Previous ಜೇಡರ ದಾಸಿಮಯ್ಯ ಢಕ್ಕೆಯ ಬೊಮ್ಮಣ್ಣ Next

ಜೋದರ ಮಾಯಣ್ಣ

*
ಅಂಕಿತ: ಸೋಮನಾಥಲಿಂಗ
ಕಾಯಕ: ಬಿಜ್ಜಳನ ಆನೆಪಡೆಯ ಮೇಲಧಿಕಾರಿ

೮೮೬
ಎನ್ನ ಪ್ರಾಣ ಮನ ಬುದ್ಧಿ ಚಿತ್ತಂಗಳು ನಿಮ್ಮ ತೊತ್ತಿರಯ್ಯಾ.
ಸತ್ವ ರಜ ತಮಂಗಳು ನಿಮ್ಮ ಭೃತ್ಯರಯ್ಯಾ.
ಅಂತಃಕರಣ ಚತುಷ್ಟಯಂಗಳು ನಿಮ್ಮ ಮಂತ್ರಿಗಳಯ್ಯಾ.
ಪಂಚೇಂದ್ರಿಯಂಗಳು ನಿಮ್ಮ ಪಡಿಹಾರರಯ್ಯಾ.
ಅರಿಷಡ್ವರ್ಗಂಗಳು ನಿಮ್ಮ ಲೆಂಕರಯ್ಯಾ.
ಸಪ್ತಧಾತುಗಳು ನಿಮ್ಮ ಬಾಣಸಿಗರಯ್ಯಾ.
ಅಷ್ಟಮದಂಗಳು ನಿಮ್ಮ ಭಂಡಾರಿಗಳಯ್ಯಾ.
ನವರಸಂಗಳು ನಿಮ್ಮ ಭಂಡಾರಿಗಳಯ್ಯಾ.
ದಶವಾಯಗಳು ನಿಮ್ಮ ಛತ್ರ ಚಾಮರ ಸೀಗುರಿಗಳಯ್ಯಾ.
ಷೋಡಶಕಳೆಗಳು ನಿಮ್ಮ ರಾಣಿವಾಸವಯ್ಯಾ.
ಶಂಭು ಸೋಮನಾಥಲಿಂಗ,
ನಿಮಗೆನ್ನ ಕಾಯ ಮುಂತಾಗಿ ಬಾಹತ್ತರ ಡಿಂಗರಿಗರಯ್ಯಾ!

ಈತ ಬಿಜ್ಜಳನ ಆಸ್ಥಾನದಲ್ಲಿ ಆನೆಯ ಪಡೆಯ ಮೇಲಾಧಿಕಾರಿಯಾಗಿದ್ದನೆಂದು ತಿಳಿದುಬರುತ್ತದೆ. ಕಾಲ-೧೧೬೦. ಐದು ವಚನಗಳು ದೊರಿತಿವೆ. ಅಂಕಿತ- ಸೋಮನಾಥಲಿಂಗ. ಭೃತ್ಯಭಾವ, ಪುರಾತನರ ಸ್ಮರಣೆ, ನಡೆ-ನುಡಿ ನಿಷ್ಠೆ, ಗುರುವಚನದ ಮಹತ್ವ ಅವುಗಳಲ್ಲಿ ವ್ಯಕ್ತವಾಗಿದೆ.

೮೮೭
ಕಾಮ ಹೊದ್ದಲಮ್ಮದು ಬಲ್ಲಾಳನ ನೆನೆದಡೆ
ಕ್ರೋಧ ಹೊದ್ದಲಮ್ಮದು ಪುರಾತನರ ನೆನೆದಡೆ
ಇವಾವೂ ಹೊದ್ದಲಮ್ಮವು
ಶಂಭು ಸೋಮನಾಥಲಿಂಗ ಶರಣೆಂಬವಂಗೆ!

ಪರಸ್ತ್ರೀಯರನ್ನು ಪಾರ್ವತಿ , ಗುರುಸತಿಯರೆಂದು ಭಾವಿಸಿದ್ದನು. ಬಲ್ಲಾಳನನ್ನು ನೆನೆದರೆ ಕಾಮವು ಮನಸ್ಸನ್ನು ಆವರಿಸದು, ಪುರಾತನರನ್ನು ನೆನೆದರೆ ಕ್ರೋಧ ಮನಸ್ಸನ್ನು ಆವರಿಸದು ಎಂದು ಹೇಳಿರುವನು.


*
Previous ಜೇಡರ ದಾಸಿಮಯ್ಯ ಢಕ್ಕೆಯ ಬೊಮ್ಮಣ್ಣ Next