*
ಅಂಕಿತ: |
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಶ್ರೀ ಗುರು ಸಿದ್ಧಲಿಂಗೇಶ್ವರ |
ಕಾಯಕ: |
ವಿರಕ್ತ ಪರಂಪರೆಗೆ ಸೇರಿದವನು |
೧೨೭೬
ಅಯ್ಯಾ, ಕಾಶಿ, ರಾಮೇಶ್ವರ, ಕೇದಾರ, ಗೋಕರ್ಣ,
ಶ್ರೀಶೈಲಪರ್ವತ, ಹಂಪೆ, ಅಮರಗುಂಡ, ಕಲ್ಯಾಣ,
ಸೊನ್ನಲಾಪುರ, ಗಯ, ಪ್ರಯಾಗ, ಕೊಲ್ಲಿಪಾಕ,
ಗಂಗಾಕ್ಷೇತ್ರ, ಶಿವಗಂಗೆ, ನಂಜನಗೂಡು,
ಉಳುವೆ, ಶಂಭುಲಿಂಗನ ಬೆಟ್ಟ, ಕುಂಭಕೋಣೆ, ಕಂಚಿ,
ಕಾಳಹಸ್ತಿ, ನವನಂದಿಮಂಡಲ, ಕುಮಾರಪರ್ವತ ಮೊದಲಾದ ಕ್ಷೇತ್ರಂಗಳಲ್ಲಿ,
ಕುಂತಣದೇಶ ಮೊದಲಾದ ಐವತ್ತಾರು ದೇಶಂಗಳಲ್ಲಿ
ನಿಮ್ಮ ಚರಣಕಮಲವ ಕಂಡು ಸದ್ಭಕ್ತಿಯ ಮಾಡದೆ,
ವೃಥಾ ಭ್ರಾಂತಿನಿಂದ ಕಲ್ಲು ಮುಳ್ಳು ಮಣ್ಣಿನಲ್ಲಿ
ತಿರಿಗಿ ತಿರಿಗಿ ಕೆಟ್ಟಿತಯ್ಯ ಎನ್ನ ಪಾದೇಂದ್ರಿಯವು.
ಇಂತು ಕೆಡಗುಡದೆ ನಿಮ್ಮ ಸದ್ಭಕ್ತ ಹರಳಯ್ಯಗಳ
ಮನೆಯ ಬಾಗಿಲ ಕಾಯ್ವಂತೆ ಮಾಡಯ್ಯ.
ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾ ಶ್ರಿಗುರುಸಿದ್ಧಲಿಂಗೇಶ್ವರ.
ಈತ ತೋಂಟದ ಸಿದ್ಧಲಿಂಗರ ಶಿಷ್ಯಪರಂಪರೆಗೆ ಸೇರಿದ ಗುರುಸಿದ್ಧದೇವರ ಶಿಷ್ಯ. ಸ್ಥಳ-ಹರದನಹಳ್ಳಿ, ಕಾಲ ೧೭೦೦. 'ಮತ್ಪ್ರಾಣನಾಥ ಮಹಾಶ್ರೀಗುರು ಸಿದ್ಧಲಿಂಗೇಶ್ವರ' ಎಂಬ ಅಂಕಿತದಲ್ಲಿ ೩೬ ವಚನಗಳು ದೊರೆತಿವೆ. ಇವು ಗುರುಸಿದ್ಧದೇವರು ಸಂಕಲಿಸಿದ 'ಚಿದೈಶ್ವರ್ಯ ಚಿದಾಭರಣ' ಕೃತಿಯ 'ಮಹಾಜ್ಞಾನಿಯ ಸರ್ವಪರಿತ್ಯಾಗ ಸ್ಥಲ' ಎಂಬ ಸ್ಥಲದ ಅಡಿಯಲ್ಲಿ ಒಂದೇ ಕಡೆಗೆ ಜೋಡಿಸಲ್ಪಟ್ಟಿವೆ. ಎಲ್ಲವೂ ಗುರುವಿನಲ್ಲಿ ಬಿನ್ನಹ ಮಾಡಿಕೊಂಡ ರೀತಿಯಲ್ಲಿವೆ.
೧೩೦೪
ಅಯ್ಯಾ, ನೀವೇ ಸರ್ವಲೋಕ ಸೃಷ್ಟಿಕರ್ತರೆಂದು ಹೇಳಿತ್ತಯ್ಯ
ವೇದಶಾಸ್ತ್ರಾಗಮ ಸ್ಮೃತಿಗಳು.
ನೀವೇ ಸರ್ವ ಚೈತನ್ಯವೆಂದು ಹೇಳಿದವಯ್ಯ
ತರ್ಕ ವ್ಯಾಕರಣ ಮಾಘ ರಘುವಂಶ ಸರ್ವಜ್ಞನೀತಿ ಮೊದಲಾಗಿ.
ನೀವೇ ನಿಜಮೋಕ್ಷಮಂದಿರವೆಂದು ಹೇಳಿದವಯ್ಯ
ಪ್ರಮಥಗಣಂಗಳ ಎರಡೆಂಬತ್ತೆಂಟುಕೋಟಿ ವಚನಂಗಳು.
ನೀವೇ ಚಿದೈಶ್ವರ್ಯ ಚಿದಾಭರಣ ಚಿದ್ಬ್ರಹ್ಮವೆಂದು ಸೂಚಿಸಿದವಯ್ಯ
ಪರಮಬೋಧಾಮೃತಂಗಳು.
ದೇವಾ, ಎನ್ನಪರಾಧವೆಂಬ ಅಜ್ಞಾನಕ್ಕೆ ನೀವೆ ಜ್ಞಾನಚಕ್ಷುವಯ್ಯ.
ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ !
ಆತ್ಮ ನಿವೇದನೆ, ಆತ್ಮ ವಿಶ್ಲೇಷಣೆ ಬಸವಲಿಂಗದೇವನ ವಚನಗಳಲ್ಲಿನ ವಿಶೇಷ, ಪವಿತ್ರ ಕ್ಷೇತ್ರಗಳ ಪರ್ಯಟನದಿಂದ ವೃಥಾ ಅಯಾಸವಾಯಿತು ಎನ್ನುವ ಆತ "ಸದ್ಭಕ್ತ ಹರಳಯ್ಯಗಳ ಮನೆಯ ಬಾಗಿಲ ಕಾಯವಂತೆ ಮಾಡಯ್ಯ" ಎಂದಿರುವನು. "ಕಾಮವಿಕಾರದಿಂದ ಉಚ್ಚೆಯ ಬಚ್ಚಲಿಗೆ ಹೊಡೆದಾಡಿ ಸತ್ತಿತಯ್ಯ ಎನ್ನಗುಹ್ಯೇಂದ್ರಿಯವು, ಇಂತೀ ಗುಹ್ಯಲಂಪಟಕ್ಕೆ ದೂರವಾದ ಮಹಾಘನ ಸದ್ಭಕ್ತ ಶಿವಶರಣ ಶಂಕರದಾಸಿಮಯ್ಯನ- ದಾಸಿಯ ದಾಸನ ಮಾಡಿ ಸಲಹಯ್ಯ" ಎಂದು ತನ್ನ ಇಷ್ಟ ದೈವದಲ್ಲಿ ಮೊರೆ ಇಡುವನು. ಹೀಗೆ ತನ್ನಲ್ಲಿನ ಅನಂತ ದೌರ್ಬಲ್ಯಗಳನ್ನು ಹೇಳುತ್ತ ಶಿವಶರಣರ ನಾಮ ಸ್ಮರಣೆ ಮಾಡುತ್ತಾ ಅವರ ಗುಣಗಳು ತನ್ನಲ್ಲಿ ಮೈಗೂಡುವಂತೆ ಪ್ರಾರ್ಥಿಸುವನು.
೧೨೭೦
ಶ್ರೀಗುರುಲಿಂಗಜಂಗಮವೆ, ಶ್ರೀಗುರು ಲಿಂಗಜಂಗಮವೆ,
ಶ್ರೀಗುರು ಲಿಂಗಜಂಗಮವೆ.
ಕಾಯಯ್ಯ ಕಾಯಯ್ಯ ಕರುಣಾ[ಣುವೆ].
ಎನ್ನ ಅಜ್ಞಾನಮಾಯಾಪಾಶವ ಪರಿಹರಿಸಿ ರಕ್ಷಿಸಯ್ಯ
ಭವರೋಗ ವೈದ್ಯನೆ, ನಿಮ್ಮ ಧರ್ಮ ನಿಮ್ಮ ಧರ್ಮ.
ನಿಮ್ಮ ಚರಣಕಮಲವ ಮರೆಹೊಕ್ಕೆನಯ್ಯ.
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
*