Previous ಕಾಲಕಣ್ಣಿಯ ಕಾಮಮ್ಮ ಕೀಲಾರದ ಭೀಮಣ್ಣ Next

ಕಿನ್ನರಿ ಬೃಹ್ಮಯ್ಯ

*
ಅಂಕಿತ: ತ್ರಿಪುರಾಂತಕ ಲಿಂಗ
ಕಾಯಕ: ಮೊದಲಿಗೆ ಅಕ್ಕಸಾಲಿಯಾಗಿದ್ದನು. ಕಲ್ಯಾಣಕ್ಕೆ ಬಂದ ಮೇಲೆ ತ್ರಿಪುರಾಂತಕೇಶ್ವರನ ಮುಂದೆ ಕಿನ್ನರಿ ನುಡಿಸುವ ಕಾಯಕ

೬೪
ಶರಣಾರ್ಥಿ ಶರಣಾರ್ಥಿ ಎಲೆ ನಮ್ಮವ್ವ,
ಶರಣಾರ್ಥಿ ಶರಣಾರ್ಥಿ ಕರುಣ ಸಾಗರ ನಿಧಿಯೆ,
ದಯಾಮೂರ್ತಿ ತಾಯೆ, ಶರಣಾರ್ಥಿ!
ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕು,
ನೀವು ಬಿಡಿಸಿದರಾಗಿ ನಿಮ್ಮ ದಯದಿಂದ
ನಾನು ಹುಲಿನೆಕ್ಕಿ ಬದುಕಿದೆನು ಶರಣಾರ್ಥಿ ಶರಣಾರ್ಥಿ ತಾಯೆ.

ಮಹಾಮಾನವತಾವಾದಿ ಬಸವಣ್ಣನವರ ಕೀರ್ತಿ ವಾರ್ತೆ ಕೇಳಿ ಆಕರ್ಷಿತರಾಗಿ ನಾಲ್ಕೂ ನಿಟ್ಟಿನಿಂದ ಜಿಜ್ಞಾಸುಗಳು ಕಲ್ಯಾಣದತ್ತ ಮುಖ ಮಾಡಿದರು. ಹಾಗೆಯೇ ಕಿನ್ನರಿ ಬೊಮ್ಮಯ್ಯನು ಕೂಡ ಕಲ್ಯಾಣಕ್ಕೆ ಬಂದು ಸಾಧನೆಗೈದು ಶ್ರೇಷ್ಠ ಶರಣನಾದನು. ಮೂಲತಃ ಆಂಧ್ರಪ್ರದೇಶದ ಪುತ್ತೂರು/ ಪೂದೂರ (ಊಡೂರು) ಗ್ರಾಮದ ಕಲಿದೇವಿ ಎಂಬ ಸಾಧ್ವಿಯ ಮಗನಾದ ಈತನು ಅಕ್ಕಸಾಲಿಗನಾಗಿದ್ದನು ಹೀಗೊಂದು ಸಲ ಅವನು ಆಭರಣಗಳನ್ನು ಮಾಡಿಕೊಟ್ಟಾಗ ತೂಕದಲ್ಲಿ ಚಿನ್ನ ಕಡಿಮೆ ಇದ್ದ ಬಗ್ಗೆ ಇವನ ಮೇಲೆ ಅಪವಾದ ಬರುತ್ತದೆ. ತನ್ನ ಈ ವೃತ್ತಿ ಬಿಡಿಸಲು ದೇವನೇ ಮಾಡಿದ ಮಾಟವಿದೆಂದು ತಿಳಿದು ಅಕ್ಕಸಾಲಿಗ ಕಾಯಕ ಬಿಟ್ಟು ವೈರಾಗ್ಯ ತಾಳಿ ಕಲ್ಯಾಣದ ಕಡೆಗೆ ನಡೆದನು ಕಿನ್ನರಿ ವಾದ್ಯ ನುಡಿಸುವಲ್ಲಿ ಪರಿಣತನಾಗಿದ್ದ ಬೊಮ್ಮಯ್ಯನು ಕಲ್ಯಾಣ ಪಟ್ಟಣದ ತ್ರಿಪುರಾಂತಕ ದೇವಾಲಯದಲ್ಲಿ ಕಿನ್ನರಿ ನುಡಿಸುವ ಕಾಯಕ ಮಾಡಿಕೊಂಡು ಜಂಗಮದಾಸೋಹ, ನಡೆಸುತ್ತಿದ್ದನು. ಇದರಿಂದ ಅವನಿಗೆ ಕಿನ್ನರಿ ಬೊಮ್ಮಯ್ಯ ಎಂಬ ಹೆಸರು ಬಂದಿತು. ಅವನನ್ನು ಬ್ರಹ್ಮಯ್ಯ ಎಂದೂ ಕರೆಯುತ್ತಿದ್ದರು.

ಕಲ್ಯಾಣಕ್ಕೆ ಬಂದ ಅಕ್ಕಮಹಾದೇವಿಯ ವೈರಾಗ್ಯವನ್ನು ಒರೆಗೆ ಹಚ್ಚಿ ನೋಡುತ್ತಾನೆ. ಅಕ್ಕಮಹಾದೇವಿ ತಾಯಿಯ ಪರಮ ವೈರಾಗ್ಯತೆಯನ್ನು ಎಲ್ಲರಿಗೂ ಪರಿಚಯಿಸುತ್ತಾನೆ

ಕಲ್ಯಾಣದಲ್ಲಿ ಕ್ರಾಂತಿ ಸಂಭವಿಸಿ ಶರಣರೆಲ್ಲ ಚದುರಿ ಹೋಗುವಾಗ ಚೆನ್ನ ಬಸವಣ್ಣನ ನೇತೃತ್ವದಲ್ಲಿ ಉಳಿವಿಗೆ ಹೊರಟ ತಂಡದ ದಂಡಿನ ಅಧಿಪತ್ಯವನ್ನು ಬೊಮ್ಮಯ್ಯ ವಹಿಸುತ್ತಾನೆ. ಶರಣರನ್ನೂ ಶರಣ ಸಾಹಿತ್ಯವನ್ನೂ ರಕ್ಷಿಸುತ್ತ ಉಳಿವಿಗೆ ಬರುತ್ತಾನೆ. ನಿಬಿಡಾರಣ್ಯದ ಮಧ್ಯ ಅತ್ಯಂತ ದುರ್ಗಮವಾದ ಪ್ರದೇಶದಲ್ಲಿರುವ ಒಂದು ವಿಶಾಲವಾದ ಗವಿಯಲ್ಲಿ ಉಳಿದುಕೊಳ್ಳುತ್ತಾನೆ. ಆ ಗವಿಯ ಮುಂದೆ ಹರಿಯುತ್ತಿದ್ದ ನದಿಯ ಪಥವನ್ನು ಬದಲಿಸಿ ಗವಿಯ ಮುಖಾಂತರ ಹರಿಯುವಂತೆ ಮಾಡಿ ಆ ಗುಹೆಯನ್ನು ಒಂದು ಜಲದುರ್ಗವಾಗಿ ಪರಿವರ್ತಿಸುತ್ತಾನೆ. ತನ್ನ ಮಣಿಹ ಮುಗಿದ ಮೇಲೆ ಕಿನ್ನರಿ ನುಡಿಸುತ್ತಲೇ ದೇಹಾಂತ ಹೊಂದುತ್ತಾನೆ. ಆ ನದಿಗೆ ಕಿನ್ನರಿ ಬೊಮ್ಮಯ್ಯನ ಹೊಳೆ ಎಂದು ಕರೆಯುತ್ತಾರೆ. ಆ ಗವಿಗೆ ಮಹಾಮನೆ ಗವಿ ಎಂದು ಕರೆಯುತ್ತಾರೆ. ಈತ, ಉಳವಿಯಲ್ಲಿ ಲಿಂಗೈಕ್ಯನಾಗುತ್ತಾನೆ. ಉಳಿವಿಯ ಮಹಾಮನೆಯ ಸಮೀಪ ಬೊಮ್ಮಯ್ಯನ ಸಮಾಧಿ ಇದೆ. ಸಮಾಧಿಯ ಮೇಲೆ ಕಿನ್ನರಯ್ಯ ಹೆಸರಿನ ಒಂದು ಶಿಲಾ ಶಾಸನವಿದೆ. ಬೀದರ ಜಿಲ್ಲೆಯ ಹಳ್ಳಿಖೇಡದಲ್ಲಿ ಕಿನ್ನರಿ ಬೊಮ್ಮಯ್ಯನ ದೇವಾಲಯವಿದ್ದು ಅಲ್ಲಿ ಬೊಮ್ಮಯ್ಯನ ಸುಂದರ ವಿಗ್ರಹವಿದೆ. ಶರಣರ ಪಡೆ ಉಳಿವಿಗೆ ಹೋಗುವಾಗ ಬೊಮ್ಮಯ್ಯನ ದಂಡು ಅಲ್ಲಿ ತಂಗಿತ್ತೆಂದು ಹೇಳುತ್ತಾರೆ.

೫೩
ಕಲ್ಲೊಳಗಣ ಬೆಲ್ಲವ ಮೆದ್ದವರಿನ್ಯಾರೊ?
ಕಲ್ಲನೆ ಹಿಡಿದು ಬಿಡದೆ ಹಾರುವಿರಿ.
ಕಲ್ಲು ಹಲ್ಲನೆ ಕಳೆಯಿತ್ತು,
ಬಲ್ಲವರಿದ ಹೇಳಿ.
ಕಲ್ಯಾಣದ ತ್ರಿಪುರಾಂತಕ ನೀನೆ ಬಲ್ಲೆಯಯ್ಯಾ.

'ಮಹಾಲಿಂಗ ತ್ರಿಪುರಾಂತಕ' ಅಂಕಿತದಲ್ಲಿ ವಚನಗಳನ್ನು ರಚಿಸಿದ್ದು, ಸದ್ಯ ೧೮ ದೊರೆತಿವೆ. ಅವುಗಳಲ್ಲಿ ಮಹಾದೇವಿಯಕ್ಕನ ಜೊತೆಗೆ ನಡೆಸಿದ ಸಂವಾದ, ಶಿವನ ಮಹಿಮೆ, ಬಸವಾದಿ ಶರಣರ ವರ್ಣನೆ ಕಂಡುಬರುತ್ತದೆ. ಮಹಾದೇವಿಯಕ್ಕನ ವೈರಾಗ್ಯವನ್ನು ಒರೆಹಚ್ಚಿ ನೋಡಿದವನು. ಪ್ರಣವಮಂತ್ರವನ್ನು ಬಸವಣ್ಣನಿಗೆ ಅನ್ವಯಿಸಿರುವನು.

೫೨
ಕಲ್ಲಿಲಿಟ್ಟವಂಗೊಲಿದೆ, ಕಾಲಲೊದ್ದವಂಗೊಲಿದೆ,
ಬಾಯಲ್ಲಿ ಉಗಿದವಂಗೊಲಿದೆ.
ಅದು ನಿನ್ನ ಭಕ್ತಿಯೋ ಸತ್ಯವೋ ಗರ್ವವೋ!
ತ್ರೈಭುವನಂಗಳಿಗಭೇದ್ಯ ತಿಳಿವಡೆ ನಿನ್ನ ಮಹಿಮೆ,
ಉಮೆಯ ವರ ತ್ರಿಪುರಾಂತಕಲಿಂಗವೆ.


*
Previous ಕಾಲಕಣ್ಣಿಯ ಕಾಮಮ್ಮ ಕೀಲಾರದ ಭೀಮಣ್ಣ Next