯ್ಯಾ ?
ಆಗಮಶಾಸ್ತ್ರವ ನೋಡಿದಡೆ, ಕಿವಿಗೊಟ್ಟು ಕೇಳಿ ಹಾಡಿ ಪಾಡಿದಡೆ,
ಅಯ್ಯಾ ನಿಮ್ಮ ಕಂಡಂತಾಯಿತ್ತಯ್ಯಾ ಎಂದುದಾಗಿ,
ಆದಡಾಗಲಿ ಕಂಡು ಆಡುವುದಲ್ಲದೆ,
ಕಾಣದೆ ಆಡುವುದೆಲ್ಲ ಸಂತೆಯಾಗಿ ಹೋಯಿತ್ತಯ್ಯ ಕಾಣಾ,
ಜಂಗಮಲಿಂಗಪ್ರಭುವೆ. /೧೨೪೮ [1]
ತಿಮಿರ = ಕತ್ತಲೆ, ಅಂಧಕಾರ
[1] ವಚನ ಸಂಖ್ಯೆ ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.
ಗುರುವರದ ವಿರೂಪಾಕ್ಷ | ನಂಜುಂಡ ಶಿವ |