Previous ಮೆರೆಮಿಂಡಯ್ಯ ಮೈದುನ ರಾಮಯ್ಯ Next

ಮೇದರ ಕೇತಯ್ಯ

*
ಅಂಕಿತ: ಗವರೇಶ್ವರಲಿಂಗ
ಕಾಯಕ: ಬುಟ್ಟಿಹೆಣೆಯುವುದು (ಗವರಿಗೆ)

1401
ಎನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡನಯ್ಯಾ, ಬಸವಣ್ಣನು.
ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡನಯ್ಯಾ, ಚನ್ನಬಸವಣ್ಣನು
ಎನ್ನ ನೇತ್ರದಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡನಯ್ಯಾ, ಘಟ್ಟಿವಾಳ ಮುದ್ದಯ್ಯನು.
ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡನಯ್ಯಾ, ಸಿದ್ಧರಾಮಯ್ಯನು.
ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡನಯ್ಯಾ, ಮರುಳಶಂಕರದೇವರು,
ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡನಯ್ಯಾ, ಪ್ರಭುದೇವರು.
ಎನ್ನ ಸರ್ವಾಂಗದಲ್ಲಿ ಮೂರ್ತಿಗೊಂಡರು ಪ್ರಮಥರು.
ಗವರೇಶ್ವರಲಿಂಗದಲ್ಲಿ ಸುಖಿಯಾಗಿ ಬದುಕಿದೆನು ಕಾಣಾ,
ಮಡಿವಾಳ ಮಾಚಯ್ಯ.

ಬುಟ್ಟಿ ಹೆಣೆಯುವ ಕಾಯಕವನ್ನು ಕೈಕೊಂಡಿದ್ದ ಈತನ ಸ್ಥಳ ಬೇಲೂರ ಸಮೀಪದ ಉಳವಿಬೆಟ್ಟ. ಹೆಂಡತಿ ಸಾತವ್ವ. ಕಾಲ-1160. 'ಗವರೇಶ್ವರ' ಅಂಕಿತದಲ್ಲಿ ರಚಿಸಿದ 11 ವಚನಗಳು ದೊರೆತಿವೆ. ಅವುಗಳಲ್ಲಿ ಸಮಕಾಲೀನ ಶರಣರ ಸ್ತುತಿ, ತನ್ನ ಕಾಯಕದ ರೀತಿ-ನೀತಿ-ಮಹತ್ವ, ಅದರ ಮೂಲಕ ಪಡೆದುಕೊಂಡ ಲಿಂಗಾಂಗ ಸಾಮರಸ್ಯದ ಸುಖವನ್ನು ಬಣ್ಣಿಸಲಾಗಿದೆ.

ಮೊರದ ಹೊಲಿಗೆ ಗವರ ನಾನು `ಎಂದು ತನ್ನ ಬಗ್ಗೆ ಹೇಳಿಕೊಂಡಿರುವನು. ಲಿಂಗ ಕೆಳಗೆ ಬಿದ್ದಾಗ ನಿಂದಿಸಿ ನುಡಿದ ದ್ರೋಹಿಗಳ ಮಾತನ್ನು ಕೇಳಲಾಗದು ಎಂದಿರುವನು. ಭಕ್ತನಾದವನಿಗೆ ಸುಖ-ದುಃಖ, ಉರಿ-ಸಿರಿ ಎರಡೂ ಸಮಾನ ಎನ್ನದಿದ್ದರೆ ಭಕ್ತನಿಗೆ ಅದೇ ಹಾನಿ ಎನ್ನುವನು. ತನ್ನ ಭಕ್ತಿ ಬಸವಣ್ಣನಲ್ಲಿ, ಜ್ಞಾನ ಚನ್ನಬಸವಣ್ಣನಲ್ಲಿ, ವೈರಾಗ್ಯ ಪ್ರಭುದೇವರಲ್ಲಿ ಬಯಲಾಯಿತ್ತು. ಹೀಗೆ ಮೂವರೂ ಒಂದೊಂದನ್ನು ಬಯಲು ಮಾಡಿದ್ದರಿಂದ ಗವರೇಶ್ವರಲಿಂಗದಲ್ಲಿ ಮನ ನಿಶ್ಚಿಂತವಾಯಿತ್ತು ಎಂದಿರುವನು. ಬಸವಣ್ಣನ ಸ್ತುತಿ ಹಲವು ವಚನಗಳಲ್ಲಿ ಬಂದಿದೆ.

ಇಂದ್ರಿಯಂಗಳ ಕೊಂದೆಹೆನೆಂದಡೆ, ಅವು ಕಂದರ್ಪನ ಹಂಗು.
ಕಂದರ್ಪನ ಕೊಂದೆಹೆನೆಂದಡೆ, ಅವು ಕಂಗಳ ಲಾಭ.
ಕಂಗಳು ಮುಚ್ಚಿಯಲ್ಲದೆ ಲಿಂಗವ ಕಾಣಬಾರದು.
ಅದು ನಿರಂಗಂಗಲ್ಲದೆ, ಜಗದ ಹಂಗಿನವರಿಗಿಲ್ಲಾ ಎಂದೆ, ಗವರೇಶ್ವರಾ.

1400
ಎನ್ನ ಕಾಯದ ಕಳವಳವ ನಿಲಿಸಿ, ಗುರುಲಿಂಗವ ತೋರಿದ,
ಎನ್ನ ಮನದ ವ್ಯಾಕುಳವ ನಿಲಿಸಿ, ಜಂಗಮಲಿಂಗವ ತೋರಿದ,
ಇಂತು ಅಂತರಂಗ ಬಹಿರಂಗದಲ್ಲಿ ತಾನೆಯಾಗಿ, ಎನ್ನ ಪಾವನವ ಮಾಡಿದ,
ಅಮರಗಣಂಗಳು ಮುನಿದು ಎನ್ನ ಕೈಲಾಸಕ್ಕೆ ಒಯ್ದಡೆ,
ಸದ್ಯೋನ್ಮುಕ್ತಿಯ ತೋರಲೆಂದು ಮರ್ತ್ಯಕ್ಕೆ ಮರಳಿ ತಂದ
ಸಂಗನಬಸವಣ್ಣನೆ ಗುರುವೆನಗೆ, ಸಂಗನಬಸವಣ್ಣನೆ ಪರವೆನಗೆ.
ಸಂಗನಬಸವಣ್ಣನ ಕರುಣದಿಂದ, ಘನಕ್ಕೆ ಘನಮಹಿಮ ಅಲ್ಲಮಪ್ರಭುವಿನ
ಶ್ರೀಪಾದವ ಕಂಡು ಬದುಕಿದೆನು ಕಾಣಾ, ಗವರೇಶ್ವರಾ.


*
Previous ಮೆರೆಮಿಂಡಯ್ಯ ಮೈದುನ ರಾಮಯ್ಯ Next