*
ಅಂಕಿತ:
|
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ
|
ಬತ್ತಲೆ ಇದ್ದವರೆಲ್ಲ ಕತ್ತೆಯ ಮಕ್ಕಳು.
ತಲೆ ಬೋಳಾದವರೆಲ್ಲ ಮುಂಡೆಯ ಮಕ್ಕಳು.
ತಲೆ ಜಡೆಗಟ್ಟಿದವರೆಲ್ಲ ಹೊಲೆಯರ ಸಂತಾನ.
ಆವ ಪ್ರಕಾರವಾದಡೇನು ಅರಿವೆ ಮುಖ್ಯವಯ್ಯಾ, ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗದಲ್ಲಿ.
ಜನ್ಮ ಸ್ಥಳ ಏಲೇಶ್ವರ (ಏಲೇರಿ). ಐಕ್ಯಸ್ಥಳ - ಕಲ್ಯಾಣ. ಅಧಿದೈವ 'ರಾಮೇಶ್ವರ’. 'ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗ' ಅಂಕಿತದಲ್ಲಿ ೧೫೪ ವಚನಗಳು ದೊರೆತಿವೆ. ವಚನ ಸಂಖ್ಯೆಯ ದೃಷ್ಟಿಯಿಂದ ಅಕ್ಕಮಹಾದೇವಿ
ಮತ್ತು ನೀಲಮ್ಮನ ನಂತರದ ಸ್ಥಾನ ಈಕೆಗೆ ಸಲ್ಲುತ್ತದೆ. ವ್ರತ, ನೇಮ, ಆಚಾರ, ಶೀಲ - ಇವು ಈಕೆಯ ವಚನಗಳ
ಮೂಲ ದ್ರವ್ಯ. ಅವುಗಳಿಗೆ ಪೂರಕವಾಗಿ ಧಾನ್ಯ, ಪಶು-ಪಕ್ಷಿ; ಜನಪದ ನಂಬಿಕೆ, ರೂಢಿ, ವೃತ್ತಿಪರಿಭಾಷೆಗಳಲ್ಲಿ
ಅಕಾರ ಪಡೆದ ಈ ವಚನಗಳು ಅ ಕಾಲದ ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿವೆ.
ಬಸವಣ್ಣ, ಚೆನ್ನಬಸವಣ್ಣ, ಪ್ರಭು, ವೀರಮಡಿವಾಳ, ನಿಜಗುಣಶಿವಯೋಗಿ,
ಸಿದ್ಧರಾಮ, ಮೋಳಿಗೇಯ, ಆಯ್ದಕ್ಕಿಯ ಮಾರಯ್ಯ,
ಏಕಾಂತರಾಮಯ್ಯ,
ಅಜಗಣ್ಣ, ಶಕ್ತಿ, ಮುಕ್ತಿ, ಮಹಾದೇವಿಯಕ್ಕ ಮುಂತಾದ
ಏಳುನೂರೆಪ್ಪತ್ತು ಅಮರಗಣಂಗಳು ಕೊಟ್ಟ ವ್ರತಪ್ರಸಾದ.
ಆ ಪ್ರಸಾದ ಎನಗೆ ಪ್ರಸನ್ನ, ನಿಮಗೆ ಮತ್ರ್ಯದ ಮಣಿಹ ಹಿಂಗುವನ್ನಕ್ಕ.
ಎನ್ನ ವ್ರತದಲ್ಲಿ, ಎನ್ನ ಆಚಾರದಲ್ಲಿ, ನಾ ಹಿಡಿದ ನೇಮದಲ್ಲಿ, ಭಾಷೆಯಲ್ಲಿ,
ನಾ ತಪ್ಪಿದಡೆ, ತಪ್ಪ ಹೊತ್ತಲ್ಲಿ ನಿಮ್ಮ ಕೇಳಿದಡೆ, ನಾ ಸತ್ತಿಹೆನೆಂದು ಕೂಡಿದಡೆ,
ಮತ್ತೆ ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧಿಯಿಂದ ಘಟವ ಬಿಟ್ಟಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ. ಕ್ರೀ ಭಿನ್ನಚಿಹ್ನ ದೋರದಲ್ಲಿಯೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ನಿನ್ನಲ್ಲಿಯೆ ಲೀಯ.
ಗುರುವಾದಡೂ ಆಚಾರಭ್ರಷ್ಟನಾದಡೆ ಅನುಸರಿಸಲಾಗದು.
ಲಿಂಗವಾದಡೂ ಆಚಾರದೋಹಳವಾದಲ್ಲಿ ಪೂಜಿಸಲಾಗದು.
ಜಂಗಮವಾದಡೂ ಆಚಾರ ಅನುಸರಣೆಯಾದಲ್ಲಿ ಕೂಡಲಾಗದು.
ಆಚಾರವೆ ವಸ್ತು, ವ್ರತವೆ ಪ್ರಾಣ, ಕ್ರಿಯೆಯೆ ಜ್ಞಾನ, ಜ್ಞಾನವೆ ಆಚಾರ. ಆಚಾರವೆ
ಪ್ರಾಣವಾದ ರಾಮೇಶ್ವರಲಿಂಗವು ತಾನೆ.
*