Previous ಕಿನ್ನರಿ ಬೃಹ್ಮಯ್ಯ ಕುಷ್ಟಗಿ ಕರಿಬಸವೇಶ್ವರ Next

ಕೀಲಾರದ ಭೀಮಣ್ಣ

*
ಅಂಕಿತ: ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗ
ಕಾಯಕ: ಗೋವಳಿಗ

೭೬
ಹಲವು ಗಿರಿಗಳ ತಪ್ಪಲಲ್ಲಿ,
ಮಲೆಯ ಮಂದಿರಗಳಲ್ಲಿ
ಬಳನೆ ಬಳನೆ ಮೇದು
ಮತ್ತೆ ತಮ್ಮ ನೆಲಹೊಲಕ್ಕೆ ತಪ್ಪದೆ ಬಪ್ಪವು ನೋಡಾ.
ಆ ಪಶುವಿಂಗೆ ಕಟ್ಟು ಗೊತ್ತಿಲ್ಲ,
ಕಾವ ಕಟ್ಟಿಗೆ ಒಳಗಲ್ಲ.
ತಮ್ಮ ಠಾವಿಂಗೆ ಬಂದು ಹಾಲ ಕೊಟ್ಟು,
ಮತ್ತೆ ತಮ್ಮ ನೆಲೆಯ ಠಾವಿಗೆ ಹೋದ ಮತ್ತೆ ಕಾವಲು ತಪ್ಪಿಲ್ಲ,
ಕಾಲಕರ್ಮವಿರಹಿತ ತ್ರಿಪುರಾಂಕ ಲಿಂಗದೊಳ-ಗಾದವಂಗೆ.

ಪಶುಪಾಲನವೃತ್ತಿಯನ್ನು ತನ್ನ ಬದುಕಿನ ಮುಖ್ಯ ಮಣಿಹವನ್ನಾಗಿ ಮಾಡಿಕೊ೦ಡ ಈತನ ಕಾಲ - ೧೧೬೦. 'ಕಮ೯ಹರ ತ್ರಿಪುರಾಂತಕಲಿಂಗ' ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾನೆ. ದೊರೆತ ಹತ್ತು ವಚನಗಳಲ್ಲಿ ಅವನ ವೃತ್ತಿಗೆ ಸಂಬಂಧಿಸಿದ ವಿವರ ತುಂಬಿಕೊಂಡಿವೆ.

೬೯
ಕಂಟಕ ಬಂದಲ್ಲಿ ಸಂತೈಸಿಕೊಂಡು ಆತ್ಮನ ಸಂಚರಿಸದೆ
ನಿಷ್ಠೆಯಿಂದ ದೃಷ್ಟವ ಕಾಬುದೇ
ಶ್ರದ್ಧೆ ಸದ್ಭಕ್ತನ ಇರವು.
ವೃಥಾಳಾಪದಿಂದ ನಿಂದ, ದುರ್ಜನ ಬಂದಲ್ಲಿ
ಸಂದು ಸಂಶಯವಿಲ್ಲದೆ ಅಂಗವ ಬಂಧಿಸದೆ
ನಿಜಾತ್ಮನ ಸಂದೇಹಕಿಕ್ಕದೆ
ಪರಮಾನಂದಸ್ವರೂಪನಾಗಿ
ಬಂಧ ಮೋಕ್ಷಕರ್ಮಂಗಳ ಹರಿದಿಪ್ಪುದು
ಸರ್ವಾಂಗಲಿಂಗಿಯ ಅರಿವು.
ಅದು ಕರಿಗೊಂಡು ಎಡೆದೆರಪಿಲ್ಲದೆ
ಪರಿಪೂರ್ಣನಾದುದು ಪರಮ ವಿರಕ್ತನ ಪರಿ.
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗವು ತಾನಾದ
ಶರಣನ ಇರವು.

೭೪
ನಾನಾ ವರ್ಣದ ಗೋವುಗಳೆಲ್ಲವೂ ಕೂಡಿ
ಒಂದೇ ಹೊಲದಲ್ಲಿ ಮೇದು,
ಆರು ಕೆರೆಯ ನೀರ ಕುಡಿದು,
ಒಂದೇ ದಾರಿಯಲ್ಲಿ ಬಂದು,
ಮೂರು ಕೊಟ್ಟಿಗೆಯ ಗೊತ್ತಿಂಗೊಳಗಾದುವು.
ಬಿಟ್ಟು ಕರೆಯಲಾಗಿ ಗೋವಿಂಗೆ ಹಲವು,
ಹಾಲಿಗೆ ಏಕವರ್ಣ.
ಹಾಲ ತಂದು ಭಾಜನದಲ್ಲಿ ನೀಡಿ ಕಾಸುವಲ್ಲಿ
ಚಟ್ಟಿ ಹತ್ತದೆ, ಹಸುಕು ನಾರದೆ,
ಕೌರು ಏಳದೆ, ನೀರ ರಸ ತಪ್ಪಿ ಮಧುರ ರಸ ತುಂಬಿ
ಕಾಸಿ ಉಣಬಲ್ಲಡೆ ಆತನೆ ಭೋಗಿ.
ಆತ ನಿರತಿಶಯಾನುಭಾವ ಶುದ್ಧಾತ್ಮನು,
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗ ತಾನೆ.


*
Previous ಕಿನ್ನರಿ ಬೃಹ್ಮಯ್ಯ ಕುಷ್ಟಗಿ ಕರಿಬಸವೇಶ್ವರ Next