Previous ಶಂಕರ ದಾಸಿಮಯ್ಯ ಶಿವಲೆಂಕ ಮಂಚಣ್ಣ Next

ಶಿವನಾಗಮಯ್ಯ

ಅಂಕಿತ: ನಾಗಪ್ರಿಯ ಚೆನ್ನರಾಮೇಶ್ವರಾ
ಕಾಲ: ೧೧೬೦

ಹಿರಿಯ ಮಾಹೇಶ್ವರರನಿಸಿದ ಶಿವನಾಗಿಮಯ್ಯನವರ ಸ್ಮರಣೊತ್ಸವ (ಆಗಿ ಹುಣ್ಣಿಮೆ )


ಶಿವನಾಗಿಮಯ್ಯನವರು ಎಂದರೆ ಬಸವಣ್ಣನವರ ಚರಿತ್ರೆಯಲ್ಲಿ ಬರುವ ಸಂಬೋಳಿ ನಾಗಿಮಯ್ಯ , ಕಂಬಳಿಯ ನಾಗಿದೇವರು ಎಂಬ ಹೆಸರಿನವರು. ಇವರು ವಾಸಸ್ಥಳದ ಬಗ್ಗೆ ಅಷ್ಟಾಗಿ ತಿಳಿದಿಲ್ಲ ಶಿವಮೊಗ್ಗದಲ್ಲಿನ ಅಲ್ಲಿ ಶಿಕಾರಿಪುರದ ಹತ್ರ ಅಡಗಂಟಿ ಅನ್ನುವ ಊರಿನಲ್ಲಿ ಕಂಬಳಿ ನಾಗಿದೇವರು ಆಶ್ರಯ ಪಡೆದಿದ್ದರು ಎಂದು ಸಂಶೋದಕರ ಅಭಿಪ್ರಾಯ.

ಹೊಲೆಯರ್ ಕುಲದಲ್ಲಿ ಛಲುವಾದಿಗಳು ಗಂಟೆಬಟ್ಟಲನ್ನು ಒಯ್ಯುವಾಗ ಬಿಳಿಯ ಕಂಬಳಿ (ಉರಿಗದ್ದುಗೆ ಕಂಬಳಿ )ಒಯ್ಯುವುದು ವಾಡಿಕೆ ಆ ಕಾರಣದಿಂದ ಇವರಿಗೆ ಕಂಬಳಿ ನಾಗಿಮಯ್ಯ ಎಂದಿರಬಹುದು ಎಂದು ನಾನು ಕೆಲವು ವರ್ಷದವರೆಗೆ ಭಾವಿಸಿದ್ದೆ... ಆದರೆ ಕೆಲವರು ಹೇಳುವ ಪ್ರಕಾರ ಶಿವನಾಗಿಮಯ್ಯನವರು ಕುರಿ ಉಣ್ಣೆಯನ್ನು ತಂದು ಶಿವಭಕ್ತರ ಕೈಂಕರ್ಯಕ್ಕೆ ಕಂಬಳಿ ನೆಯ್ಯುತ್ತಿದ್ದರಂತೆ. ಈಗಲೂ ಕಂಬಳಿ ಶೈವ ಪರಂಪರೆಯಲ್ಲಿ ಪವಿತ್ರವಾದದ್ದು, ಮದುವೆ , ಮುಂಜಿ , ದೀಕ್ಷೆ , ನಾಮಕರಣ , ಅಂತ್ಯಸಂಸ್ಕಾರದವರೆಗೂ ಊರ್ಣವಸ್ತ್ರವೆಂದು ವೇದಕಾಲದಿಂದಲೂ ಖ್ಯಾತಿಯಾದ ಕಂಬಳಿ ಬಳಸುತ್ತಾರೆ.

ಒಮ್ಮೆ ಶಿವಭಕ್ತರ ಕೈಂಕರ್ಯಕ್ಕೆ ಮೀಸಲಾಗಿದ್ದ ಕಂಬಳಿಯನ್ನು ಕೊಂಡಿ ಮಂಚಣ್ಣನವರು ಬಲವಂತವಾಗಿ ಕಸಿದುಕೊಂಡು ಅದರಿಂದ ಸಂಕಷ್ಟ ಅನುಭವಿಸಿ ಹಿಂತಿರುಗಿಸಿದರು ಎಂದು ಮೌಖಿಕ ಕಥೆಗಳಿವೆ. ಬಸವ ಕಲ್ಯಾಣದಲ್ಲಿ ಈಗಲೂ ಕಂಬಳಿ ನಾಗಿದೇವರ ಮಠವೆಂದು ಒಂದು ಮಠವಿದೆ. ಕಂಬಳಿನಾಗಿದೇವರು ಸಂಸಾರಿಗಳೇ ಆದರೆ ಶರಣರೇ ಹೇಳಿರುವ ಹಾಗೆ ಮನೆಯೇ ಮಠ( ಶಿವಭಕ್ತರ ಗಡಣ [ಗಡಣ = ಸಮೂಹ, ಗುಂಪು, ಮೊತ್ತ, ಗದ್ದಲ]). ಅ ಕಾರಣಕ್ಕೆ ಕಂಬಳಿ ನಾಗಯ್ಯನ ಮನೆಯನ್ನು ಮಠವೆಂದು ಕರೆದಿರಬಹುದು. ಈ ಬಗ್ಗೆ ಹೇಳಲಿಕ್ಕೆ ವೀರಣ್ಣ ದಂಡೆಯವರು ಸಂಪಾದಿಸಿದ ಶರಣರ ಜಾನಪದ ಸಾಹಿತ್ಯದ ಆಧಾರದಿಂದ ಆ ಅವಕಾಶವಿದೆ..

ಕಲ್ಯಾಣದ ಊರಾಗ ಕಂಬಳಿ ಮಠದಾಗ
ಕಂಬಳಿ ನಾಗಿದೇವ ಶರಣರು | ಶಿವಲಿಂಗ ಬನ್ನಿರೇ

ಕಂಬಳಿ ನಾಗಿದೇವ ಅವರೆಂತಾ ಶರಣರು
(ಧರ್ಮದ) ದರುಮಾದ ಮೂರ್ತಿ ಎನಿಸ್ಯಾರೆ | ಶಿವಲಿಂಗ ಬನ್ನಿರೇ

ಎಂಬ ಜಾನಪದ ಹಾಡುಗಳು ಇರುವುದರಿಂದ ಇವರು ಕಂಬಳಿ‌ ನೆಯ್ಗೆ ಕಾಯಕದವರು ಎನ್ನಲು ಅಡ್ಡಿಯಿಲ್ಲ.

ಮೂಲತಃ ಹೊಲೆಯರ್ ಕುಲದವರಾದ ಸಂಬೋಳಿ ನಾಗಿಮಯ್ಯನವರು ಶಿವಾಚಾರಕ್ಕೆ ಹೆಸರಾದ ಛಲುವಾದಿಗಳಾಗಿದ್ದಾರು. ಛಲುವಾದಿ ಎಂದರೆ ವೀರಭದ್ರನ ಜೊತೆ ದಕ್ಷಯಜ್ಞ ಸಂಹಾರದಲ್ಲಿ ಭಾಗಿಯಾಗಿ ವೀರಭದ್ರನು ಕತ್ತರಿಸಿದ ದಕ್ಷನ ತಲೆಯನ್ನು ಯಜ್ಞಕುಂಡದಲ್ಲಿ ಹಾಕಿ ಸುಟ್ಟ ಶಿವಗಣಾದೀಶ್ವರನು ಛಲದಂಕಮಲ್ಲ. ಛಲದಂಕಮಲ್ಲನು ಸಂಹರಿಸಿದ ದುಷ್ಟನೊಬ್ಬನ ಶರೀರವನ್ನು ಗಂಟೆಯಾಗಿ ಮಾರ್ಪಾಡು ಮಾಡಿ ಶಿವನು ಕಂದಾಯ ವಸೂಲಿ ಮಾಡಲಿಕ್ಕೆ ಲಿಂಗಮುದ್ರೆ ನಂದಿಮುದ್ರಿ ತುಲಾಮುದ್ರೆ ಢಮರು ಸರ್ಪ ತ್ರಿಶೂಲ ಪಿಣಾಕ ನೇಗಿಲು ಮೊದಲಾದ ಹದಿನೆಂಟು ಕುಲದ ಗಣ ಪಣದ ಚಿಹ್ನೆಯುಳ್ಳ ಗಂಟೆಯಬಟ್ಟಲನ್ನು ಕೊಟ್ಟು ನೇಮಿಸಿ ಸುಂಕಗಾರನಾಗಿ ಮಾಡಿದ್ದ.

( ಇನ್ನು ಕೆಲವರು ಹೇಳುವ ಪ್ರಕಾರ ಗಂಟೆಬಟ್ಟಲು ಶ್ರೀಶೈಲ ಸೂರ್ಯಸಿಂಹಾಸನದ ಶಾಖೆಯಾದ ನಿಡುಮಾಮಿಡಿಯ ಗೂಳೂರು ಸಂಸ್ಥಾನದ ಪೀಠಾದಿಪತಿಗಳಾದ ಚಂದ್ರಗುಂಡಂ ಶಿವಾಚಾರ್ಯರಿಂದ ರೂಢಿಗೊಂಡ ಪದ್ದತಿ. )

ಈ ಛಲವಾದಿ ಗಂಟೆಭಟ್ಟಲನ್ನು ಹೊಂದಿರುವ ಸುಂಕವಸೂಲಿ ಹೋಲೆಯರ್ ( ಹೊಲ ಉಳುಮೆ ಮಾಡುವ ಆರಂಬಗಾರರು , ಆದಿ ಕೃಷಿಕರು ) ಸಮುದಾಯದವರನ್ನು ಛಲುವಾದಿಗಳು ಎನ್ನುತ್ತಾರೆಂಬುದು ಮೌಖಿಕ ಕಥನ. ನಮ್ಮ ಭಾಗದಲ್ಲಿ ನಾನು ಕಂಡ ಹಾಗೆ ಸೋಮವಾರ ಸಂತೆಯ ದಿನ (ವರ್ತಮಾನದಲ್ಲಿ ಸುಂಕದ ಹಕ್ಕು ಇಲ್ಲದಿದ್ದರೂ) ಸಂಪ್ರದಾಯದಂತೆ ಬಿಳಿಕಂಬಳಿಯ ಉರಿಗದ್ದುಗೆ ಗಂಟೆಬಟ್ಟಲು ಇಟ್ಟುಕೊಂಡು ಸಂತೆಯನ್ನು ಸುತ್ತುವರಿದು ಹೋದ ಬಳಿಕವೇ ವ್ಯಾಪಾರಕ್ಕೆ ಮುಂದುಮಾಡುವುದು.

ಹಿಂದೆ ಛಲುವಾದಿಗಳು ಸಂತೆ ಸುಂಕ ಎತ್ತುವುದನ್ನು ಪಸಿಗೆ ಎತ್ತುವುದು , ಕರವೆತ್ತೋದು ಎಂದೆಲ್ಲಾ ಕರೆಯುತ್ತಾರೆ. ಇನ್ನು ಕೆಲವೆಡೆ ಛಲುವಾದಿ ಗಂಟೆಬಟ್ಟಲ ಮುಂದಾಳತ್ವ ಇಲ್ಲದೆ ಶವ ಸಂಸ್ಕಾರ ಮಾಡುವುದಿಲ್ಲ.. ಕೆಲವು ಕಡೆ ಯಾರಾದರು ಮೃತರಾದಾಗ ಗಂಟೆಬಟ್ಟಲ ಛಲುವಾದಿಯೇ ಗಂಟೆ ಬಾರಿಸುತ್ತಾ ಊರಿಗೆ ಸಾರ ( ಕೂಗು ಸುದ್ದಿ ) ಹಾಕುತ್ತಾರೆ. ಕೆಲವು ಕಡೆ ಶೆಟ್ಟಿ ಲಿಂಗಾಯತರು , ದೇವಾಂಗ ಕುಲದವರು ಛಲುವಾದಿ ಗಂಟೆ ಬಟ್ಟಲಿಗೆ ಪೂಜೆ ಸಲ್ಲಿಸದೆ ಮದುವೆ ಮಾಡಬಾರದು ಎಂದು ದೇವಾಂಗ ( ನೇಕಾರ) ಮೂಲದ ಗೂಳೂರು ಪೀಠಾದೀಶರಾದ ಚಂದ್ರಗುಂಡಂ ಶಿವಾಚಾರ್ಯರು ಹಾಕಿದ ಬೆಸುಗೆಯ ಮಾರ್ಗ.

ಇಂತಹ ಶಿವಾಚಾರದ ಪರಂಪರೆಯ ಹೊಲೆಯರನ್ನು , ಮಹಾದೇವನ ಮಕ್ಕಳಾದ ಮಾದಿಗರನ್ನು ರಾಜಾಶ್ರಯದಲ್ಲಿದ್ದ ಗಣ ಪಣ ಎಂಬ ಶಿವಾಚಾರದ ವ್ಯವಸ್ಥೆ ಅಳಿದು ವರ್ಣದ ವ್ಯವಸ್ತೆಯು ಇವರನ್ನು ಶೂದ್ರರಾಗಿ ಕಲ್ಪಿಸಿ ಕೆಳಮಟ್ಟದಲ್ಲಿ ಇಟ್ಟಿದ್ದರು.

ಚಮ್ಮಾರಿಕೆ ಕಾಯಕದ ಮಾದಿಗರಿಗೆ ಸಮಗಾರರಿಗೆ ಚರ್ಮವನ್ನು ಸುಲಿಯಲಿಕ್ಕೆ ಸತ್ತ ಪ್ರಾಣಿಗಳನ್ನು ತಂದುಕೊಡುತ್ತಿದ್ದವರು ಹೊಲೆಯರು. ಹೊಲ ಉಳುಮಿಗರಾದ ಹೊಲೆಯರನ್ನು ಸಂಸ್ಕೃತ ಪುತ್ರರು ಹೊಲೆ - ಕೊಳೆ ಎಂದು ಪದವನ್ನೇ ತಿರುಚಿ ಅವರು ಸತ್ತ ಪಶುಗಳನ್ನು ಎತ್ತಿ ಹಾಕುವ ಕಾರಣಕ್ಕೆ ಅಸ್ಪೃಶ್ಯರನ್ನಾಗಿಸಿದರು. ಅಂದಿನ ಕಾಲದಲ್ಲಿ ಹೊಲೆಯರು ಊರಿಗೆ ಪ್ರವೇಶಿಸುವಾಗ ತಮ್ಮ ಹೆಜ್ಜೆ ಗುರುತು ಅಳಿಸಲೆಂದು ಬೆನ್ನುಗೆ ಪೊರಕೆ ಕಟ್ಟಿಕೊಂಡು , ಉಗುಳು ಬಂದರೆ ನೆಲದ ಮೇಲೆ ಉಗಿಯದೆ ಅದನ್ನು ಉಗಿಯಲಿಕ್ಕೆ ಮಡಿಕೆ ಕಟ್ಟಿಕೊಂಡು ಸಂಬೋಳಿ ಸಂಬೋಳಿ; ಎಚ್ಚರ ಎಚ್ಚರ ಎಂದು ಕೂಗುತ್ತಾ ಊರಿಗೆ ಬಂದು ಸ್ವಚ್ಚ ಮಾಡಿ ಹೋಗುತ್ತಿದ್ದರು. ಸಂಬೋಳಿ ಎಂಬ ದನಿ ಕೇಳುತ್ತಲೆ ಊರಿನವರೆಲ್ಲ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಳ್ಳುವಷ್ಟು ಅಮಾನವೀಯ ಮಟ್ಟದ ಅಸ್ಪೃಶ್ಯತೆ ಅಂದು ತಾಂಡವಾಡುತ್ತಿತ್ತು.

ಈ ಸಂಬೋಳಿ ಎಂಬ ಎಚ್ಚರಿಕೆಯ ಪದವನ್ನು ಬಸವಣ್ಣನವರು ವಚನದಲ್ಲಿ ಬಳಸಿದ್ದಾರೆ , "ಆನುದೇವ ಹೊರಗಣನು - ಎಲ್ಲರು ಮಹಾಮನೆಯೊಳಗಿದ್ದು ಲಿಂಗಾರ್ಚನೆ ನಿರತರಾಗಿರುವಾಗ ನಾನು ಸಂಬೋಳಿ ಸಂಬೋಳಿ ಎಂದು ಎಚ್ಚರಿಕೆಯನ್ನು ಕೊಡುತ್ತಿರುವೆ ನಿಮ್ಮ ಶಿವಾಚಾರದ ದನಿಯಾಗಿರುವೆ ದೇವ" ಎನ್ನುತ್ತಾರೆ.

ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಣವನು.
ಸಂಬೋಳಿ ಸಂಬೋಳಿ ಎನುತ್ತ ಇಂಬಿನಲ್ಲಿ ಇದೇನೆ.
ಕೂಡಲಸಂಗಮದೇವಾ
ನಿಮ್ಮ ನಾಮವಿಡಿದ ಅನಾಮಿಕ ನಾನು.
~ ವಿಶ್ವಗುರು ಬಸವಣ್ಣನವರು

ಒಮ್ಮೆ ಇಂತಹ ಅಸ್ಪೃಶ್ಯರ ಗುಂಪನ್ನು ಕಂಡ ಬಸವಣ್ಣನವರು ಅವರಿಗೆ ಸಂಸ್ಕಾರ ಕೊಟ್ಟು ದೀಕ್ಷೆ ನೀಡುತ್ತಾರೆ , ಊರಿನಲ್ಲಿಯೇ ಇರಲಿಕ್ಕೆ ಅವಕಾಶ ಕಲ್ಪಿಸುತ್ತಾರೆ ಆ ಗುಂಪಿನಲ್ಲಿ ಕಂಬಳಿ ನಾಗಯ್ಯನವರು ಒಬ್ಬರಾಗಿದ್ದರು. ಒಮ್ಮೆ ಬಸವಣ್ಣನವರು ಇವರ ಶಿವಭಕ್ತಿಯನ್ನು ಕಂಡು ಮನೆಗೆ ಹೋಗಿ ಸಹಭೋಜನ ಮಾಡಿ ಪರವಾದಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ.

ಬಸವಣ್ಣನವರು ಕಂಬಳಿ ನಾಗೀಮಯ್ಯನ ಮನೆಗೆ ಹೋದ ಪ್ರಸಂಗವನ್ನು ಹರಿಹರನು ಬಸವರಾಜದೇವರ ರಗಳೆಯಲ್ಲಿ ಸೊಗಸಾಗಿ ತೆರೆದಿಟ್ಟಿದ್ದಾನೆ.

"....ಪನ್ನಿಚ್ಚಾಸಿರ ಮನ್ನಣೆಯ ಭಕ್ತರ ನಡುವೆ ಸನ್ನಿಹಿತನಾಗಿ ಬಸವೀದೇವಂ ಸುಖದಿಂದ ಮಿಂದೊರ್ದು ದೆವಸಂ ಶರಣಕುಲಮಂ ಪಾದಿರ್ಪ ಸಮಯದೊಳು ಬರುತಿರ್ದಪರೆಂಬ ಭಾವದೊಳು ಪುಳಕಂ ಪುಟವೆಱೆ
ಭೋಂಕವೆದ್ದುನ್ನತಾಸನವನೇರಿ ಪಲ್ಲವಸತ್ತಿಗೆ ಮೇಲ್ಮಸಗೆ ಕೆಲಬಲನ ಪರಿಜನಂ ನೆಲನುಗ್ಘಡಿಸೆ
ಚಾಮರಸೀಗುರಿಕ್ಕೆಲದೊಳಲ್ಲಾಡೆ ಶಂಖದ್ವನಿಯೂಣ್ಮೆ
ಶಿವಭಕ್ತ ಪಾದಶೇಖರನೆಂಬ ಶರಣಜನವನಸಂತನೆಂಬ
ಭಕ್ತಜನ ಭಾಂಧವನೆಂಬ ಬಿರುದಿನ ಕಹಳಾರವಂ ದೆಸೆದೆಸೆಗೆ ಪಸರಿಸೆ ಪುರಮಂ ಪೊಱಮಟ್ಟು ಹಿರಿಯ ಮಾಹೇಶ್ವರರ ಕೇರಿಗಳ ಕೆಲದೊಳು ನೆಡೆತಪ್ಪಾಗಳು
" ಓಹಿಲಯ್ಯಂಗೆ_ಹಿತಾರ್ಥ , ಉದ್ಭಟಯ್ಯಂಗೆ_ಹಿತಾರ್ಥ
ಬಸವರಾಜಂಗೆ_ಹಿತಾರ್ಥ_ಆರೋಗಿಸು.."
ಎಂದೆಂಬ ಶಿವಲಿಂಗಾರೋಗಣೆಯ ಸಮಯ ಸರ್ವರಚಿತ ಪರಿಣಾಮ ಪೂರಿತದಿವ್ಯ ವಾಕ್ಯಂಗಳಂ ಘಂಟಾನಾದದೊಡನೆ ಕೇಳ್ದು ಕರಣಂ ಕರೆಯೇಱೆಂ ಸಿರಿಮೊಗಂ ಸಂಪದವೇಱೆ ದಂಡಿಗೆಯ ಘಳನಿಳಿದು

ಕಂಬಳಿಯ ( ಸಂಬೋಳಿ) ನಾಗಿದೇವನೆಂಬ ಹಿರಿಯ_ಮಾಹೇಶ್ವರನ ಮನೆಯಂ ಪೊಕ್ಕು ಸಂಗಪ್ರಸಾದನವರ ಪ್ರಸಾದವೆರೆಸಿ ಕೈಕೊಳುತ್ತಿರೆ..."

( ಹರಿಹರ ಕವಿ ವಿರಚಿತ , ಬಸವರಾಜದೇವರ ರಗಳೆ : ಹತ್ತನೆಯ ಸ್ಥಳ )

ಒಮ್ಮೆ ಕಳಚೂರಿ ಬಿಜ್ಜಳನಲ್ಲಿ ದಣ್ಣಾನಾಯಕರಾಗಿದ್ದ ಬಸವಣ್ಣನವರು ನಗರದಲ್ಲಿ ಪರ್ಯಾಟನೆ ಮಾಡುತ್ತಾ ಬರುತ್ತಿರುವಾಗ ಹೊಲೆಯರ ಛಲುವಾದಿ ನಾಗಯ್ಯನ ಮನೆಯಿಂದ ಬಾಣ ಮಯೂರ ಓಹಿಲ ಉದ್ಬಟರಿಗೆ ಆರೋಗಣೆ ಎಂದೆಲ್ಲಾ ಸಕಲ ಪುರಾತನ ಶಿವಭಕ್ತರ ಸ್ತುತಿಯನ್ನು ಕೇಳಿ ನಾಗೀದೇವನ ಮನೆಯ ಹತ್ತಿರ ಬಂದು ನಿಲ್ಲುತ್ತಾರೆ... ನಾಗಿಮಯ್ಯ ಸ್ತುತಿ ಮುಂದುವರಿಯುತ್ತಾ ಬಸವೇಶನಿಗೆ ಆರೋಗಣೆ ಬಸವರಾಜನಿಗೆ ಆರೋಗಣೆ ಎಂಬ ಪದವನ್ನು ಕೇಳುತ್ತಲೆ ಬಸವಣ್ಣನವರು ಭಾವುಕರಾಗುತ್ತಾರೆ.

ಬಸವಣ್ಣನವರು ಬಂದದ್ದನ್ನು ನೋಡಿದ ನಾಗಿದೇವರು ನಮಸ್ಕರಿಸಿ ಬಸವಣ್ಣನವರಿಗು ಅವರ ಜೊತೆಯಲ್ಲಿದ್ದವರಿಗೂ ದಾಸೋಹ ಪ್ರಸಾದಕ್ಕೆ ವ್ಯವಸ್ಥೆ ಮಾಡುತ್ತಾರೆ. ಶಿವದೀಕ್ಷಿತರನ್ನು ಸಾಕ್ಷಾತ್ ಶಿವನೆಂದೇ ಭಾವಿಸುವುದು ಅವರ ಸೇವೇಗೈಯುವುದು ಭೃತ್ಯಾಚಾರ. ಹೀಗಾಗಿ ಭೃತ್ಯಾಚಾರಿ ಬಸವಣ್ಣನವರು ಕಂಬಳಿ ನಾಗಿದೇವರ ಆತಿಥ್ಯವನ್ನು ಸ್ವೀಕರಿಸುತ್ತಾರೆ.

ಇದನ್ನು ನೋಡಿದ ನಾರಾಯಣ ಕ್ರಮಿತ, ಮಾಧವ ಪಂಡಿತ , ಕೃಷ್ಣ ಭಟ್ಟ ಮೊದಲಾದವರು ಬಿಜ್ಜಳನಿಗೆ ದಣ್ಣಾನಾಯಕನಾದ ಬಸವಣ್ಣನವರು ತಲೆತಲಾಂತರದ ಸಮಾಜಧರ್ಮವನ್ನು ಉಲ್ಲಂಘಿಸಿ ಕೀಳುಜಾತಿಯವರ ಮನೆಯಲ್ಲಿ ಉಂಡು ಬಂದರು ಎಂದು ದೂರು ಕೊಡುತ್ತಾರೆ. ಬಸವಣ್ಣನವರು ಆಸ್ಥಾನಕ್ಕೆ ಬಂದಾಗ ವಾದ ವಿವಾದಗಳು ಜರುಗಿ ಬಸವಣ್ಣನವರು

" ಸಪ್ತಧಾತುಸಮಂ ಪಿಂಡಂ ಸಮಯೋನಿಸಮದ್ಭವಂ
ಆತ್ಮಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ "

( ಬಸವ ಪುರಾಣ ಮೂರನೇ ಸ್ಥಳ , ವಚನ - ಕಾಸಿ ಕಮ್ಮಾರನಾದ....) - ಪ್ರತಿ ಮಾನವನ ಶರೀರವೂ ಸಪ್ತದಾತುವಿನಿಂದಲೇ ತಾಯ ಗರ್ಭದಿಂದಲೇ ಬಂದಿರುವಾಗ ಮನುಷ್ಯರೆಲ್ಲರಲ್ಲಿ ಯಾವ ಭಿನ್ನತೆಯಿದೆ..?? ಇಂತಹ ಭಿನ್ನತೆಯನ್ನು ತೋರುವ ವರ್ಣಾಶ್ರಮದಿಂದ ಪ್ರಯೋಜನವಾದರು ಏನು ಎಂದು ನಿಗಮಾಗಮ ಪ್ರಮಾಣ ಕೊಟ್ಟು ಪ್ರಶ್ನಿಸುತ್ತಾರೆ.

ಶಿವಭಕ್ತನಾದವನು ಶೂದ್ರನೇ ಇದ್ದರು ಆತನು ವಿಪ್ರನಿಗೆ ಸಮ , ಭಗವಂತನಲ್ಲಿ ಭಕ್ತಿ ಇಲ್ಲದೆ ಕರ್ಮಾಚಾರದ ವಿಪ್ರನು ಚಂಡಾಳನಿಗಿಂತಲೂ ಕಡೆ ಎನ್ನುವ " ನ ಮೇ ಪ್ರಿಯಶ್ಚತುರ್ವೇದೀ ಮದ್ಭಕ್ತಃ ಶ್ವಪಚೋಪಿ ವಾ ತಸ್ಮೈ ದೇಯಂ ತತೋ ಗ್ರಾಹ್ಯಂ ಸ ಚ ಪೂಜ್ಯೋ ಯಥಾಹ್ಯಹಂ " ಎನ್ನುವ ಶೃತಿ ವಾಕ್ಯಗಳನ್ನೇ ಪ್ರಮಾಣವಾಗಿರಿಸಿಕೊಂಡು ತಮ್ಮ ನಡೆಯನ್ನು ಸಮರ್ಥಿಸುತ್ತಾರೆ. ಇಂತಹ ಅನೇಕ ಶೃತಿ ಪ್ರಮಾಣ ನೀಡಿ ಮಾರ್ಮಿಕವಾಗಿ ಪ್ರಶ್ನೆ ಮಾಡಿ ಬಿಜ್ಜಳನ ಆಸ್ತಾನದಲ್ಲಿ ಶಿವಾಚಾರದ ದುಂದುಬಿಯನ್ನು ಮೊಳಗಿಸುತ್ತಾರೆ.

ಕೆಲವು ಸಾಹಿತ್ಯದಲ್ಲಿ ಬಿಜ್ಜಳನ ಅಸ್ಥಾನದಲ್ಲಿ ಪರವಾದಿಗಳು ಶಿವಭಕ್ತರ ಮೈಯಲ್ಲಿ ನಮ್ಮ ಹಾಗೆ ರಕ್ತ ಬರದೆ ಏನು ಹಾಲು ಬರುತ್ತದೆಯೇ..?? ಶಿವಭಕ್ತರಲ್ಲೇನು ಅಂತಹ ವೈಶಿಷ್ಟ್ಯ ಎಂದೆಲ್ಲಾ ಕುಹುಕವಾಡಿದಾಗ ಬಸವಣ್ಣನವರು ನಾಗಿಮಯ್ಯನ ಪಾದದ ಬೆರಳಿನಿಂದ ಹಾಲನ್ನು ಸುರಿಯುವ ಪವಾಡವನ್ನು ಮಾಡಿದರು ಎಂಬ ಉಲ್ಲೇಖವಿದೆ.

ನಮ್ಮ ಮೈಯ್ಯಲಿರಕ್ತ ನಿಮ್ಮ ಮೈಯ್ಯಲಿ ಹಾಲು
ವೊಮ್ಮದೋರುವದೆ ದಂಡೇಶ
ಗಮ್ಮನೆ ನಾಗಿಮಯ್ಯನ ಪಾದದುಂಗುಟದಲ್ಲಿ
ವೊಮ್ಮೆಗೆ ಕರೆಸಿದ ಬಸವ ||44||

( ಹದಿನೈದು ಹದಿನಾರನೇ ಶತಮಾನದ ಮದ್ಯಕಾಲದ ಚೆನ್ನಬಸವ ದೇಶೀಕೇಂದ್ರನ ಸಂಪ್ರದಾಯದ ಅಜ್ಞಾತ ಕತೃ ವಿರಚಿತ "ಬಸವ ಪವಾಡ " ಕೃತಿಯಲ್ಲಿ ಎರಡನೇ ಸ್ಥಳ, 44ನೇ ಪದ್ಯ ಬಿ.ನಂ.ಚಂದ್ರಯ್ಯನವರ ಸಂಪಾದನೆ )

.......ಶಿವನಂ ನೆನೆದು ಸುಧಾಕರನ ಪಾದದಂತಿರ್ದ ಶರಣನ ಪಾದಮಂ ಪಿಡಿದು ಸುರಧೇನುವಿನ ಪಯೋದರಮೆನಿಸುವಂತೆ ಉಂಗುಟದ ಮೊನೆಯನಿಸಲೊಡಂ ಶ್ವೇತ ಪರ್ವತದ ಪಾದ ತಟದ ಸರಿವುದರಿನ ಹಾಲುಱತೆ ಸುರಿತಪ್ಪಂತೆ ಹಾಲ ಹಳ್ಳವೋಗಲದ ನಡುವೆ ಮಡಿಗಟ್ಟಿ ಪರಿದು ಪರೆಸೂಸೆ
ಕಂಡು ಬಿಜ್ಜಳಂ ಕೌತುಕಗೊಂಡು ಭಯರಸವೇಱಿ ಭಾವಿಸುತ್ತಿರೆ , ಪುರಜನ ಬೆಱಗಾಗಿ ಶರಣರ್ ಗುಡಿಗಟ್ಟೆ ಪರವಾದಿಗಳ್ ಮೆಲ್ಲ ಮೆಲ್ಲನೆ ಸರಿಯೆ.

( ಬಸವರಾಜದೇವರ ರಗಳೆ : ಹತ್ತನೆಯ ಸ್ಥಳ )

ಇದೇ ಪವಾಡದ ಉಲ್ಲೇಖ ಶಿವನಾಗಿಮಯ್ಯನ ಉಂಗುಷ್ಟದಿಂದ ಹಾಲನ್ನು ಬರಿಸಿ ಪರವಾದಿಗಳನ್ನು ಜಯಿಸಿದ ಬಗ್ಗೆ ಸೋಮನಾಥರ ಹಾಗು ಭೀಮಕವಿಯ ಬಸವಪುರಾಣದಲ್ಲಿಯೂ ಇದೆ. ಬಸವಣ್ಣನವರು ಸ್ವಯಂ ತಾವು ಎಂಬತ್ತೆಂಟು ಪವಾಡವ ಮೆರೆದು ಚೋಹರದಂತೆ ಆಯಿತ್ತೆನ್ನ ಭಕ್ತಿ ಎಂದು ಅಲ್ಲಮಪ್ರಭುದೆವರಲ್ಲಿ ಬಿನ್ನಹಿಸಿದ್ದಿದೆ. ಯೋಗಿಗಳ ಪ್ರಕಾರ ಸಾಧನೆಯ ಮಾರ್ಗದಲ್ಲಿ ಪವಾಡವನ್ನು ನೆಡೆಸುವ ಕೆಲವು ಕ್ಷಣಿಕ ಶಕ್ತಿಗಳು ಪ್ರಾಪ್ತವಾಗುತ್ತವೆ ಸಾಧಕನು ಅವನ್ನು ಮೀರಿ ಮುಂದೆ ಸಾಗಬೇಕು ಎನ್ನುವರು. ಅದೇನೇ ಇರಲಿ ಪವಾಡ ನಂಬುಗೆ ಅವರವರ ಶ್ರದ್ಧೆ.

ಈಶ್ವರನ ಭಕ್ತರಲ್ಲಿ ಭೇದವಿಲ್ಲವೆಂದು ಸಾರಿದ ಬಸವಣ್ಣ ನಾಗಿಮಯ್ಯರನ್ನು ನಂಜುಂಡಕವಿಯು ತನ್ನ ಭೈರವೇಶ್ವರ ಕಾವ್ಯದಲ್ಲಿ ಮನದುಂಬಿ ಸ್ಮರಿಸಿದ್ದಾನೆ..

ಈಶ ಬಕುತರೇ ವಿ |
ಶೇಷವೆನುತ ಬಸ |
ವೇಶ ಕಂಬಳಿಯ_ನಾಗಯ್ಯನ ||
ಭಾಸುರ ಕರದಿ ಸು |
ಧಾಸವಿಗರೆದನು |
ಭೂಸುರರತಿ ನಾಚುವಂತೆ ||101||

( ನಂಜುಂಡಕವಿಯ ಭೈರವೇಶ್ವರ ಕಾವ್ಯ : ಐದನೇ ಸ್ಥಳ )

ಹೀಗೆ ಸಂಬೋಳಿ ನಾಗಿಮಯ್ಯನವರು ಶರಣ ಚಳುವಳಿಯಲ್ಲಿ ಶಿವಾಚಾರದ ಶಿವನಾಗೀಮಯ್ಯನಾದರು. ಅವರು ನಾಗಪ್ರಿಯ ಚೆನ್ನರಾಮೇಶ್ವರ ಎಂಬ ಅಂಕಿತದಿಂದ ವಚನ ರಚಿಸಿದ್ಧಾರೆ. ಅವರ ಮೂರೇ ಮೂರು ವಚನಗಳು ಮಾತ್ರ ಲಭ್ಯವಾಗಿದೆ. ಲಿಂಗವಂತರಾದವರು ದೀಕ್ಷೆಯಾದ ಬಳಿಕವು ತಮ್ಮ ಪೂರ್ವಾಶ್ರಯ ಆಚರಿಸಿ ಭವಿತನಕ್ಕೆ ಸಿಲುಕಬಾರದು ಎಂದು ಎಚ್ಚರಿಸುವ ವಚನಗಳನ್ನು ರಚಿಸಿದ್ದಾರೆ. ಈ ಮೂರು ವಚನಗಳು ಶೂನ್ಯಸಂಪಾದನೆಯಲ್ಲಿ ಸಿದ್ಧರಾಮರಿಗೆ ದೀಕ್ಷಾವಿಚಾರದ ಚರ್ಚೆಯಲ್ಲಿ ಬರುವ ವಚನಗಳಾಗಿವೆ.

ಅಂಗದ ಮೇಲೆ ಲಿಂಗವಿದ್ದ ಬಳಿಕ,
ಲಿಂಗಹೀನರ ಬೆರಸಲಾಗದು.
ಅಂಗದ ಮೇಲೆ ಲಿಂಗವಿದ್ದ ಬಳಿಕ,
ಲಿಂಗ ಮುಂತಾಗಿ ಎಲ್ಲಾ ಕ್ರೀಗಳನೂ ಗಮನಿಸಬೇಕಲ್ಲದೆ,
ಅಂಗ ಮುಂತಾಗಿ ಗಮನಿಸಲಾಗದು.
ಲಿಂಗಸಂಬಂಧಿಯಾಗಿ ಅಂಗ ಮುಂತಾಗಿಪ್ಪವರು
ಲಿಂಗಕ್ಕೆ ದೂರವಯ್ಯಾ,ನಾಗಪ್ರಿಯ ಚೆನ್ನರಾಮೇಶ್ವರಾ.

ಸಿದ್ಧರಾಮೇಶ್ವರರು ತಮ್ಮದೊಂದು ವಚನದಲ್ಲಿ ಯೋಗವನ್ನು ಸಾಧಿಸಿದ ಯೋಗಿಗಳನ್ನು ಹೆಸರಿಸುವಾಗ ಚಂದಿಮರಸನ ಗುರು ನಿಜಗುಣ ಯೋಗಿ , ರುದ್ರ ಪರಂಪರೆಯ ವೃಷಭೇಶ್ವರನ ಜೊತೆಗೆ ಪಿರಿಯ ಮಾಹೇಶ್ವರ ಎಂದು ಖ್ಯಾತಿ ಹೊಂದಿದ್ದ ಶಿವನಾಗಿಮಯ್ಯನವರನ್ನು ಸ್ಮರಿಸುತ್ತಾರೆ.

ಯೋಗವ ಸಾಧಿಸಿದವನೊಬ್ಬ ನಿಜಗುಣ
ಯೋಗವ ಸಾಧಿಸಿದವನೊಬ್ಬ ವೃಷಭಯೋಗೀಶ್ವರ
ಯೋಗವ ಸಾಧಿಸಿದವನೊಬ್ಬ ಶಿವನಾಗಮಯ್ಯ
ಯೋಗವ ಸಾಧಿಸಿದೆ ನಾನೊಬ್ಬ
ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಕೂಡುವ ಯೋಗವ.
~ ಶಿವಯೋಗಿ ಸಿದ್ಧರಾಮೇಶ್ವರರು

ವೈದ್ಯ ಸಂಗಣ್ಣನವರು ಸಹ ಒಂದೆಡೆ ಶಿವನಾಗಮಯ್ಯನೆನಗೆ ಪರುಷದ ಗಿರಿಯಯ್ಯಾ ಎಂದೆಲ್ಲಾ ಸ್ಮರಿಸಿರುವುದು ನಾಗಿದೇವರ ಶರಣತತ್ವ ಶಿವಾಚಾರದ ಮಹಿಮೆಯನ್ನು ಎತ್ತಿ ತೋರುತ್ತದೆ.

ಪಿರಿಯ ಮಾಹೇಶ್ವರ ಶಿವನಾಗಿಮಯ್ಯನವರು ಲಿಂಗದ ಮಹತ್ವ, ಸದಾಚಾರ ನಿಷ್ಠೆ ಇವುಗಳಲ್ಲಿ ತುಂಬ ಆಪ್ತವಾಗಿ ಹೇಳಲ್ಪಟ್ಟಿವೆ. ಸದಾಚಾರ, ಸಮಯಾಚಾರ, ಲಿಂಗಮಹತ್ವಗಳಿಗೆ ಸಂಬಂಧಿಸಿದ ವಿವರಗಳು ಈತನ ವಚನಗಳಲ್ಲಿವೆ

ಹುಟ್ಟಿದಾಕ್ಷಣವೆ ಲಿಂಗಸ್ವಾಯತವ ಮಾಡಿ,
ಶಿಶುವ ತನ್ನ ಶಿಶುವೆಂದು ಮುಖವ ನೋಡುವದು ಸದಾಚಾರ.
ಅದಲ್ಲದೆ, ಬರಿಯ ವಿಭೂತಿಯ ಪಟ್ಟವ ಕಟ್ಟಿ,
ಗುರುಕಾರುಣ್ಯವಾಯಿತ್ತೆಂದು
ಅನುಸರಣೆಯಲ್ಲಿ ಆಡಿಕೊಂಬುದು ಕ್ರಮವಲ್ಲ.
ಅದೇನು ಕಾರಣವೆಂದಡೆ, ತಾ ಲಿಂಗದೇಹಿಯಾದುದಕ್ಕೆ ಕುರುಹು.
ಲಿಂಗವುಳ್ಳವರೆಲ್ಲರ ತನ್ನವರೆನ್ನಬೇಕಲ್ಲದೆ,
ಲಿಂಗವಿಲ್ಲದವರ ತನ್ನವರೆಂದಡೆ, ತನ್ನ ಸದಾಚಾರಕ್ಕೆ ದ್ರೋಹಬಹುದು,
ಸಮಯಾಚಾರಕ್ಕೆ ಮುನ್ನವೇ ಸಲ್ಲ.
ಇದು ಕಾರಣ, ಲಿಂಗಸ್ವಾಯತವಾಗಿಹುದೆ ಪಥವಯ್ಯಾ,
ನಾಗಪ್ರಿಯ ಚೆನ್ನರಾಮೇಶ್ವರಾ.

ಘನಸುಖ ಮಹಾಸುಖವ ಮುಟ್ಟಲು, ಸಮಸುಖಂಗಳ ಸುಖಿಸಬಲ್ಲ,
ಸುಖವನಲ್ಲಿಯೇ ಕೊಯ್ದು ಸೂಡ ಕಟ್ಟಬಲ್ಲ,
ನಾಗಪ್ರಿಯ ಚೆನ್ನರಾಮೇಶ್ವರಾ,
ನಿಮ್ಮ ಶರಣನು ಸುಖಿಸಬಲ್ಲ ಸುಖವನು.

Previous ಶಂಕರ ದಾಸಿಮಯ್ಯ ಶಿವಲೆಂಕ ಮಂಚಣ್ಣ Next