Previous ಬಸವಲಿಂಗದೇವ ಬಾಚಿಕಾಯಕದ ಬಸವಣ್ಣ Next

ಬಹುರೂಪಿ ಚೌಡಯ್ಯ

*
ಅಂಕಿತ: ರೇಕಣ್ಣಪ್ರಿಯ ನಾಗಿನಾಥ
ಕಾಯಕ: ಬಹುರೂಪ ಧರಿಸುವ ನಟ - ನಗೆಗಾರ

೧೬೬
ಬಸವಣ್ಣನಿಂದ ಶುದ್ಧಪ್ರಸಾದಿಯಾದೆ.
ಚನ್ನಬಸವಣ್ಣನಿಂದ ಸಿದ್ಧಪ್ರಸಾದಿಯಾದೆ.
ಪ್ರಭುದೇವರಿಂದ ಪ್ರಸಿದ್ಧಪ್ರಸಾದಿಯಾದೆ.
ಇವರೆಲ್ಲರ ಪ್ರಸಾದಿಯಾಗಿ
ರೇಕಣ್ಣಪ್ರಿಯ ನಾಗಿನಾಥನಲ್ಲಿ ಸೊಬಗ ಮೆರೆದೆ

ಜನಪದ ಕಲಾವಿದನಾದ ಈತನ ಹುಟ್ಟೂರು ರೇಕಳಿಕೆ. ಕಲ್ಯಾಣಕ್ಕೆ ಬಂದು ಬಹುರೂಪಿ ಕಾಯಕದ ಮೂಲಕ ಶರಣ ಬದುಕನ್ನು ನಡೆಸುತ್ತಾನೆ. ಕಾವ್ಯ-ಪುರಾಣಗಳಲ್ಲಿ ಜನಪದ ಹಾಡುಗಳಲ್ಲಿ ಈತನ ಕಥೆ ಪ್ರಸಿದ್ಧವಾಗಿದೆ. ನಿಪುಣ ನಟ, ನಗೆಗಾರನಾಗಿದ್ದಂತೆ, ಚೌಡಯ್ಯ ಉತ್ತಮ ವಚನಕಾರನೂ ಆಗಿದ್ದಾನೆ. 'ರೇಕಣ್ಣಪ್ರಿಯ ನಾಗಿನಾಥ' ಅಂಕಿತದಲ್ಲಿ ೬೬ ವಚನಗಳು ದೊರೆತಿವೆ. ಅವು ಹಚ್ಚಾಗಿ ಬಹುರೂಪ ವೃತ್ತಿಪರಿಭಾಷೆಯಲ್ಲಿ ತತ್ವಭೋದೆ ಮಾಡುತ್ತವೆ. ಕೆಲವು ಬೆಡಗಿನ ವಚನಗಳೂ ಇವೆ.

೧೭೬
ಲಿಂಗನಿಷ್ಠೆಯಿಲ್ಲದವರಂಗಳವ ಮೆಟ್ಟಲಾಗದು.
ಜಂಗಮಪ್ರೇಮವಿಲ್ಲದವರೊಡನೆ ಮಾತನಾಡಲಾಗದು.
ಪ್ರಸಾದವ ಪಡೆಯದವರ ಸಮಪಙ್ತೆಯಲ್ಲಿ ಕುಳಿತು
ಪ್ರಸಾದ ಭೋಗವ ಮಾಡಲಾಗದು.
ಇಂತೀ ಲಿಂಗ ಜಂಗಮ ಪ್ರಸಾದ ವಿಶ್ವಾಸವಿಲ್ಲದವರಿಗೆ
ನರಕ ತಪ್ಪದು.
ಅಂಥವರ ಸಂಗವ ಸತ್ಯಸಜ್ಜನರು ಮಾಡಲಾಗದು.
ಅದೇನು ಕಾರಣವೆಂದಡೆ :
ಪ್ರಾಣಲಿಂಗ ಶಿಲಾಭೇದಂ ಚರಲಿಂಗಂತು ಯೋ ನರಃ |
ಪ್ರಸಾದಂ ದ್ರವ್ಯ ಭಾವೇನ ರೌರವ ನರಕಂ ವ್ರಜೇತ್ ||
ಎಂದುದಾಗಿ,
ಇಂತೀ ಲಿಂಗ ಜಂಗಮ ಪ್ರಸಾದ ಸದ್ಭಾವ
ನಂಬುಗೆಯ ಭಕ್ತಿ ಬೆಸುಗೆಯಿಲ್ಲದವರ ಎನಗೆ ತೋರದಿರಯ್ಯ
ರೇಕಣ್ಣಪ್ರಿಯ ನಾಗಿನಾಥಾ

ಬಹುರೂಪದ ಸ್ವರೂಪವನ್ನು ಹಲವು ವಚನಗಳಲ್ಲಿ ತಿಳಿಸಿರುವನು. ತನ್ನಂಥ ಜಾನಪದ ಕಲಾವಿದನನ್ನು ಬಸವಣ್ಣ ಮನ್ನಿಸಿದ ಕಾರಣಕ್ಕಾಗಿ ಬಸವನ ಶಿಶು ನಾನು ಎಂದು ಗೌರವಪೂರ್ವಕವಾಗಿ ಹೇಳುವನು. ಶೈವ ಗುರುವಿನ ಕೈಯಲ್ಲಿ ಲಿಂಗಧಾರಣೆಯಾದ ಮೇಲೆ ಲಿಂಗಾಯತ ಗುರುವಿನಿಂದ ಮತ್ತೆ ಲಿಂಗವನ್ನು ಪಡೆದದ್ದೇ ಆದರೆ ಆತ ಇಹಲೋಕ ಪೂಜ್ಯ ಪರಲೋಕ ಪೂಜ್ಯನೆಂದಿರುವುದು. ಜಂಗಮದ ಪಾದತೀರ್ಥ ಪ್ರಸಾದಗಳನ್ನು ಸ್ವೀಕರಿಸದ ಗುರುವಿನಿಂದ ಲಿಂಗಧಾರಣ ಮಾಡಿಸಿಕೊಳ್ಳಬಾರದು ಎನ್ನುವ ಕರ್ಮಿಯ ಮಾತನ್ನು ಕೇಳಲಾಗದು - ಎನ್ನುವ ಇವನ ಮಾತುಗಳು ಗಮನಾರ್ಹವಾಗಿವೆ. ಸಾಹಿತ್ಯಕವಾಗಿ ಇವನ ವಚನವನ್ನು ಗಮನಿಸಿದಾಗ ಅಭಿವ್ಯಕ್ತಿಯಲ್ಲಿ ಹೊಸತನ ಕಂಡುಬರುತ್ತದೆ.

೧೮೩
ಸಂಗನಬಸವಣ್ಣ ಎನ್ನ ಕರಸ್ಥಲಕ್ಕೆ ಬಂದ ಕಾರಣ
ಎನಗೆ ಗುರುರೂಪಾದನಯ್ಯಾ.
ಚನ್ನಬಸವಣ್ಣನೆನ್ನ ಕರಸ್ಥಲಕ್ಕೆ ಬಂದ ಕಾರಣ
ಎನಗೆ ಲಿಂಗರೂಪಾದನಯ್ಯಾ.
ಪ್ರಭುದೇವರೆನ್ನ ಕರಸ್ಥಲಕ್ಕೆ ಬಂದ ಕಾರಣ
ಎನಗೆ ಪ್ರಾಣಲಿಂಗವಾದನಯ್ಯಾ.
ಇವರು ಮೂವರಿಗೆ
ನಾ ಭಕ್ತನಾಗಿ ಹುಟ್ಟಿದೆನಾಗಿ
ರೇಕಣ್ಣಪ್ರಿಯ ನಾಗಿನಾಥನೆನಗೆ ಒಚ್ಚತವಾದನಯ್ಯಾ.

೧೮೧
ಷಡುಚಕ್ರವಳಯದೊಳಗೆ ನಾನಾಡುವೆ ಬಹುರೂಪ.
ಭ್ರೂಮಧ್ಯಮಂಡಲ ಹೃದಯಕಮಲ ಮಧ್ಯದ
ಅಬ್ಜಸ್ವರದ ಮಣಿಪೂರಕದ ಮೇಲೆ ನಾನಾಡುವೆ ಬಹುರೂಪ.
ಉರಿಯುಂಡ ಕರ್ಪುರದಂತೆ ನಾನಾಡುವೆ ಬಹುರೂಪ.
ಬಯಲ ಬೆರಸಿದ ಮರೀಚಿಯಂತೆ ನಾನಾಡುವೆ ಬಹುರೂಪ.
ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿದೆನು.


*
Previous ಬಸವಲಿಂಗದೇವ ಬಾಚಿಕಾಯಕದ ಬಸವಣ್ಣ Next