ಅಂಕಿತ: |
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಮಲ್ಲಿಕಾರ್ಜುನದೇವ |
ಅಂಗದಲಳವಟ್ಟ ಸುಖವು ಲಿಂಗದಲ್ಲಿ ಲೀಯವಾಗಿ,
ಲಿಂಗದಲ್ಲಿ ಲೀಯವಾದ ಸುಖವು ಮಹಾಲಿಂಗದಲ್ಲಿ ಲೀಯವಾಗಿ
ಮಹಾಲಿಂಗದಲ್ಲಿ ಲೀಯವಾದ ಸುಖವು ಜ್ಞಾನಮುಖದಲ್ಲಿ ಲೀಯವಾಗಿ,
ಜ್ಞಾನಮುಖದಲ್ಲಿ ಲೀಯವಾದ ಸುಖವು ಮಹಾಜ್ಞಾನದಲ್ಲಿ ಲೀಯವಾಗಿ,
ಮಹಾಜ್ಞಾನದಲ್ಲಿ ಲೀಯವಾದ ಸುಖವು ಸರ್ವಾಂಗಮುಖದಲ್ಲಿ ಲೀಯವಾಗಿ,
ಸರ್ವಾಂಗ[ಮುಖ]ದಲ್ಲಿ ಲೀಯವಾದ ಸುಖವು ಸಮರಸಸಂಗದಲ್ಲಿ ಲೀಯವಾಗಿ,
ಸಮರಸಸಂಗದಲ್ಲಿ ಲೀಯವಾದ ಸುಖವು ಐಕ್ಯಸ್ಥಲದಲ್ಲಿ ಲೀಯವಾಗಿ,
ಐಕ್ಯಸ್ಥಲದಲ್ಲಿ ಲೀಯವಾದ ಸುಖವು ನಿರಾಕಾರದಲ್ಲಿ ಲೀಯವಾಗಿ,
ನಿರಾಕಾರದಲ್ಲಿ ಲೀಯವಾದ ಸುಖವು ನಿಶ್ಶಬ್ದದಲ್ಲಿ ಲೀಯವಾಗಿ,
ನಿಶ್ಶಬ್ದದಲ್ಲಿ ಲೀಯವಾದ ಸುಖವು ನಿರಂಜನದಲ್ಲಿ ಲೀಯವಾಗಿ,
ನಿರಂಜನದಲ್ಲಿ ಲೀಯವಾದ ಸುಖವು ಪರಬ್ರಹ್ಮದಲ್ಲಿ ಲೀಯವಾಗಿ,
ಪರಬ್ರಹ್ಮದಲ್ಲಿ ಲೀಯವಾದ ಸುಖವ ಅಹಂ ಬ್ರಹ್ಮದಲ್ಲಿ,
ಲೀಯವ ಮಾಡಿದರು ನಮ್ಮ ಶರಣರು.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತ ಚೆನ್ನಮಲ್ಲಿಕಾರ್ಜುನದೇವಯ್ಯನಲ್ಲಿ
ಜನನಮರಣವಿರಹಿತ ನಿಜತತ್ವ ನಿಸ್ಪೃಹ ನಿಃಕಳಂಕ
ಮಹಾಶರಣನಲ್ಲದೆ ಮತ್ತೆ ಉಳಿದ ಭೂಲೋಕದ
ಭೂಭಾರ ಜೀವಿಗಳಿಗೆ ಅಳವಡುವುದೆ ಮಹಾಲಿಂಗೈಕ್ಯವು ?
ಇಂತಪ್ಪ ಮಹಾಲಿಂಗೈಕ್ಯನ ನಿಲವ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. /೧೦೯೧ [1]
ಶರಣರ ಕೀರ್ತಿವಾರ್ತೆ ಕೇಳಿ ಅಫಘಾನಿಸ್ಥಾನ (ಬರ್ಬರದೇಶದ ಕಣ್ಪತ್ತೂರು ಗ್ರಾಮ)ದಿಂದ ಕಲ್ಯಾಣಕ್ಕೆ ಬಂದವನು. ಬಸವಣ್ಣನವರ ಮಹಾಮನೆಯಲ್ಲಿ ಗುಪ್ತಭಕ್ತನಾಗಿ ಹನ್ನೆರಡು ವರ್ಷವಿದ್ದ ಈತನನ್ನು ಪ್ತಭುದೇವರು ಗುರುತಿಸಿ, ಶರಣರಿಗೆ ಪರಿಚಯಿಸಿದರೆಂದು ಐತಿಹ್ಯವಿದೆ. ಶೂನ್ಯಸಂಪಾದನೆಯಲ್ಲಿ ಇದು ಉಕ್ತವಾಗಿದೆ.
ಪ್ರಸಾದಿಸ್ಥಲದಲ್ಲಿದ್ದ ಮರುಳಶಂಕರದೇವ 'ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಮಲ್ಲಿಕಾರ್ಜುನ' ಅಂಕಿತದಲ್ಲಿ ೩೫ ವಚನಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಆತನ ವ್ಯಕ್ತಿ ವೈಶಿಷ್ಟ್ಯವೆನಿಸಿದ ಪ್ರಸಾದತತ್ವದ ಪ್ರತಿಪಾದನೆಗೆ ಆದ್ಯತೆ ದೊರೆತಿದೆ. ಜೊತೆಗೆ ಬಸವಾದಿ ಶರಣರ ಸ್ತುತಿ, ಲಿಂಗವಂತರ ನಿಲುವು, ಮಹಾಲಿಂಗೈಕ್ಯದ ಸ್ವರೂಪ, ಶೀಲ, ಚಾರಿತ್ರ್ಯಗಳ ಬೋಧೆ ಎಡೆಪಡೆದಿವೆ. ಶರಣರಲ್ಲಿ ವಿಶೇಷವಾಗಿ ತೋರುವ 'ಶರನಸತಿ ಲಿಂಗಪತಿ' ಭಾವವು ಇವನಲ್ಲಿ 'ಶರಣಪತಿ ಲಿಂಗಪತಿ'ಯಾಗಿದ್ದು ಸೂಫಿ ಪಂಥದ ಪ್ರಭಾವವನ್ನು ಸೂಚಿಸುತ್ತದೆ.
ಇಷ್ಟಲಿಂಗಕ್ಕೊಂದು ಕಷ್ಟ ಬಂದಿತ್ತೆಂದು ಮುಟ್ಟಲಾಗದು.
ಇನ್ನು ಕೆಟ್ಟೆನೆಂಬ ಪಾಪಿಗಳು ನೀವು ಕೇಳಿರೆ.
ಇಷ್ಟಲಿಂಗ, ಪ್ರಾಣಲಿಂಗದ ಆದಿ ಅಂತುವನಾರುಬಲ್ಲರು ?
ಹೃದಯಕಮಲ ಭ್ರೂಮಧ್ಯದಲ್ಲಿ[ಯ] ಸ್ವಯಂಜ್ಯೋತಿಯ ಪ್ರಕಾಶ[ನು]
ಆದಿ ಮಧ್ಯಸ್ಥಾನದಲ್ಲಿ ಚಿನ್ಮಯ ಚಿದ್ರೂಪನಾಗಿಹ.
ಇಂತಪ್ಪ ಮಹಾಘನವ ಬಲ್ಲ ಶರಣನ ಪರಿ ಬೇರೆ.
ಇಷ್ಟಲಿಂಗ ಹೋದ ಬಟ್ಟೆಯ ಹೊಗಲಾಗದು.
ಈ ಕಷ್ಟದ ನುಡಿಯ ಕೇಳಲಾಗದು.
ಕೆಟ್ಟಿತ್ತು ಜ್ಯೋತಿಯ ಬೆಳಗು, ಅಟ್ಟಾಟಿಕೆಯಲ್ಲಿ ಅರಿವುದೇನೊ ?
ಆಲಿ ನುಂಗಿದ ನೋಟದಂತೆ, ಪುಷ್ಪ ನುಂಗಿದ ಪರಿಮಳದಂತೆ,
ಜಲ ನುಂಗಿದ ಮುತ್ತಿನಂತೆ, ಅಪ್ಪುವಿನೊಳಗಿಪ್ಪ ಉಪ್ಪಿನಂತೆ,
ಬೀಜದೊಳಗಿಪ್ಪ ವೃಕ್ಷದಂತೆ, ಶಬ್ದದೊಳಗಿನ ನಿಃಶಬ್ದದಂತೆ,
ಬಯಲ ನುಂಗಿದ ಬ್ರಹ್ಮಾಂಡದಂತೆ, ಉರಿವುಂಡ ಕರ್ಪುರದಂತೆ.
ಇಂತಪ್ಪ ಮಹಾಘನ ತೇಜೋಮೂರ್ತಿಯ ನಿಲವ ಬಲ್ಲ
ಮಹಾಶರಣನ ಮನೆಯ ಎತ್ತು ತೊತ್ತು ಮುಕ್ಕಳಿಸಿ
ಉಗುಳುವ ಪಡುಗ, ಮೆಟ್ಟುವ ಚಮ್ಮಾವುಗೆಯಾಗಿ ಬದುಕಿದೆನಯ್ಯಾ.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಲಿಂಗವಂತನ ನಿಲವಿನ ಪರಿಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. /೧೦೯೫ [1]
ವಚನಗಳು ದೀರ್ಘವಾಗಿವೆ. ಪ್ರತಿಯೊಂದು ವಚನವೂ ನಿಮ್ಮ ಧರ್ಮ, ನಿಮ್ಮ ಧರ್ಮ, ನಿಮ್ಮ ಧರ್ಮ, ಎಂಬುದರೊಂದಿಗೆ ಮುಕ್ತಾಯಗೊಳ್ಳುತ್ತವೆ. ಸಮಕಾಲೀನ ಶರಣರ ಉಲ್ಲೇಖ ವಚನಗಳಲ್ಲಿದೆ. ರೂಪಕ ನಿರ್ಮಾಣ ಪ್ರತಿಭೆ ಇವನಲ್ಲಿನ ವಿಶೇಷ ಗುಣ ಮಹಾಲಿಂಗೈಕ್ಯ, ಸದ್ಭಕ್ತ, ಶರಣ, ಲಿಂಗವಂತರ ನಿಲುವು, ಶೀಲ, ಆಚಾರಗಳ ಪ್ರತಿಪಾದನೆ ಇವನ ವಚನಗಳಲ್ಲಿವೆ. ಬಸವಣ್ಣನ ಹಿರಿಮೆ ಕೇಳಿ ಅಫಘಾನಿಸ್ಥಾನದಿಂದ ಈತ ಬಂದನೆಂದು ಹೇಳಲಾಗಿದೆ.
ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ, ಮಡಿವಾಳ ಮಾಚಯ್ಯಾ,
ಸಿದ್ಧರಾಮಯ್ಯ, ಸೊಡ್ಡಳ ಬಾಚರಸರು, ಹಡಪದಪ್ಪಣ್ಣ,
ಪಡಿಹಾರಿ ಉತ್ತಣ್ಣ, ಅವ್ವೆ ನಾಗಾಯಿ, ಕೋಲಶಾಂತಯ್ಯ,
ಡೋಹರ ಕಕ್ಕಯ್ಯ, ಮೊಗವಾಡದ ಕೇಶಿರಾಜದೇವರು,
ಖಂಡೆಯ ಬೊಮ್ಮಣ್ಣ ಮೊದಲಾದ ಅಸಂಖ್ಯಾತ ಮಹಾಪ್ರಮಥಗಣಂಗಳ
ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. /೧೧೦೮ [1]
೧೧೧೬
ಲಿಂಗವಂತ ಲಿಂಗಭಕ್ತ ಲಿಂಗಾಚಾರಿಯೆನಿಸಿಕೊಂಡ ಬಳಿಕ,
ಲಿಂಗದ ನಚ್ಚು, ಲಿಂಗದ ಮಚ್ಚು, ಲಿಂಗವೇ ಪ್ರಾಣವಾಗಿರಬೇಕಲ್ಲದೆ,
ಮತ್ತೆ ತಪ್ಪಿ ನಡೆದು, ತಪ್ಪಿ ನುಡಿದು, ಪರಧನ ಪರಸ್ತ್ರೀಯರ ಸಂಗವ ಮಾಡಿ,
ದುರ್ಗುಣ ದುರಾಚಾರದಲ್ಲಿ ನಡೆದು,
ಮತ್ತೆ ತಾವು ಲಿಂಗವಂತರೆನಿಸಿಕೊಂಬ ಪರಿಯ ನೋಡಾ.
ಇದು ಲಿಂಗದ ನಡೆಯಲ್ಲ, ಲಿಂಗದ ನುಡಿಯಲ್ಲ.
ಇದ ನಮ್ಮ ಶಿವಶರಣರು ಮೆಚ್ಚರು.
ಲಿಂಗವಂತನ ಪರಿ ಬೇರೆ ಕಾಣಿರೆ.
ಲಿಂಗಕ್ಕೆ ಲಿಂಗವೆ ಪ್ರಾಣವಾಗಿರಲು ಬಲ್ಲ.
ಲಿಂಗಕ್ಕೆ ಲಿಂಗವೆ ಭೋಗವಾಗಿರಲು ಬಲ್ಲ.
ಲಿಂಗಕ್ಕೆ ಲಿಂಗವೆ ಸಂಗವಾಗಿ[ರಲು]ಬಲ್ಲ,
ಇಂತಪ್ಪ ಲಿಂಗವಂತನ ಸದಾಚಾರಿಯೆಂಬೆನು.
ಇಂತಪ್ಪ ಲಿಂಗವಂತನ ಸರ್ವಾಂಗಲಿಂಗಿಯೆಂಬೆನು.
ಇಂತಪ್ಪ ಲಿಂಗವಂತನ ಸರ್ವಕರಣ ನಿರ್ಮುಕ್ತನ
ಸರ್ವನಿರ್ವಾಣಿಕಾಯೆಂಬೆನು.
ಇಂತಪ್ಪ ಮಹಾಮಹಿಮನ ನಿಲವು ಎಲಗಳೆದ ವೃಕ್ಷದಂತೆ,
ಉಲುಹಡಗಿಪ್ಪ ಶರಣನ ಪರಿಯ ನೀವೇ ಬಲ್ಲಿರಲ್ಲದೆ,
ಮತ್ತೆ ಉಳಿದಾದ ಅಜ್ಞಾನ ಸಂದೇಹಿಮಾನವರೆತ್ತ ಬಲ್ಲರಯ್ಯಾ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಲಿಂಗಾವಧಾನಿಯ ಪರಿಯ ನೀವೇ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
೧೧೧೫
ಲಿಂಗವಂತನ ನಿಲವು ಸಂಗಸೂತಕಿಯಲ್ಲ.
ಕಂಗಳ ಕಳೆಯ ಬೆಳಗಳಿದು ಉಳಿದಾತ ಅಂಗಲಿಂಗೈಕ್ಯ ಕಾಣಾ,
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ.
ನಿಮ್ಮ ಲಿಂಗವಂತನ ನಿಲುವಿನ ಪರಿಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
ಶಿಷ್ಯನೆಂಬ ಧರೆಯ ಮೇಲೆ, ಶ್ರೀಗುರುವೆಂಬ ಬೀಜವ ಬಿತ್ತಿ,
ಅರಿವೆಂಬ ಗೊಬ್ಬರನಿಕ್ಕಿ, ಜ್ಞಾನವೆಂಬ ಉದಕವನೆರೆಯಲಿಕೆ,
ಲಿಂಗವೆಂಬ ಆಕಾರ ಮೊಳೆದೋರಿತ್ತು ಕಾಣಿರೆ.
ಜಂಗಮವೆಂಬ ಸಸಿ ಬಲಿದು ವೃಕ್ಷ ಪಲ್ಲವಿಸಿತ್ತು.
ಸುಜ್ಞಾನವೆಂಬ ನನೆದೋರಿ ಬಿರಿಮುಗುಳಾಯಿತ್ತು.
ಮಹಾಜ್ಞಾನವೆಂಬ ಪುಷ್ಪ ವಿಕಸಿತವಾಯಿತ್ತು.
ಖಂಡಿತವೆಂಬ ಮುಗುಳಾಯಿತ್ತು, ಅಖಂಡಿತವೆಂಬ ಕಾಯಿ ಬಲಿಯಿತ್ತು.
ಪರಮಜ್ಞಾನವೆಂಬ ಹಣ್ಣಾಯಿತ್ತು.
ಆ ಹಣ್ಣು ಬಲಿದು ತೊಟ್ಟುಬಿಟ್ಟು, ಬಟ್ಟಬಯಲಲ್ಲಿ ಬಿದ್ದಿತ್ತು.
ಆ ಹಣ್ಣು ಕಂಡು ನಾನು ಇದೆಲ್ಲಿಯದೆಂದು ವಿಚಾರವ ಮಾಡಲ್ಕೆ,
ಬಿತ್ತಿದವರಾರೆಂದು ಹೇಳುವರಿಲ್ಲ.
ಬಿತ್ತಿದವನ ಸೊಮ್ಮ ನಾವು ಕೇಳಬಾರದೆಂದು
ಆ ಹಣ್ಣು ಕೊಂಡು, ನಾನು ಬಿತ್ತಿದಾತನನರಸಿಕೊಂಡು ಹೋಗಲ್ಕೆ,
ನಾನೆತ್ತ ಹೋದೆನೆಂದರಿಯೆನಯ್ಯಾ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಬಿತ್ತಿದಾತನ ಪರಿಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. /೧೧೧೭ [1]
[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)