*
ಅಂಕಿತ: |
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯ ಪ್ರಭುವೆ |
೧೬೯
ಅಂಗದ ಮೇಲೆ ಇಷ್ಟಲಿಂಗ ವ ಧರಿಸಿ
ಪೂಜೋಪಚಾರವ ಮಾಡುವವರು ಲಿಂಗಪ್ರಾಣಿಗಳಲ್ಲ.
ಎನ್ನ ಗುರುವೆಂದು ಭಾವಿಸಿ ಶರಣೆಂದು
ನಮಸ್ಕಾರ ಮಾಡುವವರು ಲಿಂಗಪ್ರಾಣಿಗಳಲ್ಲ.
ಜಂಗಮವೆಂದು ನಂಬಿ, ವಿಶ್ವಾಸ ಬಲಿದು,
ಪಾದಪೂಜೆಯ ಮಾಡಿ
ಪಾದೋದಕ ಪ್ರಸಾದವ ಕೊಂಬುವವರು ಲಿಂಗಪ್ರಾಣಿಗಳಲ್ಲ.
ಇಂತೀ ತ್ರಿಮೂರ್ತಿಗಳ ಪೂಜೆಯನ್ನು ಬಿಟ್ಟು
ಬಿಡದೆ ಪಿಡಿದು ಪೂಜಿಸುವವರು
ಪ್ರಾಣಲಿಂಗಿಗಳೆಂಬೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
ಈತ ಮಹಾರಾಷ್ಟ್ರದ ಸಿದ್ಧಗಿರಿಮಠದ ಸಂಪ್ರದಾಯಕ್ಕೆ ಸೇರಿದ ಪೀಠಾಧಿಪತಿ. ಕಾಲ = ಸು. ೧೭೨೫. 'ಸಂಗಮೇಶ್ವರದೇವರ ಕರಕಮಲದಲ್ಲಿ ಉತ್ಪತ್ಯವಾದ ಶಿಶುವು ಕಾಡಸಿದ್ಧ ನಾನಯ್ಯ' ಎ೦ದು ಹೇಳಿಕೊಂಡಿರುವುದರಿಂದ ಈ 'ಸಂಗಮೆಶ್ವರದೇವ' ಈತನ ಗುರುವಾಗಿರಬೇಕು. ಜಾಯಪ್ಪ ದೇಸಾಯಿಯ ಕುವಲಯಾನಂದ ಕೃತಿಯಲ್ಲಿ ಈತನ (ಕಾಡಸಿದ್ಧೇಶ್ವರನ) ಉಲ್ಲೇಖವಿದೆ. 'ವೀರಶೈವ ಷಟ್ ಸ್ಥಲ' ಕಾಡಸಿದ್ಧೇಶ್ವರನ ಕೃತಿಯ ಹೆಸರು. ಇದರಲ್ಲಿ ೫೦೦ ವಚನಗಳನ್ನು ಷಟ್ ಸ್ಥಲಾನುಗುಣವಾಗಿ ಜೋಡಿಸಲಾಗಿದೆ. ವಚನಾಂಕಿತ 'ಕಾಡನೊಳಗಾದ ಶಂಕರಪ್ರಿಯ ಚೆನ್ನ ಕದಂಬಲಿಂಗ ನಿಮಾ೯ಯ ಪ್ರಭುವೆ’ ಹೆಚ್ಚಾಗಿ ಎಲ್ಲ ವಚನಗಳು ಬೆಡಗಿನ ಪರಿಭಾಷೆಯಲ್ಲಿವೆ. ಷಟ್ ಸ್ಥಲ ತತ್ವ ಪ್ರತಿಪಾದನೆಯೇ ಇವುಗಳ ಪರಮಗುರಿಯಾಗಿದೆ. ಈ ಕೃತಿಯಲ್ಲಿ ಎದ್ದು ಕಾಣುವ ವಿಶೇಷತೆಯೆಂದರೆ ಮಧ್ಯ ಮಧ್ಯ ಬೇರೆ ಬೇರೆ ಶರಣರ ಹೆಸರುಗಳಡಿಯಲ್ಲಿ ಅವರವರ ಕಾಯಕದ ಪರಿಭಾಷೆ ಬಳಸಿ ವಚನಗಳನ್ನು ಹೆಣೆದಿರುವುದು. ಇಲ್ಲಿ ಕಂಡುಬರುವ ಶರಣರಲ್ಲಿ ಕೆಲವರು ೧೨ನೆಯ ಶತಮಾನದವರಾದರೆ, ಮತ್ತೆ ಕೆಲವರು ಇದುವರೆಗೆ ಎಲ್ಲಿಯೂ ಉಲ್ಲೇಖವಾಗದವರು. ಅವರಲ್ಲಿ ಪಿಂಜಾರ ಮಹಮದ ಖಾನಯ್ಯ, ವಲ್ಲಿ ಪೀರಣ್ಣ ಎಂಬಂಥ ಮುಸ್ಲಿಂ ಶರಣರ ಹೆಸರುಗಳೂ ಸೇರಿರುವುದು ಗಮನಾರ್ಹ. ಕೆಲವು ವಚನಗಳು ಉರ್ದು ಭಾಷೆಯಲ್ಲಿರುವುದು ಇನ್ನು ವಿಶೇಷ.
೬
ಆದಿ ಅನಾದಿಯಿಲ್ಲದಂದು ;
ಶೂನ್ಯ ನಿಃಶೂನ್ಯವಿಲ್ಲದಂದು:
ಸುರಾಳ ನಿರಾಳವಿಲ್ಲದಂದು ;
ಭೇದಾಭೇದಂಗಳೇನೂ ಇಲ್ಲದಂದು ;
ನಿಮ್ಮ ನೀವರಿಯದೇ ಇರ್ದಿರಲ್ಲ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
ಲಿಂಗಾಯತ ತತ್ತ್ವಬೋಧೆ ಮತ್ತು ನೀತಿಬೋಧೆ. ವಚನಗಳ ನಿರೂಪಣೆ ನೇರ ಹಾಗೂ ಸ್ಪಷ್ಟವಾಗಿದೆ. ದೇಶೀಭಾಷೆ ಮತ್ತು ಕಟೂಕ್ತಿಗಳನ್ನು ವಿಶೇಷವಾಗಿ ಅಳವಡಿಸಿಕೊಳ್ಳಲಾಗಿದೆ. ಬೆಡಗಿನ ವಚನಗಳು ಒಂದು ರೂಪಕದಂತೆ ಮೈತಾಳಿ ಅನ್ಯಾರ್ಥದ ಮೂಲಕ ತತ್ವವನ್ನು ಬಿತ್ತರಿಸುತ್ತದೆ
೨೦೫
ಉಣ್ಣಬೇಕು, ಉಡಬೇಕು, ಇಡಬೇಕು,
ಭೋಗಿಸಬೇಕೆಂಬರಯ್ಯ.
ಉಂಡದ್ದು ಏನಾಯಿತು ? ಉಟ್ಟಿದ್ದು ಏನಾಯಿತು ?
ಇಟ್ಟಿದ್ದು ಏನಾಯಿತು ? ಭೋಗಿಸಿದ್ದು ಏನಾಯಿತು ?
ಇಂತೀ ವಿಚಾರವ ಬಲ್ಲವರಾದರೆ ಪೇಳಿರಿ,
ಅರಿಯದಿದ್ದರೆ ಕೇಳಿರಿ ಎಲೆ ಮರುಳ ಮನುಜರಿರಾ,
ಅದೆಂತೆಂದಡೆ :
ಮೃಷ್ಟಾನ್ನವಾಗಲಿ, ಕೃಷ್ಣಾನ್ನವಾಗಲಿ ಆವ ಪದಾರ್ಥವಾದಡೇನು
ಉಂಡ ಮೂರು ಘಳಿಗೆಯ ಮೇಲೆ ನರಕವಾಗಿ ತೋರುವದು.
ಆ ಅನ್ನ ಹೆಚ್ಚಾಗಿ ಕೊಂಡಡೆ ಹೊಟ್ಟೆ ಉಬ್ಬಿ
ಕಮರಡರಕಿ ಬಂದು ಕರಸತ್ತ ಮರುವಿನ ಎಮ್ಮೆಯಂತೆ
ಪೃಷ್ಠ ಒದರುವದು.
ಮತ್ತಂ,
ಒಂದು ಹೊನ್ನಾಗಲಿ, ಐದು ಹೊನ್ನಾಗಲಿ,
ಹತ್ತು ಹೊನ್ನಾಗಲಿ, ನೂರು ಹೊನ್ನಾಗಲಿ,
ಇಂತೀ ಹೊನ್ನು ಮೊದಲಾದ
ಹೊನ್ನಿನ ವಸ್ತ್ರ ಶಾಲು ಶಕಲಾತಿ ಮೊದಲಾದ
ಆವ ವಸ್ತ್ರವಾದಡೇನು ಉಟ್ಟು ತೊಟ್ಟು ಪೊದ್ದಗಳಿಗೆಯ ಜಾವದಲ್ಲಿ
ನಿರಿಬಿದ್ದು ದಡಿ ಮಾಸಿ
ಮುಂದೆ ಅವು ವರುಷಾರುತಿಂಗಳಿಗೆ ಸವದು
ಹಣ್ಣಹರದು ಹರಿದು ಹೋಗುವವು.
ಮತ್ತಂ, ಬೆಳ್ಳಿ ಬಂಗಾರ ಮೊದಲಾದ
ವಸ್ತು ಒಡವೆಗಳು ಆವುದಾದರೇನು
ಅಂಗದ ಮೇಲೆ ಇಟ್ಟಲ್ಲಿ
ದಿನಚರ್ಯ ಮಾಸದ ಕಾಲದಲ್ಲಿ
ಸವಸವದು ಸಣ್ಣಾಗಿ ಹೋಗುವದು.
ಮತ್ತಂ, ಕನ್ಯಾಕುಮಾರಿ, ಮಿಂಡಿಹೆಣ್ಣು, ತುಂಟರಂಡಿ,
ಹಲವಾದ ಸ್ತ್ರೀ ಮೊದಲಾದ ಆವಳಾದರೇನು,
ಸಂಗವಾಗದಕ್ಕಿಂತ ಮುನ್ನವೆ ಚಲುವೆ,
ಸಂಗವಾದ ಬಳಿಕ ನೀರಿಲ್ಲದ ವೃಕ್ಷ
ಮೂಲಸಹವಾಗಿ ಕಿತ್ತು ಚೆಲ್ಲಿದಂತೆ.
ಉಭಯ ಸ್ತ್ರೀ ಪುರುಷರ ತನುವು ಜರ್ಜರಿತವಾಗಿ
ಸತ್ವಗುಂದಿ ಕೈಕಾಲ ಲಾಡಿ ಸತ್ತು,
ಕೈಯ್ಯೂರಿ ಏಳುವರು.
ಇಂಥ ಮಾಯಾವಿಲಾಸವ ಶಿವಜ್ಞಾನಿ ಶರಣ ಕಂಡು
ಆರೂ ಅರಿಯದೆ ವಿಸರ್ಜಿಸಿ
ತನ್ನ ಲಿಂಗದ ನೆನವಿನಲ್ಲಿ ಸ್ವಸ್ಥಿರಚಿತ್ತನಾಗಿರ್ದ ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
*