ಮೋಳಿಗೆ ಮಾರಯ್ಯ
ಅಂಕಿತ: |
ನಿಃಕಳಂಕ ಮಲ್ಲಿಕಾರ್ಜುನಾ |
ಕಾಯಕ: |
ಕಾಶ್ಮೀರ ದೇಶದ ದೇಶದ ಅರಸ, ರಾಜ್ಯ ತ್ಯಾಗಮಾಡಿ ಕಟ್ಟಿಗೆ ಮಾರುವ ಕಾಯಕ |
1424
ಅಂಗ ಲಿಂಗವಂತವಾದ ಮತ್ತೆ
ಮುಟ್ಟುವ ತಟ್ಟುವ, ಸೋಂಕಿನಲ್ಲಿ ಸುಳಿವ,
ಇದಿರಿಟ್ಟು ಬಂದ ಪದಾರ್ಥವ
ಅಂಗಲಿಂಗಕ್ಕೆ ಕೊಟ್ಟುಕೊಳಬೇಕು.
ಪ್ರಾಣಲಿಂಗವಾದ ಮತ್ತೆ ಕರಣಂಗಳಿಗಿಂಬುಗೊಡದಿರಬೇಕು.
ತನ್ನನರಿದುದಕ್ಕೆ ಉಭಯಾರೂಢನಾಗಿರಬೇಕು.
ಉಭಯವೇಕವಾದ ಮತ್ತೆ ಸಾಕು ಸತ್ಕ್ರೀ, ನಿಃಕಳಂಕ ಮಲ್ಲಿಕಾರ್ಜುನಾ
ಈತ ಕಾಶ್ಮೀರ ದೇಶದ ಅರಸ. ಮೂಲ ಹೆಸರು ಮಹಾದೇವ ಭೂಪಾಲ. ಹೆಂಡತಿ ಗಂಗಾದೇವಿ. ಬಸವಣ್ಣನವರ ಹಿರಿಮೆಯನ್ನು
ಕೇಳಿ ರಾಜ್ಯ ತ್ಯಾಗಮಾಡಿ ಇಬ್ಬರೂ ಕಲ್ಯಾಣಕ್ಕೆ ಬರುತ್ತಾರೆ. ಮಾರಯ್ಯ-ಮಹಾದೇವಿ ಹೆಸರಿನಿಂದ ಕಟ್ಟಿಗೆ
ಮಾರುವ ಕಾಯಕವನ್ನು ಕೈಕೊಂಡು ಶರಣ ಜೀವನ ನಡೆಸುತ್ತಾರೆ. ಇವರ ಕಾಯಕನಿಷ್ಠೆಯ ಕಥೆ ಶೂನ್ಯ ಸಂಪಾದನೆಯ
ಒಂದು ಅಧ್ಯಾಯದಲ್ಲಿ ನಿರೂಪಿತವಾಗಿದೆ. ಕಾಲ-೧೧೬೦. 'ನಿ:ಕಳಂಕ ಮಲ್ಲಿಕಾರ್ಜುನ' ಅಂಕಿತದಲ್ಲಿ ಈತ ರಚಿಸಿದ
೮0೮ ವಚನಗಳು ದೊರೆತಿವೆ. ವೈವಿಧ್ಯಮಯ ತಾತ್ವಿಕ, ಧಾರ್ಮಿಕ, ಸಾಮಾಜಿಕ, ಅನುಭಾವಿಕ ವಸ್ತು ವಿಷಯಗಳನ್ನೊಳಗೊಂಡ
ಅವು ಮಾರಯ್ಯನ ವಿದ್ವತ್ತು, ಆಧ್ಯಾತ್ಮಿಕ ನಿಲುವು, ಅನುಭಾವದ ಎತ್ತರ, ಸಾಮಾಜಿಕ ಕಳಕಳಿ, ಸಾಹಿತ್ಯಿಕ ಶ್ರೀಮಂತಿಕೆಯನ್ನು ಎತ್ತಿ ತೋರುತ್ತವೆ.
2109
ಲಿಂಗಾಲಯದಲ್ಲಿ ಸತ್ತಿತ್ತೆಂದು,
ಸಂಪ್ರೋಕ್ಷಣವ ಮಾಡಬೇಕೆಂಬ ಸಂದೇಹಿಗಳ ನೋಡಿರೆ.
ಲಿಂಗಮಧ್ಯದಲ್ಲಿ ಜಗದಳಿವುಳಿವೆಂಬುದನರಿಯದೆ,
[ಪ್ರೇ]ತಲಿಂಗವೆಂದು ಭೂಸುರರು ಕೂಡಿ,
ಜಗದೀಶಂಗೆ ಅಭಿಷೇಕವಂ ಮಾಡಿ ಘಾಸಿಯಾದರಲ್ಲಾ,
ಸಂಗನಬಸವ ಮುಂತಾದ ಅಂಗಲಿಂಗಿಗಳೆಲ್ಲರು.
ಸಂಗನಬಸವಣ್ಣಂಗೆ ಶೈವಸಂಗಮೇಶ್ವರನೇ ಗುರುವಾದ.
ಪ್ರಾಣಲಿಂಗವೆಂದು ಇನ್ನಾರಿಗೆ ಹೇಳುವೆ ?
ಇನ್ನು ಸಂದೇಹವಿಲ್ಲ, ನಾನಂಜುವೆನಯ್ಯಾ.
ಬಂದ ಬಟ್ಟೆಯಲ್ಲಿ ಬರಲಾರದೆ, ಈ ದ್ವಂದ್ವವ ಹರಿಯಾ,
ಜಂಗಮಪ್ರಾಣ ಸಂದಿಲ್ಲದಿಪ್ಪ ನಿಃಕಳಂಕ ಮಲ್ಲಿಕಾರ್ಜುನಾ.
ಕಾಶ್ಮೀರ ಸವಾಲಕ್ಷದ ಅರಸನಾಗಿದ್ದ ಈತ ಬಸವಣ್ಣನ ಮಹಿಮೆ ಕೇಳಿ ಕಲ್ಯಾಣಕ್ಕೆ ಬಂದನು. ಅವನ ಅನೇಕ ವಚನಗಳಲ್ಲಿ
ಅವನ ಪೂರ್ವ ಜೀವನದ ಸ್ಮೃತಿಗಳು ಇಣಿಕಿ ಹಾಕಿದೆ. ಬಸವಾದಿ ಪ್ರಮಥರನ್ನು ತುಂಬು ಗೌರವದಿಂದ ಸ್ಮರಿಸಿರುವನು.
ಈತನ ವಚನಗಳಲ್ಲಿ ಇಷ್ಟಲಿಂಗ , ಸ್ಥಲ-ಹೀಗೆ ಧಾರ್ಮಿಕ ವಿಚಾರಗಳು ನಿರೂಪಿತವಾಗಿದೆ. ಆ ಕಾಲಕ್ಕೆ ಆಧ್ಯರ
ವಚನಗಳನ್ನು ನೋಡಿ, ಓದಿ ಹೇಳುವ ಜನರಿದ್ದರು. ತನ್ನಂತೆ ವಚನವಿಲ್ಲ, ವಚನದಂತೆ ತಾನಿಲ್ಲ - ಎಂಬಂತಹ
ಇಬ್ಬಂದಿ. ಜನ ಮಾತಿನಲ್ಲಿ ಅದ್ವೈತವನ್ನು ನುಡಿದು ನಡೆಯಲ್ಲಿ ಅಧಮರಾಗಿರುತ್ತಿದ್ದರು. ಮಾತಿನಲ್ಲಿ
ಬ್ರಹ್ಮವ ನುಡಿವ ಇಂತಹ ಬ್ರಹ್ಮೇತಿಕಾರರಿಗೆ ಅಷ್ಟಾವರಣಗಳಿಲ್ಲ. ಇಂಥಹವರನ್ನು ಪರಮಾತ್ಮ ಮೆಚ್ಚ ಎಂದಿರುವನು.
ಸತಿಪತಿಯಿಬ್ಬರೂ ಏಕವಾದಲ್ಲಿ ನಿಃಕಳಂಕ ಮಲ್ಲಿಕಾರ್ಜುನ ಹೆಡೆಗುಡಿಗೊಳಗಾದನು ಎಂದು ಸತಿಪತಿಗಳೊಂದಾದ
ಭಕ್ತಿಯ ಫಲವನ್ನು ತಿಳಿಸುವನು. ಕಲ್ಯಾಣದ ಕೊನೆದಿನಗಳಲ್ಲಿ ಶರಣರ ಬದುಕು ಅಸ್ತವ್ಯಸ್ತವಾಗಿದ್ದಿತು.
ಆ ದಿನಗಳಲ್ಲಿ ಬಸವಣ್ಣ ಸಂಗಮಕ್ಕೆ, ಚನ್ನಬಸವಣ್ಣ ಉಳಿವೆಗೆ, ಪ್ರಭು ಶ್ರೀಶೈಲದ ಕದಳಿಗೆ, ಮಿಕ್ಕಿನ
ಶರಣರು ತಮಗೆ ಇಷ್ಟ ಬಂದ ಕಡೆಗೆ ಚದುರಿಹೋದರು. ದಿಕ್ಕು ತಪ್ಪಿದ ಶರಣ ಸಂಘಟನೆಯನ್ನು `ಊರು ಕೆಟ್ಟು
ಸೂರೆಮಾಡುವಲ್ಲಿ ಆರಿಗಾರು ಇಲ್ಲ' ಎನ್ನುವ ಇವನ ಮಾತು ಧ್ವನಿಪೂರ್ಣವಾಗಿ ಹೇಳತ್ತದೆ ಎಲ್ಲರೂ ಹೋದರು
ತನದೊಂದು ದಾರಿ ತೋರು ಎಂದು ತನ್ನ ಇಷ್ಟದೈವದಲ್ಲಿ ಪ್ರಾರ್ಥಿಸುವ ಇವನ ನೋವಿನ ಸ್ಥಿತಿ ನಮ್ಮ ಅರಿವಿಗೆ ಬರುತ್ತದೆ.
2092
ರುದ್ರದೈವವೆಂದಡೆ ಅರ್ಧನಾರಿಗೆ ಸಿಕ್ಕಿದ.
ಚಿದ್ರೂಪ ದೈವವೆಂದಡೆ ಹೊದ್ದಿಹುದಕ್ಕೆ ರೂಪಿಲ್ಲ.
ಮತ್ತೆ ಮಹತ್ತಪ್ಪ ಘನವ ನೆನೆದೆಹೆನೆಂದಡೆ, ಮಾತಿಂಗೊಳಗಾಯಿತ್ತು.
ಮತ್ತೆ ವಸ್ತುವ ಇನ್ನೇತರಿಂದ ಕಾಬೆ.
ಗುರು ನರನಾದ, ಲಿಂಗ ಪಾಷಾಣವಾಯಿತ್ತು, ಜಂಗಮ ಆಶೆಕನಾದ.
ಇವೆಲ್ಲವನರಿವ ಮನ ಬೀಜವಾಯಿತ್ತು,
ಎನಗಿನ್ನೇವೆ, ನಿಃಕಳಂಕ ಮಲ್ಲಿಕಾರ್ಜುನಾ ?
2093
ರುದ್ರನ ದೇವೆರೆಂದು ಆರಾಧಿಸಿ,
ಶಿಲೆಯೊಳಗೆ ಹೋರಟೆಗೊಂಡು, ಕೆಟ್ಟರಲ್ಲಾ ಭಕ್ತಜನಂಗಳು.
ವಿಷ್ಣುವ ದೇವರೆಂದು ಆರಾಧಿಸಿ,
ಮರನ ಸುತ್ತಿ ಕಾಲುಗೆಟ್ಟರಲ್ಲಾ ಭೂಸುರಾದಿಗಳು.
ಬ್ರಹ್ಮನ ದೇವರೆಂದು ಆರಾಧಿಸಿ,
ಬೆಂಕಿಯಲ್ಲಿ ಬೆಂದಿರಲ್ಲಾ ಮತ್ರ್ಯಲೋಕದ ಮಹಾಜನಂಗಳು.
ಇಂತೀ ಮೂವರು ಗಂಪಧಾರಿಗಳೆಂಬೆ ಧರೆಯೊಳಗೆ.
ಹೇರಿನ ಅಕ್ಕಿ, ಲಳಿಗೆಯ ಎಣ್ಣೆ, ಹೂವು ಕಾಯಿ ಹಣ್ಣು ಮೊದಲಾದವನು,
ತಪ್ಪ ಸಾಧಿಸಿ ತರಿಸಿಕೊಂಡುಂಬ ಚಿಕ್ಕಮಕ್ಕಳಿಗೆಲ್ಲಿಯದೊ ನೆಟ್ಟನೆಯ ದೇವತ್ವ?
ಎನ್ನ ದೇವಂಗೆ ಇಂತಿವರಂಗ ಒಂದೂ ಇಲ್ಲ.
ಕಾಲದೊಳಗಾದ ಪ್ರಳಯವಿರಹಿತ, ಕರ್ಮದೊಳಗಾದ ಚತುರ್ವಿಧರಹಿತ,
ಗಂಗೆವಾಳುಕಸಮಾರುದ್ರರೊಳಗಾದ ಬಂಧನವಿರಹಿತ.
ಲೀಲೆಗೆ ಹೊರಗಾದ ಸ್ವಯಂಭುವಯ್ಯಾ ಎನ್ನ ದೇವ.
ಇಂತಿವರೆಲ್ಲರೂ ಪ್ರತಿಷ್ಠೆಯನಾರಾಧಿಸಿ ಪ್ರಸನ್ನರಾದರಯ್ಯಾ.
ಇಂತೀ ಪುಣ್ಯದ ಫಲ ಎನಗೊಂದೂ ಬೇಡ.
ಇದ್ದವರೆಲ್ಲ ಒಳಗಿರಲಿ, ನಾ ಹೊರಗಯ್ಯಾ.
ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಅಲಸಿದೆನಲಸಿದೆ, ನಿಮ್ಮ ಕಾಷ್ಠದ ಸೇವೆಯನಯ್ಯಾ.
ಕಾಷ್ಠದವನ ಕಾಷ್ಠವ ಮಾಡದೆ, ಎನ್ನ ಹೊರಗಿರಿಸಿ ನಿನ್ನೊಳಗಾದ,
ನಿಃಕಳಂಕ ಮಲ್ಲಿಕಾರ್ಜುನಾ.
ಪ್ರತಿದಿನ ಸೂರ್ಯೋದಯಕ್ಕೆ ಮೊದಲೇ ಎದ್ದು ನಿತ್ಯವಿಧಿಗಳನ್ನು ಪೂರೈಸಿ ಶಿವಾರ್ಚನೆ ಹಾಗೂ ಜಂಗಮ ಸೇವೆ ಮಾಡುವುದು. ನಂತರ ದೇವರ ಪ್ರಸಾದ ಸ್ವೀಕರಿಸಿ ಕಾಡಿಗೆ ತೆರಳುವುದು, ಅಲ್ಲಿ ಕಟ್ಟಿಗೆ ಕಡಿದು ತಂದು ಊರಿನಲ್ಲಿ ಮಾರಿಬಂದ ಹಣದಲ್ಲಿ ದಾಸೋಹ ಮಾಡುವುದು, ಇವರ ಕಾಯಕ. ಮಹಾರಾಜನಾದರೂ ಶ್ರೀಸಾಮಾನ್ಯನಂತೆ ಶರಣರ ಸೇವೆ ಮಾಡುತ್ತಾ ಮಾರಯ್ಯ ದಂಪತಿಗಳು ಮಹಾಶಿವಶರಣರಾಗಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ಬಸವಣ್ಣನವರ ಪ್ರಭಾವದಿಂದ ಮಹಾರಾಜನೊಬ್ಬ ಶಿವಶರಣನಾದ. ಅವರು ಎಲ್ಲಾ ಶರಣರಿಗೂ ಮಾದರಿಯಾದರು. ಈ ಮಾರಯ್ಯನವರ ಗವಿ ಬೀದರ ಜಿಲ್ಲೆಯ ಬಸವ ಕಲ್ಯಾಣದಿಂದ 12 ಕಿ.ಮೀ. ದೂರದಲ್ಲಿರುವ ಮೋಳಕೇರಿ ಎಂಬ ಗ್ರಾಮದಲ್ಲಿದೆ. ಇವರು ಶತಾಯುಷಿಗಳಾಗಿ ಬದುಕಿದ್ದರು ಎಂದು ಅವರ ವಚನವೊಂದು ಹೇಳುತ್ತದೆ. ಇವರ ಅರ್ಥಗರ್ಭಿತ ವಚನಗಳು ಇಂದು ಸಹ ನಮಗೆ ಸ್ಫೂರ್ತಿಯನ್ನು ತುಂಬುತ್ತವೆ. ಶಿವಶರಣರಲ್ಲಿ ಅಗ್ರಮಾನ್ಯನಾಗಿದ್ದರು. ಇವರ ಆದರ್ಶದ ಬೆಳಕು ಇಡೀ ಮಾನವ ಕುಲಕ್ಕೆ ದಾರಿ ದೀಪವಾಗಿದೆ.