Previous ಮಧುವಯ್ಯ ಮನುಮುನಿ ಗುಮ್ಮಟದೇವ Next

ಮನಸಂದ ಮಾರಿತಂದೆ

*
ಅಂಕಿತ: ಮನಸಂದಿತ್ತು ಮಾರೇಶ್ವರಾ

ವೇದವ ಕಲಿತಲ್ಲಿ, ಪಾಠಕನಲ್ಲದೆ ಜ್ಞಾನಿಯಲ್ಲ, ನಿಲ್ಲು.
ಶಾಸ್ತ್ರ ಪುರಾಣವನೋದಿದಲ್ಲಿ, ಪಂಡಿತನಲ್ಲದೆ ಜ್ಞಾನಿಯಲ್ಲ, ನಿಲ್ಲು.
ವ್ರತ ನೇಮ ಕೃತ್ಯ ಪೂಜಕನಾದಡೇನು ? ದಿವ್ಯಜ್ಞಾನದ ಠಾವನರಿಯಬೇಕು.
ಈ ಭೇದಂಗಳ ತಿಳಿದರಿದಲ್ಲಿ, ಮನಸಂದಿತ್ತು ಮಾರೇಶ್ವರಾ./೯೮೪ [1]

ಈತನ ಜೀವನ ವಿವರಗಳು ದೊರೆತಿಲ್ಲ. ಕಾಲ-೧೧೬೦. 'ಮನಸಂದಿತ್ತು ಮಾರೇಶ್ವರ' ಅಂಕಿತದಲ್ಲಿ ೧೦೧ ವಚನಗಳು ದೊರೆತಿವೆ. ಗುರುಲಿಂಗಜಂಗಮ ವಿಚಾರ, ಲಿಂಗಾಂಗ ಸಾಮರಸ್ಯದ ರೀತಿ, ವ್ರತ ನೇಮಗಳ ವಿವರ, ಧರ್ಮಭ್ರಷ್ಟರ ಟೀಕೆ-ಇವುಗಳಲ್ಲಿ ಪ್ರತಿಪಾದನೆಗೊಂಡಿವೆ.

ರಾಜನ ಭಕ್ತಿ ತಾಮಸದಿಂದ ಕೆಟ್ಟಿತ್ತು.
ಪಂಡಿತನ ಯುಕ್ತಿ ಖಂಡನವಿಲ್ಲದೆ ನಿಂದಿತ್ತು.
ಸುಸಂಗಿಯ ನಿರಂಗ ದುಸ್ಸಂಗದಿಂದ ಕೆಟ್ಟಿತ್ತು.
ಪತಂಗನಂತಾಗದೆ ಮುನ್ನವೆ ನಿನ್ನ ನೀನರಿ.
ಅರಿದಡೆ ನಿನಗಿದಿರಿಲ್ಲ, ಮನಸಂದಿತ್ತು ಮಾರೇಶ್ವರಾ. /೯೭೮ [1]

ವಚನಗಳು ಗಾತ್ರದಲ್ಲಿ ಚಿಕ್ಕವು. ಲಿಂಗಾಂಗ ಸಾಮರಸ್ಯ, ಗುರು-ಲಿಂಗ-ಜಂಗಮ ಲಕ್ಷಣ, ಜ್ಞಾನಿಯ ಇರವು, ಶಿವಭಕ್ತರ ವ್ರತನೇಮ, ಆತ್ಮನಸ್ವರೂಪ, ಧರ್ಮಭ್ರಷ್ಟರ ವಿಡಂಬನೆ-ವಚನಗಳಲ್ಲಿ ಬಂದಿವೆ.

ಖ್ಯಾತಿಲಾಭಕ್ಕೆ ಮಾಡುವಾತ ಭಕ್ತನಲ್ಲ.
ಡಂಬಕಕ್ಕೆ ಡೊಂಬರಂತೆ ತಿರುಗುವವ ಜಂಗಮವಲ್ಲ.
ತನು ತಲೆ ಬತ್ತಲೆಯಾಗಿ,
ಮನ ತ್ರಿವಿಧ ಆಸೆ ಉಳ್ಳನ್ನಕ್ಕ ವಿರಕ್ತನಲ್ಲ.
ಇಂತೀ ಗುಣವ ಸಂಪಾದಿಸುವನ್ನಕ್ಕ,
ಎನಗೆ ಮುಕ್ತಿಯೆಂಬ ಬಟ್ಟೆಯಿಲ್ಲ.
ನೀ ಸತ್ತೆ, ನಾ ಕೆಟ್ಟೆ, ಮನಸಂದಿತ್ತು ಮಾರೇಶ್ವರಾ./೯೪೨ [1]

ಗೋವಧೆಯ ಮಾಡಿ, ಗೋದಾನವ ಮಾಡಿದಡೆ,
ಕೊಂದ ಕೊಲೆಗೂ ಮಾಡಿದ ದಾನಕ್ಕೂ ಸರಿಯೆ ?
ಆಚಾರಕ್ಕೂ ಅನಾಚಾರಕ್ಕೂ ಪಡಿಪುಚ್ಚವುಂಟೆ ?
ನೇಮಕ್ಕೆ ಹಾನಿಯಾದಲ್ಲಿ
ಭಂಗಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ. /೯೪೮ [1]

[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಮಧುವಯ್ಯ ಮನುಮುನಿ ಗುಮ್ಮಟದೇವ Next