*
ಅಂಕಿತ: |
ಅತುಳವೈರಿ ಮಾರೇಶ್ವರಾ |
ಕಾಯಕ: |
ನಗೆಗಾರ - ನಗಿಸುವುದು ಒಂದು ಕಾಯಕವಾಗಿ ಸ್ವೀಕರಿಸಿರುವನು. |
೧೧೬೭
ಅಗಸನ ಮುನಿಸು ಕತ್ತೆಯ ಸ್ನೇಹ,
ಸರ್ಪನ ಮುನಿಸು ಕಪ್ಪೆಯ ಮೋಹ,
ಶಬರನ ಸೊಪ್ಪುಡಿಗೆ ಪ್ರಭೆಯವನ ನಂಬುಗೆ,
ಮೆರೆವಡಿಗನ ಮಾತು ಗುಡುಗಿನ ಮನೆ
ಇಂತಿವು ಅಡಗಿಹ ಭೇದವನರಿ,
ಆತುರವೈರಿ ಮಾರೇಶ್ವರಾ.
ನಗಿಸುವದನ್ನೇ ಕಾಯಕವನ್ನಾಗಿ ಮಾಡಿಕೊಂಡ ಹಾಸ್ಯ ಕಲಾವಿದನೀತ. ಕಾಲ-೧೧೬೦. 'ಆತುರವೈರಿ ಮಾರೇಶ್ವರ' ಅಂಕಿತದಲ್ಲಿ ೧0೧ ವಚನಗಳನ್ನು ರಚಿಸಿದ್ದಾನೆ. ಚತುರ ಮಾತುಗಾರಿಗೆ, ದೃಷ್ಟಾಂತ ಕಥೆಗಳು ಮತ್ತು ಹೋಲಿಕೆಗಳ ಮೂಲಕ ಕೇಳುಗರ ಮನಸ್ಸನ್ನು ರಂಜಿಸುವ ಕಲೆಗಾರಿಕೆ ಈ ವಚನಗಳಲ್ಲಿ ಎದ್ದು ತೋರುತ್ತದೆ. ಹಾಸ್ಯದ ಒಳಗೆ ಆಧ್ಯಾತ್ಮವನ್ನು ಅಡಗಿಸಿಕೊಂಡಿರುವುದು, ಸರಳತೆ, ಸಂಕ್ಷಿಪ್ತತೆಗಳನ್ನು ಮೈಗೊಡಿಸಿಕೊಂಡಿರುವುದು ಈತನ ವಚನಗಳ ವಿಶೇಷತೆ ಎನಿಸಿದೆ.
೧೨೫೧
ಲಿಂಗವ ಪೂಜಿಸುವಲ್ಲಿ ಲಿಂಗದ ಅಂಗವನರಿದು ಮುಟ್ಟಬೇಕು.
ಲಿಂಗಕ್ಕೆ ಅರ್ಪಿತವ ಮಾಡುವಲ್ಲಿ ಲಿಂಗದ ಆಪ್ಯಾಯನವನರಿವಲ್ಲಿ
ಉಚಿತವನರಿದು ಅರ್ಪಿಸಬೇಕು.
ತನ್ನ ಹಸಿವನರಿತು ಹುಸಿಯ ಪೂಜೆಯ ಕಂಡಡೆ,
ಕಿಸುಕುಳದಲ್ಲಿ ಇಕ್ಕುವ,
ಆತುರವೈರಿ ಮಾರೇಶ್ವರಾ.
ವಾಗದ್ವೈತಗಾರರ ವಿಡಂಬನೆ ಮಾಡಿರುವನು. ಊರಿಂದೂರಿಗೆ ಎತ್ತಿನಮೇಲೆ ಹಸ್ತಪ್ರತಿಗಳನ್ನು ಸಾಗಿಸುತ್ತಿದ್ದ ಚಿತ್ರ ಕೊಟ್ಟಿರುವನು.
೧೨೫೨
ವೇದ ಯೋನಿಯ ಹಂಗು.
ಶಾಸ್ತ್ರ ಯೋನಿಯ ಹಂಗು.
ಪುರಾಣ ಯೋನಿಯ ಹಂಗು.
ಆಗಮ ಯೋನಿಯ ಹಂಗು.
ನಾದದಿಂದ ಉದಿಸಿದವು ಶ್ರೋತ್ರದ ಹಂಗು.
ಹೇಳುವುದು ವೆಜ್ಜ, ಕೇಳುವುದು ವೆಜ್ಜ,
ತಾ ಹಿಂದೆ ಬಂದುದು ವೆಜ್ಜ, ಈಗ ನಿಂದು ಮಾಡುವುದು ವೆಜ್ಜ.
ಇಂತೀ ವೆಜ್ಜದಜ್ಜೆಯ ಗುದ್ದಿನಲ್ಲಿ ಬಿದ್ದವರಿಗೆ ನಿರ್ಧರವಿಲ್ಲ
ಆತುರವೈರಿ ಮಾರೇಶ್ವರಾ.
೧೨೨೮
ಬ್ರಹ್ಮ ಅವ್ವೆಯ ಗಂಡನಾದ.
ವಿಷ್ಣು ಅಕ್ಕನ ಗಂಡನಾದ.
ರುದ್ರ ಕಿರುತಂಗಿಯ ಗಂಡನಾದ.
ಈ ಮೂವರ ಹೋಬಳಿ ಇದೇನು ಚೋದ್ಯ!
ಇಂತಿವು ಮಾಯಾಮಲಯೋನಿ ಸಂಬಂಧ.
ಏಕಗುಣ ಭಾವ, ತರುಕೊಂಬು ಫಲದಂತೆ.
ಸಾಕು ಸಂಸರ್ಗ, ಆತುರವೈರಿ ಮಾರೇಶ್ವರಾ.
*