*
ಅಂಕಿತ:
|
ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥಲಿಂಗ
|
ಕಾಯಕ:
|
ಗೋಪಾಲನೆ
|
೪೦೦
ವಿಷಕ್ಕೆ ಅಂಜುವರಲ್ಲದೆ ಸರ್ಪಂಗೆ ಅಂಜುವರುಂಟೆ?
ಕೊಲುವ ವ್ಯಾಘ್ರಂಗೆ ಅಂಜುವರಲ್ಲದೆ
ಸುಲಿದ ಬಣ್ಣಕ್ಕೆ ಅಂಜುವರುಂಟೆ?
ಅರಿವು ಸಂಪನ್ನರಲ್ಲಿ ಇದಿರೆಡೆಯಡಗಬೇಕಲ್ಲದೆ
ಬರುಕಾಯದ ದರುಶನ ಬಿರುಬರಲ್ಲಿ ಉಂಟೆ?
ನೆರೆಯರಿವಿನ ಹೊಲಬು ಕಾಯಕಾಂಡ ಕರ್ಮಕಾಂಡಿಗಳಲ್ಲಿ
ಜ್ಞಾನಹೀನ ಪಾಷಂಡಿಗಳಲ್ಲಿ ಆವ ಭಾವದ ಮಾರ್ಗವನು
ನಿಧಾನಿಸಿ ಉಪೇಕ್ಷಿಸಲಿಲ್ಲ.
ಗೋರಕ್ಷಪಾಲಕ ಮಹಾಪ್ರಭು
ಸಿದ್ಧಸೋಮನಾಥ ಲಿಂಗವನರಿದವರಲ್ಲಿಯಲ್ಲದೆ.
ಮೂಲತ: ನಾಥಪರಂಪರೆಗೆ ಸೇರಿದ ಈತನ ಮೂಲ ಹೆಸರು ಗೋರಖನಾಥ. ಮತ್ಸೇಂದ್ರನಾಥ ಈತನ ಗುರು. ಅವನಿಂದ ಅನೇಕ
ಸಿದ್ಧಿಗಳನ್ನು ಪಡೆದು ವಜ್ರಕಾಯನಾಗಿರುತ್ತಾನೆ. ಅಲ್ಲಮಪ್ರಭು ವಾದದಲ್ಲಿ ಇವನನ್ನು ಸೋಲಿಸಿ, ಇಷ್ಟಲಿಂಗ
ದೀಕ್ಷೆಯನ್ನು ನೀಡಿ, ಶೂನ್ಯಸಂಪಾದನೆಯ ಮಾರ್ಗವನ್ನು ತೋರಿಸುತ್ತಾನೆ. ಈತನ ಕಥೆ ಶೂನ್ಯ ಸಂಪಾದನೆ,
ಪ್ರಭುಲಿಂಗಲೀಲೆ ಮೊದಲಾದ ಕೃತಿಗಳಲ್ಲಿ ಪ್ರಸಿದ್ಧವಾಗಿದೆ. ಕಾಲ-೧೧೬೦. ಗೋರಕ್ಷನ ಜನ್ಮಸ್ಥಳ-ಪಟ್ಟದಕಲ್ಲು.
ಅಲ್ಲಿನ ಅರಸು ನರವರ್ಮನ ಗೋವುಗಳನ್ನು ಕಾಯುವ ವೃತ್ತಿಯನ್ನು ಕೈಕೊಂಡಿದ್ದ. ಐಕ್ಯಸ್ಥಳ-ಶ್ರೀಶೈಲ. 'ಗೋರಕ್ಷಪಾಲಕ
ಮಹಾಪ್ರಭು ಸಿದ್ಧಸೋಮನಾಥ ಲಿಂಗ' ಅಂಕಿತದಲ್ಲಿ ೧೧ ವಚನಗಳು ದೊರೆತಿವೆ. ನಾನಾ ರೀತಿಯ ಸಿದ್ಧಿ, ಜ್ಞಾನ,
ಯೋಗ, ಆತ್ಮ ವಿದ್ಯೆಗಳ ವಿವರ ಅವುಗಳಲ್ಲಿದೆ.
೪೦೧
ಹಿಟ್ಟಿನ ಲೆಪ್ಪದಲ್ಲಿ ಚಿತ್ರದ ಕರಚರಣಾದಿಗಳ ಮಾಡಿ
ತುಪ್ಪದ ಮಧುರದ ಸಾರವ ಕೂಡಿ
ಸುಟ್ಟು ಮೆದ್ದಲ್ಲಿ ಕಿಚ್ಚಿನಲ್ಲಿ
ಮತ್ತೆ ಕೈಕಾಲಿನ ಚಿತ್ರದ ಬಗೆಯುಂಟೆ?
ಇದು ನಿಶ್ಚಯ ವಸ್ತು ಸ್ವರೂಪು.
ಮತ್ರ್ಯದ ದೃಕ್ಕು ದೃಶ್ಯಕ್ಕೆ ನಿಶ್ಚಯವಾಗಿಹನು.
ಏಕಲಿಂಗ ನಿಷ್ಠೆವಂತರಲ್ಲಿ ಕಟ್ಟಳೆಯಾಗಿಹನು.
ಆತ್ಮಲಕ್ಷ ನಿರ್ಲಕ್ಷ
ಗೋರಕ್ಷಪಾಲಕ ಮಹಾಪ್ರಭು
ಸಿದ್ಧ ಸೋಮನಾಥ ಲಿಂಗವು.
ಮಚ್ಚೇಂದ್ರನಾಥನ ಶಿಷ್ಯ. ಯೋಗಸಿದ್ಧಿಯಿಂದ ದೇಹದ ಮೇಲೆ ಪ್ರಭುತ್ವ ಹೊಂದಿ, ಶ್ರೀಶೈಲದಲ್ಲಿದ್ದನು.
ಪ್ರಭುವಿನ ಸಂದರ್ಶನದ ನಂತರ ಇವನಲ್ಲಿ ಪರಿವರ್ತನೆಯಾಯಿತು. ವಚನಗಳನ್ನು ಈ ಘಟ್ಟದಲ್ಲಿ ಬರೆದಿರುವಂತಿದೆ.
ಶಿವಯೋಗಾನುಸಂಧಾನದ ವಿವರಗಳು ಇವನ ವಚನಗಳಲ್ಲಿವೆ.
೩೯೩
ಅವಧಿಜ್ಞಾನ ಅಂತರಿಕ್ಷಜ್ಞಾನ ಪವನಜ್ಞಾನ
ಪರಸ್ವರೂಪಜ್ಞಾನ ಪರಬ್ರಹ್ಮಜ್ಞಾನ ಪರತತ್ವಜ್ಞಾನ
ಸ್ವಯಜ್ಞಾನ ಸ್ವಾನುಭಾವಜ್ಞಾನ ಸರ್ವಪರಿಪೂರ್ಣಜ್ಞಾನ
ದಿವ್ಯಜ್ಯಾನವೆಂದು ಸಂಕಲ್ಪಿಸುವಾಗ
ಆ ಆತ್ಮಕ್ಕೆ ಅದು ನಿಜವೊ, ಅದರ ಪರಿಭ್ರಮಣವೊ?
ಸಕಲ ಶಸ್ತ್ರಂಗಳಿಂದ ಕಡಿವಡಿದಂಗ ಆತ್ಮಬಿಡುವಲ್ಲಿ
ಹಲವು ಶಸ್ತ್ರದ ಭೇದವೊ?
ಅಂಗದ ಆಯಧ ಗಾಯದ ಭೇದವೊ?
ಎಂಬುದ ತಿಳಿದು ಪದಪದಾರ್ಥಂಗಳ ಲಕ್ಷಿಸಿ ನಿರೀಕ್ಷಿಸಿಆರೋಪಿಸಬೇಕು.
ಒಂದು ವಿಶ್ವವಾದಲ್ಲಿ, ವಿಶ್ವ ಒಂದಾದಲ್ಲಿ
ಉಭಯದಲ್ಲಿ ನಿಂದು ತಿಳಿದಲ್ಲಿ
ಗೋರಕ್ಷಪಾಲಕ ಮಹಾಪ್ರಭು ಸಿದ್ಧ ಸೋಮನಾಥಲಿಂಗವುಒಂದೆನಬೇಕು.
*