Previous ಮುಕ್ತಾಯಕ್ಕ ಸಿದ್ಧರಾಮ ಶಿವಯೋಗಿ Next

ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ

*

ಹಡಪದ ಲಿಂಗಮ್ಮ

ಅಂಕಿತ: ಅಪ್ಪಣ್ಣಪ್ರಿಯ ಚೆನ್ನಬಸವಣ್ಣ
ಕಾಯಕ: ಹಡಪದ (ಸಂಚಿ) ಕಾಯಕ (ತಾಂಬೂಲಕರಂಡ)

ಕೈಲಾಸ ಮರ್ತ್ಯಲೋಕ ಎಂಬರು.
ಕೈಲಾಸವೆಂದಡೇನೊ, ಮರ್ತ್ಯಲೋಕವೆಂದಡೇನೊ ?
ಅಲ್ಲಿಯ ನಡೆಯೂ ಒಂದೆ, ಇಲ್ಲಿಯ ನಡೆಯೂ ಒಂದೆ.
ಅಲ್ಲಿಯ ನುಡಿಯೂ ಒಂದೆ, ಇಲ್ಲಿಯ ನುಡಿಯೂ ಒಂದೆ ಕಾಣಿರಯ್ಯಾ ಎಂಬರು.
ಕೈಲಾಸದವರೆ ದೇವರ್ಕಳೆಂಬರುದ
ಸುರಲೋಕದೊಳಗೆ ಸಾಸಿರಕಾಲಕ್ಕಲ್ಲದೆ ಅಳಿದಿಲ್ಲವೆಂಬರು.
ನರಲೋಕದೊಳಗೆ ಸತ್ತು ಸತ್ತು ಹುಟ್ಟುತಿಹರೆಂಬರು.
ಇದ ಕಂಡು ನಮ್ಮ ಶರಣರು
ಸುರಲೋಕವನು ನರಲೋಕವನು ತೃಣವೆಂದು ಭಾವಿಸಿ,
ಭವವ ದಾಂಟಿ ತಮ್ಮ ತಮ್ಮ ಹುಟ್ಟನರಿದು,
ಮಹಾಬೆಳಗನೆ ಕೂಡಿ, ಬೆಳಗಿನಲ್ಲಿ ಬಯಲಾದರಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ. [1]

ಈಕೆ ಬಸವಣ್ಣನವರ ಆಪ್ತರಲ್ಲಿ ಮುಖ್ಯವೆನಿಸಿದ ಹಡಪದ ಅಪ್ಪಣ್ಣನ ಹೆಂಡತಿ. ಗುರು-ಚೆನ್ನಮಲ್ಲೇಶ. ಕಾಲ-೧೧೬೦. ಉನ್ನತ ಅನುಭಾವಿಯಾದ ಲಿಂಗಮ್ಮನ ೧೧೪ ವಚನ, ೧ ಸ್ವರವಚನ, ೧ ಮಂತ್ರಗೋಪ್ಯ ದೊರೆತಿವೆ. 'ಅಪ್ಪಣ್ಣಪ್ರಿಯ ಚೆನ್ನಬಸವಣ್ಣ' ಇವುಗಳ ಅಂಕಿತ. ತತ್ವಭೋಧೆಯೇ ಮುಖ್ಯವಾಗಿರುವುದು ಈಕೆಯ ವಚನಗಳು 'ಭೋಧೆಯ ವಚನಗಳು' ಎಂದು ಹಸ್ತಪ್ರತಿಯಲ್ಲಿ ದಾಖಲಾಗಿವೆ.

ಮನದ ಚಂಚಲತೆ, ಅದನ್ನು ನಿಗ್ರಹಿಸುವ ವಿಧಾನ, ಗುರು-ಲಿಂಗ-ಜಂಗಮ ಭಕ್ತಿ, ಶರಣರ ನಡೆನುಡಿ, ಆಚಾರ ವಿಚಾರ ನಿಷ್ಠೆ, ಡಾಂಭಿಕಭಕ್ತರ ಟೀಕೆ, ಯೋಗವಿಚಾರ ಈಕೆಯ ವಚನಗಳಲ್ಲಿ ತೋರುವ ಪ್ರಮುಖ ವಿಷಯಗಳಾಗಿವೆ. ಭಾಷೆಯ ತಾತ್ವಿಕ ವಿಷಯ ನಿರೂಪಣೆಯಲ್ಲಿ ಬೆಡಗಿನಿಂದ ಕೂಡಿದ್ದರೆ, ಟೀಕೆ ವಿಡಂಬನೆಗಳಲ್ಲಿ ನೇರ, ದೇಶೀ ಸೊಗಡಿನಿಂದ ಸಂಭ್ರಮಿಸುತ್ತದೆ.

ಕನಿಷ್ಠದಲ್ಲಿ ಹುಟ್ಟಿದೆ, ಉತ್ತಮದಲ್ಲಿ ಬೆಳೆದೆ,
ಸತ್ಯಶರಣರ ಪಾದವಿಡಿದೆ.
ಆ ಶರಣರ ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ,
ಜಂಗಮವ ಕಂಡೆ, ಪಾದೋದಕವ ಕಂಡೆ, ಪ್ರಸಾದವ ಕಂಡೆ.
ಇಂತಿವರ ಕಂಡೆನ್ನ ಕಂಗಳಮುಂದಣ ಕತ್ತಲೆ ಹರಿಯಿತ್ತು.
ಕಂಗಳಮುಂದಣ ಕತ್ತಲೆ ಹರಿಯಲೊಡನೆ,
ಮಂಗಳದ ಮಹಾಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.

ಕೃತಿಯ ವೈಶಿಷ್ಟ್ಯ : ಈಕೆಯ ಗುರು ಚನ್ನಮಲ್ಲೇಶನ ಸ್ತುತಿ ವಿಶೇಷವಾಗಿದೆ. ಈಕೆ ಮಂತ್ರ ಗೋಪ್ಯ ಹಾಗೂ ಸ್ವರವಚನ ಬರೆದಿರುವಳು. ಈಕೆಯ ವಚನಗಳನ್ನು ಲಿಂಗಮ್ಮನ ಬೋಧೆಯ ವಚನಗಳು ಎಂದು ಕರೆಯಲಾಗಿದೆ. ತತ್ವ ಬೋಧೆ ವಚನಗಳ ಮುಖ್ಯ ಉದ್ದೇಶ

[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಮುಕ್ತಾಯಕ್ಕ ಸಿದ್ಧರಾಮ ಶಿವಯೋಗಿ Next