Previous ಸೂಳೆ ಸಂಕವ್ವೆ ಸ್ವತಂತ್ರ ಸಿದ್ಧಲಿಂಗೇಶ್ವರ Next

ಸೊಡ್ಡಳ ಬಾಚರಸ

*
ಅಂಕಿತ: ಸೊಡ್ಡಳದೇವ, ಸೊಡ್ಡಳ
ಕಾಯಕ: ಬಿಜ್ಜಳನ ಅರಮನೆಯಲ್ಲಿ ಧಾನ್ಯ ಅಳೆದುಕೊಡುವುದರ ಲೆಕ್ಕ ಬರೆಯುವವನು

8೦3
ಲಿಂಗದೇವ ನೆ ಕರ್ತ, ಶಿವಭಕ್ತನೆ ಶ್ರೇಷ್ಠ.
ಕೊಲ್ಲದಿರ್ಪುದೆ ಧರ್ಮ.
ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ.
ಅಳುಪಿಲ್ಲದಿರ್ಪುದೆ ವ್ರತ.
ಇದೇ ಸತ್ಪಥ, ಉಳಿದುದೆಲ್ಲ ಮಿಥ್ಯವೆಂದೆ ಕಾಣಾ,
ದೇವರಾಯ ಸೊಡ್ಡಳಾ.

ಬಸವಣ್ಣನವರಿಗೆ ತುಂಬ ಆಪ್ತನೆನಿಸಿದ್ದ ಈತ ಬಿಜ್ಜಳನ ಅರಮನೆಯ ಕರಣಿಕ(ಲೆಕ್ಕಗುಮಾಸ್ತ)ನಾಗಿದ್ದ. ಈತ ಸೌರಾಷ್ಟ್ರ ಸೋಮೇಶ್ವರನ ಭಕ್ತ. ಬಸವಪುರಾಣ, ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರ ಮೊದಲಾದ ಕೃತಿಗಳಲ್ಲಿ ಈತನ ಜೀವನಕ್ಕೆ ಸಂಬಂಧಿಸಿದ ಕೆಲವು ವಿವರಗಳು ಬಂದಿವೆ. ಕಾಲ-೧೧೬೦. 'ಸೊಡ್ಡಳ' ಅಂಕಿತದಲ್ಲಿ ೧೦೨ ವಚನಗಳು ಉಪಲಬ್ಧವಾಗಿವೆ. ತತ್ವ ವಿವೇಚನೆ, ನೀತಿಭೋಧೆ, ಅನ್ಯಮತ, ಅನ್ಯದೈವದೂಷಣೆ, ಶಿವಭಕ್ತಿನಿಷ್ಠೆ ಇವುಗಳಲ್ಲಿ ವ್ಯಕ್ತವಾಗಿದೆ. ಭಾಷಾಪ್ರಯೋಗ, ನಿರೂಪಣಾ ಶೈಲಿ ಇತರರಿಗಿಂತ ಭಿನ್ನವಾಗಿದೆ. 739
ಉದ್ದವಾಗಿ ಕೂದಲು ನಿಮಿರ್ದು, ಗಡ್ಡಂಗಳು ಬೆಳದಡೇನು ಹೇಳಾ !
ಗಡ್ಡಂಗಳು ಬೆಳೆಯವೆ ಹೇಳಿರಣ್ಣಾ,
ದೊಡ್ಡದಾಗಿ ಬೆಳೆದ ಗಡ್ಡ ಹೋತುಗಳಿಗೆ.
ಗಡ್ಡದ ವೃದ್ಧ ವೈಶಿಕರ ಮೆಚ್ಚ,
ಮಹಾದೇವ ಸೊಡ್ಡಳ ಭಕ್ತಿ ಸಜ್ಜನರಲ್ಲದವರ.

ನೀತಿಬೋಧೆ, ಶರಣರಸತ್ಸಂಗ, ದೈವ ಹಾಗು ಜೀವನನಿಷ್ಠೆ, ಉತ್ಕಟ ಭಕ್ತಿ ವಚನಗಳಲ್ಲಿ ಮುಖ್ಯ ವಿಷಯ

736
ಈ ಪತ್ರೆಗೀ ಫಲ, ಈ ಪುಷ್ಪಕೀ ಫಲ,
ಈ ಪೂಜೆಗೀ ಫಲವೆಂಬ ಕೈಕೂಲಿಕಾರರೆಲ್ಲ ಕರ್ಮಿಗಳಯ್ಯಾ,
ಸ್ವರ್ಗನರಕಗಳನುಂಬ ಕರ್ಮಿಗಳಯ್ಯಾ.
ಒಡಲೊಡವೆ ಪಡೆದರ್ಥವ ಮೃಡದೇವ ಸೊಡ್ಡಳಂ,ಗರ್ಪಿತವೆಂದಾತ
ಬೆಡಗಿನ ಶಿವಪುತ್ರ, ಉಳಿದವರಂತಿರಲಿ,

737
ಉಂಡುಂಡು ಜರಿದವನು ಯೋಗಿಯೆ ?
ಅಶನಕ್ಕೆ ಅಳುವವನು ಯೋಗಿಯೆ ?
ವ್ಯಸನಕ್ಕೆ ಮರುಗುವವ[ನು] ಯೋಗಿಯೆ ?
ಆದಿವ್ಯಾಧಿಯುಳ್ಳವ[ನು] ಯೋಗಿಯೆ ?
ಯೋಗಿಗಳೆಂದಡೆ ಮೂಗನಾಗಳೆ ಕೊಯಿವೆ.
ಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳಾ,
ಸಿದ್ಧರಾಮನೊಬ್ಬನೆ ಶಿವಯೋಗಿ.

728
ಅಂಗ ಲಿಂಗಕ್ಕೆ ಗೂಡಾಯಿತ್ತು, ಲಿಂಗ ಅಂಗಕ್ಕೆ ಗೂಡಾಯಿತ್ತು.
ಅಂಗಲಿಂಗಸಂಗವೆಂಬ ಸಂದಳಿದು ನಿಜಲಿಂಗೈಕ್ಯವಾಯಿತ್ತು.
ಭಾವ ನಿರ್ಭಾವ ನಿಷ್ಪತ್ತಿಯಲ್ಲಿ,
ಮಹಾದಾನಿ ಸೊಡ್ಡಳಂಗೆ ಸರ್ವನಿರ್ವಾಣವಾಯಿತ್ತು.

812
ಶಿಖಿ ಬ್ರಾಹ್ಮಣ, ನಯನ ಕ್ಷತ್ರಿಯ, ನಾಶಿಕ ಬಣಜಿಗ, ಅಧರ ಒಕ್ಕಲಿಗ,
ಕರ್ಣ ಗೊಲ್ಲ, ಕೊರಳು ಕುಂಬಾರ, ಬಾಹು ಪಂಚಾಳ, ಅಂಗೈ ಉಪ್ಪಾರ,
ನಖ ನಾಯಿಂದ, ಒಡಲು ಡೊಂಬ, ಬೆನ್ನು ಅಸಗ, ಚರ್ಮ ಬೇಡ,
ಪೃಷ್ಠಸ್ಥಾನ ಕಬ್ಬಿಲಿಗ, ಒಳದೊಡೆ ಹೊಲೆಯ,
ಮೊಣಕಾಲು ಈಳಿಗ, ಕಣಕಾಲು ಸಮಗಾರ,
ಮೇಗಾಲು ಮಚ್ಚಿಗ, ಚಲಪಾದವೆಂಬ ಅಂಗಾಲು ಶುದ್ಧ ಮಾದಿಗ ಕಾಣಿರೊ!
ಇಂತೀ ಹದಿನೆಂಟುಜಾತಿ ತನ್ನಲಿ ಉಂಟು.
ಇವು ಇಲ್ಲಾಯೆಂದು ಜಾತಿಗೆ ಹೋರುವ ಅಜ್ಞಾನಿಗಳ
ನಮ್ಮ ಸೊಡ್ಡಳದೇವರು ಮೆಚ್ಚನಯ್ಯಾ.


*
Previous ಸೂಳೆ ಸಂಕವ್ವೆ ಸ್ವತಂತ್ರ ಸಿದ್ಧಲಿಂಗೇಶ್ವರ Next