*
ವಚನಾಂಕಿತ:
|
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
|
ಇಷ್ಟಲಿಂಗ ಕ್ಕೆ ತೋರಿ ಮೃಷ್ಟಾನ್ನ ಹೊಡದೆನೆಂಬುದೇನು
ಆ ಇಷ್ಟಲಿಂಗ ಮುಖದಲ್ಲಿ ನಿಮಗೆ ತೃಪ್ತಿ ಆಗಲಿಲ್ಲವೆ.
ಆ ಶರಣನ ಮುಖದಲ್ಲಿ ಲಿಂಗತೃಪ್ತಿ ಅಹುದಲ್ಲದೆ
ಅಂಗಮುಖದಲ್ಲಿ ಶರಣತೃಪ್ತಿ ಆಗಲರಿಯದು.
''ವೃಕ್ಷಸ್ಯ ವದನಂ ಭೂಮಿಃ ಲಿಂಗಸ್ಯ ವದನಂ ಜಂಗಮಂ''
ಎಂಬ ಶ್ರುತಿ ನೋಡಿ ಮರುಳಾದ ಭಂಗಿತರಿಗೆ
ಶಿವಲಿಂಗ ಮುನ್ನವಿಲ್ಲವೆಂದಾತ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
ಈತನು ಮಾದಾರ ಚೆನ್ನಯ್ಯನು ಬೇರೆ ಬೇರೆ, ಈತನ ಬಗ್ಗೆ ಹೆಚ್ಚಿನ ವಿವರಗಳು ಅಲಭ್ಯ, "ಚೆನ್ನಯ್ಯಪ್ರಿಯ
ನಿರ್ಮಾಯಪ್ರಭುವೆ." ಎಂಬ ವಚನಾಂಕಿತ ಹೊಂದಿದ ೪೨ ವಚನಗಳು ಸಿಕ್ಕಿವೆ. ಈತನ ವಚನಗಳಲ್ಲಿ ಪ್ರಸಾದದ
ಅರ್ಥವಿವರಣೆ, ಮಹತ್ವ, ಪ್ರಸಾದ ಅರ್ಪಿತ ವಿಧಾನ, ಪಾದೋದಕ ಮಹತ್ವ, ಶರಣ-ಲಿಂಗ ಸಂಬಂಧ-ಇವುಗಳ ನಿಜವಾದ
ಅರ್ಥ ತಿಳಿಯದೆ ನಿಂದಿಸುವವರ ಟೀಕೆ ಇಲ್ಲಿನ ಪ್ರಧಾನ ವಿಷಯ
ಅಂಗದ ಮೇಲೆ ಲಿಂಗವ ಧರಿಸಿದ ಬಳಿಕ ಸರ್ವಾಂಗಲಿಂಗವಾಗದಿದ್ದರೆ
ಆ ಲಿಂಗವ ಏತಕ್ಕೆ ಧರಿಸಲಿ ?
ಪ್ರಸಾದ ಕೊಂಡ ಕಾಯ ಪ್ರಸಾದವಾಗದಿದ್ದರೆ
ಆ ಪ್ರಸಾದ ಏತಕ್ಕೆ ಕೊಳ್ಳಲಿ ?
ಇದು ಕೊಟ್ಟವನ ಗುಣದಿಂದಾದುದು.
ಅದನ್ನು ವಿಚಾರಿಸದೆ ಏತಕ್ಕೆ ಲಿಂಗವ ಧರಿಸಿದಿರಿ ?
ಏತಕ್ಕೆ ಪ್ರಸಾದವ ಕೊಂಬುವಿರಿ ?
ಇದಕ್ಕೆ ಸಾಕ್ಷಿ:
'ಸರ್ವದ್ರವ್ಯವಂಚ ವೇದಯಂ ತದ್ವಾಹಾನ ವಿಖವತೆ'
ಇಂತಪ್ಪ ಶ್ರುತಿ ಹುಸಿ ಎನ್ನಿರೊ ವೇಷಧಾರಿಗಳಿರಾ.
ನಿಮಗೆ ಪಂಚಾಕ್ಷರ ಸಂಯುಕ್ತವ ಮಾಡಿದ ಗುರುವಿನ ನಡೆಯಲ್ಲಿ
ನಿಮ್ಮ ನಡೆ ಎಂತೆಂದಡೆ:
ಸಾಕ್ಷಿ:
'ನಾಮಧಾರಕ ಗುರು ನಾಮಧಾರಕಃ ಶಿಷ್ಯಃ |
ಅಂಧ ಅಂಧಕಯುಕ್ತಾಃ ದ್ವಿವಿಧಂ ಪಾತಕಂ ಭವೇತ್ ||'
ಎಂದುದಾಗಿ, ನಮ್ಮ ಶಿವಗಣಂಗಳ ಸುವಾಚ್ಯ ಸಾಹಿತ್ಯವೆಂದರೆ
ಉರಿಕರ್ಪುರ ಸಂಯೋಗವಾದಂತೆ, ವಾಯು ಗಂಧವನಪ್ಪಿದಂತೆ
ಶಿವಗಣಂಗಳ ಪಂಚೇಂದ್ರಿಯ ಶಿವನ ಪಂಚಮುಖವಾಗಿದ್ದಿತು.
ಪಂಚಾಚಾರವೆ ಪಂಚಬ್ರಹ್ಮ ಪರಿಪೂರ್ಣ ತಾನೆ.
ಗುರು, ಲಿಂಗ, ಜಂಗಮ, ತೀರ್ಥಪ್ರಸಾದ
ಪಂಚಬ್ರಹ್ಮಮೂರ್ತಿ ನಿಮ್ಮ ಶರಣ.
ಇಂತೀ ಶರಣನ ನಿಲವನರಿಯದೆ ನುಡಿವ ವೇಷಧಾರಿಗಳ
ಷಡುಸ್ಥಲಬ್ರಹ್ಮಜ್ಞಾನಿಗಳೆಂದರೆ
ಕೆಡೆಹಾಕಿ ಮೂಗ ಕೊಯ್ದು, ಇಟ್ಟಂಗಿಯ ತಿಕ್ಕಿ,
ಸಾಸಿವೆಯ ಪುಡಿ ತಳೆದು, ನಿಂಬಿಹಣ್ಣು ಹಿಂಡಿ,
ಕೈಯಲ್ಲಿ ಕನ್ನಡಿಯ ಕೊಟ್ಟು, ನಿಮ್ಮ ನಿಲವ ನೋಡೆಂದು
ಮೂಡಲ ಮುಂದಾಗಿ ಅಟ್ಟದೆ ಬಿಡುವನೆ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ. -846 [1]
ಲಿಂಗಾಂಗಿ ಲಿಂಗಪ್ರಾಣಿ ಲಿಂಗಾತ್ಮಕ ಲಿಂಗಚೈತನ್ಯ ಶರಣನ
ಇಂಗಿತವನರಿಯದೆ ದೂಷಿಸುವ ವೇಷಧಾರಿಗಳೆ ಕೇಳಿರೊ.
ಲಿಂಗವ ಪೂಜಿಸಿ ಲಿಂಗಾಂಗಿಗಳ ದೂಷಿಸಿದರೆ
ಆ ಲಿಂಗ ನಿಮಗೆ ಕಾಲಾಗ್ನಿರುದ್ರನು.
ನಿಮ್ಮ ನಾಲಿಗೆ ಹೆಡದೆಲೆಯಲ್ಲಿ ತೆಗೆದು ಭುಂಜಿಸುವನು.
ಎಚ್ಚತ್ತು ನುಡಿಯಿರಿ ದೋಷಕಾರಿಗಳೆಂದ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ. -842 [1]
ಲಿಂಗಸೋಂಕಿ ಲಿಂಗವಾಗದಿದ್ದರೆ ಅದು ಲಿಂಗವಲ್ಲ.
ಪ್ರಸಾದಸೋಂಕಿ ಪ್ರಸಾದವಾಗದಿದ್ದರೆ ಅದು ಪ್ರಸಾದವಲ್ಲ,
ಅದು ಅಶುದ್ಭ.
ಮಂತ್ರಸೋಂಕಿ ಮಂತ್ರಮೂರ್ತಿಯಾಗದಿದ್ದರೆ ಅದು ಮಂತ್ರವಲ್ಲ,
ಅದರ ಭಾವ ಬೇರೆ.
ಈ ತ್ರಿವಿಧ ಭೇದವನರಿಯದ ವೇಷಧಾರಿಗಳು ಭಕ್ತರಲ್ಲ.
ದೇವಭಕ್ತರಾದರೇನು, ಮಲದೇಹಿ ಮಾಂಸಪಿಂಡ ಇರುವದು.
ತಮ್ಮ ದೇಹ ಕಲ್ಲುಸೋಂಕಿ ಹಸ್ತ ಸುಚಿತ್ತವಾಯಿತೆಂದು
ಪುಕಳಿಯನೊರೆಸುವ ಅರಿವೆಯಲ್ಲಿ ಮಗಿ ಹಿಡಿದು
ನೀರು ಹೊಯ್ದುಕೊಂಡು ಶುದ್ಧವಾಯಿತೆಂಬವರು,
ಅವರು ಮಲದೇಹಿ, ಅವನ ಹಸ್ತ ಶುದ್ಧವಲ್ಲ, ಅದು ಅಶುದ್ಧ.
ಆ ಕೈಯಲಿ ಲಿಂಗವ ಹಿಡಿದುದು ಲಿಂಗವಲ್ಲ, ಅದು ಪ್ರೇತಲಿಂಗ.
'ಸಂಸಾರೀ ಭೂತಃ ಪ್ರಾಣೇನ ಜಾಯತೇ ಪ್ರಾತಃಕಾಲೇ |
ಮುಖಂ ದೃಷ್ಟ್ವಾ ಕೋಟಿ ಜನ್ಮನಿ ಸೂಕರಃ||'
ಇಂತಪ್ಪ ತಮ್ಮ ಅಂಗದ ಅಶುದ್ಧವ ಕಳೆಯಲಾರದೆ
ಲಿಂಗಾಂಗಿ ಲಿಂಗಪ್ರಾಣಿಗಳೆಂದೆನಿಸುವ ವೇಷಧಾರಿಗಳಿಗೆ
ಹಂದಿಯ ಜನ್ಮ ತಪ್ಪದೆಂದ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ. -841 [1]
ಗುರು ಹಸ್ತಮಸ್ತಕಸಂಯೋಗ ಲಿಂಗಶರಣನಾದ ಬಳಿಕ
ಮಲದೇಹಿ ಮಾಂಸಪಿಂಡ ವಾಯುಪ್ರಾಣಿಯು ಹೋಗಿ
ಪ್ರಸಾದಕಾಯ ಮಂತ್ರಪಿಂಡ ಲಿಂಗಪ್ರಾಣಿಯಾಯಿತು.
ಇಂತೀ ಸರ್ವಾಂಗಪ್ರಸಾದಮಂತ್ರಮೂರ್ತಿಯಾದ ಶರಣನ
ನಿಲವನರಿಯದೆ ವೇಷಧಾರಿಗಳು ನಿಂದಿಸಿ ನುಡಿಯುತಿಹಿರಿ.
ನಿಮ್ಮ ಅಂಗದ ಮೇಲೆ ಲಿಂಗ ಸೋಂಕಲು ಲಿಂಗಾಂಗವಾದುದಿಲ್ಲವೆ ?
ನೀವು ಪ್ರಸಾದಕೊಂಡ ಕಾಯವೆಲ್ಲ ಪ್ರಸಾದಕಾಯ ಆದುದಿಲ್ಲವೆ ?
ನೀವು ಮಂತ್ರಮೂರ್ತಿ ಆದುದಿಲ್ಲವೆ ?
ಈ ತ್ರಿವಿಧ ಪೂರ್ವವ ಕಳೆದು ಪುನರ್ಜಾತನ ಮಾಡಿದಾತ
ಅವಗೆ ಗುರುವಿಲ್ಲ,
ಅವನು ಶಿಲೆಯ ಮಾರಿ ಹೊಟ್ಟೆಹೊರಕೊಂಬುವ ಭೂತದೇಹಿ.
ಅವನು ಗುರುವೆಂದು ಪೂಜಿಸುವ ವೇಷಧಾರಿ,
ಅವರಿಬ್ಬರಿಗೂ ಪಾದೋದಕ ಪ್ರಸಾದ ವಿಷವಾಗಿ
ಹೊಟ್ಟೆ ಹೊರೆದುಕೊಂಬ ಜಂಗಮ
ತುತ್ತು ಬುತ್ತಿಯನಾಯ್ದುಕೊಂಡು ತಿಂಬ ಪಿಶಾಚಿ.
ಇಂತೀ ಲಿಂಗಾಂಗಿ ಲಿಂಗಪ್ರಾಣಿಯಾದ ಶರಣರ ನಿಂದಿಸುವ ಲಾಂಛನಧಾರಿಗಳಿಗೆ
ಶಿವಲಿಂಗ ಸಂಬಂಧವಿಲ್ಲವೆಂದ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ. -840 [1]
References
[1] ಈ ತರಹದ ಸಂಖ್ಯೆಯ ವಿವರ: ಸಮಗ್ರ ವಚನ ಸಂಪುಟದ, ವಚನ ಸಂಖ್ಯೆ,(೧೫ ಸಮಗ್ರ ವಚನ ಸಂಪುಟಗಳು, ಕನ್ನಡ
ಪುಸ್ತಕ ಪ್ರಾಧಿಕಾರ, ಬೆಂಗಳೂರು)
*