*
ಅಂಕಿತ: |
ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೇ |
ಕಾಯಕ: |
ಧರ್ಮ ಪ್ರಸಾರಕ |
೧೭೮
ಬಯಲ ಮೂರ್ತಿ ಮಾಡಿ,
ಎನ್ನ ಕರಸ್ಥಲಕ್ಕೆ ಕೊಟ್ಟನಯ್ಯ ಶ್ರೀಗುರು.
ಬಯಲಮೂರ್ತಿಯ ಅಮೂರ್ತಿಯ ಮಾಡಿ,
ಎನ್ನ ಪ್ರಾಣದೊಳಗಿರಿಸಿದನಯ್ಯ ಶ್ರೀಗುರು.
ಬಯಲು ಬಯಲನೆ ಬೆರಸಿ ಬಯಲೆಂದೆನಿಸಿ
ಎನ್ನ ಭಾವದೊಳಗಿರಿಸಿದನಯ್ಯ ಶ್ರೀಗುರು.
ಇದು ಕಾರಣ,
ಎನ್ನ ಕರಸ್ಥಲ ಮನಸ್ಥಲ ಭಾವಸ್ಥಲದಲ್ಲಿ ನಿಮ್ಮಧರಿಸಿ
ನಾನು ಅಂಗಲಿಂಗ ಸಂಬಂಧಿಯಾದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಲಿಂಗಾಯತ ಧಾರ್ಮಿಕ ಚರಿತ್ರೆಯಲ್ಲಿ ತೋಂಟದ ಸಿದ್ಧಲಿಂಗ ಶಿವಯೋಗಿಗಳದು ಅಗ್ರಮಾನ್ಯ ಹೆಸರು. ಅಲ್ಲಮಪ್ರಭು ಸಂಪ್ರದಾಯದ ಶೂನ್ಯಪೀಠವನ್ನು
ಆರೋಹಣ ಮಾಡಿ, ಬಸವಾದಿಗಳು ರೂಪಿಸಿದ ಷಟ್ ಸ್ಥಲ ಸಿದ್ಧಾಂತಗಳನ್ನು ವ್ಯಾಪಕವಾಗಿ ಪ್ರಸಾರಮಾಡಿ, ಹನ್ನೇರಡನೆಯ ಶತಮಾನದ
ಅನುಭವ ಮಂಟಪದ ಸಂಸ್ಕೃತಿಯನ್ನು ಪುನರ್ ಸ್ಥಾಪಿಸಿದ ಮಹಾಪುರುಷ. ಸಿದ್ಧಲಿಂಗರ ಜೀವನ ಸಾಧನೆ ಸಿದ್ಧಿಗಳು ವಚನ, ಕಾವ್ಯ, ಶಾಸನಗಳಲ್ಲಿ ಎರಕಗೊಂಡಿದೆ. ನಾಡಿನ ಉದ್ದಗಲಕ್ಕೂ ಎದ್ದು ನಿಂತ ಇವರ ಹೆಸರಿನ ಗದ್ದುಗೆ, ಮಠ ಮಂದಿರಗಳು ಇವರ ಪ್ರಭಾವವನ್ನು ಸಾರಿ ಹೇಳುತ್ತವೆ.
೫೩೭
ಬಸವಣ್ಣನ ಪ್ರಸಾದದಿಂದ ಭಕ್ತಿಜ್ಞಾನ ವೈರಾಗ್ಯ
ಸಂಪನ್ನನಾದೆನಯ್ಯ.
ಚೆನ್ನಬಸವಣ್ಣನ ಪ್ರಸಾದದಿಂದ ಷಟ್ಸ್ಥಲಜ್ಞಾನಸಂಪನ್ನನಾದೆನಯ್ಯ.
ಪ್ರಭುದೇವರ ಪ್ರಸಾದದಿಂದ ಪರಶಿವತತ್ವಸ್ವರೂಪವೇ
ಎನ್ನ ಸ್ವರೂಪವೆಂದರಿದು
ಸಮಸ್ತ ಸಂಸಾರಪ್ರಪಂಚ ಕೊಡಹಿದೆನು ನೋಡಾ.
ನೀಲಲೋಚನೆಯಮ್ಮನ ಪ್ರಸಾದದಿಂದ ನಿಜಲಿಂಗೈಕ್ಯನಾದೆನಯ್ಯ.
ಮಹಾದೇವಿಯಕ್ಕಗಳ ಪ್ರಸಾದದಿಂದ
ಸುತ್ತಿದ ಮಾಯಾಪಾಶವ ಹರಿದು ನಿರ್ಮಾಯನಾಗಿ
ನಿರ್ವಾಣಪದದಲ್ಲಿ ನಿಂದೆನಯ್ಯ.
ಸಿದ್ಧರಾಮಯ್ಯನ ಪ್ರಸಾದದಿಂದ ಶುದ್ಧ ಶಿವತತ್ವವ
ಹಡೆದೆನಯ್ಯ.
ಮೋಳಿಗೆಯ ಮಾರಿತಂದೆಗಳ ಪ್ರಸಾದದಿಂದ
ಕಾಯದ ಕಳವಳನಳಿದು ಕರ್ಮನಿರ್ಮಲನಾಗಿ
ವೀರಮಾಹೇಶ್ವರನಾದೆನು ನೋಡಾ.
ಇವರು ಮುಖ್ಯವಾದ ಏಳುನೂರೆಪ್ಪತ್ತುಮರಗಣಂಗಳ
ಪರಮಪ್ರಸಾದದಿಂದ
ಎನ್ನ ಕರಣಂಗಳೆಲ್ಲವು ಲಿಂಗಕರಣಂಗಳಾಗಿ
ಕರಣೇಂದ್ರಿಯಂಗಳ ಕಳೆದುಳಿದು
ಇಂದ್ರಿಯಂಗಳಿಗೆ ನಿಲುಕದ ಸ್ಥಾನದಲ್ಲಿರ್ದು
ಪರಮಾನಂದ ಪ್ರಭಾಮಯನಾಗಿರ್ದೆನು ನೋಡಾ.
ನಿಮ್ಮ ಶರಣರ ಪ್ರಸಾದದಿಂದ ನಾನು
ಪ್ರಸಾದಿಯಾಗಿರ್ದೆನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಸಿದ್ಧಲಿಂಗ ಶಿವಯೋಗಿಗಳು ಬಾಳಿದುದು ೧೬ನೇಯ ಶತಮಾನದಲ್ಲಿ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ ಇವರ ಜನ್ಮ ಸ್ಥಳ. ತಂದೆ ಮಲ್ಲಿಕಾರ್ಜುನ, ತಾಯಿ ಜ್ಞಾನಾಂಬೆ. ಮನೆತನದ ವೃತ್ತಿ ವ್ಯಾಪಾರ. ಗೋಸಲ ಚೆನ್ನಬಸವೇಶ್ವರ ದೀಕ್ಷಾಗುರು, ಕಗ್ಗೆರೆಯ ತೋಟದಲ್ಲಿ ಆರು ತಿಂಗಳ ಕಾಲ ಅನುಷ್ಠಾನಗೈದ ಕಾರಣ 'ತೋಂಟದ ಸಿದ್ಧಲಿಂಗ' ಎಂದ ಹೆಸರು ಬಂದಿತು. ಸಿದ್ಧಗಂಗೆ ಮೊದಲಾದ ಕ್ಷೇತ್ರದರ್ಶನ ಪಡೆದು, ಕೊನೆಗೆ ನಾಗಿಣೀನದಿ ತೀರದ ಎಡೆಯೂರಿಗೆ ಬಂದು, ಬೋಳಬಸವರಿಗೆ ನಿರಂಜನ ಪಟ್ಟಾಧಿಕಾರವನ್ನು ವಹಸಿಕೊಟ್ಟು, ದಾನಿವಾಸ ಗ್ರಾಮದ ಚೆನ್ನವೀರಪ್ಪ ಒಡೆಯರು ಕಟ್ಟಿಸಕೊಟ್ಟ ಕಲ್ಲುಮಠದಲ್ಲಿ ತಾವು ನಿರ್ವಿಕಲ್ಪ ಸಮಾಧಿಯನ್ನು ಹೊಂದಿದರು.
೪೦೦
ಬೂದಿಯಲ್ಲಿ ಹೊರಳುವ ಕತ್ತೆಯಂತೆ,
ಎಲುವ ಕಡಿವ ಶ್ವಾನನಂತೆ,
ಹಾತೆಯ ತಿಂಬ ಹಲ್ಲಿಯಂತೆ,
ಕಿಚ್ಚ ಹಾಯುವವಳಂತೆ
ಒಚ್ಚಿ ಹೊತ್ತಿನ ಭೋಗಕ್ಕೆ ಮಚ್ಚಿ ಹುಚ್ಚಾದಿರಿಯಲ್ಲ
ಮೃತ್ಯುಂಜಯನನಪ್ಪದೆ ಮೃತ್ಯುವಿನ ಬಾಯತುತ್ತಾದವರ ಕಂಡು
ನಗುತ್ತಿದ್ದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸುವ-ಸಂಕಲಿಸುವ-ಸಂಪಾದಿಸುವ ಕಾರ್ಯವನ್ನು ತಮ್ಮ ಶಿಷ್ಯರು ಕೈಕೊಳ್ಳುವಂತೆ ಮಾಡಿದ್ದು, ತಾವು ಸ್ವತ: ವಚನಗಳನ್ನು ರಚಿಸಿ ವಚನಸಾಹಿತ್ಯ ಪರಂಪರೆಯನ್ನು ಮುಂದುವರಿಸಿದ್ದು ಇವರ ಮುಖ್ಯ ಕೊಡುಗೆಗಳೆನಿಸಿವೆ.
೧೯
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವನೆಂಬ
ಪಂಚಾಧಿದೇವತೆಗಳಿಲ್ಲದಂದು,
ಈ ಪಂಚೈವರ ಲಯ ಗಮನಂಗಳಿಗೆ ಕಾರಣವಾದ
ಶಿವಶಕ್ತಿಗಳಿಲ್ಲದಂದು,
ಈ ಶಿವ ಶಕ್ತಿಗಳಿಗೆ ಕಾರಣವಾದ
ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣವೆಂಬ
ನಿಃಕಲತತ್ವವಿಲ್ಲದಂದು,
ನೀನು ಶೂನ್ಯನಾಗಿರ್ದೆಯಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಸಿದ್ಧಲಿಂಗರು ೭0೧ ವಚನಗಳನ್ನು ರಚಿಸಿದ್ದಾರೆ. 'ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ' ಎಂಬ ಅಂಕಿತದ ಅವು 'ಷಟ್ ಸ್ಥಲ ಜ್ಞಾನಸಾರಾಮೃತ' ಹೆಸರಿನ ಸ್ಥಲಕಟ್ಟಿನ ಕೃತಿಯಲ್ಲಿ ಸಂಕಲನಗೊಂಡಿವೆ. ಹೆಸರೇ ಹೇಳುವಂತೆ ಷಟ್ ಸ್ಥಲ ತತ್ವ ನಿರೂಪಣೆ ಇವುಗಳ ವಸ್ತು.
ಸ್ಥಲಕಟ್ಟಿನಲ್ಲಿ ವಚನಗಳನ್ನು ಸ್ವತಃ ಸಿದ್ಧಲಿಂಗರೇ (ವಿಂಗಡಿಸಿ) ಬರೆದಿರುವರು. ಬಸವಣ್ಣ, ಚನ್ನಬಸವಣ್ಣ ಮೊದಲಾದ ಹಿರಿಯವಚನಕಾರರ ಪ್ರಭಾವ ವಿಶೇಷವಾಗಿ ಆಗಿದೆ. ಬೆಡಗಿನ ವಚನಗಳನ್ನು ಬರೆದಿದ್ದು, ರೋಮಾಂಚನಕಾರಿಯಾಗಿ ಅಭಿವ್ಯಕ್ತಿಸಿರುವರು. ಒಂದು ವಚನದಲ್ಲಿ ತಮ್ಮ ಗುರು ಪರಂಪರೆಯನ್ನು ಸ್ವತಃ ದಾಖಲಿರಿಸಿರುವರು. ವಚನ ಸಾಹಿತ್ಯ ಪರಂಪರೆಯ ಎರಡನೆ ಘಟ್ಟದ ವಚನ ಪರಂಪರೆಗೆ ಇವರು ಪ್ರಸ್ಥಾನಕಾರರು.
ವಚನ ಸಾಹಿತ್ಯದಲ್ಲಿ ತೋಂಟದ ಸಿದ್ಧಲಿಂಗರ ಹೆಸರು- ಹಲವಾರು ಶತಮಾನಗಳ ಅನಂತರ- ಇಂದಿಗೂ ಜನರ ನೆನಪಿನಲ್ಲಿ ಹಚ್ಚಹಸುರಾಗಿ ಉಳಿದು ಬಂದಿದೆ. `ಷಟ್‌ಸ್ಥಲ ಜ್ಞಾನಸಾರಾಯಸ್ವರೂಪ' ರಾಗಿದ್ದ ಇವರು ಸುತ್ತೂರು ಸಿಂಹಾಸನದ ಘನಲಿಂಗಿದೇವರಿಂದ `ತೋಂಟದ ಅಲ್ಲಮ'ರೆಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಪರಂಪರೆಯ ಹೇಳಿಕೆಯಂತೆ ಸಿದ್ಧಲಿಂಗರು ’ನಿರಂಜನವಂಶ' ಪರಂಪರೆಯಲ್ಲಿ 19ನೆಯವರು. ಇವರು ಕಗ್ಗೆರೆಯಲ್ಲಿ ತಪಸ್ಸು ಕೈಕೊಂಡು, `ಷಟ್‌ಸ್ಥಲಬ್ರಹ್ಮಿ'ಗಳಾಗಿ, ಅಪಾರ ಶಿಷ್ಯವೃಂದವನ್ನು ಪಡೆದಿದ್ದರು. ಇವರ ಶಿಷ್ಯ-ಪ್ರಶಿಷ್ಯ ಪರಂಪರೆ ಶತಮಾನದಿಂದ ಶತಮಾನಗಳಿಗೆ ಅವಿಚ್ಛಿನ್ನವಾಗಿ ಮುಂದುವರೆದಿದೆ.
ಇವರ ಶಿಷ್ಯ ಸಮೂಹದಲ್ಲಿ ಬೋಳಬಸವರು, ಘನಲಿಂಗಿಗಳು, ಗುಮ್ಮಳಾಪುರದ ಸಿದ್ಧಲಿಂಗರು, ಜಿಗುನಿ ಮರುಳಾಚಾರ್ಯರು, ಹಿರಣ್ಯದೇವ ಮೊದಲಾದವರಿದ್ದಾರೆ. ಸಿದ್ಧಲಿಂಗರು ಭಾರತ ದೇಶವನ್ನೆಲ್ಲಾ ಸಂಚರಿಸಿರುವರೆಂಬುದಕ್ಕೆ ಸಾಕ್ಷಿಯಾಗಿ ಹಲವಾರೆಡೆ ಇವರ ಹೆಸರಿನ `ಗದ್ದುಗೆ'ಗಳು ನಿರ್ಮಾಣಗೊಂಡವು. ಇವರ ಸಂಚಾರದಲ್ಲಿ 700 ವಿರಕ್ತರು ಭಾಗವಹಿಸುತ್ತಿದ್ದರೆಂದು ಪರಂಪರೆಯ ಹೇಳಿಕೆ ಇದೆ.
ಕಗ್ಗೆರೆ / ಎಡೆಯೂರುಗಳ ಅರಸರಾಗಿದ್ದ ಬಸವೇಂದ್ರ ಗಂಗಾಂಬಿಕೆಯರು, ಸಿದ್ಧಲಿಂಗರ ಸಮಾಧಿ ಕಾಲದಲ್ಲಿ - ಎಡೆಯೂರಿನಲ್ಲಿ - ಸ್ವತಃ ಭಾಗವಹಿಸಿದ್ದ ಸಂಗತಿ ಸುವ್ವಿಮಲ್ಲನ `ಸಿದ್ಧೇಶ್ವರ ಸಾಂಗತ್ಯ'ದಲ್ಲಿ ದಾಖಲಿಸಲಾಗಿದೆ. ಇವರಿಗಾಗಿ ಎಡೆಯೂರಿನಲ್ಲಿ ಕಲ್ಲುಮಠವನ್ನು ಕಟ್ಟಲು ಚಿಟ್ಟಿಗದೇವರಿಗೆ ದಾನಿವಾಸ ನಿವಾಸಿಗಳಾದ, ಪಾದೋದಕ ಪ್ರಸಾದ ಸಂಪನ್ನ ಚೆನ್ನವೀರಪ್ಪ ಒಡೆಯ ಹಾಗು ಪಾರ್ವತಮ್ಮ ದಂಪತಿಗಳು `ಪದಾರ್ಥವನ್ನು ಕೊಟ್ಟು ನಮಸ್ಕರಿಸಿದ' ಸಂಗತಿ ಅಲ್ಲಿಯ ಶಿಲಾಶಾಸನದಿಂದ ತಿಳಿದುಬಂದಿದೆ.
ತೋಂಟದ ಸಿದ್ಧಲಿಂಗರು ಹಾಗಲವಾಡಿ ಭೈರವಭೂಪ, ಬಿಜ್ಜಾವರದ ಚಿಕ್ಕಭೂಪ- ಸೋಮಾಂಬೆ ಮತ್ತು ಇವರ ಮಗ ಇಮ್ಮಡಿ ಚಿಕ್ಕಭೂಪಾಲರ ಹಿರಿಯ ಸಮಕಾಲೀನರು. ಇವರು ಹದಿನಾರನೆಯ ಶತಮಾನದ ಮೊದಲ 7-8 ದಶಕಗಳವರೆಗೆ ಜೀವಿಸಿದುದಾಗಿ ನಿರ್ಧರಿಸಬಹುದಾಗಿದೆ.
ಸಿದ್ಧಲಿಂಗರಿಗೆ ಸಂಬಂಧಿಸಿದ ಸಾಹಿತ್ಯ ವಿವಿಧ ಛಂದೋಪ್ರಕಾರಗಳಲ್ಲಿ ಅಂದಿನಿಂದ ಇಂದಿನವರೆಗೂ ಬೆಳೆದುಬಂದಿದೆ.
I. ಕೆಲವು ಕೃತಿಗಳು ಸಂಪೂರ್ಣವಾಗಿ ಇವರ ಜೀವನ ಚರಿತ್ರೆ / ಪವಾಡ ಕಥನಗಳಿಗೆ ಮೀಸಲಾಗಿವೆ.
1561 : ಶಾಂತೇಶನ ಸಿದ್ಧೇಶ್ವರ ಪುರಾಣ (ಭಾ.ಷ.)
1600 : ಸುವ್ವಿಮಲ್ಲನ ಸಿದ್ಧೇಶ್ವರನ ಸಾಂಗತ್ಯ
1600 : ಸಿದ್ಧನಂಜೇಶನ ತೋಂಟದ ಸಿದ್ಧದೇಶಿಕನ ಭಾವರತ್ನಾಭರಣ (ವಾ.ಷ.)
1600 : ಚೆನ್ನವೀರ ಜಂಗಮದೇವನ ಷಟ್‌ಸ್ಥಲ ವಲ್ಲಭ (ಚಂಪು)
1616 : ವಿರಕ್ತ ತೋಂಟದಾರ್ಯನ ಸಿದ್ಧೇಶ್ವರ ಪುರಾಣ (ವಾ.ಷ.)
1719-71 :ಹೇರಂಬ (ನಾರಾಯಣ)ನ ಸಿದ್ಧಲಿಂಗೇಶ್ವರ ಸಾಂಗತ್ಯ
1841: ಮರಿಸಿದ್ಧಲಿಂಗೇಶ್ವರಾಚಾರ್ಯನ ಅಷ್ಟಾವರಣ ಪ್ರಶಸ್ತಿ
1912 : ನಂ. ಶಿವಪ್ಪಶಾಸ್ತ್ರಿಗಳ ಸಿದ್ಧಲಿಂಗೇಶ್ವರ ವಿಜಯ (ಗದ್ಯ)
II. ಕೆಲವು ಕೃತಿಗಳಲ್ಲಿ ಇತರರ ಚರಿತೆಗಳೊಡನೆ ಸಿದ್ಧಲಿಂಗರ ಚರಿತ್ರೆ ಸಂಕ್ಷೇಪವಾಗಿ ಉಕ್ತವಾಗಿದೆ ಅಥವಾ ಅವರ ಜೀವನದ ಕೆಲವು ಘಟನೆಗಳು ಮಾತ್ರ ನಿರೂಪಿತವಾಗಿವೆ.
1570 : ಕವಿ ಪವಾಡನ [ತೋಂಟದ ಸಿದ್ಧಲಿಂಗ ತಾರಾವಳಿ]
1584 : ವಿರೂಪಾಕ್ಷ ಪಂಡಿತನ ಚೆನ್ನಬಸವಪುರಾಣ (ವಾ.ಷ.)
1600 : ಸುವ್ವಿಮಲ್ಲನ ತೋಂಟದ ಸಿದ್ಧೇಶ್ವರ ತಾರಾವಳಿ
1600 : ಸಿದ್ಧನಂಜೇಶನ ಗುರುರಾಜ ಚಾರಿತ್ರ (ವಾ.ಷ.)
1640 : ಗರುಣಿ ಬಸವಲಿಂಗನ ಸಿದ್ಧೇಶ್ವರನ ಮಹಿಮಾ ತಾರಾವಳಿ
1650 : ಮರುಳಸಿದ್ಧೇಶನ ಗುರುಲಿಂಗಜಂಗಮಚಾರಿತ್ರ (ಸಾಂ)
1750 : ಪುರಾಣದ ಸಿದ್ಧಲಿಂಗಾಚಾರ್ಯನ ಷಟ್‍ಸ್ಥಲ ಶಿವಾಯಣ (ಭಾ.ಷ.)
1963-70 :ಮಹಾದೇವನ ಮಹಾಲಿಂಗೇಂದ್ರ ವಿಜಯ (ವಾ.ಷ.)
? : ? ಪಟ್ಟವಲ್ಲರಿ (ಗದ್ಯ)
? : ? (ಬ್ಯಾಡಗಿ ಮುದ್ರಣ, 1905)
? : ? ನಿರಂಜನವಂಶ ರತ್ನಾಕರ (ಗದ್ಯ) (ಸಂ.) ಫ.ಗು. ಹಳಕಟ್ಟಿ
? : ? ನಿರಂಜನವಂಶ ರತ್ನಾಕರ (ಗದ್ಯ) (ಭಾಗ-2) (ಸಂ) ಚೆನ್ನಮಲ್ಲಿಕಾರ್ಜುನ
1909 : ಬಸವಪ್ಪಾ ವೀರಪ್ಪಾ ಕೋಟಿ ಅವರ ನಿರಂಜನ ಜಂಗಮವಂಶ ದರ್ಪಣ (ಗದ್ಯ)
III. ಸಿದ್ಧಲಿಂಗರ ಸ್ತುತಿರೂಪವಾದ ರಚನೆಗಳು
ಸು. 1650 : ನಂದಿ ಕೃತ ಸಿದ್ಧೇಶ್ವರ ತ್ರಿವಿಧಿ (55)
ಸು. 1650 : ಸಿದ್ಧಲಿಂಗೇಶ್ವರನ ಸಿದ್ಧೇಶ್ವರ ತ್ರಿವಿಧಿ (37)
ಸು. 1750 : ಸಿದ್ಧಲಿಂಗಮುನಿ ರಚಿತ ಸಿದ್ಧಲಿಂಗ ರಗಳೆ
ಸು. 1800 : ಸಿದ್ಧಲಿಂಗಾಷ್ಟಕ (ವೃತ್ತ 8) [ಶ್ರೀ ಮಹಾದ್ವಿರಾಜ...]
ಸು. 1800 : ಸಿದ್ಧಲಿಂಗಾಷ್ಟಕ (ವಾ.ಷ. 9) [ಸುದತಿ ಕೇಳ್..]
ಸು. 1800 : ಸಿದ್ಧೇಶ್ವರ ಅಷ್ಟಕ (ವೃತ್ತ 8) [ಭೋ ವನಿತೆ...]
ಸು. 1800 : ಬಸವಲಿಂಗರಾಜನ ಎಡೆಯೂರು ಸಿದ್ಧಲಿಂಗನ ದಯಾನಿಧಿ ಅಷ್ಟಕ (9 ವೃ)
ಸು. 1800 : ? ತೋಂಟದ ಸಿದ್ಧಲಿಂಗಾಷ್ಟಕ (8 ವೃ) [ಸ್ತುತಿಸಿ ಬದುಕುವೆ....]
ಸು. 1800 : ? ತೋಂಟದ ಸಿದ್ಧೇಶ್ವರನ ಅಷ್ಟಕ (8 ವೃ+ 1 ಕಂ) [ಶ್ರೀಮದ್ದೇವ.....]
? : ತೋಂಟದ ಸಿದ್ಧಲಿಂಗೇಶ್ವರನ ವಾರ್ಧಿಕ (25 ವಾ.ಷ.)
ಸು. 1912 : ಮಾಗಡಿ ವೀರಪ್ಪಶಾಸ್ತ್ರಿಗಳ ಸಿದ್ಧಲಿಂಗೇಶ್ವರ ಶತಕ (ವಾ.ಷ.)
ತೋಂಟದ ಸಿದ್ಧಲಿಂಗರ ವಚನಗಳಲ್ಲಿ ಅಲ್ಲಲ್ಲಿ ಬೆಡಗಿನ ವಚನಗಳೂ ಇವೆ. ಇವುಗಳಿಗೆ ಕಾಲಾನುಕ್ರಮದಲ್ಲಿ ಟೀಕೆಗಳು ರಚಿತಗೊಂಡಿವೆ. -ಸೋಮಶೇಖರಶಿವಯೋಗಿ (1700) ಕೃತ `ತೋಂಟದ ಸಿದ್ಧಲಿಂಗೇಶ್ವರನ ಷಟ್‌ಸ್ಥಲಜ್ಞಾನ ಸಾರಾಮೃತದ ಬೆಡಗಿನ ವಚನದ ಟೀಕೆ'. ಇದರಲ್ಲಿ 152 ವಚನಗಳಿಗೆ ಟೀಕೆ ಇದೆ.
*