*
ಶರಣೆ ಬೊಂತಾದೇವಿ ಕಾಶ್ಮೀರದ ಮಾಂಡವ್ಯ ರಾಜಕುಮಾರಿ
ಅಂಕಿತ: |
ಬಿಡಾಡಿ |
ಕಾಯಕ: |
ಅರಸನ ಮಗಳು, ನಂತರ ಶರಣೆ (ವೈರಾಗ್ಯಣಿ) |
ಲೋಕದ ಕಣ್ಣಿಗೆ ಕಾಣದಿದ್ದರೂ ತನ್ನ ಅಸಾಮಾನ್ಯ ಗುಪ್ತ ಭಕ್ತಿಯಿಂದ ಮರುಳಶಂಕರ ದೇವರಿಗೆ, ನಿಷ್ಠೆಯಿಂದ ನೀಲಾಂಬಿಕೆಗೆ, ವಿರಕ್ತಿಗೆ ಅಕ್ಕಮಹಾದೇವಿಗೆ, ಜಾತೀಯತೆಯ ವಿಡಂಬನೆಯಲ್ಲಿ ಪ್ರಭುದೇವರಿಗೆ, ಶ್ರದ್ದೆಗೆ ಕೊಟ್ಟಣದ ಸೋಮವ್ವೆಗೆ ಸಮವೆನಿಸಿ, ಎಲ್ಲ ಶರಣರ ಮೆಚ್ಚುಗೆಗೆ ಪಾತ್ರಳಾದವಳೇ ಬೊಂತಾದೇವಿ.
ಬೊಂತಾದೇವಿ ಕಾಶ್ಮೀರದ ಪಾಂಡವ್ಯಪುರದ ಅರಸು ಕುಮಾರಿಯಾಗಿದ್ದು, ಶ್ರೇಷ್ಠ ಶರಣ, ಕಾಯಕ ಕಲಿ ಎಂದೇ ಹೆಸರುವಾಸಿಯಾದ ಮೊಳಿಗೆ ಮಾರಯ್ಯನ ಸಹೋದರಿ.
ಮೂಲನಾಮವಾದ ನಿಜದೇವಿ ಯಿಂದ ಬೊಂತಾದೇವಿಯಾಗಿ ನಾಮಾಂಕಿತಗೊಂಡು ಗುಪ್ತಭಕ್ತಿಗೆ ಹೆಸರು ವಾಸಿಯಾದಳು.
“ಬಿಡಾಡಿ”
ಎಂಬ ಅಚ್ಚಗನ್ನಡ ಅಂಕಿತದಿಂದ ಅನೇಕ ವಚನಗಳನ್ನು ಬರೆದ ಬೊಂತಾದೇವಿಯ ಮೊದಲಿನ ಹೆಸರು 'ನಿಜದೇವಿ'. ಚಿಕ್ಕಂದಿನಲ್ಲಿಯೇ ಶಿವಭಕ್ತಿಯಲ್ಲಿ
ನಿಷ್ಠೆ ನೆಲೆಗೊಂಡು ವೈರಾಗ್ಯ ತಾಳಿ, ಕಲ್ಯಾಣಕ್ಕೆ ಬಂದು ನೆಲೆಸುತ್ತಾಳೆ. ಈಕೆಯ ವೀರವೈರಾಗ್ಯ, ಗುಪ್ತಭಕ್ತಿಯನ್ನು
ಕಾವ್ಯ, ಪುರಾಣಗಳು ಬಣ್ಣಿಸುತ್ತವೆ. ಕಾಲ-೧೧೬೦. ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದ ನಂತರ ಅವರು ಕೌದಿಯನ್ನೇ ಹೊದೆಯುತ್ತಿದ್ದುದರಿಂದ
ಅವರಿಗೆ "ಬೊಂತಾದೇವಿ" ಎಂಬ ಹೆಸರು ಬಂತೆನ್ನಲಾಗಿದೆ. (ಬೊಂತ = ಕೌದಿ).
ಪರಮಾತ್ಮನು ಯಾವ ನಿರ್ಬಂಧಕ್ಕೊಳಗಾಗದ “ಸರ್ವತಂತ್ರ ಸ್ವತಂತ್ರ’’ ಎಂಬರ್ಥದಲ್ಲಿ ಆತನನ್ನು ಬಿಡಾಡಿ ಎಂದು ಕರೆದಿದ್ದಾರೆ ಬೊಂತಾದೇವಿ.
ಅವರ ಒಂದು ವಚನ:
ಅಂತಾಯಿತ್ತಿಂತಾಯಿತ್ತೆಂತಾಯಿತ್ತೆನಬೇಡ,
ಅನಂತನಿಂತಾತನೆಂದರಿಯಾ ಬಿಡಾಡಿ.
ಕರೆದಡೆ ಓ ಎಂಬುದು ನಾದವೊ ಬಿಂದುವೊ ಪ್ರಾಣವೊ
ಇದಾವುದು ? ಬಲ್ಲಡೆ ನೀ ಹೇಳಾ, ಬಿಡಾಡಿ.
ನಾಲ್ಕು ವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ, ಇಪ್ಪತ್ತೆಂಟಾಗಮ
ಇದಪ್ರತಿ ಬಿಡಾಡಿ.
ಶಬ್ದವೆ ಬ್ರಹ್ಮ, ಶಬ್ದವೆ ಸಿದ್ಧ, ಶಬ್ದವೆ ಶುದ್ಧ ಕಾಣಿರೆ, ಬಿಡಾಡಿ ? /೧೦೯೨ [1]
ಬೊಂತಾದೇವಿ ಅಕ್ಕಮಹಾದೇವಿಯಂತೆ ವಿವಾಹ ಬಂಧನಕ್ಕೆ ಸಿಲುಕದೆ ಶರಣ ದೀಕ್ಷೆ ಸ್ವೀಕರಿಸಿದರು.
ಕಾಶ್ಮೀರದಲ್ಲಿದ್ದಾಗ ವಿಪರೀತ ಚಳಿಯಿಂದ ನಡುಗುತ್ತಿದ್ದ ವೃದ್ಧೆಗೆ ತಾನುಟ್ಟ ಬಟ್ಟೆಯನ್ನೇ ಬಿಚ್ಚಿಕೊಟ್ಟ ಬೊಂತಾದೇವಿ ಬಡಜನರ ಸೇವೆಯಲ್ಲಿ ತತ್ವರರಾಗಿದ್ದವರು.
ಧನಕನಕದ ಮೋಹದಿಂದ ಹೊರಬಂದವರು. ಕಲ್ಯಾಣದಲ್ಲಿ ಕೌದಿ ಹೊಲಿದು ಮಾರುವ ಕಾಯಕ ಕೈಕೊಂಡ ಆಕೆ ರೋಗಗ್ರಸ್ತ ಬಡವರಿಗೆ ತಾನೇ ಔಷಧೋಪಚಾರ ಸೇವೆ ಮಾಡುತ್ತಿದ್ದರು.
ಕಲ್ಯಾಣದಲ್ಲಿ ತಿಪ್ಪೆಯಪ್ಪರಿಗೆಯನ್ನದೆ ಎಲೆಯ ಮರೆಯ ಹೂವಾಗಿ, ಸಾಧನೆ ಮಾಡುತ್ತಾ ಉಳಿದುಕೊಳ್ಳುತ್ತಾಳೆ. ಅಸಂಖ್ಯಾತ ಶರಣರ ತಾಣವಾದ ಕಲ್ಯಾಣದಲ್ಲಿ ಬೊಂತಾದೇವಿಯನ್ನು ಯಾರು ಗಮನಿಸಿರುವುದಿಲ್ಲ, ದಿವ್ಯಜ್ಞಾನಿಯಾದ ಅಲ್ಲಮಪ್ರಭು ಮಾತ್ರ ಆಕೆಯ ಗುಪ್ತಭಕ್ತಿಯ ನೆಲೆಯನ್ನು ಗಮನಿಸುತ್ತಾನೆ. ಅಕ್ಕಮಹಾದೇವಿ ಶ್ರೀ ಶೈಲದ ಕದಳಿಗೆ ಹೊರಟು ನಿಂತಾಗ, ಆಕೆಯನ್ನು ಬೀಳ್ಕೊಡಲು ಸೇರಿದ ಶರಣರೆಲ್ಲ ಮಹಾದೇವಿಯಂಥ ಎಂದು ಉದ್ಗಾರ ತೆಗೆಯುತ್ತಾರೆ. ಆಗ ನೆರೆದ ಶರಣವೃಂದಕ್ಕೆ ಅಲ್ಲಮಪ್ರಭು ಬೊಂತಾದೇವಿಯ ಮಹಿಮೆಯನ್ನು ತಿಳಿಹೇಳುತ್ತಾನೆ.
ಕಲ್ಯಾಣಕ್ರಾಂತಿಯ ನಂತರ ಶರಣರೆಲ್ಲ ದಿಕ್ಕಾಪಾಲಾಗಿ ಅನೇಕ ಕಡೆಗೆ ಚದುರಿಹೋದರು. ಬೊಂತಾದೇವಿ ಮಾತ್ರ ಅಲ್ಲಿಯೇ ಇದ್ದು ತನ್ನ ಸೇವಾಕಾರ್ಯ ಮುಂದುವರಿಸಿ ಅಲ್ಲಿಯೇ ಲಿಂಗೈಕ್ಯರಾಗುವ ಮೂಲಕ ಆದರ್ಶ ಶರಣೆಯೆನಿಸಿದ್ದಾರೆ.
೧೦೯೩
ಅರಿವೆ ಬಿಡಾಡಿ, ಅರಿಯದೆ ಬಿಡಾಡಿ,
ಮರವೆ ಬಿಡಾಡಿ, ಮರೆಯದೆ ಬಿಡಾಡಿ,
ಅರಿವರತು ಕುರುಹಿಲ್ಲದಾತ ನೀನೆ ಬಿಡಾಡಿ.
೧೦೯೪
ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ ?
ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆ ಬಯಲೆಂದುಂಟೆ ?
ಎಂಬ ವಚನದ ಮೂಲಕ ಕುಲ ಒಂದೇ ಎಂದು ಸ್ವಾರ್ಥಿಯಾದ ಮಾನವ ಭಿತ್ತಿಮಾತ್ರದಿಂದ ಬಯಲಿನಲ್ಲಿ ಒಳಹೊರಗೆಂಬ ಅಂತರ ಉಂಟಾಗುವಂತೆ, ಮಾನವ ತನ್ನ ಕಲ್ಪನೆಯ ಭಿತ್ತಿಯಿಂದ ಮೇಲುಕಿಳೆಂಬ ಜಾತಿಯ ಕೃತ್ರಿಮತೆಯನ್ನುಂಟು ಮಾಡಿ ಕೊಂಡಿದ್ದಾನೆ. ಅನಂತವಾದ ಬಯಲೊಂದೇ ಇರುವಂತೆ ಸರ್ವವ್ಯಾಪಿ ಭಗವಂತನೊಬ್ಬನೇ, ಕುಲವೊಂದೇ ಎಂಬ ಭಾವನೆ ಯನ್ನು ವಚನಗಳ ಮೂಲಕ ವ್ಯಕ್ತಪಡಿಸಿದ್ದಾಳೆ.
ಎಲ್ಲಿ ನೋಡಿದಡೆ ಬಯಲೊಂದೆ
ಬಿತ್ತಿಯಿಂದ ಒಳಹೊರಗೆಂಬನಾಮವೈಸೆ. ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.
ಶಬ್ಧಗಳಲ್ಲಿ ಅಪಾರವಾದ ಅಧ್ಯಾತ್ಮಿಕ ಅರ್ಥವನ್ನು ತುಂಬಿ ತನ್ನ ವಚನರಚನಾ ಸಾಮರ್ಥ್ಯವನ್ನು ಬೊಂತಾದೇವಿ ತೋರಿದ್ದಾಳೆ. ಬಯಲು ಅಂದರೆ ಶೂನ್ಯ. ಈ ಶೂನ್ಯದಿಂದಲೆ ವಿಶ್ವ. ಈ ಶೂನ್ಯ ಸಂಪಾದನೆಯೇ ಭಕ್ತನ ಪರಮ ಗುರಿ. ಬಯಲನ್ನು ಶಿವ ನಲ್ಲಿ ಒಂದಾಗಿ ಎಲ್ಲರೂ ಬಯಲಾಗುದೇ ಜೀವನದ ಅಂತ್ಯ ಎಂದಿದ್ದಾಳೆ.
ಘಟದೊಳಗಣ ಬಯಲು, ಮಠದೊಳಗಣ ಬಯಲು,
ಬಯಲು ಬಯಲು ಬಯಲು ?
ತಾನೆಲ್ಲಾ ಬಯಲು, ಬಿಡಾಡಿ ಬಯಲು./೧೦೯೫ [1]
ಈಗ ದೊರೆತ ಆರು ವಚನಗಳನ್ನು ಶಿವನ ಸ್ವರೂಪ ಅನಂತತೆ ಮತ್ತು ಸರ್ವಾಂತರ್ಯಾಮಿತ್ವವನ್ನು ವರ್ಣಿಸಲಾಗಿದೆ. ಜೊತೆಗೆ ಅಧ್ಯಾತ್ಮಿಕ ಸಾಧನೆ, ಸಮತಾಭಾವ ಮತ್ತು
ಸಾಮಾಜಿಕ ಕಳಕಳಿ ಅವುಗಳಲ್ಲಿ ವ್ಯಕ್ತವಾಗಿದೆ.
[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
*