*
ಅಂಕಿತ: |
ಬಸವಪ್ರಿಯ ಕೂಡಲ ಚೆನ್ನಸಂಗಮದೇವ |
281
ಅಯ್ಯಾ, ವೈಷ್ಣವರಾದವರು ತಮ್ಮ ವಿಷ್ಣುವ ಬಿಟ್ಟು ಕಳೆದು,
ಲಿಂಗಭಕ್ತರಾದರನೇಕರು.
ಅಯ್ಯಾ, ಜೈನರಾದವರು ತಮ್ಮ ಜಿನನ ಬಿಟ್ಟು ಕಳೆದು,
ಲಿಂಗಭಕ್ತರಾದರನೇಕರು.
ಅಯ್ಯಾ, ದ್ವಿಜರಾದವರು ತಮ್ಮ ಕರ್ಮಂಗಳ ಬಿಟ್ಟು ಕಳೆದು,
ಲಿಂಗಭಕ್ತರಾದರನೇಕರು.
ಲಿಂಗವ ಬಿಟ್ಟು, ಇತರವ ಹಿಡಿದವರುಳ್ಳರೆ ಹೇಳಿರಯ್ಯಾ ?
ಉಳ್ಳಡೆಯೂ ಅವರು ವ್ರತಗೇಡಿಗಳೆನಿಸಿಕೊಂಬರು.
ಇದು ಕಾರಣ, ಋಷಿ ಕೃತಕದಿಂದಲಾದ ಕುಟಿಲದೈವಂಗಳ
ದಿಟವೆಂದು ಬಗೆವರೆ, ಬುದ್ಧಿವಂತರು ?
ಸಟೆಯ ಬಿಡಲಾರದೆ, ದಿಟವ ನಂಬಲಾರದೆ,
ನಷ್ಟವಾಗಿ ಹೋಯಿತ್ತೀ ಜಗವು ನೋಡಾ.
ಸಕಲದೈವಂಗಳಿಗೆ, ಸಕಲಸಮಯಂಗಳಿಗೆ
ನೀವೇ ಘನವಾಗಿ, ನಿಮಗೆ ಶರಣುವೊಕ್ಕೆನಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
ಹೆಸರಿನ ಹಿಂದೆ ಸೇರಿದ 'ಸಂಗಮೇಶ್ವರ' (ಕೂಡಲಸಂಗಮ) ಈತನ ಸ್ಥಳವಾಗಿರಬೇಕು. ಕಾಲ-೧೧೬೦. ವಚನಗಳಲ್ಲಿ ಉಕ್ತವಾದ ಹೇರಳ ಸಂಸ್ಕೃತ ಉದ್ಧರಣೆಗಳು ಈತನ ಪಾಂಡಿತ್ಯವನ್ನು ಸಾಬೀತುಪಡಿಸುತ್ತವೆ.
302
ಕುಲವುಳ್ಳನ್ನಕ್ಕ ಭಕ್ತನಲ್ಲ, ಛಲವುಳ್ಳನಕ್ಕ ಮಹೇಶ್ವರನಲ್ಲ,
ಫಲವುಳ್ಳನ್ನಕ್ಕ ಪ್ರಸಾದಿಯಲ್ಲ.
ಕುಲ ಗುರುಕೃಪೆಯ ಕೆಡಿಸಿತ್ತು, ಛಲ ಲಿಂಗಾರ್ಚನೆಯ ಕೆಡಿಸಿತ್ತು.
ಫಲ ದುಃಖಂಗಳಿಗೆ ಗುರಿ ಮಾಡಿತ್ತು.
ಕುಲಂ ಛಲಂ ಧನಂ ಚೈವ ಯೌವನಂ ರೂಪಮೇವ ಚ |
ವಿದ್ಯಾ ರಾಜ್ಯಂ ತಪಶ್ಚೈವ ತೇ ಚಾಷ್ಟಮದಾ ಸ್ಮೃತಾಃ ||
ಎಂದುದಾಗಿ,
ಒಂದು ಸುರೆಯ ಕುಡಿದವರು ಬಂಧುಬಳಗವನರಿಯರು.
ಎಂಟು ಸುರೆಯ ಕುಡಿದವರು ನಿಮ್ಮನೆತ್ತಬಲ್ಲರಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ ?
'ಬಸವಪ್ರಿಯ ಕೂಡಲಚೆನ್ನಸಂಗಮದೇವ' ಅಂಕಿತದಲ್ಲಿ ೧೦೨ ವಚನಗಳು ದೊರೆತಿವೆ. ಎಲ್ಲವೂ ತಾತ್ವಿಕವಾಗಿವೆ. ಅನ್ಯಮತ ಖಂಡನೆ, ಶಿವಪಾರಮ್ಯ ಸ್ಥಾಪನೆಗೆ ವಿಶೇಷ ಸ್ಥಾನ ಸಂದಿದೆ. ಶರಣಸ್ತುತಿ, ಶೂನ್ಯಸಿಂಹಾಸನ, ಅನುಭವ ಮಂಟಪಗಳ ಉಲ್ಲೇಖ, ಪ್ರಭುದೇವರು ಕಲ್ಯಾಣಕ್ಕೆ ಬಂದ ಪ್ರಸಂಗ ಮತ್ತು ಆರೋಗಣೆ ನಡೆಸಿದ ಸಂದರ್ಭಗಳನ್ನು ಪ್ರಸ್ತಾಪಿಸುವುದು ಮಹತ್ವದ ಅಂಶಗಳೆನಿಸಿವೆ. ತುಂಬ ದೀರ್ಘವಾಗಿದ್ದು ಗದ್ಯಲಕ್ಷಣವನ್ನು ಹೊಂದಿದ ರಚನೆಗಳ ಜೊತೆಗೆ ಮುಕ್ತಕ ರೂಪದ ವಚನಗಳೂ ಸಮಾವೇಶಗೊಂಡಿವೆ.
ಶಾಸ್ತ್ರಜ್ಞಾನ ಸಂಗಮೇಶ್ವರ ಅಪ್ಪಣ್ಣನಿಗೆ ಅಪಾರವಾಗಿದೆ. ಸಂಸ್ಕೃತ ಶ್ಲೋಕಗಳನ್ನು ಸಮಯೋಚಿತವಾಗಿ ಬಳಸಿ ವಿವರಣೆ ನೀಡಿರುವನು. ತರ್ಕ ಶಕ್ತಿ ಅಗಾಧವಾಗಿದೆ. ಲಿಂಗಾಯತ ತತ್ತ್ವ ಪ್ರತಿಪಾದನೆ ವಿಶೇಷವಾಗಿ ಕಂಡು ಬರುತ್ತದೆ. ಶಿವಪಾರಮ್ಯ, ಅನ್ಯಮತ ಖಂಡನೆ, ಬ್ರಾಹ್ಮಣರ ಕರ್ಮಠತನದ ಖಂಡನೆ, ಅಷ್ಟಾವರಣ, ಪಂಚಾಚಾರಗಳ ವಿವರಣೆ ಇವನ ವಚನಗಳಲ್ಲಿ ಬಂದಿದೆ
332
ಮನಕ್ಕೆ ಮನ ಒಂದಾಗಿ, ಭಾವಕ್ಕೆ ಭಾವ ಒಂದಾಗಿ,
ನಚ್ಚಿ ಮಚ್ಚಿದ ಶರಣರ ದರುಶನವಾದ ಬಳಿಕ,
ಎತ್ತಲೆಂದರಿಯೆನಯ್ಯಾ ಲೌಕಿಕವ.
ಬಸವಪ್ರಿಯ ಕೂಡಲಚೆನ್ನಸಂಗಾ, ನಿಮ್ಮ ಶರಣ ಪ್ರಭುದೇವರಿಗೆ
ಶರಣೆಂಬುದಲ್ಲದೆ ಅನ್ಯವನೇನೆಂದೂ ಅರಿಯೆನು.
*