Previous ಸಿದ್ಧಾಂತಿ ವೀರಸಂಗಯ್ಯ ಸೂಳೆ ಸಂಕವ್ವೆ Next

ಸುಂಕದ ಬಂಕಣ್ಣ

*
ಅಂಕಿತ: ಬಂಕೇಶ್ವರಲಿಂಗ
ಕಾಯಕ: ಸುಂಕಿಗ (Tax Collector)

612
ಎಲ್ಲರ ಸುಂಕ, ಎತ್ತು ತೊತ್ತು ಬಂಡಿ ಬಲ್ಲೆತ್ತು .
ಎನ್ನ ಸುಂಕ ಎಲ್ಲರ ಪರಿಯಲ್ಲ.
ಕಟ್ಟಿದ ಕುರುಹಿಂಗೆ, ಹಿಡಿದ ವ್ರತನೇಮನಿತ್ಯಕ್ಕೆ
ತಪ್ಪಲಿಲ್ಲಾಯೆಂದು ಕೊಟ್ಟ ಚೀಟ ಸಿಕ್ಕಿಸಿದೆ ನಿಮ್ಮಂಗದಲ್ಲಿ.
ಭಕ್ತರಾಗಿ ಕಳವು ಹಾದರ ಮಿಕ್ಕಾದೊಂದೂ ಬೇಡ
ಎಂದು ಕೊಟ್ಟ ಚೀಟು ವಿಶುದ್ಧಿ,
ಜಗದ ಸುಂಕದೊಡೆಯ ಬಂಕೇಶ್ವರಲಿಂಗನು.

ಪುರಾಣಗಳಲ್ಲಿ ಉಲ್ಲೇಖಿತನಾದ ಈತನ ಕಾಲ-೧೧೬೦. ಸುಂಕ (ತೆರಿಗೆ) ಸಂಗ್ರಹಿಸುವುದು ಕಾಯಕ. 'ಬಂಕೇಶ್ವರಲಿಂಗ' ಅಂಕಿತದಲ್ಲಿ ೧೦೮ ವಚನಗಳು ದೊರೆತಿವೆ. ಕಾಯಕದ ಪರಿಭಾಷೆಯನ್ನು ಬಳಸಿಕೊಂಡು ತತ್ವ ವಿವೇಚನೆ ಮಾಡುವುದು ಇವುಗಳ ಮುಖ್ಯ ಆಶಯವಾಗಿದೆ. ಹಲವು ಸ್ಥಲಗಳ ಅಡಿಯಲ್ಲಿ ವಚನಗಳನ್ನು ವಿಭಜಿಸಲಾಗಿದೆ. ಗಾತ್ರದಲ್ಲಿ ಚಿಕ್ಕವಾಗಿರುವ ವಚನಗಳು ಸರಳವಾಗಿವೆ. ಕೆಲವು ಬೆಡಗಿನ ಭಾಷೆಯಲ್ಲಿವೆ. ವ್ಯಾಪಾರ ಪದ್ಧತಿ, ಸುಂಕ ಪದ್ಧತಿ, ಸರಕು ಸಾಗಾಣಿಕೆಯ ಸಾಧನಗಳನ್ನು ಕುರಿತ ವಿವರಣೆಗಳನ್ನೊಳಗೊಂಡ ವಚನಗಳು ಸಾಂಸ್ಕೃತಿಕ ದೃಷ್ಟಿಯಿಂದ ಮಹತ್ವದವೆನಿಸಿವೆ.

715
ಬಸವಣ್ಣನೆ ಗುರುಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ.
ಚೆನ್ನಬಸವಣ್ಣನೆ ಲಿಂಗಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ.
ಸಿದ್ಧರಾಮಯ್ಯನೆ ಜಂಗಮಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ.
ಮರುಳಶಂಕರದೇವರೆ ಪ್ರಸಾದಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದರಯ್ಯಾ.
ಪ್ರಭುದೇವರೆ ಜ್ಞಾನಮೂರ್ತಿಯಾಗಿ ಎನ್ನ ಹೃದಯಸ್ಥಲಕ್ಕೆ ಬಂದರಯ್ಯಾ.
ಇವರು ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳು,
ಎನ್ನ ಸರ್ವಾಂಗದಲ್ಲಿ ಮೂರ್ತಿಗೊಂಡರು, ಸರ್ವತೋಮುಖವಾಗಿ.
ಆಹಾ ಎನ್ನ ಪುಣ್ಯವೆ, ಆಹಾ ಎನ್ನ ಭಾಗ್ಯವೆ,
ಆಹಾ ಎನ್ನ ಸತ್ಯವೆ, ಆಹಾ ಎನ್ನ ನಿತ್ಯವೆ.
ಹರಹರಾ, ಶಿವಶಿವಾ ಮಹಾದೇವಾ ಮಹಾದೇವಾ,
ತ್ರಿಕಾಲದಲ್ಲಿಯೂ ನಿಮ್ಮ ಶರಣರ ಶ್ರೀಪಾದವ ನೆನೆವುತಿರ್ದೆನಯ್ಯಾ,
ವೀರಬಂಕೇಶ್ವರಾ.

689
ಭವಿಸಂಗವನೊಲ್ಲೆನೆಂದು, ಭವಿಗಳ ಮನೆಯಲ್ಲಿ ಉಣ್ಣೆನೆಂದು,
ಭವಿಗಳಿಗೆ ಇಕ್ಕೆನೆಂದು, ಭವಿಪಾಕದ ಕ್ಷಾರ ಕ್ರಮುಕ ಮಧುರ ತಿಲ ಚೂರ್ಣ
ಇವು ಮೊದಲಾದ ದ್ರವ್ಯಂಗಳ ಭಕ್ಷಿಸಿ, ಪ್ರೇತರ ಕೂಟವನೊಲ್ಲೆನೆಂಬ,
ಜಗನೀತಿಯ ವರ್ತಕರುಗಳಿಗೆ ಅದೇತರ ಶೀಲ,
ಬಂಕೇಶ್ವರಲಿಂಗದಲ್ಲಿ ?

671
ಸರ್ವಜೀವಕ್ಕೆ ದಯವೆ ಮೂಲಮಂತ್ರ.
ಸರ್ವರ ಭೂತಹಿತವೆ ದಿವ್ಯಜ್ಞಾನ.
ಇಂತೀ ಉಭಯವನರಿತಲ್ಲಿ ಸದಮಲಪೂಜೆ.
ಹೀಗಲ್ಲದೆ ಬೆನ್ನ ತಡಹಿ, ಅನ್ನವನಿಕ್ಕಿ,
ತಿನ್ನು ಕೊಲ್ಲು ಎಂಬವನ ಪೂಜೆ.
ಅವನನ್ನದ ಹಿರಣ್ಯದ ಒದಗು.
ಅವನ ಮಾಟದ ಮರುಳಾಟ, ಏತದ ಕೂನಿಯ ಘಾತದ ವೆಜ್ಜದಂತೆ,
ಅವನ ನೀತಿಯ ಇರವು, ಬಂಕೇಶ್ವರಲಿಂಗಾ.


*
Previous ಸಿದ್ಧಾಂತಿ ವೀರಸಂಗಯ್ಯ ಸೂಳೆ ಸಂಕವ್ವೆ Next