ಮಹಾಲಿಂಗ ವೀರ ರಾಮೇಶ್ವರ | ಆನಂದ ಸಿದ್ಧೇಶ್ವರ |
ತ್ರೈಲೋಚನ ಮನೋಹರ ಮಾಣಿಕೇಶ್ವರಲಿಂಗ ?? |
ಸು.1600ರಲ್ಲಿ ಇದ್ದಿರಬಹುದಾದ ಈ ಅಂಕಿತದ ವಚನಕಾರನ ಹೆಸರು ಅಲಭ್ಯ. ಏಳು ವಚನಗಳು ದೊರೆತಿವೆ. ಇಷ್ಟಲಿಂಗವ ಬಿಟ್ಟು ಅನ್ಯದೈವಕ್ಕೆರಗುವವರ ಟೀಕೆ ನಿಂದಕರ ತೆಗಳಿಕೆ ಮುಂತಾದ ವಿಷಯಗಳು ಆಕರ್ಷಕ ದೃಷ್ಟಾಂತಗಳ ಮೂಲಕ ಈ ವಚನಗಳಲ್ಲಿ ನಿರೂಪಿಸಲ್ಪಟ್ಟಿವೆ. ನೀತಿಪರವಾದ ಮಾತುಗಳಿವೆ. ಏಕದೈವದ ಬಗೆಗೆ ನಿಷ್ಠೆಯಿರಬೇಕೆಂಬ ಸೂಚನೆಯಿದೆ.
ನಿಂದೆ ಸ್ತುತಿಗಳಿಗೆ ಕಿವುಡನಾಗಿರಬೇಕು.
ಪರನಾರಿ ದ್ರವ್ಯಕ್ಕೆ ಅಂಧಕನಾಗಿರಬೇಕು.
ಶಬ್ದ ಸಂಭ್ರಮದ ತಾರ್ಕಿಕರೊಡನೆ
ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು.
ಇವನಳಿದ ಶರಣರ ಹೃತ್ಕಮಲದೊಳಗೆ
ತಾನು ತಾನಾಗಿಹ ತ್ರೈಲೋಚನ ಮನೋಹರ ಮಾಣಿಕೇಶ್ವರಲಿಂಗನು. /೧೨೬೩ [1]
ತನ್ನ ಹಿತ್ತಿಲೊಳು ಮರುಜೇವಣಿಗೆಯಿದ್ದು,
ನಾರುಬೇರುಗಳಿಗೆ ಹರಿವ ಮನುಜರಿಗೆ ನಾನೇನೆಂಬೆನಯ್ಯ !
ತನ್ನೊಳಗೆ ಶಿವಲಿಂಗವಿದ್ದು,
ಅನ್ಯದೈವಕ್ಕೆರಗುವ ಕುನ್ನಿ ಮನುಜರಿಗೆ ನಾನೆಂತೆಂಬೆನಯ್ಯ !
ತ್ರೈಲೋಚನ ಮನೋಹರ ಮಾಣಿಕೇಶ್ವರಲಿಂಗ,
ಪಾಪಿಯ ಕಣ್ಣಿಗೆ ಪರುಷ ಕಲ್ಲಾದಂತೆ ಅಯ್ಯ ನೀನು. /೧೨೬೧ [1]
ಗಾತ್ರಗಳು ಸಕೀಲವಾಗದ ಮುನ್ನ ಪುಡಿಸಿ,
ದೃಷ್ಟಿ ನರನರಸದ ಮುನ್ನ ನೋಡಿ,
ಮತಿ ಮರೆಯದ ಮುನ್ನ ಲಿಂಗಾಲಿಂಗೆನ್ನಿ,
ಸಿರಿ ತೊಲಗದ ಮುನ್ನ ಜಂಗಮಕ್ಕೆ ನೀಡಿ,
ತ್ರೈಲೋಚನ ಮನೋಹರ ಮಾಣಿಕೇಶ್ವರ[ಲಿಂಗ]
ಸಹವಾಗದನಿಟ್ಟರೆ ಮರಳಿಬಾಹುದೋ. /೧೨೫೯
[1]
[1] ವಚನ ಸಂಖ್ಯೆ ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.
ಮಹಾಲಿಂಗ ವೀರ ರಾಮೇಶ್ವರ | ಆನಂದ ಸಿದ್ಧೇಶ್ವರ |