Previous ಮಡಿವಾಳಪ್ಪ ಮನಸಂದ ಮಾರಿತಂದೆ Next

ಮಧುವಯ್ಯ

*
ಅಂಕಿತ: ಅರ್ಕೇಶ್ವರಲಿಂಗ

ಮನೆಯಲ್ಲಿ ಅಟ್ಟೆನೆಂದಡೆ, ಹೊಟ್ಟೆ ತುಂಬಿದುದುಂಟೆ ?
ಇರಿಯೆಂಬ ಮಾತಿಗೆ ಘಾಯವೊಡಲಾದುದುಂಟೆ ?
ಮಾತಿನ ಮಾಲೆಯ ನುಡಿದು, ಅರ್ಕೇಶ್ವರಲಿಂಗವನರಿದವರುಂಟೆ ? /೮೭೦ [1]

ಮೂಲತ: ಬ್ರಾಹ್ಮಣನಾದ ಈ ಶರಣ ತನ್ನ ಮಗಳನ್ನು ಅಂತ್ಯಜನಾದ ಹರಳಯ್ಯನ ಮಗನಿಗೆ ಕೊಟ್ಟು ಮದುವೆ ಮಾಡಿದ. ಆ ಕಾರಣದಿಂದ ಮರಣ ದಂಡನೆಗೆ ಗುರಿಯಾದ. ಕಾಲ-೧೧೬೦. ಅಂಕಿತ-ಅರ್ಕೇಶ್ವರಲಿಂಗ. ೧೦೨ ವಚನಗಳು ದೊರೆತಿದ್ದು, ಹಚ್ಚಾಗಿ ಬೆಡಗಿನ ಪರಿಭಾಷೆಯಲ್ಲಿವೆ. ಲಿಂಗಾನುಸಂಧಾನ, ಶಿವಾನುಭವ ಸಾಧನೆ, ಧರ್ಮ ಬಾಹಿರರ ನಿಂದೆ, ಕುಲಜಾತಿಗಳ ಚರ್ಚೆ, ವೈಯುಕ್ತಿಕ ಬದುಕಿನ ಹೊಳಹುಗಳು ಅವುಗಳಲ್ಲಿ ಎಡೆಪಡೆದಿವೆ.

ಪಕ್ಷಿಯ ಕುಕ್ಕೆಯೊಳಗಿಕ್ಕಿ ಮಾರಬಹುದಲ್ಲದೆ
ಮತ್ತಗಜವ ಮಾರಬಹುದೆ ಅಯ್ಯಾ ?
ಚಿತ್ರವ ಬರೆವುದಕ್ಕೆ ಲೆಕ್ಕಣಿಕೆಯಲ್ಲದೆ ಚಿತ್ತಜಗುಂಟೆ ?
ಪುನರಪಿ ವಸ್ತುವನರಿವುದಕ್ಕೆ ಹೊತ್ತುಗೊತ್ತುಂಟೆ ?
ಅರ್ಕೇಶ್ವರನ ಕೂಡುವುದಕ್ಕೆ ತತ್ಕಾಲವುಂಟೆ ? /೮೫೦ [1]

ಬೆಡಗಿನ ವಚನಗಳು ವಿಶೇಷವಾಗಿವೆ. ಗುರುಕೃಪೆ ಲಿಂಗಾನುಸಂಧಾನ ಶಿವಾನುಭವ ಸಾಧನೆ ಇಂತಹ ಸಾತ್ತ್ವಿಕ ಧರ್ಮ ವಿಚಾರಗಳನ್ನು ಇವನ ವಚನಗಳು ವಿವರಿಸುತ್ತವೆ. ಅಂತ್ಯಜ ಹರಳಯ್ಯನ ಮಗನಿಗೆ ಬ್ರಾಹ್ಮಣನಾದ ಮಧುವಯ್ಯ ತನ್ನ ಮಗಳನ್ನು ಕೊಡುವ ಮೂಲಕ ಒಂದು ಕ್ರಾಂತಿಯನ್ನೇ ಮಾಡಿ ಮಧುವಯ್ಯ ಮರಣದಂಡನೆಗೆ ಒಳಗಾದ.

ಜಾತಿ ಜಾತಿಯ ಕೊಂದು, ನಿಹಿತ ಅನಿಹಿತವ ಕೆಡಿಸಿ,
ಜಾತ ಅಜಾತನ ಕಂಡು ನಿಹಿತವಾಗಿರಿ,
ಅರ್ಕೇಶ್ವರಲಿಂಗವನರಿವುದಕ್ಕೆ. /೮೩೫ [1]

ಜಾತಿ ಜಾತಿಯ ಕೂಡಿದಲ್ಲದೆ ನಿಹಿತ ಸುಖವಿಲ್ಲ.
ಬಲ್ಲವ ಬಲ್ಲವನಲ್ಲಿಯಲ್ಲದೆ ಒಳ್ಳೆಯ ಗುಣವಿಲ್ಲ.
ಭಟ ಮುಗ್ಗಿದಡೆ ತಿಳಿದ ಭಟ ಕೈ ಹಿಡಿದೆತ್ತಿ,
ಇದಿರಾಗೆಂದಡೆ, ಊಣೆಯವೆಲ್ಲಿ ಅಡಗಿತ್ತು ?
ಕೇಳುವ ಬನ್ನಿ, ಅರ್ಕೇಶ್ವರಲಿಂಗವ. /೮೩೪ [1]

[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಮಡಿವಾಳಪ್ಪ ಮನಸಂದ ಮಾರಿತಂದೆ Next