Previous ಕನ್ನದ ಮಾರಿತಂದೆ ಕರುಳ ಕೇತಯ್ಯ Next

ಕರಸ್ಥಲದ ಮಲ್ಲಿಕಾರ್ಜುನ ದೇವ/ಕರಸ್ಥಲದ ಮಲ್ಲಿಕಾರ್ಜುನೊಡೆಯ

*
ಅಂಕಿತ: ಪರಮಗುರು ಶಾಂತೇಶ/ಪರಮ ಗುರು ಶಾಂತಮಲ್ಲಿಕಾರ್ಜುನಾ
ಕಾಯಕ: ಗುರು/ಜಂಗಮ


ಕರಸ್ಥಲದಲ್ಲಿದ್ದ ಲಿಂಗವ ಬಿಟ್ಟು
ಧರೆಯ ಮೇಲಣ ಪ್ರತಿಷ್ಠೆಗೆರಗುವ
ನರಕಿ ನಾಯಿಗಳನೇನೆಂಬೆನಯ್ಯ
ಪರಮಗುರು ಶಾಂತಮಲ್ಲಿಕಾರ್ಜುನ !

'ಬ್ರಹ್ಮಾದ್ವೈತ ಸಿದ್ಧಾಂತ ಷಟ್ ಸ್ಥಲಾಭರಣ" ಎಂಬ ಕೃತಿಯನ್ನು ಸಂಕಲಿಸಿದ ಈತನ ಜೀವನ ಸಂಗತಿಗಳು ಹೆಚ್ಚಿಗೆ ದೊರೆತಿಲ್ಲ. ಕರಸ್ಥಲ ಪರಂಪರೆಯ ಶಾಂತೇಶೆ ಗುರು. ಕಾಲ-೧೪೦೯-೧೪೪೭. 'ಪರಮಗುರು ಶಾಂತೇಶ' ಅಂಕಿತದಲ್ಲಿ ನಾಲ್ಕು, ವಚನಗಳು ದೊರೆತಿವೆ. ಅವುಗಳಲ್ಲಿ ಇಷ್ಟಲಿಂಗ ದಲ್ಲಿ ನಿಷ್ಟೆಯಿಲ್ಲದವರ ಟೀಕೆ, ಸಂಸಾರದಲ್ಲಿ ಮೈಮರೆತವರ ರೀತಿ, ಅಂತರಂಗದಲ್ಲಿ ಅರಿವಿಲ್ಲದ ಬಹಿರಂಗದ ಕ್ರೀವಂತರ ವಿಮರ್ಶೆ, ಪರಶಿವಯೋಗಿಯ ಸ್ವರೂಪ ವಣ೯ನೆ ಮಾಡಲಾಗಿದೆ.


ಸತಿಯರ ನೋಡಿ ಸಂತೋಷವ ಮಾಡಿ,
ಸುತರ ನೋಡಿ ಸುಮ್ಮಾನವನೈದಿ,
ಮತಿಯ ಹೆಚ್ಚುಗೆಯಿಂದ ಮೈಮರದೊರಗಿ
ಸತಿಸುತರೆಂಬ ಸಂಸಾರದಲ್ಲಿ
ಮತಿಗೆಟ್ಟು ಮರುಳಾದುದನೇನೆಂಬೆ
ಎನ್ನ ಪರಮಗುರು ಶಾಂತಮಲ್ಲಿಕಾರ್ಜುನಾ.


ಅಂತರಂಗದಲ್ಲಿ ಅರಿವಿಲ್ಲದವಂಗೆ
ಬಹಿರಂಗದಲ್ಲಿ ಕ್ರೀಯಿದ್ದು ಫಲವೇನು ?
ಅದು ಕಣ್ಣಿಲ್ಲದವನ ಬಾಳುವೆಯಂತೆ.
ಬಹಿರಂಗದಲ್ಲಿ ಕ್ರೀಯಿಲ್ಲದವಂಗೆ
ಅಂತರಂಗದಲ್ಲಿ ಅರಿವಿದ್ದು ಫಲವೇನು ?
ಅದು ಶೂನ್ಯಾಲಯದ ದೀಪದಂತೆ.
ಅಂತರಂಗದ ಅರಿವು, ಬಹಿರಂಗದ ಕ್ರಿಯೆ-
ಈ ಉಭಯಾಂಗವೊಂದಾಗಬೇಕು.
ಅದೆಂತೆಂದಡೆ :
ಅಂತರ್ಜ್ಞಾನ ಬಹಿಃಕ್ರಿಯಾ ಏಕೀಭಾವೋ ವಿಶೇಷತಃ
ಎಂದುದಾಗಿ,
ಅಂತರಂಗದಲ್ಲಿ ಅರಿವು, ಬಹಿರಂಗದಲ್ಲಿ ಕ್ರೀಯುಳ್ಳ ಮಹಾತ್ಮನೆ
ಭಕ್ತನಪ್ಪ, ಮಹೇಶ್ವರನಪ್ಪ, ಪ್ರಸಾದಿಯಪ್ಪ
ಪ್ರಾಣಲಿಂಗಿಯಪ್ಪ, ಶರಣನೈಕ್ಯನಪ್ಪ.
ನಮ್ಮ ಪರಮಗುರು ಶಾಂತಮಲ್ಲಿಕಾರ್ಜುನ ತಾನೆಯಪ್ಪ.



ವಾರಿಧಿಯೊಳಗಣ ವಾರಿಕಲ್ಲ ಕಡಿದು
ತೊಲೆ ಕಂಬವ ಮಾಡಿ ಮನೆಯ ಕಟ್ಟಿಕೊಂಡು
ಒಕ್ಕಲಿರಬಹುದೆ ಅಯ್ಯಾ ?
ಅಗ್ನಿಯೊಳಗಿಪ್ಪ ಕರ್ಪುರವ ಕರಡಿಗೆಯ ಮಾಡಿ
ಪರಿಮಳವ ತುಂಬಿ, ಅನುಲೇಪನಮಾಡಿ
ಸುಖಿಸಬಹುದೆ ಅಯ್ಯಾ ?
ವಾಯುವಿನೊಳಗಣ ಪರಿಮಳವ ಹಿಡಿದು
ದಂಡೆಯ ಕಟ್ಟಿ ಮಂಡೆಯೊಳಗೆ
ಮುಡಿಯಬಹುದೆ ಅಯ್ಯಾ ?
ಬಯಲ ಮರೀಚಿಕಾಜಲವ ಕೊಡನಲ್ಲಿ ತುಂಬಿ
ಹೊತ್ತು ತಂದು ಅಡಿಗೆಯ ಮಾಡಿಕೊಂಡು
ಉಣಬಹುದೆ ಅಯ್ಯಾ ?
ನಿಮ್ಮ ನೆರೆಯರಿದು ನೆರೆದು ಪರವಶನಾಗಿ
ತನ್ನ ಮರೆದ ಪರಶಿವಯೋಗಿಗೆ
ಮರಳಿ ಪರಿಭವಂಗಳುಂಟೆ
ಪರಮಗುರು ಶಾಂತಮಲ್ಲಿಕಾರ್ಜುನಾ ?


*
Previous ಕನ್ನದ ಮಾರಿತಂದೆ ಕರುಳ ಕೇತಯ್ಯ Next