ಗಜೇಶ ಮಸಣಯ್ಯಗಳ ಪುಣ್ಯಸ್ಥ್ರೀ ಮಸಣಮ್ಮ
| |
*
ಅಂಕಿತ:
|
ಮಸಣಯ್ಯ ಪ್ರಿಯ ಗಜೇಶ್ವರ
|
೭೬೨
ಅಂಗದಮೇಲಣ ಲಿಂಗವು ಲಿಂಗವಲ್ಲ;
ಮನದಮೇಲಣ ಲಿಂಗವು ಲಿಂಗವಲ್ಲ;
ಭಾವದಮೇಲಣ ಲಿಂಗವು ಲಿಂಗವಲ್ಲ.
ಅಂಗದಮೇಲಣ ಲಿಂಗ ವ್ಯವಹಾರ;
ಮನದಮೇಲಣ ಲಿಂಗ ಸಂಕಲ್ಪ;
ಭಾವದಮೇಲಣ ಲಿಂಗ ಭ್ರಾಂತುತತ್ವ.
ಆಳಿನ ಆಳು ಅರಸನಪ್ಪನೆ, ಆಳನಾಳುವನರಸಲ್ಲದೆ ?
ಅಂಗ ಪ್ರಾಣ ಭಾವಂಗಳನೊಳಕೊಂಡಿರ್ಪುದೆ ಲಿಂಗ
ಕಾಣಾ, ಮಸಣಯ್ಯಪ್ರಿಯ ಗಜೇಶ್ವರಾ.
ಈಕೆ ಗಜೇಶ ಮಸಣಯ್ಯನ ಸತಿ. ಹೆಸರು ಮಸಣಮ್ಮ. ಗಂಡನ ಊರು ಅಕ್ಕಲಕೋಟೆ ತಾಲೂಕ ಕರ್ಜಗಿ. ಬಸವಣ್ಣನವರ ಕೀರ್ತಿವಾರ್ತೆ
ಕೇಳಿ ಇಬ್ಬರೂ ಕಲ್ಯಾಣಕ್ಕೆ ಬಂದು ಸೇರುತ್ತಾರೆ. ಕಾಲ - ೧೧೬೦. ಅಂಕಿತ 'ಮಸಣಯ್ಯ ಪ್ರಿಯ ಗಜೇಶ್ವರ'
ಸದ್ಯ ಈಕೆಯ ಹತ್ತು ವಚನಗಳು ದೊರೆತಿವೆ. ಸೃಷ್ಟಿಯ ಉತ್ಪತ್ತಿ, ಲಿಂಗದ ಸ್ವರೂಪ, ಅರಿವಿನ ಮಹತ್ವ, ಗುರುಲಿ೦ಗಜ೦ಗಮ
ಸಂಬಂಧ, ಶರಣರ ಸ್ತುತಿ ಇಲ್ಲಿ ವಿಶೇಷಸ್ಥಾನ ಪಡೆದಿರುವುದರಿಂದ ವ್ರತಾಚಾರ ನಿಷ್ಠೆಗೆ ಅದ್ಯಸ್ಥಾನ ಕೋಟ್ಟ,
ಉಳಿದ ವಚನಕಾರ್ತಿಯರಿಂದ ಈಕೆ ಭಿನ್ನಳಾಗಿ ತೋರುತ್ತಾಳೆ.
೭೬೬
ಗುರುವಿಂಗೆ ಗುರುವಾಗಿ ಎನಗೆ ಗುರುವಾದನಯ್ಯಾ ಬಸವಣ್ಣನು.
ಲಿಂಗಕ್ಕೆ ಲಿಂಗವಾಗಿ ಎನಗೆ ಲಿಂಗವಾದನಯ್ಯಾ ಚೆನ್ನಬಸವಣ್ಣನು.
ಜಂಗಮಕ್ಕೆ ಜಂಗಮವಾಗಿ
ಎನಗೆ ಜಂಗಮವಾದನಯ್ಯಾ ಪ್ರಭುದೇವರು.
ಪ್ರಸಾದಕ್ಕೆ ಪ್ರಸಾದವಾಗಿ
ಎನಗೆ ಪ್ರಸಾದವಾದನಯ್ಯಾ ಮರುಳಶಂಕರದೇವರು.
ಬಸವಣ್ಣನಿಂದ ಶುದ್ಭಪ್ರಸಾದಿಯಾದೆನು.
ಚೆನ್ನಬಸವಣ್ಣನಿಂದ ಸಿದ್ಧಪ್ರಸಾದಿಯಾದೆನು.
ಪ್ರಭುದೇವರಿಂದ ಪ್ರಸಿದ್ಧಪ್ರಸಾದಿಯಾದೆನು.
ಮರುಳಶಂಕರದೇವರಿಂದ ಮಹಾಪ್ರಸಾದಿಯಾದೆನು.
ಇಂತೀ ಚತುರ್ವಿಧವೆನ್ನ ಸರ್ವಾಂಗದಲ್ಲಿ ಕರಿಗೊಂಡು
ಎಡದೆರಹಿಲ್ಲದೆ ಪರಿಪೂರ್ಣವಾಯಿತ್ತು.
ಮಸಣಯ್ಯಪ್ರಿಯ ಗಜೇಶ್ವರಾ,
ನಿಮ್ಮ ಶರಣರ ಪಾದಕ್ಕೆ ನಮೋ ನಮೋ ಎನುತಿರ್ದೆನು.
೭೭೧
ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಭವೆ ?
ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ?
ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ?
ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು,
ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ?
ಇಂದ್ರಿಯಂಗಳ ಬಿಟ್ಟು ಲಿಂಗವನೊಲಿಸಬೇಕೆಂಬರು,
ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ ?
ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು,
ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ?
ಇದು ಕಾರಣ, ಪರಂಜ್ಯೋತಿ ಪರಮಕರುಣಿ ಪರಮಶಾಂತನೆಂಬ ಲಿಂಗವು
ಕೋಪದ ಮುನಿಸನರಿದಡೆ ಕಾಣಬಹುದು, ಮರೆದಡೆ ಕಾಣಬಾರದು.
ಅರಿವಿಂದ ಕಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರಾ
*