*
128
ಎನ್ನ ಕಾಯಕ್ಕೆ ಗುರುವಾದನಯ್ಯಾ ಬಸವಣ್ಣನು.
ಎನ್ನ ಜೀವಕ್ಕೆ ಲಿಂಗವಾದನಯ್ಯಾ ಚೆನ್ನಬಸವಣ್ಣನು.
ಎನ್ನ ಪ್ರಾಣಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು.
ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು.
ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ,
ನಿಜಗುರು ಶಂಕರದೇವಾ.
ಈತನ ಜೀವನ ಕಥೆ ಶಂಕರದಾಸಿಮಯ್ಯನ ರಗಳೆ, ಶಂಕರದಾಸಿಮಯ್ಯನ ಪುರಾಣ, ಬಸವ ಪುರಾಣ, ಚೆನ್ನಬಸವ ಪುರಾಣ ಮೊದಲಾದ ಕಾವ್ಯ-ಪುರಾಣಗಳಲ್ಲಿ ನಿರೂಪಿತವಾಗಿದೆ. ಈ ಶರಣ ಮೂಲತ: ಬ್ರಾಹ್ಮಣ ಜಾತಿಯವ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸ್ಕಂದಶಿಲೆ (ಕಂದಗಲ್ಲು) ಈತನ ಸ್ಥಳ. ನವಿಲೆಯ ಜಡೆಯ ಶಂಕರಲಿಂಗ ಆರಾಧ್ಯ ದೈವ. ಶಿವದಾಸಿ-ಹೆಂಡತಿ. ಶಿವನಿಂದ ಕಣ್ಣು ಪಡೆದ ಸಂಗತಿ. ಕಲ್ಯಾಣದಲ್ಲಿ ವಿಷ್ಣುವಿನ ವಿಗ್ರಹ ದಹಿಸಿದ ಘಟನೆ, ಮುದನೂರಿನಲ್ಲಿ ಜೇಡರ ದಾಸಿಮಯ್ಯನ ಅಹಂಕಾರವನ್ನು ನಿರಸನ ಮಾಡಿದ ಪ್ರಸಂಗಗಳು ಈತನ ಚರಿತ್ರೆಯಲ್ಲಿ ಬರುತ್ತದೆ. ಕಾಲ-೧೧೩೦. 'ನಿಜಗುರು ಶಂಕರದೇವ' ಅಂಕಿತದಲ್ಲಿ ೫ ವಚನಗಳು ದೊರೆತಿವೆ. ಬಸವಾದಿ ಶರಣರ ಸ್ತುತಿ, ಬಸವಾವತಾರದ ಕಾರಣ, ಕಾಯ-ಮಾಯೆಯ ಸಂಬಂಧ, ಕಪಟವೇಷದವರ ಟೀಕೆ ಇಲ್ಲಿ ನೇರವಾದ ಮಾತುಗಳಲ್ಲಿ ಮೂಡಿ ಬಂದಿವೆ.
ನವಿಲೆಯ ಜಡೆಯ ಶಂಕರಲಿಂಗ ಇವನ ಆರಾಧ್ಯ ದೈವ. ಶಿವನಿಂದ ಹಣೆಗಣ್ಣು ಪಡೆದಿದ್ದು, ಕಲ್ಯಾಣದಲ್ಲಿ ವಿಷ್ಣುವಿಗ್ರಹ ದಹಿಸಿದ್ದು, ಮುದನೂರಿನ ಜೇಡರ ದಾಸಿಮಯ್ಯನ ಅಹಂಕಾರ ನಿರಸನಗೊಳಿಸಿದ್ದು ಇವನನ್ನು ಕುರಿತು ಇತರೆ ಕೃತಿಗಳಲ್ಲಿ ಬಂದಿದೆ. ಬಸವಣ್ಣ, ಚನ್ನಬಸವಣ್ಣ, ಮರುಳಶಂಕರದೇವರು, ಪ್ರಭುದೇವರನ್ನು ತನ್ನ ವಚನಗಳಲ್ಲಿ ಸ್ಮರಿಸಿರುವನು. ತನಗೆ ನಂದಿಯ ಮುಖವಾಡ, ಹಣೆಗಣ್ಣಿದ್ದುದನ್ನು ವಚನವೊಂದರಲ್ಲಿ ಹೇಳಿಕೊಂಡಿರುವನು.
132
ಹರನ ನಿರೂಪದಿಂದ ಧರೆಗೆ ಬಸವಣ್ಣನವತರಿಸಿದ ಕಾರಣ,
ಶಿವಾಚಾರ ಸದಾಚಾರವೆಂಬುದು ಧರೆಗೆ ವಿಖ್ಯಾತವಾಯಿತ್ತು.
ಶಿವಗಣ ಪ್ರಮಥಗಣಂಗಳೆಂಬ ಮಹಾಮಹಿಮರ ಸುಳುಹು,
ಧರೆಯ ಮೇಲೆ ಕಾಣಬಂದಿತ್ತು ನೋಡಯ್ಯಾ.
ಪರುಷವ ಸಾಧಿಸಿದಂತಾಯಿತ್ತು, ನಿಮ್ಮ ಶರಣರ ಸಂಗದಿಂದ.
ಎನ್ನ ನಂದಿಯ ಮೊಗವಾಡ, ನೊಸಲಕಣ್ಣುಂಟೆಂಬ
ಅಹಂಕಾರವ ಮುಂದುಗೊಂಡಿದ್ದೆನಯ್ಯಾ.
ಎನ್ನ ಮದ ಉಡುಗಿ, ಸಂಗನಬಸವಣ್ಣನ ಕರುಣದಿಂದ
ಪ್ರಭುದೇವರೆಂಬ ನಿರಾಳವ ಕಂಡು ಬದುಕಿದೆನು ಕಾಣಾ,
ನಿಜಗುರು ಶಂಕರದೇವಾ.
129
ಎರಳೆ ಯತಿಯಂತೆ, ಕಾಕ ಪಿಕದಂತಿರಬೇಡವೆ ?
ತಿಟ್ಟನೆ ತಿರುಗಿ, ತೊಟ್ಟನೆ ತೊಳಲಿ ಬಳಲುವರ ಕಳ ಹೇಸಿಕೆಯ ನೋಡಾ!
ಇರುಳು ಹಗಲೆನ್ನದೆ ತಿರುಗುವವರ ಕಂಡು ಹೇಸಿದೆ.
ಅರಿದಡೆ ಶರಣ, ಮರೆದಡೆ ಮಾನವ.
ಸತ್ತ ಕಸನ ಹೊತ್ತುಕೊಂಡು ಊರೂರಿಗೆ ಮಾರುವ
ಕಾಶಾಂಬರಧಾರಿಗಳನೊಲ್ಲ, ನಿಜಗುರು ಶಂಕರದೇವ.
*