*
ಅಂಕಿತ:
|
ಕಾಲಾಂತಕ ಭಿಮೇಶ್ವರಲಿಂಗ
|
ಕಾಯಕ:
|
ಡೊಳ್ಳು ಬಾರಿಸುತ್ತ, ಉಡಿಯಲ್ಲಿ ತಡಿಯಲ್ಲಿ ಬೇವಿನ ಸೊಪ್ಪನ್ನು ಕಟ್ಟಿಕೊಂಡು, ಬಾಳು ಬಟ್ಟಲನ್ನು ಕೈಯಲ್ಲಿ
ಹಿಡಿದುಕೊಂಡು, ಬಳೆಯನ್ನು ಕೈಗೆ ತೊಟ್ಟುಕೊಂಡು, ಮಾರಿಯನ್ನು ಮೊರದಲ್ಲಿ ಹಾಕಿಕೊಂಡು ಭಕ್ತರ ಮನೆಮನೆಯ
ಮುಂದೆ ನಿಂತು ಬೇಡುವುದು ಇವನ ಕಾಯಕವಾಗಿದ್ದಿರಬಹುದು.
|
೯೧೩
ಎನ್ನ ಮನವೆ ಬಸವಣ್ಣನು.
ಎನ್ನ ಬುದ್ಧಿಯೆ ಚನ್ನಬಸವಣ್ಣನು.
ಎನ್ನ ಚಿತ್ತವೆ ಸಿದ್ಧರಾಮಯ್ಯನು.
ಎನ್ನ ಅಹಂಕಾರವೆ ಮಡಿವಾಳಯ್ಯನು.
ಎನ್ನ ಕ್ಷಮೆಯೆ ನಿಜಗುಣದೇವರು.
ಎನ್ನ ದಮೆಯೆ ಘಟ್ಟಿವಾಳಯ್ಯನು.
ಎನ್ನ ಶಾಂತಿಯೆ ಅಜಗಣ್ಣನು.
ಎನ್ನ ಸೈರಣೆಯೆ ಪ್ರಭುದೇವರು.
ಎನ್ನ ಹರುಷವೆ ಏಳುನೂರೆಪ್ಪತ್ತು ಅಮರಗಣಂಗಳು.
ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ,
ಕಾಲಾಂತಕ ಭೀಮೇಶ್ವರಲಿಂಗವೆ.
ಈತನಿಗೆ ಡಕ್ಕೆಯ ಮಾರಯ್ಯ ಎಂದೂ ಕರೆಯಲಾಗುತ್ತದೆ. ಈತ ಒಬ್ಬ ಜಾನಪದ ಕಲಾವಿದ. ಶರಣನಾಗುವ ಮೊದಲು ಮಾರಿಯನ್ನು
ತಲೆಯ ಮೇಲೆ ಹೊತ್ತು ಢಕ್ಕೆಯನ್ನು ಬಾರಿಸುತ್ತ ಭಿಕ್ಷೆ ಬೇಡುವುದು ಈತನ ಕಾಯಕವಾಗಿತ್ತು. ಶಂಕರ ದಾಸಿಮಯ್ಯನ
ಗರ್ವವನ್ನು ಈತ ಮುರಿದನೆಂದು ವೀರಶೈವಾಮೃತ ಮಹಾಪುರಾಣ ಹೇಳುತ್ತದೆ. ಕಾಲ-೧೧೩0. 'ಕಾಲಾಂತಕ ಭಿಮೇಶ್ವರಲಿಂಗ'
ಅಂಕಿತದಲ್ಲಿ ೯0 ವಚನಗಳು ದೊರಿತಿವೆ. ಅವುಗಳಲ್ಲಿ ತನ್ನ ಕಲೆಯ ವೇಷ ಭೂಷಣ ಮತ್ತು ಪರಿಭಾಷೆಯನ್ನು ಆಧ್ಯಾತ್ಮಿಕ್ಕೆ
ಸಂಕೇತವಾಗಿ ಬಳಸಿದ್ದಾನೆ. ತನ್ನ ವ್ಯಕ್ತಿತ್ವವನ್ನು ರೂಪಿಸಿದ ಬಸವಾದಿ ಶರಣರನ್ನು ನೆನೆಯುತ್ತಾನೆ.
೯೩೬
ಧ್ಯಾನದಿಂದ ವಸ್ತು, ವಿಷಯದಿಂದ ಮೋಹ, ಭಾವಶುದ್ಧದಿಂದ ಗುರು,
ದ್ವಂದ್ವವಳಿದು ನಿಂದುದು ಲಿಂಗ,
ತ್ರಿವಿಧದ ಸಂದನಳಿದು ಸಲೆ ಸಂದುದು ಜಂಗಮ.
ಈ ಸ್ಥಲದ ಅಂಗವನರಿದು ಉಭಯ ಭಂಗವಿಲ್ಲದೆ
ಸುಸಂಗದಿಂದ ಮಾಡುವುದು ಭಕ್ತಿಸ್ಥಲ.
ನಿಶ್ಚಯವಾಗಿ ನಿಂದುದು ಕಾಲಾಂತಕ ಭೀಮೇಶ್ವರಲಿಂಗಕ್ಕೆ
ನಿಶ್ಚೆ ಸಿದ ಉಭಯ ಭಾವ.
೯೧೭
ಕಾಯವೆಂಬ ಡಕ್ಕೆಯ ಮೇಲೆ
ಜೀವವೆಂಬ ಹೊಡೆಚೆಂಡು ಬೀಳೆ
ತ್ರಿವಿಧವ ತಾ ತಾಯೆಂಬ ಆಸೆ ಹಿಂಡಿ ಡಿಂಡಿಯೆನುತ್ತಿದೆ.
ಇಂತೀ ಉಲುಹಿನ ಭೇದದಲ್ಲಿ
ಹೊಲಬುದ್ಧಪ್ಪದೆ ಗೆಲಬೇಕು ಕಾಲವೆಂಬ ಮಾರಿಯ,
ಕಾಲಾಂತಕ ಭೀಮೇಶ್ವರಲಿಂಗವನರಿಯಬಲ್ಲಡೆ.
*