ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ | |
*
ಅಂಕಿತ: |
ಮಹಾಘನ ದೊಡ್ಡದೇಶಿಕಾರ್ಯ ಗುರುಪ್ರಭುವೆ |
ಕಾಯಕ: |
ಅರಸ |
ಹಗಲಿದ್ದಲ್ಲಿ ಕತ್ತಲೆಯಿರ್ಪುದೆ ?
ಕತ್ತಲೆಯಿದ್ದಲ್ಲಿ ಹಗಲಿರ್ಪುದೆ ?
ಜಾಗ್ರವಿದ್ದಲ್ಲಿ ಸ್ವಪ್ನವಿರ್ಪುದೆ ?
ದುಃಖವಿದ್ದಲ್ಲಿ ಆನಂದವಿರ್ಪುದೆ ?
ನೀನು ಪ್ರಸನ್ನಮಾದಲ್ಲಿ ನಾನಿರ್ಪೆನೆ ?
ನಾನು ಪ್ರಸನ್ನಮಾದಲ್ಲಿ ನೀನಿರ್ಪೆಯಾ ?
ನೀನಿದ್ದಲ್ಲಿ ನಾನಿಲ್ಲ ನಾನಿದ್ದಲ್ಲಿ ನೀನಿಲ್ಲ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./1010
ಮಾಸ್ತಿ ವಂಶಕ್ಕೆ ಸೇರಿದ ಇಮ್ಮಡಿ ಕಾರ್ಯೇಂದ್ರ ಈತನ ತಂದೆ. ತಾಯಿ ಕುಪ್ಪಮಾಂಬೆ, ಗುರು-ದೊಡ್ಡದೇಶಿಕಾರ್ಯ. ಕಾಲ-1700. 'ಮುಮ್ಮಡಿ ಕಾರ್ಯಕ್ಷಿತೀಂದ್ರ' ಎಂದು ತನ್ನನ್ನು ಕರೆದುಕೊಂಡಿರುವುದರಿಂದ ಈತ ಅರಸನಾಗಿರಬೇಕು. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ 'ಕಾರ್ಯ' ಗ್ರಾಮದಲ್ಲಿ ದೊರೆಯಾಗಿದ್ದಿರಬೇಕೆಂದು ಊಹಿಸಲಾಗಿದೆ.
'ವೇದ ಸಂಜೀವಿನಿ' ಎಂಬುದು ಕಾರ್ಯೇಂದ್ರ ರಚಿಸಿದ ಕೃತಿ. ಇದರಲ್ಲಿ 11 ಅಧ್ಯಾಯ, 125 ವಚನಗಳಿವೆ. 'ಮಹಾಘನ ದೊಡ್ಡದೇಶಿಕಾರ್ಯ ಗುರುಪ್ರಭುವೆ' ಎಂಬುದು ಅಂಕಿತ. ಗುರು ಕನಸಿನಲ್ಲಿ ಬಂದು 'ಜೀವರ ಪಾಪಮಂ ನೀಗುವಂತು ಪರತತ್ವ ವಚನಮಂ ರಚಿಸೆಂದು ನಿರೂಪಿಸಲು' ತಾನು ಹೇಳಿದುದಾಗಿ ತಿಳಿಸುತ್ತಾನೆ.
ಇದು ಶುದ್ಧ ತಾತ್ವಿಕ ಕೃತಿ. ಲಿಂಗಾಯತ ತತ್ವ ವೇದಕ್ಕಿಂತಲೂ ಮಿಗಿಲಾದುದು, ವೇದಕ್ಕೆ ಸಂಜೀವಿನ ರೀತಿಯಲ್ಲಿ ಎಂದು ಸಾರಿ ಹೇಳುವುದೇ ಇದರ ಮೂಲ ಉದ್ದೇಶ.
ಆದಿಯಲ್ಲಿ ಪ್ರಣವಸ್ವರೂಪಮಾದ ಪರಮಾತ್ಮನು
ಅಕಾರ ಉಕಾರ ಮಕಾರವೆಂಬ ಅಕ್ಷರತ್ರಯಸ್ವರೂಪಮಾಗಿ,
ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ;
ಬಿಂದುವೇ ಶರೀರಮಾಗಿ, ನಾದವೇ ಪ್ರಾಣಮಾಗಿ, ಕಳೆಯೇ ಮನಮಾಗಿ ;
ಬಿಂದುಮಯವಾದ ಶರೀರದಲ್ಲಿ ರೂಪು
ನಾದಮಯಮಾದ ಪ್ರಾಣದಲ್ಲಿ ನಾಮ
ಕಳಾಮಯಮಾದ ಮನದಲ್ಲಿ ಕ್ರಿಯೆ
ಇಂತು ನಾಮ-ರೂಪ-ಕ್ರಿಯಾಯುಕ್ತಮಾದ ಪುರುಷನ
ಶರೀರದಲ್ಲಿ ಭಕ್ತಿ, ಪ್ರಾಣದಲ್ಲಿ ಜ್ಞಾನ, ಮನದಲ್ಲಿ ವೈರಾಗ್ಯ ನೆಲೆಗೊಂಡಲ್ಲಿ,
ಬಿಂದುವಿನಲ್ಲಿ ಆಚಾರಲಿಂಗಸಂಬಂಧಮಾಯಿತ್ತು,
ಕಳೆಯಲ್ಲಿ ಶಿವಲಿಂಗಸಂಬಂಧಮಾಯಿತ್ತು.
ಆಚಾರದಿಂದ ಪೂತಮಾದ ಶರೀರವೇ ಜಂಗಮಲಿಂಗಮಾಯಿತ್ತು .
ಗುರುಮಂತ್ರದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು.
ಶಿವಧ್ಯಾನದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು .
ಬಿಂದುವಿನಲ್ಲಿ ಕ್ರಿಯಾಶಕ್ತಿ ನೆಲೆಗೊಂಡಲ್ಲಿ,
ಆ ಬಿಂದುವೇ ಆದಿಶಕ್ತಿಮಯಮಾಯಿತ್ತು.
ನಾದದಲ್ಲಿ ಮಂತ್ರಶಕ್ತಿ ನೆಲೆಗೊಂಡಲ್ಲಿ,
ಆ ನಾದವೇ ಪರಾಶಕ್ತಿಯಾಯಿತ್ತು.
ಕಳೆಯಲ್ಲಿ ಇಚ್ಛಾಶಕ್ತಿ ನೆಲೆಗೊಂಡಲ್ಲಿ,
ಆ ಕಳೆಯೇ ಜ್ಞಾನಶಕ್ತಿಯಾಯಿತ್ತು.
ಇಂತು ಶರೀರಮೇ ಜಂಗಮದಿಂದ ಪವಿತ್ರಮಾಗಿ,
ಪ್ರಾಣವು ಗುರುವಿನಿಂದ ಪವಿತ್ರಮಾಗಿ,
ಮನವು ಲಿಂಗದಿಂದ ಪರಿಶುದ್ಧಮಾಗಿರ್ದ ಶಿವಶರಣನು
ಇದ್ದುದೇ ಕೈಲಾಸ, ಅನುಭವಿಸಿದುದೆಲ್ಲಾ ಲಿಂಗಭೋಗ, ಐಕ್ಯವೇ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯ ಗುರುಪ್ರಭುವೆ
*