*
ಅಂಕಿತ:
|
ಅಖಂಡೇಶ್ವರ
|
ಕಾಯಕ:
|
ವಿರಕ್ತಮಠದ ಅಧಿಪತಿ
|
874
ಬಸವಣ್ಣನೆ ಗುರುವೆನಗೆ,
ಬಸವಣ್ಣನೆ ಲಿಂಗವೆನಗೆ,
ಬಸವಣ್ಣನೆ ಜಂಗಮವೆನಗೆ,
ಬಸವಣ್ಣನೆ ಪಾದೋದಕವೆನಗೆ,
ಬಸವಣ್ಣನೆ ಪ್ರಸಾದವೆನಗೆ,
ಬಸವಣ್ಣನೆ ವಿಭೂತಿಯೆನಗೆ,
ಬಸವಣ್ಣನೆ ರುದ್ರಾಕ್ಷಿಯೆನಗೆ,
ಬಸವಣ್ಣನೆ ಮೂಲಮಂತ್ರವೆನಗೆ,
ಬಸವಣ್ಣನೆ ಅಷ್ಟಾವರಣವೆನಗೆ,
ಬಸವಣ್ಣನೆ ಪಂಚಾಚಾರವೆನಗೆ,
ಬಸವಣ್ಣನೆ ಷಟ್ಸ್ಥಲಬ್ರಹ್ಮವೆನಗೆ,
ಬಸವಣ್ಣನೆ ಸರ್ವಾಚಾರಸಂಪತ್ತಾದನಾಗಿ
ಬಸವಣ್ಣನ ಹಾಸಿಕೊಂಡು, ಬಸವಣ್ಣನ ಹೊದ್ದುಕೊಂಡು,
ಬಸವಣ್ಣನ ಸುತ್ತಿಕೊಂಡು, ಬಸವಣ್ಣನ ಧರಿಸಿಕೊಂಡು,
ಬಸವಣ್ಣನ ಚಿದ್ಗರ್ಭದೊಳಗೆ ಕುಳ್ಳಿರ್ದು
ನಾನು ಬಸವ ಬಸವ ಬಸವಾ ಎನುತಿರ್ದೆನಯ್ಯಾ ಅಖಂಡೇಶ್ವರಾ.
ಈತ ಬಸವೋತ್ತರ ಯುಗದ ಮತ್ತೊಬ್ಬ ಮಹತ್ವದ ವಚನಕಾರ. ತಂದೆ ಮಲ್ಲಶೆಟ್ಟೆಪ್ಪ, ತಾಯಿ ದೊಡ್ಡಮಾಂಬೆ, ಸ್ಥಳ
ಗುಲಬರ್ಗಾ ಜಿಲ್ಲೆಯ ಜೇವರಗಿ. ಗುರು ಅಖಂಡೇಶ್ವರ. ಜೀವಿತ ಕಾಲಾವಧಿ ೧೬೩೯ ರಿಂದ ೧೭೧೧. ಮೂಲತ: ಭಕ್ತನಾಗಿದ್ದ
ಈತ ಗುರುಗಳ ತರುವಾಯು ಜೇವರಗಿ ವಿರಕ್ತಮಠದ ಅಧಿಪತಿಯಾದ. ಲೋಕ ಸಂಚಾರ ಕೈಕೊಂಡು ಧರ್ಮತತ್ವ ಬೋಧೆ ಮಾಡಿ,
ಕೊನೆಗೆ ಜೇವರಗಿಯಲ್ಲಿಯೇ ಐಕ್ಯನಾದ. ಷಣ್ಮುಖಸ್ವಾಮಿಗಳು ೭೧೭ ವಚನ, 'ಅಖಂಡೇಶ್ವರ ಜೋಗುಳ ಪದ' (೪೧
ಚೌಪದಿ), 'ಪಂಚ ಸಂಜ್ಞೆಗಳಪದ' (೭ ಪರಿವರ್ಧಿನಿ ಷಟ್ಪದಿ), 'ನಿರಾಳ ಸದ್ಗುರು ಸ್ತೋತ್ರ' (ಭಾಮಿನಿ
ಷಟ್ಪದಿ)- ಎಂಬ ಕೃತಿಗಳನ್ನು ರಚಿಸಿದ್ದಾರೆ.
ಬಸವನ ನಾಮವು ಕಾಮಧೇನು ಕಾಣಿರೊ.
ಬಸವನ ನಾಮವು ಕಲ್ಪವೃಕ್ಷ ಕಾಣಿರೊ.
ಬಸವನ ನಾಮವು ಚಿಂತಾಮಣಿ ಕಾಣಿರೊ.
ಬಸವನ ನಾಮವು ಪರುಷದಖಣಿ ಕಾಣಿರೊ.
ಬಸವನ ನಾಮವು ಸಂಜೀವನಮೂಲಿಕೆ ಕಾಣಿರೊ.
ಇಂತಪ್ಪ ಬಸವನಾಮಾಮೃತವು
ಎನ್ನ ಜಿಹ್ವೆಯತುಂಬಿ ಹೊರಸೂಸಿ ಮನವ ತುಂಬಿತ್ತು.
ಆ ಮನವತುಂಬಿ ಹೊರಸೂಸಿ ಸಕಲಕರಣೇಂದ್ರಿಯಂಗಳ ತುಂಬಿತ್ತು.
ಆ ಸಕಲ ಕರಣೇಂದ್ರಿಯಂಗಳ ತುಂಬಿ ಹೊರಸೂಸಿ
ಸರ್ವಾಂಗದ ರೋಮಕುಳಿಗಳನೆಲ್ಲ ವೇಧಿಸಿತ್ತಾಗಿ
ನಾನು ಬಸವಾಕ್ಷರವೆಂಬ ಹಡಗವೇರಿ
ಬಸವ ಬಸವ ಬಸವಾ ಎಂದು
ಭವಸಾಗರವ ದಾಟಿದೆನಯ್ಯಾ ಅಖಂಡೇಶ್ವರಾ.
ವಚನಗಳು ಸ್ಥಲಾನುಗುಣವಾಗಿ ಸಂಕಲನಗೊಂಡಿವೆ. 'ತೂರ್ಯ ನಿರಾಲಂಬ ಶರಣನ ಅರುಹಿನ ಷಟ್-ಸ್ಥಲ ವಚನ' ಎಂಬುದು
ಈ ಕೃತಿಯ ಹೆಸರು. ಇದು ಮುಖ್ಯವಾಗಿ ಷಟ್-ಸ್ಥಲತತ್ವವನ್ನು ನಿರೂಪಿಸುವ ಗ್ರಂಥ. ಈಗಾಗಲೇ ರೂಢಿಗತವಾಗಿ
ನಡೆದುಬಂದ ಈ ತತ್ವವನ್ನು ಪರಂಪರೆಯ ಜಾಡಿನಲ್ಲಯೇ ಹಚ್ಚು ವ್ಯವಸ್ಥಿತವಾಗಿ, ಅಷ್ಟೇ ಖಚಿತವಾಗಿ ಹೇಳುತ್ತ
ಸಾಗಿದ್ದಾರೆ. ಅನುಭಾವ-ತತ್ವ ಸಾಹಿತ್ಯ ಈ ಮೂರು ಈ ವಚನಗಳಲ್ಲಿ ಮುಪ್ಪುರಿಗೊಂಡಿವೆ.
ಸರ್ವಜ್ಞನು ನೀನೇ ಅಯ್ಯಾ.
ಸವರ್ವೆಶ್ವರನು ನೀನೇ ಅಯ್ಯಾ.
ಸರ್ವಾಂತರ್ಯಾಮಿ ನೀನೇ ಅಯ್ಯಾ.
ಸರ್ವಗತನು ನೀನೇ ಅಯ್ಯಾ.
ಸರ್ವಕಳಾಭರಿತನು ನೀನೇ ಅಯ್ಯಾ.
ಸರ್ವಗುಣಸಂಪನ್ನನು ನೀನೇ ಅಯ್ಯಾ ಅಖಂಡೇಶ್ವರಾ.
ವಚನ ವಾಗ್ಮಯದ ಮೂರನೆ ಘಟ್ಟದ ಪ್ರಮುಖರಿವರು, ಸಂಸ್ಕೃತ-ಕನ್ನಡಗಳೆರಡರಲ್ಲೂ ಸಮಾನ ಪಾಂಡಿತ್ಯವಿದ್ದವರು,
ನಿಶ್ಚಿತ ಶಾಸ್ತ್ರಜ್ಞಾನ ಯೋಗಸಿದ್ಧಿ, ಅನುಭಾವದ ದಿವ್ಯ ತೇಜಸ್ಸನ್ನು ಹೊಂದಿದ್ದಿಇವರು ಜೇವರಗಿ ವಿರಕ್ತಮಠದ
ಅಧಿಪತಿಗಳಾಗಿ ವಚನಗಳನ್ನು ಸ್ಥಲಾನುಸರಿಯಾಗಿ ಬರೆದಿರುವರು, ಇವರ ವಚನಗಳು ಮುಖ್ಯವಾಗಿ ಷಟ್ಸ್ಥಲ ತತ್ತ್ವವನ್ನು
ನಿರೂಪಿಸುತ್ತದೆ. ಈ ತತ್ತ್ವಗಳು ಪರಂಪರೆಯ ಜಾಡಿನಲ್ಲಿ ಹೆಚ್ಚು ವ್ಯವಸ್ಥಿತವಾಗಿ ಬಂದಿದೆ. ಒಟ್ಟು
14 ಸ್ಥಲಗಳಲ್ಲಿ ವಚನಗಳು ವಿಂಗಡಣೆಗೊಂಡಿವೆ. ಅವರ ವಚನಗಳಲ್ಲಿ ಅನುಭಾವ ತತ್ತ್ವ- ಸಾಹಿತ್ಯ ಮುಪ್ಪರಿಗೊಂಡಿದೆ.
298
ಸಚ್ಚಿದಾನಂದ ನಿತ್ಯಪರಿಪೂರ್ಣ ಗುರುವೇ ನಮೋ ನಮೋ.
ಸತ್ಯಸದಮಲ ಸಂಜ್ಞೇಯ ಸೂಚಕ ಗುರುವೇ ನಮೋ ನಮೋ.
ಭಕ್ತಿಬೆಳಗಿನ ಮುಕ್ತಿಸ್ವರೂಪ ಗುರುವೇ ನಮೋ ನಮೋ.
ಅಖಂಡೇಶ್ವರನೆಂಬ ಬಚ್ಚಬರಿಯ
ಬಯಲಬ್ರಹ್ಮವಾದ ಗುರುವೆ ನಮೋ ನಮೋ.
ಶ್ರೀಗುರುವೇ ತಂದೆ ತಾಯಿಗಳಲ್ಲದೆ,
ಬೇರೆ ಮತ್ತೆ ತಂದೆತಾಯಿಗಳಿಲ್ಲವಯ್ಯ ಎನಗೆ.
ಶಿವಶರಣರೇ ಬಂಧುಬಳಗವಲ್ಲದೆ,
ಬೇರೆ ಮತ್ತೆ ಬಂಧುಬಳಗವಿಲ್ಲವಯ್ಯ ಎನಗೆ.
ಶಿವಕುಲವೆ ಮಹಾಕುಲವಲ್ಲದೆ,
ಬೇರೆ ಮತ್ತೆ ಕುಲವಿಲ್ಲವಯ್ಯ ಎನಗೆ.
ಅಖಂಡೇಶ್ವರಾ, ನೀವೆನ್ನ ಕುಲದೈವ ಮನೆ ದೈವವಲ್ಲದೆ
ಬೇರೆ ಮತ್ತೆ ಕುಲದೈವ ಮನೆದೈವ ಇಲ್ಲವಯ್ಯ ಎನಗೆ.
*