*
೭೦೬
ಅಯ್ಯಾ, ತನ್ನ ತಾನರಿದಡೆ ತನ್ನರುಹೆ ಗುರು;
ಆ ಅರಿದ ನಿಶ್ಚಯವೆ ಲಿಂಗ;
ಆ ಅರುಹಿನ ನಿಶ್ಚಯ ನಿಷ್ಟತ್ತಿಯೆ ಜಂಗಮ;
ಇಂತೀ ತ್ರಿವಿಧವು ಒಂದಾದಡೆ ಕಾಮೇಶ್ವರಲಿಂಗವು ತಾನೆ!
ಇಂತು ಪ್ರಮಥರ ಸಚ್ಚಿದಾನಂದಲೀಲೆಯ
ಅರಿದಾನಂದಿಸ! ಸಂಗನ ಬಸವೇಶ್ವರ!
ಕಾಲ-೧೧೬೦. ನಾಲ್ಕು ವಚನಗಳು ಮಾತ್ರ ದೊರೆತಿವೆ. ಅಂಕಿತ-ಕಾಮೇಶ್ವರ. ಗುರು-ಲಿಂಗ ಜಂಗಮದ ಸ್ವರೂಪ, ನಿಜದ ನಿಲುವು, ಏಕದೈವ ನಿಷ್ಠೆ ಇವುಗಳ ವಸ್ತು.
ಆತ್ಮಜ್ಞಾನದ ಬಗೆಗೆ ವಿವರಗಳಿವೆ. `ವಿಧಿಮಹತ್ವ' ವನ್ನು ಇವನು ನಿರಾಕರಿಸುವನು.
೭೦೭
ಒಂದಲ್ಲ ಹತ್ತಲ್ಲ ನೂರಲ್ಲ ಸಹಸ್ರವಲ್ಲ
ಲಕ್ಷವಲ್ಲ ಕೋಟಿಯಲ್ಲ
ನಾನಾ ಯೋನಿಯಲ್ಲಿ ಬಂದುದಕ್ಕೆ ಕಡೆಯಿಲ್ಲ.
ಬಂದ ಬರವ ನಿಂದ ನಿಲವ ತಿಳಿದಡೆ,
ತಂದೆ ಕಾಮೇಶ್ವರ ಬೇರಿಲ್ಲಾ.
೭೦೯
ಕಾಮ ನಿಃಕಾಮವಾದವರ ತೋರಾ|
ನೇಮವಳಿದು ನಿತ್ಯರಾದವರನಲ್ಲದೊಲ್ಲೆ,
ಅಂಗದ ಗುಣಾವಳಿಯ ಲಿಂಗದಲ್ಲಿದ್ದವರನಲ್ಲದೊಲ್ಲೆ,
ಕಾಮೇಶ್ವರಾ.
೭೦೮
ಸಾವ ದೇವರನೊಲ್ಲೆ ಭಾವವಳಿಯದ ಭಕ್ತಿಯನೊಲ್ಲೆ,
ಆವಾವ ಪರಿಯಲ್ಲು ವಿಧಿಯನೊಲ್ಲೆ,
ಕಾಮೇಶ್ವರನೆಂಬುದನೊಂದನೆ ಬಲ್ಲೆ.
*