Previous ಘಟ್ಟಿವಾಳಯ್ಯ ಚಂದಿಮರಸ Next

ಘನಲಿಂಗಿದೇವ

*
ಅಂಕಿತ: ಘನಲಿಂಗಿಯ ಮೋಹದ ಮಲ್ಲಿಕಾರ್ಜುನ
ಕಾಯಕ: ಸುತ್ತೂರು ವೀರಸಿಂಹಾಸನದ ಅಧ್ಯಕ್ಷ

೭೫೩
ಅಯ್ಯಾ ಬಸವಾದಿ ಪ್ರಮಥರೇ
ನಿಮ್ಮ ಕರುಣಪ್ರಸಾದವ ನಾನು ಆದಿ ಅನಾದಿಯಲ್ಲಿ
ದಣಿಯಲುಂಡ ದೆಸೆಯಿಂದಲೆನ್ನ ತನು
ಷಟ್ಸ ್ಥಲವನೊಳಕೊಂಡು ಉದಯವಾಯಿತ್ತು.
ಎನ್ನ ಪಾದ ಷಟ್ಸ್ಥಲಕ್ಕೆ ಒಪ್ಪವಿಟ್ಟಲ್ಲದೆ ಅಡಿಯಿಡದು.
ಎನ್ನ ಹಸ್ತ ಷಟ್ಸ್ಥಲಪತಿಯನಲ್ಲದೆ ಪೂಜೆಯ ಮಾಡದು.
ಎನ್ನ ಘ್ರಾಣ ಮೊದಲು
ಶ್ರೋತ್ರ ಕಡೆಯಾದ ಪಂಚೇಂದ್ರಿಯಂಗಳು
ಷಟ್-ಸ್ಥಲ ವನಲ್ಲದೆ ಆಚರಿಸವು.
ಎನ್ನ ಮನ ಷಟ್-ಸ್ಥಲದ ಷಡ್ವಿಧಲಿಂಗಂಗಳ ಮೇಲಲ್ಲದೆ
ಹರುಷಗೊಂಡು ಹರಿದಾಡದು.
ಎನ್ನ ಪ್ರಾಣ ಷಟ್-ಸ್ಥಲಕ್ಕೆ ಸಲೆ ಸಂದ
ಅಕ್ಕಮಹಾದೇವಿಯವರು ಹೋದ ಬಟ್ಟೆಯಲ್ಲಿ ನಡೆಯುವುದಲ್ಲದೆ
ಕಿರುಬಟ್ಟೆಯಲ್ಲಿ ನಡೆಯದು.
ಇಂತಿವೆಲ್ಲವು ಷಟ್-ಸ್ಥಲವನಪ್ಪಿ ಅವಗ್ರಹಿಸಿದ
ನೀಲಾಂಬಿಕೆಯಮ್ಮನವರ ಗರ್ಭದಲ್ಲಿ ಉದಯವಾದ
ಮೋಹದಕಂದನಾದ ಕಾರಣ
ಎನಗೆ ಷಟ್-ಸ್ಥಲಮಾರ್ಗದ ವಿರತಿ ನೆಲೆಗೊಂಡು ನಿಂದಿತಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.

ಈತ ತೋಂಟದ ಸಿದ್ಧಲಿಂಗರ ಶಿಷ್ಯ. ಸುತ್ತೂರು ಮಠಾಧೀಶ ಕಾಲ ೧೬ನೇಯ ಶತಮಾನ ಕಗ್ಗೆರೆಯಲ್ಲಿ ಐಕ್ಯ. 'ಘನಲಿಂಗಿಯ ಮೋಹದ ಮಲ್ಲಿಕಾರ್ಜುನ" ಅಂಕಿತದಲ್ಲಿ ೬೬ ವಚನಗಳು ದೊರೆತಿವೆ. ಇವುಗಳಲ್ಲಿ ಸತಿಪತಿಭಾವದ ನಿರೂಪಣೆಯಿದೆ.

ಸರಳವೂ ಕಾವ್ಯಮಯವೂ ಆಗಿದೆ. ಈತನ ವೃತ್ತಿ ಪ್ರತಿಭಾಸ್ಪರ್ಶದಿಂದ ತನಗೆ ತಾನೇ ಕಾವ್ಯತ್ವವನ್ನು ಪಡೆದುಕೊಳ್ಳುತ್ತದೆ. ಶರಣಸತಿ ಲಿಂಗಪತಿ ಭಾವದಲ್ಲಿ ಶೃಂಗಾರ ಪ್ರಧಾನವಾಗಿ ಮೂಡಿಬಂದಿದೆ. ಈತ ಕುರುಡರು ಆನೆಯನ್ನು ವರ್ಣಿಸುವ ದೃಷ್ಟಾಂತವನ್ನು ಬಳಸಿಕೊಂಡು ಅಜ್ಙಾನಿಗಳನ್ನು ವಿಡಂಬಿಸುತ್ತಾನೆ.

೭೧೨
ಎಲೆ ತಂಗಿ,
ಶರಣಸತಿ ಲಿಂಗಪತಿಯಾದ ಪತಿವ್ರತಾಭಾವದ ಚಿಹ್ನೆ,
ನಿನ್ನ ನಡೆ ನುಡಿಯಲ್ಲಿ, ಹೊಗರುದೋರುತ್ತಿದೆ,
ನಿನ್ನ ಪೂರ್ವಾಪರವಾವುದಮ್ಮ?.
ಸುತ್ತೂರು ಸಿಂಹಾಸನದ ಪರ್ವತದೇವರ ಶಿಷ್ಯರು,
ಭಂಡಾರಿ ಬಸವಪ್ಪೊಡೆಯದೇವರು.
ಆ ಭಂಡಾರಿ ಬಸವಪ್ಪೊಡೆಯದೇವರ ಶಿಷ್ಯರು.
ಕೂಗಲೂರು ನಂಜಯ್ಯದೇವರು.
ಆ ನಂಜಯ್ಯದೇವರ ಕರಕಮಲದಲ್ಲಿ,
ಉದಯವಾದ ಶರಣವೆಣ್ಣಯ್ಯಾ ನಾನು.
ಎನ್ನ ಗುರುವಿನ ಗುರು ಪರಮಗುರು,
ಪರಮಾರಾಧ್ಯ ತೋಂಟದಾರ್ಯನಿಗೆ
ಗುರುಭಕ್ತಿಯಿಂದೆನ್ನ ಶರಣುಮಾಡಿದರು.
ಆ ತೋಂಟದಾರ್ಯನು,
ತನ್ನ ಕೃಪೆಯೆಂಬ ತೊಟ್ಟಿಲೊಳಗೆನ್ನಂ ಮಲಗಿಸಿ,
ಪ್ರಮಥಗಣಂಗಳ
ವಚನಸ್ವರೂಪತತ್ವಾರ್ಥವೆಂಬ, ಹಾಲು ತುಪ್ಪಮಂ
ಸದಾ ದಣಿಯಲೆರೆದು, ಅಕ್ಕರಿಂದ ರಕ್ಷಣೆಯಂ ಮಾಡಿ,
`ಘನಲಿಂಗಿ' ಎಂಬ ನಾಮಕರಣಮಂ ಕೊಟ್ಟು,
ಪ್ರಾಯಸಮರ್ಥೆಯಂ ಮಾಡಿ,
ಸತ್ಯಸದಾಚಾರ, ಜ್ಞಾನಕ್ರಿಯೆಗಳೆಂಬ, ದಿವ್ಯಾಭರಣಂಗಳಂ ತೊಡಿಸಿ,
ಅರುಹೆಂಬ ಬಣ್ಣವ ನಿರಿವಿಡಿದುಡಿಸಿ,
ಅರ್ತಿಯ ಮಾಡುತ್ತಿಪ್ಪ ಸಮಯದಲ್ಲಿ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ,
ತನಗೆ ನಾನಾಗಬೇಕೆಂದು ಬೇಡಿಕಳುಹಲು,
ಎಮ್ಮವರು ಅವಂಗೆ ಮಾತನಿಕ್ಕಿದರಮ್ಮಾ.


*
Previous ಘಟ್ಟಿವಾಳಯ್ಯ ಚಂದಿಮರಸ Next