Previous ಮಾದಾರ ಧೂಳಯ್ಯ ಮುಕ್ತಾಯಕ್ಕ Next

ಮಾರೇಶ್ವರೊಡೆಯ

*
ಅಂಕಿತ: ಮಾರೇಶ್ವರ

ಅಪ್ಪುವಿನ ಶಿಲೆಯ, ಉಳಿಯ ಮೊನೆಯಲ್ಲಿ ಚಿತ್ರಿಸಬಹುದೆ ?
ಅರಗಿನ ಪಟವ, ಉಳಿಯ ಮೊನೆಯಲ್ಲಿ ಅಕ್ಷರವ ಬರೆಯಬಹುದೆ ?
ಮೃತ್ತಿಕೆಯ ಹರುಗೋಲನೇರಿ, ನದಿಯ ತಪ್ಪಲಿಗೆ ಹೋಗಬಹುದೆ ?
ನಿಜನಿಶ್ಚಯವನರಿಯದವನ ವಾಚಾರಚನೆ ಇಷ್ಟಲ್ಲದಿಲ್ಲ.
ನಿಜತತ್ವವನರಿದವನ ವಾಚಾರಚನೆಯ ಕುರುಹೆಂತುಟೆಂದಡೆ !
ಶಿಲೆಯೊಳಗಣ ಸುರಭಿಯಂತೆ, ಪ್ರಳಯದೊಳಗಾಗದ ನಿಜನಿವಾಸದಂತೆ,
ಆಯದ ಗಾಯದಂತೆ, ಸಂಗಾಯದ ಸುಖದಂತೆ.
ಇಂತೀ ಭಾವರಹಿತವಾದ ಭಾವಜ್ಞನ ತೆರ,
ಕೂಗಿಂಗೆ ಹೊರಗು, ಮಹಾಮಹಿಮ ಮಾರೇಶ್ವರಾ. /೧೨೭೨ [1]

ಈತನ ಬದುಕಿನ ವಿವರಗಳು ದೊರೆತಿಲ್ಲ. ಕಾಲ-೧೧೬೦. ಅಂಕಿತ-ಮಾರೇಶ್ವರ. ದೊರೆತ ವಚನಗಳ ಸಂಖ್ಯೆ-೧೩, ಇಷ್ಟಲಿಂಗದ ಸ್ವರೂಪ, ಅರಿವು, ಆಚಾರ, ಲಿಂಗಾಂಗಿಯ ನಿಲುವು ಮೊದಲಾದ ವಿಷಯಗಳನ್ನು ನಿರೂಪಿಸುವ ಈತನ ವಚನಗಳು ಸಂಕ್ಷಿಪ್ತತೆ, ಭಾವಪೂರ್ಣತೆ, ಸರಳತೆಯನ್ನು ಒಳಗೊಂಡು ಆತ್ಮೀಯವೆನಿಸಿವೆ. ಕೆಲವು ಬೆಡಗಿನ ವಚನಗಳು ತತ್ವಬೋಧಕವಾಗಿವೆ.

ಉಂಬವರೆಲ್ಲ ಒಂದೇ ಪರಿಯೆ,
ತಮ್ಮ ತಮ್ಮ ಬಾಯಿಚ್ಫೆಯಲ್ಲದೆ ?
ಇಕ್ಕುವರಂದಕ್ಕೆ ಉಂಡಡೆ,
ತನಗೇ ಸಿಕ್ಕೆಂದೆ ಮಾರೇಶ್ವರಾ. /೧೨೭೩ [1]

ಬೆಡಗಿನ ರೀತಿಯಲ್ಲಿ ವಚನಗಳಿವೆ. ಶಿವನಲೀಲೆ, ಭಾವಜ್ಞನರೀತಿ ಮಾತಿನ ಮರ್ಮ - ಇವೇ ಮೊದಲಾದ ಸಂಗತಿಗಳನ್ನು ಮಾರ್ಮಿಕವಾಗಿ ಹೇಳುವನು. ಇಷ್ಟೆಲಿಂಗಾನುಗ್ರಹವನ್ನು ಕುರಿತು ಊಡಿದ ಡುಣ್ಣದು, ಒಡನೆ ಮಾತನಾಡದು, ನೋಡದು, ನುಡಿಯದು, ಬೇಡದು, ಕಾಡದು, ಕಾಡಬೆರಣೆಯ ಕೈಯಲ್ಲಿ ಕೊಟ್ಟು ಹೇಳದೇ ಹೋದ"ಎಂದಿರುವನು.

ರಂಜಕರೆಲ್ಲರೂ ರತ್ನವ ಕೆಡಿಸಿ,
ಅಂಧಕಾರದಲ್ಲಿ ಬಂದು ಅರಸುವರು.
ಅದರಂದ ತಿಳಿಯದು, ಛಂದ ಕಾಣಬಾರದು.
ಬಂದ ಬಟ್ಟೆಯಲ್ಲಿ ತೊಳಲುವರು.
ಸಂದೇಹವಿಡಿದು ಬಂದವರೆಲ್ಲಾ
ಅಂದಂದಿಗೆ ದೂರ, ಮಾರೇಶ್ವರಾ. /೧೨೮೩ [1]

ನುಡಿದ ಮಾತಿಂಗೆ ಕೊರತೆಯೆಂದು,
ಮನವ ಮಾಡಿ ತನು ಅಂಡಿಸಲೇತಕ್ಕೆ ?
ಹಾವಿನ ಹೇಳಿಗೆಯ ತೆಗೆದ ಕೋಡಗದಂತೆ,
ಮಾತಾಡಲೇಕೆ, ಮತ್ತುಡುಗಲೇಕೆ,
ಮಕರಧ್ವಜವೈರಿ ಮಾರೇಶ್ವರಾ ? /೧೨೮೦ [1]

[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಮಾದಾರ ಧೂಳಯ್ಯ ಮುಕ್ತಾಯಕ್ಕ Next