Previous ಬೊಕ್ಕಸದ ಚಿಕ್ಕಣ್ಣ ಮಡಿವಾಳ ಮಾಚಿದೇವ Next

ಭೋಗಣ್ಣ

*
ಅಂಕಿತ: ನಿಜಗುರು ಭೋಗೇಶ್ವರ

ಆಗಮ ನಿಗಮ ಶಾಸ್ತ್ರ ಪುರಾಣವೆಂಬ
ಅಂಧಕನ ಕೈಗೆ ಕೋಲಕೊಟ್ಟು ನಡೆಸಿಕೊಂಡು ಹೋಗುವಾಗ,
ತನ್ನ ಕಣ್ಣುಗೆಟ್ಟಡೆ ಮುಂದಕ್ಕೆ ಗಮನವಿಲ್ಲ.
ಹಿಂದಕ್ಕೆ ತಿರುಗಲರಿಯದೆ,
ಎರಡಕ್ಕೆ ಕೆಟ್ಟ ಜಂಬುಕನಂತೆ ಆಯಿತ್ತು ನೋಡಾ.
ಸಜ್ಜನ ಗಂಡನ ಕದ್ದು, ಕಳ್ಳನ ಹಿಂದೆ ಹೋದ ಸತಿಯಂತೆ ಆದರಲ್ಲಾ.
ಸಂತೆಯಲ್ಲಿ ಗುಡಿಸಲನಿಕ್ಕಿ ಹಡೆದುಂಬ ಸೂಳೆಯಂತೆ,
ಮನವೆ ಸೂಳೆಯಾಗಿ, ಮಾತಿನ ಮಾಲೆಯ ಸರವನಿಕ್ಕಿಕೊಂಡು,
ವಾಚಾಳಿಗತನದಿಂದ ಒಡಲ ಹೊರೆವವರೆಲ್ಲರೂ
ಶರಣರಪ್ಪರೆ ? ಅಲ್ಲಲ್ಲ. ಅದೆಂತೆಂದಡೆ:
ತನು ಕರಗಿ, ಮನ ಪುಳಕವಾದ ಮಹಾಮಹಿಮರಿಗಲ್ಲದೆ
ಉಚ್ಚಿಯ ಬಚ್ಚಲಲ್ಲಿ ಓಲಾಡುವ
ತೂತಜ್ಞಾನಿಗಳಿಗೆಂತಪ್ಪದು ಹೇಳಾ ?
ಕಾಲಾಳು ಆಕಾಶವನಡರಿಹೆನೆಂಬ ಪರಿಯೆಂತೊ ?
ಬ್ರಹ್ಮಪುರ ವೈಕುಂಠ ರುದ್ರಪುರ ಅಷ್ಟಾದಿ ಕೈಲಾಸವೆಂಬ
ಈ ಪಂಚಗ್ರಾಮಂಗಳ ವರ್ಮ ಕರ್ಮವಳಿದ
ಮಹಾದೇವಂಗಲ್ಲದೆ ಮುಂದಕ್ಕೆ ಅಡಿಯಿಡಬಾರದು.
ಪಿಪೀಲಿಕ ಕಪಿಯ ಮತವೆಂಬ ಪಥ ಮೀರಿ,
ವಿಹಂಗವೆಂಬ ವಾಹನಮಂ ಏರಿ, ಬ್ರಹ್ಮಾಂಡಕ್ಕೆ ದಾಳಿ ಮಾಡಿ,
ಸುವರ್ಣಪುರಮಂ ಸುಟ್ಟು ಸೂರೆಗೊಂಡ ಮಹಾನುಭಾವಿಗಳ
ತೋರಿ ಬದುಕಿಸಾ.
ನಿಜಗುರು ಭೋಗೇಶ್ವರಾ, ನಾ ನಿಮ್ಮ ಧರ್ಮವ ಬೇಡಿಕೊಂಬೆ. /೪೧೯ [1]

ಕೆಂಭಾವಿ ಭೋಗಣ್ಣನಿಂದ ಭಿನ್ನವಾದ ಈತನ ಕಾಲ-೧೧೬೦. 'ನಿಜಗುರು ಭೋಗೇಶ್ವರ' ಅಂಕಿತದಲ್ಲಿ ೨೨ ವಚನಗಳು ದೊರೆತಿವೆ. ಶರಣರ ಸ್ತುತಿ, ಭವಿ-ಭಕ್ತ ಭೇದ, ಸಾಕಾರ-ನಿರಾಕಾರ, ಅಂಗ-ಲಿಂಗಗಳ ಸಂಬಂಧ, ಶರಣಸತಿ-ಲಿಂಗಪತಿ ಭಾವ, ಬೆಡಗಿನ ಪರಿಭಾಷೆ - ಇವುಗಳಲ್ಲಿ ತೋರುತ್ತವೆ. ವಚನಗಳು ಹೆಚ್ಚು, ದೀರ್ಘವಾಗಿದ್ದು ಗದ್ಯದ ಲಕ್ಷಣಗಳನ್ನು ಹೊಂದಿವೆ. ಕೆಲವು ವಚನಗಳಲ್ಲಿ ವೇಷಡಂಭಕರ, ಶಬ್ದಾಡಂಬರದ ಭವಭಾರಿಗಳ ಟೀಕೆ ತೀಕ್ಷ್ಣವಾಗಿ ಕಾಣಿಸುತ್ತದೆ.

ಶೂನ್ಯ ನಿಃಶೂನ್ಯಗಳಿಲ್ಲದಂದು,
ಸುರಾಳ ನಿರಾಳವಿಲ್ಲದಂದು,
ಬೆಳಗು ಕತ್ತಲೆಯಿಲ್ಲದಂದು,
ಮಹಾಬೆಳಗಿನ ನಿಜಪ್ರಕಾಶವೇ ಗಟ್ಟಿಗೊಂಡು
ಮೂರ್ತಿಗೊಂಡಿಪ್ಪಲ್ಲಿ,
ಅಜಾತನೆಂಬ ಶ್ರೀಗುರುವಿನ ಜಾತವು.
ಕಂಗಳು ಬೆಳಗಿಸಲಾಗಿ ಪುನೀತನಾಗಿ, ಶಿಷ್ಯನು ದೇವಕರ್ಮವ
ಭಕ್ತಿ ವೈರಾಗ್ಯಮಂ ಮಾಡಬೇಕೆನಲು,
ಆ ಶಿಷ್ಯನ ಮನೋಭಾವದಿ ಕಾರುಣ್ಯ ಪುಟ್ಟಿ,
ಕರಕ್ಕೆ ಲಿಂಗವಾದ ಆ ಶಿಷ್ಯನ ಕೈಯಲ್ಲಿ
ಅಷ್ಟವಿಧಾರ್ಚನೆ ಶೋಡಷೋಪಚಾರದಲ್ಲಿ
ಪೂಜಿಸಿಕೊಳಬೇಕಾಗಿ ಜಂಗಮವಾದ.
ಇಂತೀ ಗುರುಲಿಂಗಜಂಗಮವೆಂಬ
ತ್ರಿವಿಧವೂ ಶಿಷ್ಯನಿಂದಾಯಿತ್ತಲ್ಲದೆ
ಆ ಶಿಷ್ಯ ತನ್ನಿಂದ ತಾನಾದ ನಿರಾಲಂಬನು.
ಅದೆಂತೆಂದಡೆ:
ಹೆತ್ತ ತಂದೆಗಳು ಶಿಶುವಿಗೆ ನಾಮಕರಣವನಿಕ್ಕಿ
ಹಲವಂದದಲ್ಲಿ ಕರೆದು ತೋರುವಂತೆ,
ಗುರುಲಿಂಗ ಶಿವಲಿಂಗ ಜಂಗಮಲಿಂಗ
ಸದ್ಗುರುವೆ ಮದ್ಗುರುವೆ ಘನಗುರುವೆ ಎಂದು ಪೆಸರಿಟ್ಟು ಕರೆದು,
ತನ್ನ ಒಕ್ಕಮಿಕ್ಕ ಪ್ರಸಾದವನಿಕ್ಕಿದ ಕಾರಣ,
ನಿನ್ನ ಪೂರ್ವಾಶ್ರಯವಳಿದು ಸಕಲದೇವರಿಗೆ ದೇವನಾದೆ.
ಅದಕ್ಕೆ ಮುನ್ನ ನಿಮ್ಮ ಪೆಸರೇನೆಂದು ಹೇಳಾ
ನಿಜಗುರು ಭೋಗೇಶ್ವರಾ./೪೩೬ [1]

ವೇದ ಆಗಮ ಶಾಸ್ತ್ರ ಪುರಾಣಗಳೆಲ್ಲ ಕುರುಡನ ಕೈಗೆ ಕೋಲು ಕೊಟ್ಟು ನಡೆಸಿಕೊಂಡು ಹೋಗುವಂತೆ ವ್ಯರ್ಥ ಎನ್ನುವ ಅವನ ಧೋರಣೆಯಲ್ಲಿ ಅವುಗಳ ನಿರಾಕರಣೆಯಿದೆ. ಭಕ್ತನ ಕೊಂದಡೆ ಪಂಚಮಹಾಪಾತಕ ಎನ್ನುವ ಭೋಗಣ್ಣ ಕೊಲ್ಲದೆ ಮೆಲ್ಲದೆ ತಿಂಬ ಜೈನರಿನ್ನಾರೊ? ಎಂದು ಜೈನರನ್ನು ಟೀಕಿಸುವನು. ಅವನ ಉಪಮೆಗಳು ಅರ್ಥಪೂರ್ಣವಾಗಿರುವದರಿಂದ ವಚನಗಳಿಗೆ ಸಾಹಿತ್ಯಕ ಸಂಸ್ಪರ್ಶವಿದೆ. ಬಾಯಬುಂಜಕರನ್ನು ವ್ಯಂಗ್ಯವಾಗಿ ಟೀಕಿಸುತ್ತ ಜಾರೆ ಜಾರನ ಸ್ನೇಹದೊಳಿದ್ದು ನೀನಲ್ಲದೆ ಅಂತಃಪುರವನರಿಯೆನೆಂದು ಕಣ್ಣನೀರ ತುಂಬುತ್ತಬೋಸರಿಗತನದಿಂದ ಒಡಲ ಹೊರೆವಳಂತೆ ' ಎಂದು ಹೋಲಿಕೆ ಕೊಡುವನು. ಇವನಲ್ಲಿ ಬೆಡಗಿನ ವಚನಗಳು ಕಂಡು ಬಂದಿವೆ.

ಹಾಲು ಅನಿಲ ಕಂದಮೂಲ ಪರ್ಣಾಂಬು ಫಲಾದಿಗಳನೆ
ಆಹಾರವ ಕೊಂಡು ಮುಕ್ತರಾದೆಹೆವೆಂಬ ಅಣ್ಣಗಳು ನೀವು ಕೇಳಿರೆ.
ಆಹಾರವ ಕೊಂಡು ಅಣುರೇಣು ನೊರಜ ಸರ್ವ ಸರ್ಪ ಪಕ್ಷಿಗಳು
ವಾಯುವನೇ ಉಂಡು ಬೆಳೆವವು ನೋಡಾ.
ಖಗ ಮೃಗ ವಾನರ ಕ್ರಿಮಿ ಕೀಟಕ ಇವೆಲ್ಲವೂ
ಕಂದಮೂಲ ಪರ್ಣಾಂಬುವನೆ ಉಂಡು ಬೆಳೆವವು ಕೇಳಿರಣ್ಣಾ.
ಕ್ಷೀರಾಬ್ಧಿಯೊಳಗೆ ಹುಟ್ಟಿದ ಪ್ರಾಣಿಗಳೆಲ್ಲ ಕ್ಷೀರವನೆ ಉಂಡು ಬೆಳೆವವು.
ನಿಮಗೆ ಮುಕ್ತಿಯುಂಟಾದಡೆ ಇವು ಮಾಡಿದ ಪಾಪವೇನು ಹೇಳಿರೇ ?
ವಿಚಾರಿಸುವಡೆ ನಿಮ್ಮಿಂದ ಅವೆ ಹಿರಿಯರು ನೋಡಾ.
ವಾಗದ್ವೈತವ ನುಡಿದು ಅನುವನರಿಯದೆ ಬರುಸೂರೆವೋದಿರಲ್ಲಾ.
ಆದಿ ಅನಾದಿಯ ಅಂಗವ ಮಾಡಿ,
ಆ ಮಹಾ ಅನಾದಿಯ ಪ್ರಕಾಶವನೆ
ಶ್ರೀಗುರು ಸಾಕಾರಮೂರ್ತಿಯಂ ಮಾಡಿ,
ಅಂಗ ಮನ ಪ್ರಾಣ ಸರ್ವಾಂಗದಲ್ಲಿ ನೆಲೆಗೊಳಿಸಿದ ಭೇದವನರಿತು,
ಶ್ರೋತ್ರ ನೇತ್ರ ಘ್ರಾಣ ತ್ವಕ್ಕು ಜಿಹ್ವೆ
ಮೊದಲಾದ ಸವರ್ವೇಂದ್ರಿಯದಲ್ಲಿ ವೇಧಿಸಿಕೊಂಡು,
ಶುದ್ಧ ಸುಯಿದಾನ ಸುಜ್ಞಾನದಿಂದ ಲಿಂಗಾವಧಾನ ಹಿಡಿದು ಅರ್ಪಿಸಿ,
ಆ ಪರಮ ಪ್ರಸಾದವನುಂಡು,
ಮಾತಂಗ ನುಂಗಿದ ನಾರಿವಾಳದ ಫಲದಂತೆ
ಬಯಲುಂಡ ಪರಿಮಳದಂತೆ
ನಿಜಗುರು ಭೋಗಸಂಗನೊಳು ಸಯವಾದ ಶರಣರಿರವು,
ಮಿಕ್ಕಿನ ಭವಭಾರಿಗಳಿಗೆಂತು ಸಾಧ್ಯವಪ್ಪುದೊ, ಕೇಳಯ್ಯಾ./ ೪೩೭ [1]

[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಬೊಕ್ಕಸದ ಚಿಕ್ಕಣ್ಣ ಮಡಿವಾಳ ಮಾಚಿದೇವ Next