Previous ನೀಲಾಂಬಿಕೆ (ನೀಲಮ್ಮ) ಪರಂಜ್ಯೋತಿ Next

ನುಲಿಯ ಚಂದಯ್ಯ

*

ಕಾಯಕಯೋಗಿ ನುಲಿಯ ಚಂದಯ್ಯ

ಅಂಕಿತ: ಚಂದೇಶ್ವರಲಿಂಗ
ಕಾಯಕ: ನುಲಿಯಕಾಯಕ. ಹಗ್ಗಹೊಸೆದು ಮಾರುವುದು.

ಎನ್ನಂಗದ ಸತ್ಕ್ರೀ ಸಂಗನಬಸವಣ್ಣನು
ಎನ್ನ ಲಿಂಗದ ಸತ್ಕ್ರೀ ಚನ್ನಬಸವಣ್ಣನು.
ಎನ್ನ ಅರುಹಿನ ಸತ್ಕ್ರೀ ಪ್ರಭುವೆ ನೀವು ನೋಡಾ!
ಎನ್ನ ದಾಸೋಹದ ನೈಷ್ಠೆಯೇ ಮಡಿವಾಳಯ್ಯನು!
ಇಂತೀ ಅಂಗ ಲಿಂಗ ಜ್ಞಾನ ದಾಸೋಹ
ಇವು ಮುಂತಾದವೆಲ್ಲವೂ ನಿಮ್ಮ ಪುರಾತನರಾದ ಕಾರಣ
ಚಂದೇಶ್ವರಲಿಂಗದಲ್ಲಿ ಚನ್ನಬಸವಣ್ಣನ ಕೃಪೆಯಿಂದ
ನಿಮ್ಮ ಶ್ರೀಪಾದವ ಬೆರಸಿದೆನಯ್ಯಾ ಪ್ರಭುವೇ! /೧೨೮೮

ಶರಣ ನುಲಿಯ ಚಂದಯ್ಯನವರು ಕಲ್ಯಾಣ ರಾಜ್ಯದ ಹೊರವಲಯದ ಕೆರೆಯ ಹಿನ್ನಿರ ದಡದಲ್ಲಿ ಬೆಳೆದ ಸೊಗಸಾದ ಹುಲ್ಲು ತಂದು ಹಗ್ಗ ಹೊಸೆದು, ಮಾರಿ ಬಂದ ಹಣದಿಂದ ಜಂಗಮ ದಾಸೋಹ ನಡೆಸುತ್ತಿದ್ದ ಚಂದಯ್ಯ ಒಬ್ಬ ಕಾಯಕಯೋಗಿ. ಬಿಜಾಪುರ ಜುಲ್ಲೆಯ ಶಿವಣಗಿ ಈತನ ಹುಟ್ಟೂರು. ಕಾಲ-೧೧೬೦. ಶೂನ್ಯಸಂಪಾದನೆ ಮತ್ತು ಪುರಾಣಗಳಲ್ಲಿ ಈತನ ಕಾಯಕನಿಷ್ಠೆಯ ಕಥೆ ವರ್ಣಿತವಾಗಿದೆ. ಶರಣ ಹೆಂಡದ ಮಾರಯ್ಯನವರು ತನ್ನೊಂದು ವಚನದಲ್ಲಿ ಈವರ ಘನವ್ಯಕ್ತಿತ್ವವನ್ನು ನಿರೂಪಿಸಿದ್ದಾರೆ.

1198
ನುಲಿಯೊಡೆಯರೆ ನಿಮ್ಮಾಳ್ದರ ಕೊಳ್ಳಿರೆ.
ಆಳ್ದರೆಂದವರಾರು ?
ಅವರು ನಿಮ್ಮ ಕೈಯಲ್ಲಿದ್ದಂಥವರೂ ಅವರಾಳ್ದರಲ್ಲ.
ಅವರೇನು ? ಅವರು ನಿಮ್ಮ ಇಷ್ಟರುದ್ರರಾಗರೆ ?
ಜಂಗಮವಾಗಿದ್ದಹರು ಇವರು ಬೇಡವೆ ?
ಇಹರೆ ಬೇಡೆನ್ನೆ, ಹೋಹರೆ ನಿಲಿಸ ಶಕ್ತನಲ್ಲ.
ನಾವು ಇರಲು ಬಲ್ಲಲ್ಲಿ ಇರಿ, ಕೈಯಲ್ಲಿ ಕೊಳ್ಳಿರೆ.
ಮುನ್ನವೆ ಕೊಂಡಿದ್ದೆನು, ಎನ್ನನೇಕೆ ಒಲ್ಲೆಯಯ್ಯಾ,
ನೀನು ಮುನಿದಿದ್ದೆಯಾಗಿ, ಇನ್ನು ಮುನಿವುದಿಲ್ಲ ನಾನು.
ನಿಮ್ಮ ನಂಬುವದಿಲ್ಲ. ಹೊಣೆಯ ಕೊಟ್ಟೆಹೆನು.
ಅದ ಕಂಡು, ಮಾಚಿದೇವ ಮಹಾಪ್ರಸಾದಿ ಹೊಣೆಯಾಗಯ್ಯಾ.
ನಂಬೆನು ಜೀಯಾ, ನಿಮ್ಮಾಣೆ.
ಪತ್ರವಾದರೆ ಕೊಟ್ಟೆಹೆನು, ಇರಲಿಕೆ ಠಾವೆಲ್ಲಿ ?
ಕರದಲ್ಲಿಯೆ ಅಲ್ಲ, ಉರದಲ್ಲಿಯೆ ಅಹುದು.
ನಂಬಿದೆನು, ಸುಖದಲ್ಲಿಹ ಧರ್ಮೇಶ್ವರ[ಲಿಂಗಾ].

ಕಾಯಕಯೋಗಿ:

ಇಷ್ಟಲಿಂಗ ದ ಕೈಯಿಂದಲೇ ಹಗ್ಗ ಮಾರುವ ಕಾಯಕ ಮಾಡಿಸಿದವನೀತ. ಒಂದು ದಿವಸಾ ಕೆರೆಯದಡದಲ್ಲಿ ಬೆಳೆದಿದ್ದಾ ಹುಲ್ಲನ್ನು ಕೊಯ್ದ ಹೊರೆಕಟ್ಟುವಾಗ ಕೊರಳಲ್ಲಿದ್ದ ಲಿಂಗಯ್ಯ ಜಾರಿ ಕೆರೆಯ ನೀರಿನಲ್ಲಿ ಅಡಗಿ ಕುಳಿತದ್ದು ಅವರ ಗಮನಕ್ಕೆ ಬರುವುದಿಲ್ಲಾ ಗುರು, ಜಂಗಮರು ದಾಸೊಹದಲ್ಲಿಯೆ ಲಿಂಗಪೂಜೆಯ ಸಾರ್ಥಕ್ಯ ಕಂಡುಕೊಳ್ಳುವ ಚಂದಯ್ಯನವರನ್ನು ಬಿಟ್ಟು ಇರುವ ಮನಸ್ಸು ಲಿಂಗಯ್ಯನಿಗು ಇರಲಿಲ್ಲಾ, ಆದರೆ ಶರಣ ತಂದೆ ನುಲಿಯ ಚಂದಯ್ಯನವರ ಭಕ್ತಿಯನ್ನು ಮೆಚ್ಚಿ ಸ್ವತಃ ಲಿಂಗದೇವರೆ ನುಲಿಯ ಚಂದಯ್ಯನವರಿಗೆ ಸೇವೆ ಮಾಡಬೇಕಂದು ಉದ್ದೇಶ ಪೂರ್ವಕವಾಗಿಯೆ ನಿರಿಗೆ ಜಾರಿ ಬಿದ್ದರು ಅನ್ನುವುದು ಶೂನ್ಯ ಸಂಪಾದನೆಯಲ್ಲಿ ತಿಳಿಸಿರುವುದು ಕಾಣುತ್ತೇವೆ.

ಲಿಂಗಯ್ಯ ಚಂದಯ್ಯನವರ ಮನೆಯ ಮಗನಾಗಿ, ಚಂದಯ್ಯನವರು ಹೊಸೆದ ಕಣ್ಣಿಗಳನ್ನ ಲಿಂಗಯ್ಯನವರಿಗೆ ಮಾರಿಕೊಂಡು ಬರಲು ಹೇಳುತ್ತಾರೆ, ಆವಾಗ ಲಿಂಗಯ್ಯ ಅಪ್ಪ ಬಸವಣ್ಣನವರ ಮನೆಗೆ ಹೋಗಿ ಕಣ್ಣಿಗಳನ್ನ ಮಾರಾಟ ಮಾಡಿ ಅದರ ಬೆಲೆಗಿಂತ ಜಾಸ್ತಿ ದುಡ್ಡು ತಂದಿರುತ್ತಾರೆ ಅದನ್ನ ನೋಡಿದ ಚಂದಯ್ಯನವರು ಕೋಪಗೊಂಡು.

ಸತ್ಯ ಶುದ್ಧ ಕಾಯಕದಿಂದ ಬಂದ ದ್ರವ್ಯದಲ್ಲಿ
ಚಿತ್ತ ವಿಚ್ಛಂದವಾಗದಿರಬೇಕು.
ನೇಮದ ಕೂಲಿಯಂದಿನ ನಿತ್ಯ ನೇಮದಲ್ಲಿ ಸಂದಿಲ್ಲದಿರಬೇಕು.
ನೇಮದ ಕೂಲಿಯ ಬಿಟ್ಟು
ಹೇಮದಾಸೆಗೆ ಕಾಮಿಸಿ ದ್ರವ್ಯವ ಹಿಡಿದಡೆ
ತಾ ಮಾಡುವ ಸೇವೆ ನಷ್ಟವಯ್ಯಾ.
ನಿನ್ನಾಸೆಯ ವೇಷದ ಪಾಶಕ್ಕೆ ನೀನೆ ಹೋಗು.
ನನಗೆ ನಮ್ಮ ಜಂಗಮದ ಪ್ರಸಾದದಾಗೆ
ಚಂದೇಶ್ವರಲಿಂಗಕ್ಕೆ ಪ್ರಾಣವಯ್ಯಾ. /೧೩೨೬


ಎಂದು ಝಂಕಿಸುತ್ತಾರೆ. ಒಂದು ಕಣ್ಣಿ(ಹಗ್ಗ)ಕ್ಕೆ ಯಾರೊ ಸಾವಿರ ಹೊನ್ನು ಕೊಟ್ಟರೆಂದು ಅದನ್ನ ಹೊತ್ತು ತರಲು ನಿನಗೆ ಬುದ್ದಿ ಕೆಟ್ಟಿದೆಯೆ ಲಿಂಗಯ್ಯ ಅಂತ, ಕಾಯಕಕ್ಕೆ ಸಮನಾದ ಕೂಲಿಯನ್ನು ಕೊಳ್ಳಬೇಕಲ್ಲದೆ ದುರಾಶೆ ಪಡಬಾರದು ಅಂತ ಕಾಯಕ ನಿಷ್ಠೆಯನ್ನ ಮೆರೆಯುತ್ತಾರೆ.

"ಕಲ್ಯಾಣ ಕ್ರಾಂತಿಯ ನಂತರ"

ನುಲಿಯ ಚಂದಯ್ಯನವರು ಎಲ್ಲ ಶರಣರ ಜೊತೆಯಲ್ಲಿ ಹೊಗಿರುವುದಿಲ್ಲ (ಅವರು ಬೇರೆಕಡೆ ಧರ್ಮ ಪ್ರಚಾರಕ್ಕೆ ಹೋಗಿರುವ ಸಾಧ್ಯತೆ ಇದೆ) ಕಲ್ಯಾಣ ಕ್ರಾಂತಿಯ ವಿಷಯ ತಿಳಿದು ಒಬ್ಬರೇ ಉಳವಿ ಕಡೆ ಬರುತ್ತಾರೆ ಚಂದಯ್ಯನವರು ಬರುವಷ್ಟರಲ್ಲಿ ಎಲ್ಲಾ ಶರಣರು ಲಿಂಗೈಕ್ಯರಾಗಿರುತ್ತಾರೆ, ಕೇವಲ ವಿರ ಮಾತೆ ಅಕ್ಕನಾಗಲಾಂಬಿಕೆ ತಾಯಿ, ಶರಣ ಹಡಪದ ರೆಚಣ್ಣ ಶರಣರು ಉಳಿದಿರುತ್ತಾರೆ ಶರಣ ರೆಚಣ್ಣನವರನ್ನ ಉಳವಿಯಲ್ಲೆ ಬಿಟ್ಟು, ಅಕ್ಕನಾಗಲಾಂಬಿಕೆ ತಾಯಿವರನ್ನ ಒಡಗುಡಿ ಈಗಿನ ಶಿವಮೊಗ್ಗ ಜಿಲ್ಲೆಯ ತುಂಗಾ ಪ್ರದೆಶಕ್ಕೆ ಬರುತ್ತಾರೆ ಅಕ್ಕನಾಗಲಾಂಬಿಕೆ ತಾಯಿಯ ಸಾಧನೆ ಅದಾಗಲೇ ಎಲ್ಲ ಕಡೆ ಹರಡಿರುತ್ತೆ ಮತ್ತು ಇನ್ನು ಲಿಂಗಾಯತ ಧರ್ಮ ವನ್ನ ಬೆಳಸುವ ಹೊಣೆಯು ತಾಯಿಯ ಮೆಲಿರುತ್ತೆ ಅದಕ್ಕಾಗಿ ಈಗಿನ ತರಿಕೆರೆ ಸಮಿಪದ ಎಣ್ಣೆ ಹೊಳೆ ಅನ್ನುವ ಊರಿಗೆ ಬರುತ್ತಾರೆ , ಅಕ್ಕನಾಗಲಾಂಬಿಕೆ ತಾಯಿಯವರಿಗೆ ಅಲ್ಲಿಯೇ ಒಂದು ಮಠವನ್ನ ಸಿದ್ದವಿರಸ್ವಾಮಿಗಳು ಎಂಬುವವರು ಕಟ್ಟಿಸಿಕೊಡುತ್ತಾರೆ.

ಸಂಸಾರವೆಂಬ ಸಾಗರದ ಮಧ್ಯದೊಳಗೆ
ಬೆಳೆದ ಹೊಡಕೆಯಹುಲ್ಲ ಕೊಯ್ದು
ಮತ್ತಮಾ ಕಣ್ಣ ತೆಗೆದು, ಕಣ್ಣಿಯ ಮಾಡಿ
ಇಹಪರವೆಂಬ ಉಭಯದ ಗಂಟನಿಕ್ಕಿ
ತುದಿಯಲ್ಲಿ ಮಾಟಕೂಟವೆಂಬ ಮನದ ಕುಣಿಕೆಯಲ್ಲಿ
ಕಾಯಕವಾಯಿತ್ತು.
ಇದು ಕಾರಣ ಚಂದೇಶ್ವರಲಿಂಗವೆಂಬ ಭಾವವೆನಗಿಲ್ಲ /೧೩೨೫

ನಂತರ ಚಂದಯ್ಯನವರು (ಈಗಿನ ನುಲೆನೂರು) ಪದ್ಮಾವತಿ ಎಂಬ ಊರಿಗೆ ಬರುತ್ತಾರೆ ದುಮ್ಮಿರಾಯನ ಹೆಂಡತಿಯಾದ ಪದ್ಮಾವತಿ ಚಂದಯ್ಯನವರಿಂದ ಧರ್ಮೊಪದೆಶವನ್ನ ಪಡೆದು ಅವರ ಅಪ್ಪಣೆಯ ಪ್ರಕಾರ ಒಂದು ಕೆರೆಯನ್ನು ಕಟ್ಡಿಸುತ್ತಾರೆ ಆ ಕೆರೆಗೆ ಇಂದಿಗೂ ಪದ್ಮಾವತಿ ಅಂತಾನೆ ಸರಕಾರಿ ದಾಖಲೆಗಳುಂಟು. ಕೆರೆ ಸಿದ್ಧವಾದ ಮೇಲೆ ಕೆರೆಯ ಏರಿಯ ಮೇಲೊಂದು ಚಂದಯ್ಯನವರಿಗೊಸ್ಕರ ಮುರಂಕಣದ ಮಠವೊಂದನ್ನ ಕಟ್ಟಿಸಿಕೊಡುತ್ತಾರೆ ,ಆ ಮಠದಲ್ಲಿ ಚಂದಯ್ಯ ಶರಣರು ಕೊನೆಯವರೆಗು ಅನುಭಾವ ಗೋಷ್ಠಿ ನಡೆಸುತಿದ್ದರು ಅನ್ನುವುದು ತಿಳಿದು ಬರುತ್ತದೆ, ಕೆಲವು ವರ್ಷಗಳ ನಂತರ ಚಂದಯ್ಯನವರು ಲಿಂಗೈಕ್ಯರಾಗಲು ಅವರ ಕ್ರಿಯಾ ಸಮಾಧಿಯನ್ನು ಅವರ ಮಠದಲ್ಲೆ ಮಾಡಲಾಗಿತ್ತು ಅಂತ ತಿಳಿದು ಬರುತ್ತದೆ ಈವರ ಲಿಂಗೈಕ್ಯದ ನಂತರ ಪದ್ಮಾವತಿಯನ್ನುವ ಊರು ಚಂದಯ್ಯನವರ ಕಾಯಕ ಸುಚಿಸುವ ನುಲೆನೂರು ಎಂದಾಗಿ ಕರೆಸಿಕೊಳ್ಳುತಿದೆ.

ನುಲಿಯ ಚಂದಯ್ಯನವರಿಗೆ ಸಂಬಂಧಿಸಿದ ಶಿಲಾಶಾಸನಗಳು

ಬನವಾಸಿಯ ಮದುಕೆಶ್ವರ ದೇವಾಲಯದಲ್ಲಿ ಕಲ್ಲು ಮಂಟಪ ಇದೆ ಅದರಲ್ಲಿ ನುಲಿಯ ಚಂದಯ್ಯನವರ, ಅಗ್ಗವಣಿಯ ಹೊನ್ನಯ್ಯ ಮೋಳಿಗೆ ಮಾರಯ್ಯ, ಹಡಪದ ಅಪ್ಪಣ್ಣಾ ಜೇಡರ ದಾಸಿಮಯ್ಯ, ಆಯ್ದಕಿ ಮಾರಯ್ಯಯ, ಹಾಳಿನ ಹಂಪಣ್ಣ, ಬ್ರಹ್ಮಯಗಳ ಮೂರ್ತಿಗಳನ್ನ ಅವರವರ ಅಂಕಿತ ನಾಮದೊಡನೆ ಕೆತ್ತಿದ್ದಾರೆ.

'ಚಂದೇಶ್ವರ' ಅಂಕಿತದಲ್ಲಿ ೪೮ ವಚನಗಳು ದೊರೆತಿವೆ. ಎಲ್ಲವೂ ಕಾಯಕ ಮೌಲ್ಯವನ್ನು ಎತ್ತಿ ಹಿಡಿಯುತ್ತವೆ. ಗುರು, ಲಿಂಗ, ಜಂಗಮ ಎಲ್ಲರಿಗೂ ಕಾಯಕ ಕಡ್ಡಾಯ. ಭಾವ ಶುದ್ಧವಾಗಿ ಮಾಡುವುದೇ ನಿಜವಾದ ಕಾಯಕ. ಕಾರೆಯ ಸೊಪ್ಪಾದರೂ ಕಾಯಕದಿಂದ ಬಂದುದು ಮಾತ್ರ ಲಿಂಗಾರ್ಪಿತವಾಗುತ್ತದೆ. ಎಂಬಂಥ ಮಾತುಗಳಲ್ಲಿ ಈತನ ಕಾಯಕದ ಪರಿಕಲ್ಪನೆ ಸ್ಪಷ್ಟವಾಗಿದೆ.

ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.
ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು.
ಗುರುವಾದಡೂ ಚರಸೇವೆಯ ಮಾಡಬೇಕು.
ಲಿಂಗವಾದಡೂ ಚರಸೇವೆಯ ಮಾಡಬೇಕು.
ಜಂಗಮವಾದಡೂ ಚರಸೇವೆಯ ಮಾಡಬೇಕು
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು./೧೩೦೩

*
ಪರಿವಿಡಿ (index)
Previous ನೀಲಾಂಬಿಕೆ (ನೀಲಮ್ಮ) ಪರಂಜ್ಯೋತಿ Next