Previous ಕರುಳ ಕೇತಯ್ಯ ಕಾಟಕೂಟಯ್ಯಗಳ ಪುಣ್ಯಸ್ಥ್ರೀ ರೇಚವ್ವೆ Next

ಕಲಕೇತಯ್ಯ

*
ಅಂಕಿತ: ಮೇಖಲೇಶ್ವರಲಿಂಗ
ಕಾಯಕ: ಜಾನಪದ ಆಟವಾದ ಕಿಳ್ಳಿಕೇತರ ಆಟ ಆಡುವವನು

೪೨
ಬೇಡಲೇತಕ್ಕೆ ಕಾಯಕವ ಮಾಡಿಹೆನೆಂದು?
ಕೊಡದಡೆ ಒಡಗೂಡಿ ಬಯ್ಯಲೇತಕ್ಕೆ?
ಒಡೆಯರು ಭಕ್ತರಿಗೆ ಮಾಡಿಹೆನೆಂದು
ಗಡಿತಡಿಗಳಲ್ಲಿ ಕವಾಟ ಮಂದಿರ ಮಂದೆ ಗೊಂದಿಗಳಲ್ಲಿ
ನಿಂದು ಕಾಯಲೇತಕ್ಕೆ?
ಈ ಗುಣ ಕಾಯಕದಂದವೆ?
ಈ ಗುಣ ಹೊಟ್ಟೆಗೆ ಕಾಣದ ಸಂಸಾರದ ಘಟ್ಟದ ನಿಲುವು.
ಉಭಯ ಭ್ರಷ್ಟಂಗೆ ಕೊಟ್ಟ ದ್ರವ್ಯ
ಮೇಖಲೇಶ್ವರಲಿಂಗಕ್ಕೆ ಮುಟ್ಟದೆ ಹೋಯಿತ್ತು.

'ಕಲಕೇತನಂತಪ್ಪ ತಂದೆ ನೊಡೆನಗೆ' ಎಂದು ಬಸವಣ್ಣನಿಂದ ಸ್ತುತಿಸಿಕೊಂಡ ಈತ ಒಬ್ಬ ಜಾನಪದ ಕಲಾವಿದ. ಕಿಳ್ಳಿಕೇತರಾಟ (ಕಲಕೇತ) ಎಂಬ ಕಲೆಯನ್ನು ಪ್ರದರ್ಶಿಸುವದು ಈತನ ಕಾಯಕ. ಹರಿಹರ, ಪಾಲ್ಕುರಿಕೆ ಸೋಮನಾಥ, ಭೀಮಕವಿ, ಲಕ್ಕಣ್ಣ ದಂಡ್ದೇಶರ ಕಾವ್ಯಗಳಲ್ಲಿ ಈತನ ಕಥೆ ಬರುತ್ತದೆ. ಕಾಲ - ೧೧೬೦. 'ಮೇಖಲೇಶ್ವರಲಿಂಗ' ಎಂಬ ಅಂಕಿತದಲ್ಲಿ ಹನ್ನೊ೦ದು ವಚನಗಳು ದೊರೆತಿವೆ. ತತ್ವ, ಬೆಡಗು, ಅನುಭಾವ ಇವುಗಳಲ್ಲಿ ಮುಪ್ಪುರಿಗೊಂಡಿವೆ.

೪೩
ಬೇಡುವ ಭಂಡನ, ಕೊಡದೆ ಹೋರುವ ಲಂಡನ
ಉಭಯದ ದ್ರವ್ಯವ ತಂದು, ಅಲ್ಲಿ ಉಂಡು,
ಸುಖಿಯಾದೆಹೆನೆಂಬ ಉಭಯ ಭಂಡನ ದಿಂಡಿಕೆ ಕೆಡೆಯದ
ಮೇಖಲೇಶ್ವರ ಲಿಂಗದ ಅಂಗವೇಕೆ ತಿಳಿಯದು.


*
Previous ಕರುಳ ಕೇತಯ್ಯ ಕಾಟಕೂಟಯ್ಯಗಳ ಪುಣ್ಯಸ್ಥ್ರೀ ರೇಚವ್ವೆ Next